×
ADVERTISEMENT
ಈ ಕ್ಷಣ :
ADVERTISEMENT

ಲಖಿಂಪುರ ಹಿಂಸಾಚಾರ: ಮೃತ ರೈತರಿಗೆ ಅಂತಿಮ ನಮನ, ಸರ್ಕಾರದ ವಿರುದ್ಧ ಆಕ್ರೋಶ

ರೈತ ಸಂಘಟನೆಗಳ ಕಾರ್ಯಕ್ರಮದಲ್ಲಿ ಭಾರಿ ಜನಸ್ತೋಮ
ಫಾಲೋ ಮಾಡಿ
Comments

ಲಖಿಂಪುರ–ಖೇರಿ: ವಾಹನ ಹರಿದು ಮೃತಪಟ್ಟ ನಾಲ್ವರು ರೈತರು ಮತ್ತು  ಒಬ್ಬ ಪತ್ರಕರ್ತನಿಗೆ ಅಂತಿಮ ನಮನ ಸಲ್ಲಿಸಲು ರೈತ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಇದ್ದರು. 

ಸಂಯುಕ್ತ ಕಿಸಾನ್‌ ಮೋರ್ಚಾ ಮತ್ತು ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡರಾದ ರಾಕೇಶ್‌ ಟಿಕಾಯತ್‌, ದರ್ಶನ್‌ ಸಿಂಗ್‌ ಪಾಲ್‌, ಜೋಗಿಂದರ್‌ ಸಿಂಗ್ ಉಗ್ರಹಾನ್‌, ಧರ್ಮೇಂದ್ರ ಮಲಿಕ್‌, ಸ್ಥಳೀಯ ರೈತ ಸಂಘಟನೆಗಳ ಮುಖಂಡರು ಅಂತಿಮ ನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಹರಿಯಾಣ ಮತ್ತು ದೇಶದ ಇತರ ಭಾಗಗಳಿಂದಲೂ ರೈತರು ಮತ್ತು ಇತರರು ಲಖಿಂಪುರ–ಖೇರಿಗೆ ಬಂದಿದ್ದರು. 

ಪ್ರಿಯಾಂಕಾ ಮತ್ತು ಕಾಂಗ್ರೆಸ್‌ನ ಇತರ ಮುಖಂಡರು ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಸ್ಥಳಕ್ಕೆ ತಲುಪಿದರು. ಸಮಾಜವಾದಿ ಪಕ್ಷದ ಮುಖಂಡರಾದ ರಾಂಪಾಲ್‌ ಸಿಂಗ್‌ ಯಾದವ್‌. ಡಾ. ಆರ್‌.ಎ. ಉಸ್ಮಾನಿ ಸ್ಥಳಕ್ಕೆ ತಲುಪಿದ್ದರು. ಮೊದಲೇ ಘೋಷಿಸಿದ್ದಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ವೇದಿಕೆಯಲ್ಲಿ ಅವಕಾಶ ಕೊಟ್ಟಿಲ್ಲ. 

ಆದರೆ, ಅಂತಿಮ ನಮನ ಕಾರ್ಯಕ್ರಮಕ್ಕೆ ಬಂದದ್ದಕ್ಕೆ ಮತ್ತು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಗೆ ಬೆಂಬಲ ಕೊಟ್ಟದ್ದಕ್ಕೆ ಪ್ರಿಯಾಂಕಾ ಅವರಿಗೆ ರೈತ ನಾಯಕರು ಕೃತಜ್ಞತೆ ಸಲ್ಲಿಸಿದರು. 

ಮೃತ ರೈತರ ಕುಟುಂಬ ಸದಸ್ಯರು, ಪತ್ರಕರ್ತ ರಾಮನ್‌ ಕಶ್ಯಪ್‌ ಅವರ ಸಹೋದರ ಮತ್ತು ಮಗಳು ಮೃತರ ಫೋಟೊಗಳನ್ನು ಹಿಡಿದು ವೇದಿಕೆಯಲ್ಲಿ ಇದ್ದರು. ಕಾರ್ಯಕ್ರಮ ನಡೆದ ಸ್ಥಳದಲ್ಲಿ ಭಾರಿ ಭದ್ರತೆಯ ವ್ಯವಸ್ಥೆ
ಮಾಡಲಾಗಿತ್ತು. 

ಲಖನೌ ಪೊಲೀಸ್‌ ಆಯುಕ್ತ, ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ, ಪೊಲೀಸ್‌ ಮಹಾ ನಿರೀಕ್ಷಕರು ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಕೋನಿಯಾದಲ್ಲಿಯೇ ಇದ್ದರು. ಪೊಲೀಸ್‌ ಮತ್ತು ಅರೆಸೇನಾ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. 

ಕೇಂದ್ರ ಸಚಿವ ಅಜಯ್‌ ಮಿಶ್ರಾ ಮಗ ಆಶಿಶ್‌ ಮಿಶ್ರಾ ಅವರು ಚಲಾಯಿಸಿದ್ದರು ಎಂದು ಹೇಳಲಾದ ಕಾರು ಹರಿದು ನಾಲ್ವರು ಮತ್ತು ನಂತರದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟ ಸ್ಥಳಕ್ಕೆ ಸಮೀಪದಲ್ಲಿಯೇ ಅಂತಿಮ ನಮನ ಕಾರ್ಯಕ್ರಮ ನಡೆಯಿತು. ಇದೇ ಮೂರರಂದು ಹಿಂಸಾಚಾರ ನಡೆದಿತ್ತು. 

ಅಜಯ್‌ ಮಿಶ್ರಾ ಅವರನ್ನು ವಜಾ ಮಾಡದ ಕೇಂದ್ರ ಸರ್ಕಾರದ ವಿರುದ್ಧ ರೈತ ಮುಖಂಡರು ಹರಿಹಾಯ್ದರು. ಆರೋಪಿ ಆಶಿಶ್‌ ಮಿಶ್ರಾ ಅವರನ್ನು ಉತ್ತರ ಪ್ರದೇಶ ಸರ್ಕಾರವು ರಕ್ಷಿಸುತ್ತಿದೆ. ಘಟನೆ ಜರುಗಿ ಆರು ದಿನಗಳ ಬಳಿಕ ಅವರನ್ನು ಬಂಧಿಸಲಾಯಿತು ಎಂದು ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. ಸಚಿವರನ್ನು ವಜಾ ಮಾಡದಿದ್ದರೆ ದೇಶವ್ಯಾಪಿ ಚಳವಳಿ ನಡೆಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.

ಆಶಿಶ್‌ ಮಿಶ್ರಾ ವಿರುದ್ಧ ತನಿಖೆ ಶುರು

ಆಶಿಶ್‌ ಮಿಶ್ರಾ ಅವರನ್ನು ಲಖಿಂಪುರ–ಖೇರಿಯ ಅಪರಾಧ ತನಿಖಾ ವಿಭಾಗದ ಕಚೇರಿಗೆ ಕರೆದೊಯ್ದು ಮಂಗಳವಾರ ತನಿಖೆ ನಡೆಸಲಾಗಿದೆ. ಅವರನ್ನು ಮೂರು ದಿನ ಪೊಲೀಸ್‌ ವಶಕ್ಕೆ ಒಪ್ಪಿಸಿ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಸೋಮವಾರ ಆದೇಶಿಸಿದ್ದರು. ಆಶಿಶ್‌ ಅವರಿಗೆ ಕಿರುಕುಳ ನೀಡಬಾರದು ಮತ್ತು ಅವರ ವಕೀಲರ ಸಮ್ಮುಖದಲ್ಲಿಯೇ ತನಿಖೆ ನಡೆಸಬೇಕು ಎಂದು ನ್ಯಾಯಾಧೀಶರು ಹೇಳಿದ್ದರು. ಆಶಿಶ್‌ ಅವರನ್ನು ಶನಿವಾರ ಬಂಧಿಸಲಾಗಿತ್ತು.

ತಮ್ಮ ತಂದೆ ಅಜಯ್‌ ಮಿಶ್ರಾ ಅವರು ಪ್ರತಿನಿಧಿಸುತ್ತಿರುವ ಖೇರಿ ಲೋಕಸಭಾ ಕ್ಷೇತ್ರದ ರಾಜಕೀಯ ಚಟುವಟಿಕೆಗಳ ಉಸ್ತುವಾರಿಯನ್ನು 35 ವರ್ಷದ ಆಶಿಶ್‌ ನೋಡಿಕೊಳ್ಳುತ್ತಿದ್ದರು. ಉತ್ತರ ಪ್ರದೇಶ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ನಿಘಾಸನ್‌ ಕ್ಷೇತ್ರದಿಂದ ಸ್ಪ‍ರ್ಧಿಸಲು ಬಿಜೆಪಿ ಟಿಕೆಟ್‌ ಪಡೆಯಲು ಅವರು ಪ್ರಯತ್ನಿಸುತ್ತಿದ್ದರು.

ಚೌಧರಿಗೆ ತಡೆ

ಲಖಿಂಪುರಕ್ಕೆ ಹೊರಟ್ಟಿದ್ದ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಚೌಧರಿ ಅವರನ್ನು ಬರೇಲಿ ವಿಮಾನ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ಪೊಲೀಸರು ತಡೆದು ನಿಲ್ಲಿಸಿದ್ದರು. ಬೆಂಬಲಿಗರ ಜತೆಗೆ ಲಖಿಂಪುರ–ಖೇರಿಗೆ ಹೋಗಲು ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದ್ದರು.

ಚೌಧರಿ ಅವರನ್ನು ತಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಆರ್‌ಎಲ್‌ಡಿ ಕಾರ್ಯಕರ್ತರು ವಿಮಾನ ನಿಲ್ದಾಣದ ಹೊರಗೆ ಧರಣಿ ನಡೆಸಿದರು, ರಸ್ತೆ ತಡೆಗೆ ಯತ್ನಿಸಿದರು. ಪೊಲೀಸರು ಅವರ ಮನವೊಲಿಸಿ ತೆರವು ಮಾಡಿದರು. ಭದ್ರತಾ ಸಿಬ್ಬಂದಿಯನ್ನು ಮಾತ್ರ ಜತೆಗೆ ಕರೆದೊಯ್ಯಲು ಚೌಧರಿ ಅವರಿಗೆ ಅವಕಾಶ ಕೊಡಲಾಯಿತು.

ಇನ್ನೊಬ್ಬ ಆರೋಪಿ ಸೆರೆ

ಪ್ರಕರಣಕ್ಕೆ ಸಂಬಂಧಿಸಿ ಶೇಖರ್‌ ಭಾರ್ತಿ ಎಂಬ ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಈ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರನ್ನು 14 ದಿನ ಪೊಲೀಸ್‌ ವಶಕ್ಕೆ ಒಪ್ಪಿಸುವಂತೆ ಕೋರಲಾಗಿದೆ. ಈ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ ಎಂದು ತನಿಖಾಧಿಕಾರಿ ಎಸ್‌.ಪಿ. ಯಾದವ್‌ ತಿಳಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆಯು ನಾಲ್ಕಕ್ಕೆ ಏರಿದೆ.

ರಾಷ್ಟ್ರಪತಿಗೆ ಇಂದು ಮೊರೆ

ನವದೆಹಲಿ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಪಕ್ಷದ ನಿಯೋಗವೊಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಬುಧವಾರ ಭೇಟಿಯಾಗಿ, ಲಖಿಂಪುರ–ಖೇರಿ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಿದೆ. ಪ್ರಕರಣದ ಆರೋಪಿ ಆಶಿಶ್‌ ಮಿಶ್ರಾ ತಂದೆ, ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರನ್ನು ವಜಾಗೊಳಿಸಲು ಆಗ್ರಹಿಸಲಿದೆ. ರಾಷ್ಟ್ರಪತಿ ಜತೆಗಿನ ಭೇಟಿ ಬೆಳಿಗ್ಗೆ 11.30ಕ್ಕೆ ನಡೆಯಲಿದೆ.
ಶರಣಾಗತಿ ಅರ್ಜಿ

ಆಶಿಶ್‌ ಮಿಶ್ರಾ ಸ್ನೇಹಿತ ಅಂಕಿತ್‌ ದಾಸ್‌, ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಶರಣಾಗತಿ ಅರ್ಜಿ ಸಲ್ಲಿಸಿದ್ದಾರೆ. ರೈತರ ಮೇಲೆ ಹರಿಸಿದ ವಾಹನದಲ್ಲಿ ಅಂಕಿತ್‌ ಕೂಡ ಇದ್ದುದಾಗಿ ಆರೋಪಿಸಲಾಗಿದ್ದು, ಘಟನೆ ನಡೆದ ದಿನದಿಂದ ನಾಪತ್ತೆಯಾಗಿದ್ದರು.

ಲಖಿಂಪುರ ಖೇರಿಯಲ್ಲಿನ ಜಿಲ್ಲಾ ಮುಖ್ಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಶರಣಾಗತಿ ಅರ್ಜಿ ಸಲ್ಲಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ‍ಪೊಲೀಸರಿಂದ ವರದಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.

***

ಸಚಿವರು (ಅಜಯ್‌ ಮಿಶ್ರಾ) ಸಂಪುಟದಲ್ಲಿ ಇನ್ನೂ ಮುಂದುವರಿದಿರುವುದು ಆಘಾತಕರ. ಅವರನ್ನು ತಕ್ಷಣವೇ ವಜಾ ಮಾಡಬೇಕು

- ರಾಕೇಶ್‌ ಟಿಕಾಯತ್‌, ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ

ವಾಹನ ಹರಿದು ಮೃತಪಟ್ಟ ನಾಲ್ವರು ರೈತರು ಮತ್ತು ಒಬ್ಬ ಪತ್ರಕರ್ತನಿಗೆ ಅಂತಿಮ ನಮನ ಸಲ್ಲಿಸಲು ರೈತ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT