×
ADVERTISEMENT
ಈ ಕ್ಷಣ :
ADVERTISEMENT

ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮುನ್ನ ಅಪರಾಧದ ಗಂಭೀರತೆ ಪರಿಗಣಿಸಿ: ‘ಸುಪ್ರೀಂ’

Published : 10 ಅಕ್ಟೋಬರ್ 2021, 11:07 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ನಿರೀಕ್ಷಣಾ ಜಾಮೀನು ನೀಡುವಾಗ ಅಪರಾಧ ಪ್ರಕರಣವು ಎಷ್ಟು ಗಂಭೀರವಾಗಿದೆ ಹಾಗೂ ನಿರ್ದಿಷ್ಟ ಆರೋಪಗಳು ಏನು ಎಂಬುದನ್ನು ಕೋರ್ಟ್ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಹೇಳಿದೆ.

ಕೊಲೆ ಪ್ರಕರಣವೊಂದರಲ್ಲಿ ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಬಿ.ವಿ. ನಾಗರತ್ನ ಅವರ ಪೀಠವು ರದ್ದುಪಡಿಸಿತು. 

ಲಭ್ಯವಿರುವ ಸಾಕ್ಷ್ಯಗಳ ಆಧಾರದ ಮೇಲೆ, ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಗಳಿಗೆ ಒಪ್ಪಿಗೆ ಸೂಚಿಸುವಾಗ ಸರಿಯಾದ ತತ್ವಗಳನ್ನು ಅನ್ವಯಿಸಿದೆಯೇ ಎಂಬುದನ್ನು ನಿರ್ಧರಿಸಬೇಕು ಎಂದು ಸುಪ್ರೀಂ ಹೇಳಿತು.

‘ನ್ಯಾಯಾಲಯಗಳು ಸಾಮಾನ್ಯವಾಗಿ ಅಪರಾಧಗಳ ಸ್ವರೂಪ, ಪ್ರಕರಣದ ಗಂಭೀರತೆ, ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಮತ್ತು ಪ್ರಕರಣದ ಸತ್ಯಾಂಶಗಳಂತಹ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಜಾಮೀನು ನೀಡುವ ಅಥವಾ ತಿರಸ್ಕರಿಸುವ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಪೀಠ ಹೇಳಿತು.

ಐಪಿಸಿ ಸೆಕ್ಷನ್ 302 (ಕೊಲೆ), 323 (ಸ್ವಯಂಪ್ರೇರಣೆಯಿಂದ ನೋವುಂಟುಮಾಡುವ) ಅಡಿ ದಾಖಲಾದ ಪ್ರಕರಣದಲ್ಲಿ ಇಬ್ಬರು ಆರೋಪಿ
ಗಳಿಗೆ ನಿರೀಕ್ಷಣಾ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಈ ಅಭಿಪ್ರಾಯ ವ್ಯಕ್ತಪಡಿಸಿತು. 

ಇದು ವ್ಯಕ್ತಿಯನ್ನು ಕೊಲ್ಲುವ ಗಂಭೀರ ಸ್ವರೂಪದ ಅಪರಾಧವಾಗಿದ್ದು, ಪ್ರಕರಣದಲ್ಲಿ ಆರೋಪಿಗಳ ನಿರ್ದಿಷ್ಟ ಪಾತ್ರ ಇರುವುದನ್ನು ಎಫ್‌ಐಆರ್ ಹಾಗೂ ಹೇಳಿಕೆಗಳು ಸೂಚಿಸುತ್ತಿವೆ ಎಂದು ಸುಪ್ರೀಂ ಹೇಳಿತು. 

‘ನಿರೀಕ್ಷಣಾ ಜಾಮೀನು ನೀಡುವ ಹೈಕೋರ್ಟ್ ಆದೇಶವು ಅಪರಾಧದ ಸ್ವರೂಪ, ಪ್ರಕರಣದ ಗಂಭೀರತೆ ಮತ್ತು ಆರೋಪಿಗಳ ವಿರುದ್ಧದ ನಿರ್ದಿಷ್ಟ ಆರೋಪಗಳನ್ನು ಒಳಗೊಂಡಂತೆ ಸಾಕ್ಷ್ಯಾಧಾರಗಳನ್ನು ಕಡೆಗಣಿಸಿದೆ. ಹೈಕೋರ್ಟ್ ನೀಡಿದ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಲು ಸಾಕಷ್ಟು ಕಾರಣಗಳಿವೆ’ ಎಂದು ಪೀಠ ಹೇಳಿತು. 

ಈ ಹಂತದಲ್ಲಿ ಪ್ರಕರಣದ ವಾಸ್ತವಾಂಶಗಳನ್ನು ವಿವರವಾಗಿ ಪರಿಶೀಲಿಸುವ ಅಗತ್ಯವಿಲ್ಲ. ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಸರಿಯಾದ ತತ್ವಗಳನ್ನು ಪಾಲಿಸಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಹೇಳಿದೆ.

‘ಆರೋಪಿಯೊಬ್ಬನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ವೇಳೆ ಆತನ ವಿರುದ್ಧದ ನಿರ್ದಿಷ್ಟ ಆರೋಪಗಳು ಹಾಗೂ ಎಸಗಿದ ಅಪರಾಧ ಗಂಭೀರತೆಯೇ ಮಾನದಂಡಗಳಾಗಬೇಕು’ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT