×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್ ಚಿಕಿತ್ಸೆ ಹೊಣೆ‌ ಖಾಸಗಿಯವರಿಗೆ, ಸರ್ಕಾರ ಬೆಚ್ಚಗೆ ಮಲಗಿದೆ: ಸಿದ್ದರಾಮಯ್ಯ

Last Updated 20 ಜನವರಿ 2022, 14:21 IST
Comments
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಉಲ್ಬಣಗೊಳ್ಳುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಹೊಣೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ಬಿಜೆಪಿ ಸರ್ಕಾರ ಬೆಚ್ಚಗೆ ಮಲಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಜಾವಾಣಿ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಉಲ್ಲೇಖಿಸಿ ಸರಣಿ ಟ್ವೀಟ್‌ ಮಾಡಿರುವ ಅವರು, 'ಕೊರೊನಾ ಉಲ್ಬಣಿಸುತ್ತಿದ್ದರೂ ರೋಗಿಗಳ ಆರೈಕೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ಬಿಜೆಪಿ ಸರ್ಕಾರ ಬೆಚ್ಚಗೆ ಮಲಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಪತ್ರಿಕೆಗಳಿಗೆ ಸುಳ್ಳುಗಳ ಜಾಹೀರಾತು ನೀಡಿ ತನ್ನ ಬೆನ್ನು ತಾನೇ ತಟ್ಟಿಕೊಳ್ಳುವುದಲ್ಲ, ಅದೇ ಪತ್ರಿಕೆಗಳು ಪ್ರಕಟಿಸುತ್ತಿರುವ ಸತ್ಯ ಸಂಗತಿಗಳ ವರದಿಗಳನ್ನೂ ಓದಿ, ಎಚ್ಚೆತ್ತುಕೊಳ್ಳಿ' ಎಂದು ಕಿಡಿಕಾರಿದ್ದಾರೆ.

ಕೊರೊನಾ ಸೋಂಕಿನ ಜೊತೆ ಅದೇ ರೀತಿಯ ರೋಗ ಲಕ್ಷಣಗಳ ಶೀತ-ನೆಗಡಿ-ಜ್ವರಗಳ ಬಾಧೆಯೂ ಹೆಚ್ಚುತ್ತಿರುವುದರಿಂದ ಯಾವುದು ಕೊರೊನಾ, ಯಾವುದು ಅಲ್ಲ ಎನ್ನುವುದನ್ನು ತಿಳಿದುಕೊಳ್ಳಲಾಗದೆ ಜನ ಗೊಂದಲದಲ್ಲಿದ್ದಾರೆ. ಸೋಂಕಿತರು ಮನೆಯಲ್ಲಿಯೇ ಇರಿ ಎಂದು ಬಿಜೆಪಿ ಸರ್ಕಾರವೇ ಹೇಳಿ ಆ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತಿದೆ ಎಂದು ಗುಡುಗಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿರುವವರಲ್ಲಿ ಶೇಕಡಾ 90-93ರಷ್ಟು ಜನ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇವರಲ್ಲಿ ಕೊರೊನಾ ಸೋಂಕಿತರೆಷ್ಟು? ಬೇರೆ ಕಾಯಿಲೆ ಪೀಡಿತರೆಷ್ಟು ಎನ್ನುವುದರ ಬಗ್ಗೆ ನಿಖರವಾದ ಮಾಹಿತಿ ಸರ್ಕಾರದಲ್ಲಿಯೂ ಇಲ್ಲ. ಇದು ಅಪಾಯಕಾರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕೋವಿಡ್ ಚಿಕಿತ್ಸೆಗೆ ನಿಗದಿತ 1.94 ಲಕ್ಷ ಹಾಸಿಗೆಗಳಲ್ಲಿ 51,093 ಹಾಸಿಗೆಗಳು ಮಾತ್ರ ಸರ್ಕಾರಿ, ಉಳಿದೆಲ್ಲವೂ ಖಾಸಗಿ ಆಸ್ಪತ್ರೆಗಳಿಗೆ ಸೇರಿವೆ ಎಂದು ವರದಿಗಳು ಹೇಳುತ್ತಿವೆ. ಈ ವ್ಯವಸ್ಥೆ ಜನಹಿತಕ್ಕಾಗಿಯೇ? ಇಲ್ಲವೆ, ಖಾಸಗಿ ಆಸ್ಪತ್ರೆಗಳ ಹಿತಕ್ಕಾಗಿಯೇ? ಬಿಜೆಪಿ ಸರ್ಕಾರ ಸ್ಪಷ್ಟಪಡಿಸಬೇಕು ಮತ್ತೊಂದು ಪ್ರಶ್ನೆ ಎಸೆದಿದ್ದಾರೆ.

ಕೊರೊನಾ ಸೋಂಕು ಶೀಘ್ರಗತಿಯಲ್ಲಿ ಹಳ್ಳಿಗಳಿಗೆ ಹರಡುತ್ತಿದೆ ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳುತ್ತಿದೆ. ಹಿಂದಿನ ವೈಫಲ್ಯಗಳ ಅನುಭವದ ಹೊರತಾಗಿಯೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡದೆ ಕರ್ಫ್ಯೂ-ಲಾಕ್‌ಡೌನ್‌ಗಳನ್ನು ನಂಬಿ ಕೂತಿದೆ ಎಂದೂ ಟೀಕಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಉಲ್ಬಣಗೊಳ್ಳುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಹೊಣೆಯನ್ನು ಖಾಸಗಿ ಆಸ್ಪತ್ರೆಗಳಿಗೆ ವಹಿಸಿ ಬಿಜೆಪಿ ಸರ್ಕಾರ ಬೆಚ್ಚಗೆ ಮಲಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT