×
ADVERTISEMENT
ಈ ಕ್ಷಣ :
ADVERTISEMENT

ಕಾಣದ ಸೂರ್ಯ, ಕಾಡಿದ ಚಳಿ- ಮನೆಗಳಿಂದ ಹೊರ ಬರಲು ಹಿಂಜರಿದ ಜನ

ಫಾಲೋ ಮಾಡಿ
Comments

ಬೀದರ್: ಜಿಲ್ಲೆಯ ಜನರಿಗೆ ಭಾನುವಾರ ಸೂರ್ಯದೇವ ದರ್ಶನ ನೀಡಲಿಲ್ಲ. ಬೆಳಗಿನ ಜಾವ ಸುರಿಯಲು ಆರಂಭಿಸಿದ್ದ ಮಂಜು ಬೆಳಿಗ್ಗೆ 10 ಗಂಟೆಯಾದರೂ ಕಡಿಮೆಯಾಗಿರಲಿಲ್ಲ. ದಿನವೀಡಿ ಮಂಜು ಮುಸುಕಿದ ವಾತಾವಾರಣ ಸೃಷ್ಟಿಯಾಗಿತ್ತು.

ಚಳಿ ಹಾಗೂ ಮಂಜಿನ ಕಾಟಕ್ಕೆ ಜನ ಮನೆಗಳಿಂದ ಹೊರ ಬರಲಿಲ್ಲ. ಬೆಳಿಗ್ಗೆ ವಾಯು ವಿವಾರಕ್ಕೆ ಹೋಗುವ ಮಹಿಳೆಯರು, ವೃದ್ಧರು, ಯುವಕರು ಮಂಜಿನ ಕಾರಣ ವ್ಯಾಯಾಮಕ್ಕೆ ವಿರಾಮ ನೀಡಬೇಕಾಯಿತು. ವಿಪರೀತ ಚಳಿಗೆ ಬೆಳಗಿನ ಜಾವ ಜಾನುವಾರಗಳೂ ನರಳಾಡಿದವು.

ರಸ್ತೆ ಯುದ್ದಕ್ಕೂ ಮಂಜು ಆವರಿಸಿದ ಕಾರಣ ಯಾರೇ ಇದ್ದರೂ ನಿಖರವಾಗಿ ಗೋಚರಿಸಲು ಆಗಲಿಲ್ಲ. ವಾಹನಗಳು ಲೈಟ್ ಹಾಕಿಕೊಂಡು ನಿಧಾನವಾಗಿ ಸಾಗಿದವು, ಹಾಲು, ದಿನಪತ್ರಿಕೆಗಳು ಹಾಗೂ ತರಕಾರಿ ತಡಮಾಡಿ ತಲುಪಿದವು.

ಮನೆಗಳ ಬಾಗಿಲು, ಕಿಟಕಿಗಳು ಮುಚ್ಚಿದ್ದರೂ ಚಳಿ ಮಾತ್ರ ಕಡಿಮೆಯಾಗಿರಲಿಲ್ಲ. ಮಕ್ಕಳು ಬಹಳ ಹೊತ್ತಿನ ವರೆಗೂ ಹಾಸಿಗೆಯಲ್ಲೇ ಮಲಗಿದ್ದರು. ಬಹುತೇಕ ಜನ ಸ್ವೇಟರ್‌ ಹಾಗೂ ಟೊಪ್ಪಿಗೆ ಧರಿಸಿ ಚಳಿಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಿದರು.

ಕಾಯಿಲೆ ಇದ್ದವರು ಹಾಗೂ ಅಸ್ತಮಾ ರೋಗಿಗಳು ಚಳಿಯಿಂದಾಗಿ ಹಿಂಸೆ ಅನುಭವಿಸಬೇಕಾಯಿತು. ಚಳಿ ಹಾಗೂ ವಾರಾಂತ್ಯದ ಕರ್ಫ್ಯೂದಿಂಗಾಗಿ ಬೆಳಿಗ್ಗೆ 11 ಗಂಟೆ ವರೆಗೂ ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರಲಿಲ್ಲ. ಮಾರುಕಟ್ಟೆ ಪ್ರದೇಶದಲ್ಲಿ ಜನ ಸಂಚಾರ ವಿರಳವಾಗಿತ್ತು.

ವಾರಾಂತ್ಯದ ಕರ್ಫ್ಯೂ ಕಾರಣ ಹೋಟೆಲ್‌ಗಳಲ್ಲಿ ಉಪಾಹಾರದ ಪಾರ್ಸೆಲ್‌ ಮಾತ್ರ ಲಭಿಸುತ್ತಿತ್ತು. ಆದರೆ, ಚಹಾ, ಕಾಫಿ ಇರಲಿಲ್ಲ. ಬೀದಿಗಳಲ್ಲಿ ಚಹಾ ಅಂಗಡಿಗಳು ತೆರೆದಿರಲಿಲ್ಲ. ಹೀಗಾಗಿ ಬೆಳಗಿನ ಜಾವ ಕೆಲಸ ಮಾಡುವವರು ಮೈಕೊರೆಯುವ ಚಳಿಯಿಂದ ತೊಂದರೆ ಅನುಭವಿಸಬೇಕಾಯಿತು.

ಭಾಸವಾಗದ ಕರ್ಫ್ಯೂ:

ಚಳಿಯ ಕಾರಣ ವಾರಾಂತ್ಯ ಕರ್ಫ್ಯೂ ಭಾಸವಾಗಲಿಲ್ಲ. ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಕಡಿಮೆ ಇತ್ತು. ಕೇಂದ್ರ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರು ಇದ್ದರು. ಗ್ರಾಮೀಣ ಪ್ರದೇಶಗಳಿಗೆ ಬಸ್‌ ಸಂಚರಿಸಲಿಲ್ಲ. ನಿಲ್ದಾಣದ ಬಳಿ ಕೆಲವರು ಕಾಗದದ ಕಸಕ್ಕೆ ಬೆಂಕಿ ಹಚ್ಚಿ ಕಾಯಿಸಿಕೊಂಡರು.

ಕಿರಾಣಿ, ಮೆಡಿಕಲ್‌ ಶಾಪ್‌, ಹಾಲಿನ ಅಂಗಡಿ, ತರಕಾರಿ ಅಂಗಡಿಗಳು ಮಾತ್ರ ತೆರೆದುಕೊಂಡಿದ್ದವು. ಗ್ರಾಹಕರ ಬಾರದ ಕಾರಣ ಮಧ್ಯಾಹ್ನದ ವೇಳೆ ಅವೂ ಸಹ ಮುಚ್ಚಿದ್ದವು. ಸಂಜೆ ಸ್ವಲ್ಪ ತೆರೆದುಕೊಂಡರೂ ಬಹಳ ಹೊತ್ತಿನ ವರೆಗೆ ಬಾಗಿಲು ತೆರೆದುಕೊಂಡಿರಲಿಲ್ಲ.

ಬೀದರ್ ಜಿಲ್ಲೆಯ ಜನರಿಗೆ ಭಾನುವಾರ ಸೂರ್ಯದೇವ ದರ್ಶನ ನೀಡಲಿಲ್ಲ. ಬೆಳಗಿನ ಜಾವ ಸುರಿಯಲು ಆರಂಭಿಸಿದ್ದ ಮಂಜು ಬೆಳಿಗ್ಗೆ 10 ಗಂಟೆಯಾದರೂ ಕಡಿಮೆಯಾಗಿರಲಿಲ್ಲ. ದಿನವೀಡಿ ಮಂಜು ಮುಸುಕಿದ ವಾತಾವಾರಣ ಸೃಷ್ಟಿಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT