ಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದೇ? ನಿಮ್ಮ ಪಕ್ಷ ಗೆಲ್ಲಲು ಪೂರಕವಾದ ಅಂಶಗಳು ಏನಿದೆ ಎಂದು ನಿಮಗೆ ಅನಿಸುತ್ತದೆ?
ಹಿಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಚುನಾವಣೆಯಲ್ಲಿ ಎಲ್ಲ ದಾಖಲೆಗಳನ್ನು ಮುರಿದು ಪಕ್ಷ ಜಯ ಗಳಿಸುವ ಭರವಸೆ ಇದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯದ ವಿಕಾಸ, ಜನರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳು ಜಾರಿಗೆ ಬಂದಿವೆ. ಡಬಲ್ ಎಂಜಿನ್ ಸರ್ಕಾರ ಆ ಕೆಲಸ ಮಾಡುತ್ತಿದೆ. ಕರ್ನಾಟಕವು ಅಭಿವೃದ್ಧಿಯಲ್ಲಿ ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ಹಿಂದೆ ಬಿ.ಎಸ್. ಯಡಿಯೂರಪ್ಪ, ಈಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ಕೆಲಸಗಳಾಗಿವೆ. ರಾಜ್ಯಕ್ಕೆ ಗೌರವ ತಂದುಕೊಡುವ ಕೆಲಸಗಳಾಗಿವೆ.
ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ₹6 ಸಾವಿರ ಕೊಡುತ್ತಿದ್ದರೆ, ರಾಜ್ಯ ಸರ್ಕಾರ ₹4 ಸಾವಿರ ಕೊಡುತ್ತಿದೆ. ಎಸ್ಸಿ/ಎಸ್ಟಿ ಮೀಸಲು ಹೆಚ್ಚಳ, ಉಚಿತ ರೇಷನ್, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿರುವುದರಿಂದ ಜನ ಬಿಜೆಪಿ ಹಾಗೂ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈಗ ನಾನು ವಿಜಯನಗರ ಜಿಲ್ಲೆಯಲ್ಲಿರುವೆ. ಇದು ನಮ್ಮ ಗೌರವದ ಪ್ರತೀಕ. ಹಂಪಿಯ ಗತವೈಭವ ಮರಳಿಸಿದ್ದು ದೊಡ್ದ ಕೆಲಸ.
ಕರ್ನಾಟಕವು ಅಭಿವೃದ್ಧಿಯಲ್ಲಿ ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ಹಿಂದೆ ಬಿ.ಎಸ್. ಯಡಿಯೂರಪ್ಪ, ಈಗ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮೂಲಸೌಕರ್ಯ, ಉದ್ಯೋಗ ಸೃಷ್ಟಿ ಸೇರಿದಂತೆ ವಿವಿಧ ಕೆಲಸಗಳಾಗಿವೆ. ರಾಜ್ಯಕ್ಕೆ ಗೌರವ ತಂದುಕೊಡುವ ಕೆಲಸಗಳಾಗಿವೆ.ಶಿವರಾಜ್ ಸಿಂಗ್ ಚೌಹಾಣ್
ಬಿಜೆಪಿ ಚುನಾವಣೆ ಎದುರಿಸಿದ ಬಹುತೇಕ ರಾಜ್ಯಗಳಲ್ಲಿ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸಿದೆ. ಈ ಹಿಂದೆ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರು ಘೋಷಿಸಲಾಗಿತ್ತು. ಆದರೆ, ಈ ಸಲದ ಚುನಾವಣೆಯಲ್ಲೇಕೆ ಯಾರ ಹೆಸರೂ ಘೋಷಿಸಿಲ್ಲ?
ನರೇಂದ್ರ ಮೋದಿ ನಮ್ಮ ನಾಯಕ. ಭಾರತದ ಪುನರ್ ನಿರ್ಮಾಣಕ್ಕಾಗಿ ಅವರು ಬಂದಿದ್ದಾರೆ. ನಾವೆಲ್ಲರೂ ಅವರ ಹಿಂದೆ ಇದ್ದೇವೆ. ಯಾವಾಗ ಚುನಾವಣೆ ಘೋಷಣೆಯಾಗುತ್ತದೆಯೋ ಆಗ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸಲಿದೆ.
ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ಪಡೆಯಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದವರು ಕರ್ನಾಟಕ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಒಂದಾದ ನಂತರ ಒಂದರಂತೆ ಹಗರಣಗಳು ಬೆಳಕಿಗೆ ಬಂದಿವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಗುತ್ತಿಗೆದಾರರ ಸಂಘದವರು ಮಾಡಿದ್ದು ಕೇವಲ ಆರೋಪ. ಅವರು ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿಲ್ಲ. ಈ ಆರೋಪವನ್ನೇ ದೊಡ್ಡದು ಮಾಡಿ ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ.
ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ? ಇದರಿಂದ ಚುನಾವಣೆಯಲ್ಲಿ ನಿಮ್ಮ ಪಕ್ಷದ ಮೇಲೆ ಪರಿಣಾಮ ಬೀರಲಿದೆಯೆ?
ಯಾವುದೇ ರೀತಿಯ ಪರಿಣಾಮ ಆಗುವುದಿಲ್ಲ. ಕೆಲ ದಿನಗಳ ಹಿಂದೆ ಕೆಲವು ವಸ್ತುಗಳ ಬೆಲೆ ಏರಿಕೆ ತಗ್ಗಿದೆ. ಅದನ್ನೂ ನೀವು ಗಮನಿಸಬೇಕು. ಅಂತರರಾಷ್ಟ್ರೀಯ ಪರಿಸ್ಥಿತಿಯಿಂದ ಕೆಲವೊಮ್ಮೆ ಬೆಲೆ ಏರಿಳಿತವಾಗುತ್ತದೆ. ಆದರೆ, ಜನರಿಗೆ ‘ರೋಟಿ’, ‘ಮಕಾನ್’, ಉದ್ಯೋಗ, ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಸವಲತ್ತುಗಳನ್ನು ಒದಗಿಸುತ್ತಿದೆ.
ಕರ್ನಾಟಕ ಮತ್ತು ಮಧ್ಯಪ್ರದೇಶ ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ಅಭಿವೃದ್ಧಿ ವಿಷಯದಲ್ಲಿ ಯಾವ ರಾಜ್ಯ ಮುಂದಿದೆ ಎಂದು ನಿಮಗೆ ಅನಿಸುತ್ತದೆ?
ಆಯಾ ಕ್ಷೇತ್ರಗಳಲ್ಲಿ ಎರಡೂ ರಾಜ್ಯಗಳು ಉತ್ತಮವಾಗಿ ಕೆಲಸ ಮಾಡಿವೆ. ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಎರಡೂ ರಾಜ್ಯಗಳು ಕೆಲಸ ನಿರ್ವಹಿಸುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.