×
ADVERTISEMENT
ಈ ಕ್ಷಣ :
ADVERTISEMENT

ಅಡುಗೆಮನೆ ಅಂದ ನಿಮ್ಮ ಕೈಯಲ್ಲೇ ಇದೆ!

ಫಾಲೋ ಮಾಡಿ
Comments

ಅಡುಗೆ ಮಾಡುವುದೂ ಒಂದು ಕಲೆ; ಹಾಗೆಯೇ ಅಡುಗೆಕೋಣೆಯನ್ನು ಸ್ವಚ್ಛವಾಗಿ, ಸುಂದರವಾಗಿ ಕಾಣುವಂತೆ ಇರಿಸುವುದು ಕೂಡ ಒಂದು ಕಲೆ. ಅಡುಗೆಮನೆ ಎಂದ ಮೇಲೆ ಪಾತ್ರೆ, ಪರಿಕರಗಳು ಇರುವುದು ಸಾಮಾನ್ಯ. ಆದರೆ ಇತ್ತೀಚೆಗೆ ಚಿಕ್ಕ ಅಡುಗೆಕೋಣೆ ಕಟ್ಟಿಸುವ ಕಾರಣ ಅದರ ಅಂದ ಕೆಡುತ್ತಿದೆ. ಅಲ್ಲದೇ ಅಲ್ಲಲ್ಲಿ ಹರಡಿಕೊಂಡಿರುವ ಪಾತ್ರೆ, ಅಡುಗೆ ಸಾಮಗ್ರಿಗಳು ಕಿರಿಕಿರಿ ಉಂಟು ಮಾಡುತ್ತವೆ. ಹಾಗಾಗಿ ಒಂದಿಷ್ಟು ಚೆನ್ನಾಗಿ ಕಾಣಿಸುವ ಹಾಗೂ ಅನುಕೂಲ ಒದಗಿಸುವ ಸಲಕರಣೆಗಳನ್ನು ಜೋಡಿಸಿಡುವ ಮೂಲಕ ಕಡಿಮೆ ಜಾಗವನ್ನೂ ಸುಂದರವಾಗಿ ಕಾಣುವಂತೆ ಮಾಡಬಹುದು.

ಪ್ಲಾಸ್ಟಿಕ್ ಡಬ್ಬಿಗಳು

ಒಂದೇ ಗಾತ್ರ ಹಾಗೂ ಆಕಾರವಿರುವ ಚೆಂದದ ವಿನ್ಯಾಸದ ಪ್ಲಾಸ್ಟಿಕ್ ಡಬ್ಬಿ(ಫುಡ್ ಗ್ರೇಡ್‌)ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಲಭ್ಯ. ಇವನ್ನು ಅಂದವಾಗಿ ಜೋಡಿಸಿ ಇಡಬಹುದು. ಜೊತೆಗೆ ಇವುಗಳಿಗೆ ಕಡಿಮೆ ಜಾಗವೂ ಸಾಕು. ಅಲ್ಲದೇ ಒಂದರ ಮೇಲೆ ಒಂದರಂತೆ ನೀಟಾಗಿ ಜೋಡಿಸುವುದರಿಂದ ಜಾಗವನ್ನೂ ಉಳಿತಾಯ ಮಾಡಬಹುದು.

ಕಾಟನ್ ಟವೆಲ್‌ಗಳು

ಇಡೀ ಮನೆಯಲ್ಲಿ ಹೆಚ್ಚು ಗಲೀಜಾಗುವ ಜಾಗವೆಂದರೆ ಅಡುಗೆಮನೆ. ಹಾಗಾಗಿ ಪದೇ ಪದೇ ಅಡುಗೆಮನೆಯನ್ನು ಒರೆಸುತ್ತಲೇ ಇರಬೇಕು. ಅಡುಗೆಕಟ್ಟೆ ಒರೆಸಲು ಯಾವ ಬಟ್ಟೆಯಾದರೇನು ಎಂಬ ಮನೋಭಾವ ಹಲವರದ್ದು. ಹಾಗಾಗಿ ಹಳೆಯ, ಬಳಸಿ ಬಿಸಾಡಿದ ಬಟ್ಟೆಗಳನ್ನು ಒರೆಸಲು ಬಳಸುವುದು ಸಾಮಾನ್ಯ. ಇದು ಅಡುಗೆಮನೆಯ ಅಂದು ಕೆಡಿಸುತ್ತದೆ.  ಅಡುಗೆಮನೆ ಸ್ವಚ್ಛ ಮಾಡಲು ಹತ್ತಿಯ ಟವೆಲ್‌ಗಳನ್ನು ಬಳಸಬಹುದು. ಇದರಿಂದ ಸ್ವಚ್ಛತೆ ಕಾಪಾಡಿಕೊಳ್ಳುವುದರ ಜೊತೆಗೆ ಅಡುಗೆಕೋಣೆಯ ಅಂದ ಕೆಡದಂತೆ ನೋಡಿಕೊಳ್ಳಬಹುದು.

ಸ್ಟೀಲ್‌ ಕಿಚನ್ ರ‍್ಯಾಕ್

ಹಲವರು ಅಡುಗೆಮನೆಯಲ್ಲಿ ಪಾತ್ರೆ, ಪಗಡೆಗಳನ್ನು ಸಿಕ್ಕ ಸಿಕ್ಕಲ್ಲಿ ಎಸೆದಿರುತ್ತಾರೆ. ಲೋಟ, ತಟ್ಟೆ ಒಂದು ಕಡೆಯಾದರೆ, ತಿಂಡಿ ತಿನ್ನುವ ಪ್ಲೇಟ್ ಇನ್ನೊಂದೆಡೆ. ಹೀಗೆ ಎಲ್ಲೆಂದರಲ್ಲಿ ಇರಿಸಿಕೊಂಡು ಹುಡುಕಲು ಪರದಾಡುವುದರಿಂದ ಅಡುಗೆಮನೆಯ ಅಂದವೇ ಕೆಟ್ಟು ಹೋಗುತ್ತದೆ. ಅದರ ಬದಲು ಸ್ಟೀಲ್‌ ರ‍್ಯಾಕ್‌ ಹೋಲ್ಡರ್‌ ಅನ್ನು ಅಳವಡಿಸಿಕೊಳ್ಳಬಹುದು. ಅದರಲ್ಲಿ ಲೋಟ, ತಟ್ಟೆ, ಬಟ್ಟಲು ಹೀಗೆ ಎಲ್ಲವನ್ನೂ ವಿಂಗಡಿಸಿ ಇರಿಸಬಹುದು. ಇದು ಅಡುಗೆಮನೆಯ ನೋಟವನ್ನು ಬದಲಿಸುವುದರಲ್ಲಿ ಸಂಶಯವಿಲ್ಲ.

ಮರದ ಸೌಟು, ಚಮಚಗಳು

ಈ ಹಿಂದೆ ಅಡುಗೆ ಮಾಡಲು ಮರದ ಸಲಕರಣೆಗಳನ್ನು ಬಳಸುತ್ತಿದ್ದರು. ಅಂತಹ ಕಾಲ ಮತ್ತೆ ಬಂದಿದೆ. ಈಗ ಅಡುಗೆ ಮಾಡಲು ಮರದ ಪರಿಕರಗಳನ್ನು ಬಳಸುವುದು ಟ್ರೆಂಡ್ ಆಗಿದೆ. ಇವು ಅಡುಗೆಮನೆ ಹಾಗೂ ಊಟದ ಟೇಬಲ್‌ನ ಅಂದವನ್ನು ಹೆಚ್ಚಿಸುತ್ತವೆ. ಅಲ್ಲದೇ ಇವುಗಳನ್ನು ಎಲ್ಲೆಂದರಲ್ಲಿ ಇಡುವ ಬದಲು ಗೋಡೆಯಲ್ಲಿ ನೀಟಾಗಿ ನೇತು ಹಾಕಬಹುದು. ಇದರಿಂದ ಜಾಗ ಉಳಿತಾಯವಾಗುತ್ತದೆ.

ಏಪ್ರನ್‌ ಸೆಟ್‌

ಅಡುಗೆ ಮಾಡುವಾಗ ಉಡುಪು ಗಲೀಜಾಗುವುದನ್ನು ತಡೆಯಲು ಏಪ್ರನ್‌ ಕಟ್ಟಿಕೊಳ್ಳುತ್ತಾರೆ. ಇದರೊಂದಿಗೆ ಕೈಯ ಅಂದವನ್ನು ಕಾಪಾಡಲು ಕೈಗವಸು ಬಳಸಬಹುದು. ಒಂದೇ ಬಣ್ಣದ ಏಪ್ರನ್‌ ಹಾಗೂ ಕೈಗವಸು ಬಳಸಬಹುದು.

ಅಡುಗೆಗೆ ಅನುಕೂಲಕರವಾದ ಸಲಕರಣೆಗಳನ್ನು ನೀಟಾಗಿ ಜೋಡಿಸಿ ಇಟ್ಟುಕೊಂಡರೆ ಅಡುಗೆಮನೆ ಅಂದವಾಗಿಯೂ ಕಾಣುತ್ತದೆ; ಜಾಗದ ಕೊರತೆಯನ್ನೂ ನೀಗಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT