×
ADVERTISEMENT
ಈ ಕ್ಷಣ :
ADVERTISEMENT

ಲಖಿಂಪುರ ಹಿಂಸಾಚಾರ‌ ಸಂಪೂರ್ಣ ಖಂಡನೀಯ: ನಿರ್ಮಲಾ ಸೀತಾರಾಮನ್

ಫಾಲೋ ಮಾಡಿ
Comments

ಬಾಸ್ಟನ್‌: ನಾಲ್ವರು ರೈತರ ಹತ್ಯೆಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ ಸಂಪೂರ್ಣ ಖಂಡನೀಯ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಭಾರತದ ಇತರ ಭಾಗಗಳಲ್ಲೂ ಇಂಥದ್ದೇ ಸಮಸ್ಯೆಗಳಿದ್ದು, ಅವುಗಳ ಬಗ್ಗೆಯೂ ಇದೇ ರೀತಿ ಧ್ವನಿ ಎತ್ತಬೇಕಿದೆ’ ಎಂದು ಅಭಿಪ್ರಾಯಪಟ್ಟರು.

’ಉತ್ತರ ಪ್ರದೆಶದಲ್ಲಿ ಬಿಜೆಪಿ ಸರ್ಕಾರವಿದೆ ಎಂಬ ಕಾರಣಕ್ಕಾಗಿ, ಇಲ್ಲಿ ಘಟನೆ ನಡೆದಾಗ ಮಾತ್ರ ಧ್ವನಿ ಎತ್ತುವವರು, ದೇಶದ ಬೇರೆ ಭಾಗಗಳಲ್ಲೂ ಇರುವ ಸಮಸ್ಯೆಗಳ ಬಗ್ಗೆಯೂ ಹೀಗೆ ಪ್ರತಿಕ್ರಿಯಿಸಬೇಕು’ ಎಂದು ಅವರು ಹೇಳಿದರು.

ಅಮೆರಿಕದ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ಅವರು, ಹಾರ್ವರ್ಡ್‌ ಕೆನ್ನಡಿ ಸ್ಕೂಲ್‌ನಲ್ಲಿ ಮಂಗಳವಾರ ನಡೆದ ಸಂವಾದದಲ್ಲಿ, ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯಾಗಿರುವುದು ಮತ್ತು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಷ್‌ ಮಿಶ್ರ ಅವರನ್ನು ಬಂಧಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆ ಈ ರೀತಿ ಉತ್ತರಿಸಿದರು.

’ಪ್ರಧಾನ ಮಂತ್ರಿ, ಅವರ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳು ಲಿಖಿಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕೆ ಪ್ರತಿಕ್ರಿಯಿಸುತ್ತಿಲ್ಲ. ಒಂದೊಮ್ಮೆ ಯಾರಾದರೂ ಈ ಪ್ರಕರಣದ ಕುರಿತು ಪ್ರಶ್ನೆಗಳನ್ನು ಕೇಳಿದರೆ ಬಹಳ ’ರಕ್ಷಣಾತ್ಮಕವಾಗಿ ಪ್ರತಿಕ್ರಿಯಿಸುತ್ತಾರಲ್ಲಾ, ಏಕೆ’ ಎಂದು ಸಂವಾದದಲ್ಲಿ ನಿರ್ಮಲಾ ಅವರಿಗೆ ಪ್ರಶ್ನೆ ಕೇಳಲಾಯಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ’ಈ ಘಟನೆ ಸಂಪೂರ್ಣವಾಗಿ ಖಂಡನೀಯವಾದದ್ದು. ನಮ್ಮಲ್ಲಿ ಎಲ್ಲರೂ ಅದನ್ನೇ ಹೇಳುತ್ತಿದ್ದಾರೆ. ಆದರೆ ಇದೇ ರೀತಿ ದೇಶದ ಬೇರೆಕಡೆ ಇಂಥದ್ದೇ ಘಟನೆಗಳು ಸಂಭವಿಸಿದಾಗ, ಅವುಗಳನ್ನು ಏಕೆ ಸಮಾನವಾಗಿ ನೋಡುವುದಿಲ್ಲ’ ಎಂಬುದು ನನ್ನನ್ನು ಕಾಡುತ್ತಿರುವ ಪ್ರಶ್ನೆ’ ಎಂದು ಹೇಳಿದ್ದಾರೆ.

ಭಾರತದ ವಿವಿಧ ಭಾಗಗಳಲ್ಲಿ ಇಂಥದ್ದೇ ಹಲವು ಸಮಸ್ಯೆಗಳಿವೆ. ಪ್ರತಿ ಬಾರಿ ಸಮಸ್ಯೆ ಸೃಷ್ಟಿಯಾದಾಗಲೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ . ಅಮರ್ಥ್ಯಸೇನ್ ಸೇರಿದಂತೆ ಭಾರತವನ್ನು ಸರಿಯಾಗಿ ಬಲ್ಲವರೆಲ್ಲರೂ, ಆ ಬಗ್ಗೆ ಧ್ವನಿ ಎತ್ತಬೇಕು. ಆದರೆ ಆ ಸಮಸ್ಯೆ ನಮಗೆ ಹೊಂದುತ್ತದೆ ಎಂದೋ ಅಥವಾ ‌ಬಿಜೆಪಿ ಅಧಿಕಾರದಲ್ಲಿರುವ ಕಾರಣಕ್ಕೋ ಧ್ವನಿ ಏರಿಸುವುದು ಸರಿಯಲ್ಲ’ ಎಂದು ನಿರ್ಮಲಾ ಹೇಳಿದರು.

’ಈಗ ನನ್ನ ಸಚಿವ ಸಂಪುಟದ ಸಹೋದ್ಯೋಗಿಯ ಮಗ ಬಹುಶಃ ತೊಂದರೆಯಲ್ಲಿದ್ದಾನೆ ಎನ್ನಿಸುತ್ತಿದೆ. ಆ ಘಟನೆಗೆ ಆತನೇ ಕಾರಣ, ಬೇರೆ ಯಾರೂ ಅಲ್ಲ ಎಂದು ಅಂದಾಜಿಸಲಾಗುತ್ತಿದೆ. ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದ್ದು, ಈ ಆರೋಪದ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿದೆ’ ಎಂದು ಅವರು ಹೇಳಿದರು.

’ಹೀಗೆ ಹೇಳುವ ಮೂಲಕ, ನಾನು ನನ್ನ ಪಕ್ಷವನ್ನಾಗಲೀ ಅಥವಾ ಪ್ರಧಾನಮಂತ್ರಿ ಪರ ವಕಾಲತ್ತು ವಹಿಸಿಕೊಂಡಾಗಲೀ ಮಾತನಾಡುತ್ತಿಲ್ಲ. ನಾನು ಭಾರತದ ಪರವಾಗಿ ಮಾತನಾಡುತ್ತಿದ್ದೇನೆ. ನನ್ನ ದೇಶಕ್ಕಾಗಿ ಮಾತನಾಡುತ್ತಿದ್ದೇನೆ. ಬಡವರ ಪರ ನ್ಯಾಯಕ್ಕಾಗಿ ಮಾತನಾಡುತ್ತಿದ್ದೇನೆ. ಖಂಡಿತಾ ನಾನು ಯಾರನ್ನೂ ಅಣಕಿಸುತ್ತಿಲ್ಲ’ ಎಂದು ಅವರು ಹೇಳಿದರು.

ಲಖಿಂಪುರ ಖೇರಿ ಹಿಂಸಾಚಾರದಲ್ಲಿ ನಾಲ್ವರು ರೈತರು ಸಾವನ್ನಪ್ಪಿರುವ ಪ್ರಕರಣ ಖಂಡನೀಯ ಎಂದು ಹೇಳಿರುವ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಭಾರತದ ಇತರ ಭಾಗಗಳಲ್ಲೂ ಇಂಥದ್ದೇ ಸಮಸ್ಯೆಗಳಿದ್ದು, ಅವುಗಳ ಬಗ್ಗೆಯೂ ಇದೇ ರೀತಿ ಧ್ವನಿ ಎತ್ತಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT