×
ADVERTISEMENT
ಈ ಕ್ಷಣ :
ADVERTISEMENT

ಲಖಿಂಪುರ–ಖೇರಿ ಹಿಂಸಾಚಾರ ಪ್ರಕರಣ: 2ನೇ ಎಫ್‌ಐಆರ್‌‌- ರೈತರ ಹತ್ಯೆ ಉಲ್ಲೇಖವಿಲ್ಲ

‘ಸಮಾಜಘಾತುಕರಿಂದ ಬಿಜೆಪಿ ಕಾರ್ಯಕರ್ತರ ಹತ್ಯೆ’
ಫಾಲೋ ಮಾಡಿ
Comments

ಲಖಿಂಪುರ–ಖೇರಿ: ಲಖಿಂಪುರ–ಖೇರಿಯಲ್ಲಿ ನಡೆದಿದ್ದ ಹಿಂಸಾಚಾರದ ಸಂಬಂಧ ಭಾನುವಾರ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ರೈತರ ಮಧ್ಯದಲ್ಲಿದ್ದ ಸಮಾಜಘಾತುಕ ವ್ಯಕ್ತಿಗಳು ಬಿಜೆಪಿ ಕಾರ್ಯಕರ್ತರನ್ನು ಹೊಡೆದು ಕೊಂದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಆದರೆ, ರೈತರ ಮೇಲೆ ವಾಹನ ನುಗ್ಗಿಸಿ ನಡೆಸಿದ ಹತ್ಯೆಯ ಬಗ್ಗೆ ಈ ಎಫ್‌ಐಆರ್‌ನಲ್ಲಿ ಒಂದು ಉಲ್ಲೇಖವೂ ಇಲ್ಲ.

ಅಕ್ಟೋಬರ್ 4ರಂದು ತಿಕೋನಿಯಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸುಮಿತ್ ಜೈಸ್ವಾಲ್ ಎಂಬ ಬಿಜೆಪಿ ಕಾರ್ಯಕರ್ತ ಈ ಎಫ್‌ಐಆರ್ ದಾಖಲಿಸಿದ್ದಾರೆ.

‘ಘಟನೆ ನಡೆದ ದಿನ ನಾನು ಮತ್ತು ಕೆಲವು ಬಿಜೆಪಿ ಕಾರ್ಯಕರ್ತರು ಬಾನ್ವಿರ್‌ಪುರದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯಾವಳಿಯ ಮುಖ್ಯ ಅತಿಥಿಯಾಗಿದ್ದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರನ್ನು ಸ್ವಾಗತಿಸಲು ಥಾರ್ ಜೀಪ್‌ನಲ್ಲಿ ಹೋಗುತ್ತಿದ್ದೆವು. ಹರಿ ಓಂ ಥಾರ್ ಜೀಪ್ ಅನ್ನು ಚಲಾಯಿಸುತ್ತಿದ್ದರು. ಬಿಜೆಪಿ ಕಾರ್ಯಕರ್ತ ಶುಭಂ ಮಿಶ್ರಾ ಮತ್ತು ಶ್ಯಾಂ ಸುಂದರ್ ಥಾರ್‌ನಲ್ಲಿ ಕೂತಿದ್ದರು’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

‘ನಾವು ಶಾಂತಿಯುತವಾಗಿಯೇ ಹೋಗುತ್ತಿದ್ದೆವು. ಇದ್ದಕ್ಕಿಂದ್ದಂತೆ ರೈತರ ಮಧ್ಯೆಯಿಂದ ಬಂದ ಕೆಲವು ಸಮಾಜಘಾತುಕರು ಬಿದಿರಿನ ದೊಣ್ಣೆಗಳಿಂದ ವಾಹನದ ಮೇಲೆ ದಾಳಿ ನಡೆಸಿದರು. ಗಾಯವಾದ ಕಾರಣ ಹರಿ ಓಂ ಜೀಪನ್ನು ನಿಲ್ಲಿಸಿದರು. ಅವರನ್ನು ಹೊರಗೆಳೆದ ಆರೋಪಿಗಳು ಬಿದಿರು ಮತ್ತು ಕತ್ತಿಯಿಂದ ಹೊಡೆದು ಕೊಂದರು. ಶ್ಯಾಂ ಸುಂದರ್ ಮತ್ತು ಶುಭಂ ಮಿಶ್ರಾ ಅವರಿಗೂ ಇದೇ ಗತಿಯಾಯಿತು. ನನ್ನ ಮೇಲೂ ಕಲ್ಲು ತೂರಲಾಯಿತು. ನಾನು ಹೇಗೋ ತಪ್ಪಿಸಿಕೊಂಡೆ. ಸಿಕ್ಕಿಬಿದ್ದಿದ್ದರೆ, ಅವರು ನನ್ನನ್ನೂ ಕೊಲ್ಲುತ್ತಿದ್ದರು’ ಎಂದು ಅವರು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಇದಕ್ಕೆಲ್ಲಾ ಸಾಕ್ಷಿಯಾಗಿದ್ದ ಪತ್ರಕರ್ತ ರಮಣ್ ಕಶ್ಯಪ್ ಅವರನ್ನೂ ಹೊಡೆದು ಕೊಲ್ಲಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ಈ ಎಫ್‌ಐಆರ್‌ನ ಅನ್ವಯ ಅನಾಮಧೇಯ ವ್ಯಕ್ತಿಗಳ ವಿರುದ್ಧ ಕೊಲೆ ಮತ್ತು ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಪ್ರಕರಣ ದಾಖಲಿಸಲಾಗಿದೆ.

ಸುಮಿತ್ ದಾಖಲಿಸಿರುವ ಎಫ್‌ಐಆರ್‌ನಲ್ಲಿ, ‘ದಾಳಿ ನಡೆಸಿದ ಕಾರಣ ಜೀಪನ್ನು ನಿಲ್ಲಿಸಲಾಯಿತು’ ಎಂದು ಉಲ್ಲೇಖಿಸಿದ್ದಾರೆ. ಆದರೆ ವೈರಲ್ ಆಗಿರುವ ವಿಡಿಯೊದಲ್ಲಿ, ರೈತರ ಮೇಲೆ ಜೀಪ್ ನುಗ್ಗಿಸುತ್ತಿರುವುದು ದಾಖಲಾಗಿದೆ. ಈ ಬಗ್ಗೆ ಸುಮಿತ್ ತಮ್ಮ ಎಫ್‌ಐಆರ್‌ನಲ್ಲಿ ಉಲ್ಲೇಖವನ್ನೇ ಮಾಡಿಲ್ಲ.

ಜತೆಗೆ ಜೀಪ್‌ನಲ್ಲಿ, ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಅವರು ಇದ್ದರೆ ಅಥವಾ ಇರಲಿಲ್ಲವೇ ಎಂಬುದರ ಬಗ್ಗೆಯೂ ಅವರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ.

ಪತ್ರಕರ್ತ ರಮಣ ಕಶ್ಯಪ್ ಅವರನ್ನು ರೈತರ ಗುಂಪಿನಲ್ಲಿ ಇದ್ದವರೇ ಹೊಡೆದು ಕೊಂದಿದ್ದಾರೆ ಎಂದು ಉಲ್ಲೇಖಿಸಿರುವುದಕ್ಕೆ, ರಮಣ ಅವರ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನನ್ನ ಮಗ ಜೀಪಿಗೆ ಸಿಲುಕಿ ಮೃತಪಟ್ಟಿದ್ದಾನೆ. ಯಾರೂ ಅವನನ್ನು ಹೊಡೆದು ಕೊಂದಿಲ್ಲ’ ಎಂದು ರಮಣ ಕಶ್ಯಪ್ ಅವರ ತಂದೆ ಹೇಳಿದ್ದಾರೆ.

ಸಾಧಾರಣ ಅಪರಾಧವಲ್ಲ: ಖುರ್ಷಿದ್‌

ಲಖನೌ: ಲಖಿಂಪುರ–ಖೇರಿಯಲ್ಲಿನ ಹಿಂಸಾಚಾರ ಪ್ರಕರಣವು ಸಾಧಾರಣವಾದ ಅಪರಾಧವಲ್ಲ; ಅದೊಂದು ದುರಂತ ಎಂದು ಕಾಂಗ್ರೆಸ್‌ನ ಮುಖಂಡ ಸಲ್ಮಾನ್‌ ಖುರ್ಷಿದ್‌ ಹೇಳಿದ್ದಾರೆ.

‘ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿದ್ದ ರೈತರ ಪ್ರತಿಭಟನೆಯ ಬಗೆಗಿನ ಕ್ರೂರ ಮನೋಭಾವವು ಅ.3ರ ದುರಂತಕ್ಕೆ ಕಾರಣ. ಇದೇ ಮನೋಭಾವ ಮುಂದುವರಿದಲ್ಲಿ, ಅದು ಭಾರತೀಯ ಪ್ರಜಾಸತ್ತೆಗೆ ಮಾರಕವಾಗಲಿದೆ. ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವ ಅಗತ್ಯವಿದೆ’ ಎಂದಿದ್ದಾರೆ. ಅಲ್ಲದೇ ಯಾರೊಬ್ಬರೂ ಇಂಥದೊಂದು ದುರಂತದಿಂದ ಲಾಭ ಮಾಡಿಕೊಳ್ಳಲು ಮುಂದಾಗಬಾರದು ಎಂದೂ ಅವರು ಹೇಳಿದ್ದಾರೆ.

ಲಖಿಂಪುರ–ಖೇರಿಯಲ್ಲಿ ನಡೆದಿದ್ದ ಹಿಂಸಾಚಾರದ ಸಂಬಂಧ ಭಾನುವಾರ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ರೈತರ ಮಧ್ಯದಲ್ಲಿದ್ದ ಸಮಾಜಘಾತುಕ ವ್ಯಕ್ತಿಗಳು ಬಿಜೆಪಿ ಕಾರ್ಯಕರ್ತರನ್ನು ಹೊಡೆದು ಕೊಂದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಆದರೆ, ರೈತರ ಮೇಲೆ ವಾಹನ ನುಗ್ಗಿಸಿ ನಡೆಸಿದ ಹತ್ಯೆಯ ಬಗ್ಗೆ ಈ ಎಫ್‌ಐಆರ್‌ನಲ್ಲಿ ಒಂದು ಉಲ್ಲೇಖವೂ ಇಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT