×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್‌: 2ನೇ ಡೋಸ್‌ನಲ್ಲಿ ಹಿಂದೆ ಬಿದ್ದ 18 ಜಿಲ್ಲೆಗಳು

ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಒಂದು ವರ್ಷ l ಎರಡನೇ ಅಲೆ ಬಳಿಕ ಲಸಿಕೆ ನೀಡಿಕೆಗೆ ವೇಗ
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಪ್ರಾರಂಭವಾಗಿ ಒಂದು ವರ್ಷ ಪೂರ್ಣಗೊಂಡಿದೆ. ಈ ಅವಧಿಯಲ್ಲಿ 18 ವರ್ಷಗಳು ಮೇಲ್ಪಟ್ಟವರಿಗೆ ಎರಡೂ ಡೋಸ್ ವಿತರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಮಾತ್ರ ಶೇ 100 ರಷ್ಟು ಸಾಧನೆ ಮಾಡಿದೆ. 18 ಜಿಲ್ಲೆಗಳು ಎರಡನೇ ಡೋಸ್ ವಿತರಣೆಯಲ್ಲಿ ಹಿಂದೆ ಬಿದ್ದಿದ್ದು, ಶೇ 85ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಗುರಿ ಸಾಧಿಸಿವೆ. 

ರಾಜ್ಯದಲ್ಲಿ 2021 ಜ.16ರಂದು ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ದೊರೆತಿತ್ತು. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯ ವಾರ್ಡ್ ಸಿಬ್ಬಂದಿ ನಾಗರತ್ನಾ ಕೆ. ಅವರು ಮೊದಲಿಗರಾಗಿ ‘ಕೋವಿಶೀಲ್ಡ್‌’ ಲಸಿಕೆ ಪಡೆದುಕೊಂಡಿದ್ದರು. ಪ್ರಾರಂಭಿಕ ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು, ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿದ್ದ ಸರ್ಕಾರ, ಬಳಿಕ ಲಸಿಕೆ ಲಭ್ಯತೆ ಅನುಸಾರ 60 ವರ್ಷಗಳು ಮೇಲ್ಪಟ್ಟವರಿಗೆ ಹಾಗೂ 18 ರಿಂದ 60 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಒದಗಿಸಲಾರಂಭಿಸಿತು. 

ಈ ವಯೋಮಿತಿಯವರಿಗೆ 2021ರ ಡಿಸೆಂಬರ್ ಅಂತ್ಯಕ್ಕೆ ಎರಡೂ ಡೋಸ್ ಲಸಿಕೆ ವಿತರಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು. ಆದರೆ, ಪ್ರಾರಂಭಿಕ ದಿನಗಳಲ್ಲಿ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ, ಲಸಿಕೆ ಪಡೆಯಲು ಜನರ ಹಿಂಜರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಈ ಗುರಿ ಸಾಕಾರವಾಗಲಿಲ್ಲ. ರಾಜ್ಯದಲ್ಲಿ 4.89 ಕೋಟಿ ಮಂದಿ 18 ವರ್ಷಗಳು ಮೇಲ್ಪಟ್ಟವರು ಎಂದು ಗುರುತಿಸಲಾಗಿದೆ. ಇವರಲ್ಲಿ ಶೇ 99 ರಷ್ಟು ಮಂದಿ ಮೊದಲ ಡೋಸ್ ಪಡೆದರೆ, ಶೇ 83 ರಷ್ಟು ಮಂದಿ ಎರಡನೆ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.  

ಇದೇ ತಿಂಗಳ 3 ರಿಂದ 15– 18 ವರ್ಷದೊಳಗಿನವರಿಗೂ ಲಸಿಕೆ ವಿತರಿಸಲಾಗುತ್ತಿದೆ. ಈ ವಯೋಮಾನದ 31.75 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, ಅವರಲ್ಲಿ ಶೇ 60ಕ್ಕೂ ಅಧಿಕ ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇದೇ 10 ರಿಂದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಅಸ್ಪಸ್ಥಗೊಂಡಿರುವ 60 ವರ್ಷಗಳು ಮೇಲ್ಪಟ್ಟವರಿಗೆ ಮೂರನೇ ಡೋಸ್ ನೀಡಲಾಗುತ್ತಿದೆ. ಎರಡನೇ ಡೋಸ್ ಪಡೆದು 9 ತಿಂಗಳಾದವರಿಗೆ ಸುರಕ್ಷತೆಯ ದೃಷ್ಟಿಯಿಂದ ಮತ್ತೊಂದು ಡೋಸ್ ಲಸಿಕೆ ಒದಗಿಸಲಾಗುತ್ತಿದೆ. 

ದ್ವಿತೀಯಾರ್ಧದಲ್ಲಿ ವೇಗ: ರಾಜ್ಯದಲ್ಲಿ ಜನವರಿಯಲ್ಲಿ ಲಸಿಕೆ ವಿತರಣೆ ಪ್ರಾರಂಭವಾದರೂ, ದೈನಂದಿನ ಸರಾಸರಿ ಮಾರ್ಚ್‌ ತಿಂಗಳ ನಂತರ ಲಕ್ಷದ ಗಡಿ ದಾಟಿತ್ತು. ಬಳಿಕ ಲಸಿಕೆ ವಿತರಣೆ ಏರುಗತಿ ಪಡೆದುಕೊಂಡಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿನಿತ್ಯ ಸರಾಸರಿ 4.83 ಲಕ್ಷ ಡೋಸ್‌ಗಳಷ್ಟು ಲಸಿಕೆಯನ್ನು ವಿತರಿಸಲಾಗಿತ್ತು. ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ 7 ಸಾವಿರಕ್ಕೂ ಅಧಿಕ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ತಿಂಗಳು ಪ್ರತಿನಿತ್ಯ ಸರಾಸರಿ 3.38 ಲಕ್ಷದಷ್ಟು ಡೋಸ್‌ಗಳನ್ನು ವಿತರಿಸಲಾಗಿದೆ. 

ಕೋವಿಡ್ ಲಸಿಕೆಯ ವಿವರ (ಜ.16)

9.14 ಕೋಟಿ

ಈವರೆಗೆ ರಾಜ್ಯದಲ್ಲಿ ವಿತರಿಸಲಾದ ಕೋವಿಡ್‌ ಲಸಿಕೆಯ ಡೋಸ್‌ಗಳು

5.05 ಕೋಟಿ

ಮೊದಲ ಡೋಸ್ ಲಸಿಕೆ ಪಡೆದವರು

4.05 ಕೋಟಿ

ಎರಡನೇ ಡೋಸ್ ಲಸಿಕೆ ಪಡೆದವರು

7.84 ಕೋಟಿ

ವಿತರಿಸಲಾದ ‘ಕೋವಿಶೀಲ್ಡ್’ ಲಸಿಕೆಯ ಡೋಸ್‌ಗಳು

1.29 ಲಕ್ಷ

ವಿತರಿಸಲಾದ ‘ಕೋವ್ಯಾಕ್ಸಿನ್’ ಲಸಿಕೆಯ ಡೋಸ್‌ಗಳು

2ನೇ ಡೋಸ್: ಮುಂದಿರುವ ಅಗ್ರ 5 ಜಿಲ್ಲೆಗಳು 

ಜಿಲ್ಲೆ; ಪ್ರಮಾಣ (%)

ಬೆಂಗಳೂರು ನಗರ; ಶೇ 106.7

ಕೊಡಗು; ಶೇ 95.7

ಮಂಡ್ಯ; ಶೇ 89.8

ವಿಜಯಪುರ; 88.8

ರಾಮನಗರ; ಶೇ 88.6

 2ನೇ ಡೋಸ್: ಹಿಂದುಳಿದ 5 ಜಿಲ್ಲೆಗಳು

ಜಿಲ್ಲೆ; ಪ್ರಮಾಣ (%)

ಕಲಬುರಗಿ; ಶೇ 71.9

ರಾಯಚೂರು; ಶೇ 74.1

ಯಾದಗಿರಿ; 76

ಹಾವೇರಿ; ಶೇ 77

ಚಿತ್ರದುರ್ಗ; 78.3

***
ರಾಜ್ಯದಲ್ಲಿ 9.14 ಕೋಟಿಗೂ ಅಧಿಕ ಡೋಸ್‌ಗಳು ಲಸಿಕೆ ವಿತರಿಸಲಾಗಿದೆ. ಶೇ 99 ರಷ್ಟು ಮಂದಿ ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದು, ಉತ್ತಮ ಸಾಧನೆಯಾಗಿದೆ.

-ಡಾ.ಕೆ. ಸುಧಾಕರ್, ಆರೋಗ್ಯ ಸಚಿವ

ರಾಜ್ಯದಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಪ್ರಾರಂಭವಾಗಿ ಒಂದು ವರ್ಷ ಪೂರ್ಣಗೊಂಡಿದೆ. ಈ ಅವಧಿಯಲ್ಲಿ 18 ವರ್ಷಗಳು ಮೇಲ್ಪಟ್ಟವರಿಗೆ ಎರಡೂ ಡೋಸ್ ವಿತರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಮಾತ್ರ ಶೇ 100 ರಷ್ಟು ಸಾಧನೆ ಮಾಡಿದೆ. 18 ಜಿಲ್ಲೆಗಳು ಎರಡನೇ ಡೋಸ್ ವಿತರಣೆಯಲ್ಲಿ ಹಿಂದೆ ಬಿದ್ದಿದ್ದು, ಶೇ 85ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಗುರಿ ಸಾಧಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT