ವಿದ್ಯುತ್ ಸ್ಥಾವರಗಳಲ್ಲಿ ಬಳಸುವುದಕ್ಕೆ ಕಲ್ಲಿದ್ದಲು ಕೊರತೆ ಇಲ್ಲವೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟೀಕರಣ ಕೊಟ್ಟಿದೆ. ಹಾಗಿದ್ದರೂ ದೇಶದ ವಿವಿಧ ಭಾಗಗಳಲ್ಲಿರುವ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆ ಆಗಿದೆ ಮತ್ತು ಲಭ್ಯತೆ ಕಡಿಮೆ ಇದೆ ಎಂಬುದರ ಬಗೆಗಿನ ಕಳವಳವೇನೂ ಕಡಿಮೆ ಆಗಿಲ್ಲ. ದೇಶದ ಹೆಚ್ಚಿನ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲಿನ ಕೊರತೆ ಇರುವುದರಿಂದಾಗಿ ಬಹು ಗಂಭೀರವಾದ ವಿದ್ಯುತ್ ಬಿಕ್ಕಟ್ಟು ಎದುರಾಗಿದೆ. 135 ವಿದ್ಯುತ್ ಸ್ಥಾವರಗಳ ಪೈಕಿ 104 ಸ್ಥಾವರಗಳಲ್ಲಿ ಕೊರತೆ ಇದೆ. ತಮ್ಮಲ್ಲಿ ಇರುವ ಕಲ್ಲಿದ್ದಲಿನ ಸಂಗ್ರಹವು ಎರಡೋ ಮೂರೋ ದಿನಗಳಿಗಷ್ಟೇ ಸಾಕಾಗುತ್ತದೆ ಎಂಬ ಆತಂಕವನ್ನು ಹಲವು ಸ್ಥಾವರಗಳ ಆಡಳಿತ ಮಂಡಳಿಗಳು ವ್ಯಕ್ತಪಡಿಸಿವೆ. ಕೆಲವು ಸ್ಥಾವರಗಳು ಸ್ಥಗಿತಗೊಂಡಿವೆ. ಕನಿಷ್ಠ 20 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಇರಿಸಿಕೊಳ್ಳಬೇಕು ಎಂಬುದು ನಿಯಮ. ಕೆಲವು ರಾಜ್ಯಗಳಲ್ಲಿ ವಿದ್ಯುತ್ ಕಡಿತವನ್ನು ಈಗಾಗಲೇ ಘೋಷಿಸಲಾಗಿದೆ. ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಆಗಲಿದೆ ಎಂಬ ಸೂಚನೆಯನ್ನು ಜನರಿಗೆ ನೀಡಲಾಗಿದೆ. ವಿದ್ಯುತ್ ಕಡಿತದ ಎಚ್ಚರಿಕೆಯನ್ನು ದೆಹಲಿ ಸರ್ಕಾರವು ಈಗಾಗಲೇ ನೀಡಿದೆ. ವಿದ್ಯುತ್ ಉತ್ಪಾದನೆಯು ಸಾಮಾನ್ಯ ಮಟ್ಟದಿಂದ ಕೆಳಕ್ಕೆ ಕುಸಿದಿದೆ. ಇದು ವಿದ್ಯುತ್ತಿನ ಗೃಹ ಬಳಕೆ ಮತ್ತು ಕೈಗಾರಿಕಾ ಬಳಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಸೂರತ್‌ನ ಜವಳಿ ಉದ್ಯಮವನ್ನು ಒಂದು ತಿಂಗಳು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ವರ್ಷದ ಕೊನೆಯ ತಿಂಗಳುಗಳಲ್ಲಿ ಕಲ್ಲಿದ್ದಲು ಕೊರತೆ ಸಾಮಾನ್ಯವಾಗಿ ಇರುತ್ತದೆ. ಆದರೆ, ಈ ಬಾರಿ ಕೋಲ್ ಇಂಡಿಯಾ ಲಿಮಿಟೆಡ್‌ನ (ಸಿಐಎಲ್) ಅಸಮರ್ಪಕ ನಿರ್ವಹಣೆಯಿಂದಾಗಿ ಸಮಸ್ಯೆ ಬಿಗಡಾಯಿಸಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾ ದನೆಯ ಸುಮಾರು ಶೇ 55ರಷ್ಟು ಕಲ್ಲಿದ್ದಲಿನ ಮೇಲೆ ಅವಲಂಬಿತವಾಗಿದೆ. ಇದಕ್ಕೆ ಬೇಕಾದ ಶೇ 83ರಷ್ಟು ಕಲ್ಲಿದ್ದಲನ್ನು ಸಿಐಎಲ್ ಪೂರೈಸುತ್ತಿದೆ. ಸಾಂಕ್ರಾಮಿಕದ ಅಬ್ಬರದ ತಿಂಗಳುಗಳಲ್ಲಿ ಕಲ್ಲಿದ್ದಲು ಉತ್ಪಾದನೆಯನ್ನು ಕಡಿಮೆ ಮಾಡುವುದು ಸಿಐಎಲ್‌ಗೆ ಅನಿವಾರ್ಯವಾಗಿತ್ತು. ಆದರೆ, ಅರ್ಥ ವ್ಯವಸ್ಥೆಯು ಪುನಶ್ಚೇತನದ ಹಾದಿಗೆ ಬಂದ ಬಳಿಕ ಬೇಡಿಕೆ ಹೆಚ್ಚಲಿದೆ ಎಂಬುದನ್ನು ಸಿಐಎಲ್ ಅಂದಾಜಿಸಲೇ ಇಲ್ಲ. ಉತ್ಪಾದನೆಯು ನಿಧಾನಗತಿಗೆ ಹೊರಳಿಕೊಂಡಿತ್ತು ಮತ್ತು ಬೇಡಿಕೆಯಲ್ಲಿ ದಿಢೀರ್ ಹೆಚ್ಚಳ ಆಗಲಿದೆ ಎಂಬುದರ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ. ಮುಂಗಾರು ಮಳೆಯು ಕೂಡ ಕಲ್ಲಿದ್ದಲು ಉತ್ಪಾದನೆಗೆ ಅಡ್ಡಿ ಉಂಟು ಮಾಡಿತ್ತು ಎಂಬುದು ನಿಜ. ಜತೆಗೆ, ಕಲ್ಲಿದ್ದಲನ್ನು ಗಣಿಗಳಿಂದ ವಿದ್ಯುತ್ ಸ್ಥಾವರಗಳಿಗೆ ಸಾಗಿಸುವುದು ಕೂಡ ಕಷ್ಟವಾಗಿತ್ತು. ಈ ಎಲ್ಲದರ ಬಗ್ಗೆ ಮುಂದಾಲೋಚನೆ ಇದ್ದಿದ್ದರೆ, ಅದಕ್ಕೆ ಅನುಗುಣವಾಗಿ ಯೋಜನೆ ರೂಪಿಸಿದ್ದಿದ್ದರೆ ಈಗಿನ ಬಿಕ್ಕಟ್ಟನ್ನು ತಪ್ಪಿಸಬಹುದಾಗಿತ್ತು. ದೇಶೀಯವಾಗಿ ಕಲ್ಲಿದ್ದಲು ಲಭ್ಯವಿಲ್ಲ ಎಂದಾದಾಗ ಆಮದು ಹೆಚ್ಚಳವಾಯಿತು. ಆದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ದರ ಏರಿಕೆಯಾದದ್ದು ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡಿತು. ಆಮದು ಮಾಡಿಕೊಂಡ ಕಲ್ಲಿದ್ದಲು ಬಳಸಿ ಉತ್ಪಾದನೆ ಮಾಡುತ್ತಿದ್ದ ವಿದ್ಯುತ್ ಪ್ರಮಾಣವೂ ತಗ್ಗಿತು ಮತ್ತು ವಿದ್ಯುತ್ ದರದಲ್ಲಿ ಏರಿಕೆಯೂ ಆಯಿತು. ರಾಜ್ಯಗಳಿಗೆ ಕರಾರು ಪ್ರಕಾರ ಪೂರೈಸಬೇಕಾಗಿದ್ದ ವಿದ್ಯುತ್ ಒದಗಿಸಲು ಕೆಲವು ವಿದ್ಯುತ್ ಉತ್ಪಾದಕ ಸಂಸ್ಥೆಗಳಿಗೆ ಸಾಧ್ಯವಾಗಲಿಲ್ಲ.

ವಿದ್ಯುತ್ ಅತ್ಯಂತ ಅಗತ್ಯ. ಅದರ ಪೂರೈಕೆಯಲ್ಲಿ ವ್ಯತ್ಯಯವಾದರೆ ಈಗಷ್ಟೇ ಚೇತರಿಸಿಕೊಳ್ಳಲು ಆರಂಭಿಸಿರುವ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಅರ್ಥ ವ್ಯವಸ್ಥೆಯು ಮತ್ತೆ ಕುಸಿಯಲಾರಂಭಿಸಿದರೆ ಅದನ್ನು ತಡೆದು ನಿಲ್ಲಿಸಲು ಮತ್ತೆ ಹೆಣಗಾಡಬೇಕು. ಜತೆಗೆ, ವಿದ್ಯುತ್ ಕೊರತೆಯಿಂದಾಗಿ ವಿದ್ಯುತ್ ದರ ಏರಿಕೆಯಾದರೆ, ಅದು ಹಣದುಬ್ಬರ ಏರಿಕೆಗೆ ಕಾರಣವಾಗಬಹುದು. ಈ ಕಾರಣಕ್ಕಾಗಿಯೇ ವಿದ್ಯುತ್ ದರ ಹೆಚ್ಚಳಕ್ಕೆ ಸರ್ಕಾರ ಅವಕಾಶ ಕೊಡದಿರಬಹುದು. ಇದು ವಿದ್ಯುತ್ ವಿತರಣಾ ಕಂಪನಿಗಳ ಮೇಲೆ ಆರ್ಥಿಕ ಒತ್ತಡ ಹೇರಬಹುದು. ಕೆಲವು ರಾಜ್ಯಗಳು ಅನಗತ್ಯವಾಗಿ ದಿಗಿಲು ಸೃಷ್ಟಿಸುವ ಕೆಲಸ ಮಾಡಿವೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಹರಿಹಾಯ್ದಿದ್ದಾರೆ. ಲೋಡ್ ಶೆಡ್ಡಿಂಗ್ ಮಾಡಲೇಬಾರದು ಎಂದು ವಿದ್ಯುತ್ ವಿತರಣಾ ಕಂಪನಿಗಳಿಗೆ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ‘ಹೊಣೆಗೇಡಿ ವರ್ತನೆ’ಗಾಗಿ ಗೇಲ್ ಮತ್ತು ಟಾಟಾ ಪವರ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಈಗಿನ ಬಿಕ್ಕಟ್ಟಿಗೆ ಹಿಂದೆ ಅಧಿಕಾರದಲ್ಲಿ ಇದ್ದ ಯುಪಿಎ ಸರ್ಕಾರ ಕಾರಣ ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರು ಹೇಳಿದ್ದಾರೆ. ಭಾರತವು ವಿದ್ಯುತ್ ಮಿಗತೆ ಇರುವ ದೇಶ, ದೇಶದಲ್ಲಿ ಕಲ್ಲಿದ್ದಲು ಕೊರತೆ ಇಲ್ಲವೇ ಇಲ್ಲ, ಕೊರತೆ ಇದೆ ಎಂಬ ವರದಿಗಳು ಆಧಾರರಹಿತ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಅದಕ್ಷತೆಯಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬುದು ನಿಜ. ಅದನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯನ್ನು ಸರ್ಕಾರ ತೋರಬೇಕು. ಸಮಸ್ಯೆಯೇ ಇಲ್ಲ ಎಂದು ತಪ್ಪಿಸಿಕೊಳ್ಳುವುದು ಪಲಾಯನವಾದವಲ್ಲದೆ ಬೇರೇನಲ್ಲ. ಈಗಿನ ಸಮಸ್ಯೆಗೆ ಹಿಂದಿನ, ಅದಕ್ಕೂ ಹಿಂದಿನ ಸರ್ಕಾರಗಳು ಕಾರಣ ಎಂಬುದು ಕೈಲಾಗದವರ ಪ್ರಲಾಪದಂತೆ ತೋರುತ್ತದೆಯೇ ಹೊರತು ದಕ್ಷತೆ ಅನಿಸುವುದಿಲ್ಲ. ಇತರರ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಈಗ ಎದುರಾಗಿರುವ ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಸರ್ಕಾರ ತಕ್ಷಣ ಕಾರ್ಯತತ್ಪರ ಆಗಬೇಕಿದೆ.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ಈಗಷ್ಟೇ ಚೇತರಿಸಿಕೊಳ್ಳಲು ಆರಂಭಿಸಿರುವ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.