×
ADVERTISEMENT
ಈ ಕ್ಷಣ :
ADVERTISEMENT

ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ರಸ್ತೆ ದುರಂತದಲ್ಲಿ ದುರ್ಮರಣ

ಫಾಲೋ ಮಾಡಿ
Comments

ಮೂಡುಬಿದಿರೆ: ವೇಣೂರು ಸಮೀಪದ ಗಂಟಾಲ್ಕಟ್ಟೆಯಲ್ಲಿ ಗುರುವಾರ ಮುಂಜಾನೆ ನಡೆದ ಅಪಘಾತವೊಂದರಲ್ಲಿ ಹಿರಿಯಡ್ಕ ಮೇಳದ ಮ್ಯಾನೇಜರ್, ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ಅವರು ಸಾವನ್ನಪ್ಪಿದ್ದಾರೆ.

ಆಟ ಮುಗಿಸಿ ಅವರು ಬರುತ್ತಿದ್ದ ಬೈಕು ಹಾಗೂ ಎದುರಿನಿಂದ ಬರುತ್ತಿದ್ದ ಓಮ್ನಿ ವ್ಯಾನ್ ಪರಸ್ಪರ ಡಿಕ್ಕಿಯಾಗಿದ್ದು, ವಾಮನಕುಮಾರ್ ದುರಂತ ಸಾವಿಗೀಡಾಗಿದ್ದಾರೆ. ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಬಂಧುಗಳನ್ನು, ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ.

ಸುಮಾರು 30 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಕಲಾವಿದರಾಗಿರುವ ಅವರು, ಪುಂಡು ವೇಷ, ಸ್ತ್ರೀವೇಷಗಳಲ್ಲಿ ಖ್ಯಾತಿ ಗಳಿಸಿದ್ದರು.

ವೇಣೂರು ಗ್ರಾಮದ ಗೋಳಿತ್ಯಾರಿನ ದಿ.ಅಣ್ಣು ದೇವಾಡಿಗ ಮತ್ತು ಮೋನಮ್ಮ ದಂಪತಿಯ ಪುತ್ರನಾಗಿರುವ ಅವರು ಇತ್ತೀಚೆಗಷ್ಟೇ ತಮ್ಮ ಅಕ್ಕನನ್ನು ಕಳೆದಕೊಂಡಿದ್ದರು. 8ನೇ ತರಗತಿಗೇ ವಿದ್ಯಾಭ್ಯಾಸ ಮೊಟಕುಗೊಳಿಸಿ ಯಕ್ಷಗಾನ ರಂಗಕ್ಕೆ ಬಂದಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಅವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ, ರಂಗಕ್ಕೇರಿದ್ದರು..

ಧರ್ಮಸ್ಥಳ ಮೇಳದಲ್ಲಿ 2 ವರ್ಷ, ಕದ್ರಿ ಮೇಳದಲ್ಲಿ 4 ವರ್ಷ ಹಾಗೂ ಪಿ.ಕಿಶನ್ ಹೆಗ್ಡೆ ನೇತೃತ್ವದ ಮಂಗಳಾದೇವಿ ಮೇಳದಲ್ಲಿ 15ಕ್ಕೂ ಹೆಚ್ಚು ವರ್ಷ ದುಡಿದಿರುವ ಅವರು, ಹತ್ತಕ್ಕೂ ಹೆಚ್ಚು ವರ್ಷಗಳಿಂದ ಹಿರಿಯಡ್ಕ ಮೇಳದಲ್ಲಿ ದುಡಿಯುತ್ತಿದ್ದರು.

ಪ್ರಮೀಳೆ, ಭ್ರಮರ ಕುಂತಳೆ, ಮಾಲಿನಿ, ಪ್ರಭಾವತಿ, ಪದ್ಮಾವತಿ, ಕಿನ್ನಿದಾರು, ದುರ್ಮುಖಿ ಮುಂತಾದ ಸ್ತ್ರೀಪಾತ್ರಗಳಲ್ಲದೆ, ಕೃಷ್ಣ, ಕುಶ-ಲವ, ಚಂಡ-ಮುಂಡ, ಕೋಟಿ-ಚೆನ್ನಯ, ಕಾಂತಬಾರೆ-ಬುದಬಾರೆ, ಸುದರ್ಶನ, ಭಾರ್ಗವ ಮುಂತಾದ ಅಬ್ಬರದ ಪುಂಡುವೇಷಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಮಸ್ಕತ್ ಸಹಿತ ವಿವಿಧೆಡೆ ಇವರ ಕಲಾಪ್ರತಿಭೆಗೆ ಸನ್ಮಾನವೂ ಸಂದಿದೆ.

ವೇಣೂರು ಸಮೀಪದ ಗಂಟಾಲ್ಕಟ್ಟೆಯಲ್ಲಿ ಗುರುವಾರ ಮುಂಜಾನೆ ನಡೆದ ಅಪಘಾತವೊಂದರಲ್ಲಿ ಹಿರಿಯಡ್ಕ ಮೇಳದ ಮ್ಯಾನೇಜರ್, ಯಕ್ಷಗಾನ ಕಲಾವಿದ ವೇಣೂರು ವಾಮನ ಕುಮಾರ್ ಅವರು ಸಾವನ್ನಪ್ಪಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT