×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್ ಬಳಕೆ ಇಳಿಕೆ, ಕಲ್ಲಿದ್ದಲು ಕೊರತೆ ಇಲ್ಲ- ಕೇಂದ್ರ ಸಚಿವಾಲಯ ಸ್ಪಷ್ಟನೆ

Published : 10 ಅಕ್ಟೋಬರ್ 2021, 19:31 IST
ಫಾಲೋ ಮಾಡಿ
Comments

ನವದೆಹಲಿ: ದೇಶದಲ್ಲಿ ಶನಿವಾರ ವಿದ್ಯುತ್ ಬಳಕೆ ಶೇ 2ರಷ್ಟು ಇಳಿಕೆಯಾಗಿದೆ. ಜತೆಗೆ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಪರಿಸ್ಥಿತಿ ಸುಧಾರಿಸುತ್ತಿದೆ. ಹೀಗಾಗಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಇಂಧನ ಸಚಿವಾಲಯ ಮತ್ತು ಕಲ್ಲಿದ್ದಲು ಸಚಿವಾಲಯ ಹೇಳಿವೆ.

ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ ಎಂದು ಹಲವು ರಾಜ್ಯಗಳು ಇಂಧನ ಸಚಿವಾಲಯವನ್ನು ಎಡತಾಕಿರುವ ಬೆನ್ನಲ್ಲೇ, ಸಚಿವಾಲಯವು ಈ ಸ್ಪಷ್ಟನೆ ನೀಡಿದೆ. ಅಗತ್ಯವಿರುವವರು ನನಗೆ ಮನವಿ ಸಲ್ಲಿಸಲು, ಅಗತ್ಯವಿರುವಷ್ಟು ಕಲ್ಲಿದ್ದಲು ಮತ್ತು ವಿದ್ಯುತ್ ಪೂರೈಸುತ್ತೇನೆ ಎಂದು ಇಂಧನ ಸಚಿವ ಆರ್‌.ಕೆ.ಸಿಂಗ್ ಹೇಳಿದ್ದಾರೆ.

ಶುಕ್ರವಾರ 390 ಕೋಟಿ ಯುನಿಟ್‌ಗಳಷ್ಟು ವಿದ್ಯುತ್ ಬಳಕೆಯಾಗಿದೆ. ದೇಶದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದು, ಹೀಗಾಗಿ ವಿದ್ಯುತ್ ಬಳಕೆ ಏರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಕಲ್ಲಿದ್ದಲು ಕೊರತೆಯಾದ ಕಾರಣ ಈ ಪರಿಸ್ಥಿತಿ ಬಂದಿದೆ. ಆದರೆ ಶನಿವಾರ 382 ಕೋಟಿ ಯುನಿಟ್‌ಗಳಷ್ಟು ವಿದ್ಯುತ್ ಮಾತ್ರ ಬಳಕೆಯಾಗಿದೆ. ವಿದ್ಯುತ್‌ಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಈಗ ಇರುವ ಕಲ್ಲಿದ್ದಲು ದಾಸ್ತಾನಿನಲ್ಲಿ, ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂದು ಸಚಿವಾಲಯವು ಹೇಳಿದೆ.

ದೇಶದಲ್ಲಿ ಅಗತ್ಯವಿರುವಷ್ಟು ಕಲ್ಲಿದ್ದಲಿನ ಸಂಗ್ರಹವಿದೆ ಎಂದು ಕಲ್ಲಿದ್ದಲು ಸಚಿವಾಲಯ ಸಹ ಹೇಳಿದೆ. ಇಂಧನ ಸಚಿವ ಆರ್‌.ಕೆ.ಸಿಂಗ್ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಷಿ ಅವರು ಕಲ್ಲಿದ್ದಲು ಕಂಪನಿಗಳು ಮತ್ತು ವಿದ್ಯುತ್ ಉತ್ಪಾದನಾ ಕಂಪನಿಗಳ ಜತೆಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಬೇಡಿಕೆಗಿಂತ ಕಡಿಮೆ ಪೂರೈಕೆ

ದೇಶದ ಎಲ್ಲಾ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಪ್ರತಿದಿನ 18.5 ಲಕ್ಷ ಟನ್‌ನಷ್ಟು ಕಲ್ಲಿದ್ದಲು ಬಳಸಲಾಗುತ್ತಿದೆ. ಆದರೆ 17.5 ಲಕ್ಷ ಟನ್‌ಗಳಷ್ಟು ಕಲ್ಲಿದ್ದಲನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವಾಲಯವು ಭಾನುವಾರ ಪ್ರೆಸ್‌ ಇನ್ಫರ್ಮೇಷನ್ ಬ್ಯೂರೊ ಮೂಲಕ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ.

ಸಚಿವಾಲಯದ ಪ್ರಕಟಣೆಯ ಅನ್ವಯವೇ ದೇಶದ ಎಲ್ಲಾ ಸ್ಥಾವರಗಳಲ್ಲಿ ಪ್ರತಿದಿನ ಅಗತ್ಯಕ್ಕಿಂತ 1 ಲಕ್ಷ ಟನ್‌ಗಳಷ್ಟು ಕಲ್ಲಿದ್ದಲು ಕಡಿಮೆ ಪೂರೈಕೆಯಾಗುತ್ತಿದೆ. ಸ್ಥಾವರಗಳ ಸಂಗ್ರಹದಲ್ಲಿ ಇದ್ದ ಕಲ್ಲಿದ್ದಲನ್ನು, ಈ ಕೊರತೆ ತುಂಬಲು ಬಳಸಲಾಗಿದೆ. ಹೀಗಾಗಿ ಸಂಗ್ರಹ ಕರಗುತ್ತಾ ಬಂದಿದೆ. ಪೂರೈಕೆಯೂ ಸಾಮಾನ್ಯ ಸ್ಥಿತಿಗೆ ಮರಳದೇ ಇರುವ ಕಾರಣ ಕೊರತೆ ಕಾಡಲಾರಂಭಿಸಿದೆ.

ದೇಶದ ಎಲ್ಲಾ ಸ್ಥಾವರಗಳಲ್ಲಿ 72 ಲಕ್ಷ ಟನ್‌ನಷ್ಟು ಕಲ್ಲಿದ್ದಲಿನ ಸಂಗ್ರಹವಿದೆ. ಇದು ಇನ್ನೂ ನಾಲ್ಕು ದಿನಕ್ಕೆ ಸಾಕಾಗುತ್ತದೆ. ಕೋಲ್‌ ಇಂಡಿಯಾ ಲಿಮಿಟೆಡ್‌ ಈಗಾಗಲೇ 400 ಲಕ್ಷ ಟನ್ ಕಲ್ಲಿದ್ದಲನ್ನು ಉತ್ಪಾದಿಸಿದ್ದು, ಅದನ್ನು ಶೀಘ್ರವೇ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪೂರೈಸಲಿದೆ ಎಂದು ಸಚಿವಾಲಯವು ಹೇಳಿದೆ.

***

ಎರಡು ದಿನದಲ್ಲಿ ದೆಹಲಿಗೆ ಕಲ್ಲಿದ್ದಲು ಪೂರೈಕೆ ಸುಧಾರಿಸದೇ ಇದ್ದರೆ, ರಾಷ್ಟ್ರ ರಾಜಧಾನಿ ಕತ್ತಲೆಯಲ್ಲಿ ಮುಳುಗಬೇಕಾಗುತ್ತದೆ.

- ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

***

ದೇಶದಲ್ಲಿ ಕಲ್ಲಿದ್ದಲಿನ ಕೊರತೆ ಇಲ್ಲ. ಕಲ್ಲಿದ್ದಲು ಕೊರತೆಯಾಗಿದೆ ಎಂಬ ತುರ್ತುಸ್ಥಿತಿಯನ್ನು ವಿರೋಧ ಪಕ್ಷಗಳು ಅನಗತ್ಯವಾಗಿ ಸೃಷ್ಟಿಸಿವೆ.

- ಆರ್‌.ಕೆ.ಸಿಂಗ್, ಕೇಂದ್ರ ಇಂಧನ ಸಚಿವ

***

ಆಮ್ಲಜನಕ ಕೊರತೆಯಾಗಿದ್ದಾಗಲೂ ಕೇಂದ್ರ ಸರ್ಕಾರವು ಆಮ್ಲಜನಕ ಕೊರತೆ ಇಲ್ಲ ಎಂದಿತ್ತು. ಈಗ ಕಲ್ಲಿದ್ದಲು ಕೊರತೆಯ ಸಂದರ್ಭದಲ್ಲೂ ಇದೇ ಮಾತು ಹೇಳುತ್ತಿದೆ.

- ಮನೀಷ್ ಸಿಸೋಡಿಯಾ, ದೆಹಲಿ ಉಪಮುಖ್ಯಮಂತ್ರಿ

ದೇಶದಲ್ಲಿ ಶನಿವಾರ ವಿದ್ಯುತ್ ಬಳಕೆ ಶೇ 2ರಷ್ಟು ಇಳಿಕೆಯಾಗಿದೆ. ಜತೆಗೆ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಪರಿಸ್ಥಿತಿ ಸುಧಾರಿಸುತ್ತಿದೆ. ಹೀಗಾಗಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಇಂಧನ ಸಚಿವಾಲಯ ಮತ್ತು ಕಲ್ಲಿದ್ದಲು ಸಚಿವಾಲಯ ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT