ನವದೆಹಲಿ: ಪಕ್ಷದ ನಾಯಕತ್ವದಲ್ಲಿ ತುರ್ತಾಗಿ ಬದಲಾವಣೆ ಆಗಬೇಕು ಎಂದು ಪಟ್ಟು ಹಿಡಿದಿರುವ ಜಿ–23 ಬಣಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ. ತಾವು ಪಕ್ಷದ ಪೂರ್ಣಕಾಲಿಕ ಮುಖ್ಯಸ್ಥೆ ಎಂದು ತಿಳಿಸಿದ್ದು, ಮಾಧ್ಯಮಗಳ ಮೂಲಕ ತಮಗೆ ಸಂದೇಶ ಕಳುಹಿಸುವ ಅಗತ್ಯವಿಲ್ಲ ಎಂದು ಕುಟುಕಿದ್ದಾರೆ.

2019ರ ಲೋಕಸಭಾ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಹುದ್ದೆ ತ್ಯಜಿಸಿದ್ದರು. ಹೀಗಾಗಿ ಮಧ್ಯಂತರ ಅಧ್ಯಕ್ಷರಾಗಿ ಸೋನಿಯಾ ಅಧಿಕಾರ ವಹಿಸಿಕೊಂಡಿದ್ದರು. ಆದರೆ, ಅನಾರೋಗ್ಯದ ಕಾರಣ ಸೋನಿಯಾ ಅವರನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡುವಂತೆ ಜಿ–23 ನಾಯಕರು ಒತ್ತಾಯಿಸಿದ್ದರು. ಹಿರಿಯ ಸಂಸದ ಕಪಿಲ್ ಸಿಬಲ್ ಅವರು ಪತ್ರಿಕಾಗೋಷ್ಠಿ ನಡೆಸಿ, ಪಕ್ಷದಲ್ಲಿ ಯಾರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಟೀಕಿಸಿದ್ದರು.

ನಾಯಕತ್ವ ಬದಲಾವಣೆಗೆ ಒತ್ತಾಯಿಸುತ್ತಿರುವ ಪಕ್ಷದ ಮುಖಂಡರ ಪೈಕಿ ಯಾರ ಹೆಸರನ್ನೂ ಸೋನಿಯಾ ನೇರವಾಗಿ ಪ್ರಸ್ತಾಪಿಸಲಿಲ್ಲ.

‘ಈ ವರ್ಷದ ಜೂನ್ 30ರೊಳಗೆ ಪೂರ್ಣಕಾಲಿಕ ಅಧ್ಯಕ್ಷರನ್ನು ಆಯ್ಕೆ ಮಾಡಲು ಸಿಡಬ್ಲ್ಯುಸಿ ಒಂದು ಮಾರ್ಗಸೂಚಿಯನ್ನು ಅಂತಿಮಗೊಳಿಸಿತ್ತು. ಆದರೆ ಕೋವಿಡ್ ಎರಡನೇ ಅಲೆಯ ಕಾರಣ ಈ ಯೋಜನೆಗಳನ್ನು ಮುಂದೂಡಬೇಕಾಯಿತು. ಆದರೆ ಈಗ ಪೂರ್ಣ ಪ್ರಮಾಣದ ಸಾಂಸ್ಥಿಕ ಚುನಾವಣೆಗಳ ವೇಳಾಪಟ್ಟಿ ಸಭೆಯ ಮುಂದಿದೆ’ ಎಂದು ಸೋನಿಯಾ ವಿವರಿಸಿದರು.

‘ಮುಖಂಡರು, ಅದರಲ್ಲೂ ವಿಶೇಷವಾಗಿ ಯುವಕರು ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೈತರ ಆಂದೋಲನ, ಕೋವಿಡ್ ಸಮಯದಲ್ಲಿ ಪರಿಹಾರ ಒದಗಿಸುವುದು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು, ಬೆಲೆ ಏರಿಕೆ ಮೊದಲಾದ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸವನ್ನು ಅವರು ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

‘ಈ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೊತೆ ಚರ್ಚಿಸಿದ್ದೇನೆ. ಸಮಾನಮನಸ್ಕ ರಾಜಕೀಯ ಪಕ್ಷಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೇನೆ’ ಎಂದರು.

‘ನಾನು ಯಾವಾಗಲೂ ಮುಕ್ತ ಮಾತುಗಳನ್ನು ಮೆಚ್ಚಿದ್ದೇನೆ. ಮಾಧ್ಯಮಗಳ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ. ನಾವೆಲ್ಲರೂ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಯನ್ನು ಮಾಡೋಣ. ಆದರೆ ಈ ಕೊಠಡಿಯ ನಾಲ್ಕು ಗೋಡೆಗಳ ಹೊರಗೆ ಏನು ಸಂವಹನ ನಡೆಸಬೇಕು ಎಂಬುದು ಕಾರ್ಯಕಾರಿ ಸಮಿತಿಯ ಸಾಮೂಹಿಕ ನಿರ್ಧಾರವಾಗಿರುತ್ತದೆ’ ಎಂದು ಸೋನಿಯಾ ತೀಕ್ಷ್ಣವಾಗಿ ಹೇಳಿದ್ದಾರೆ.

‘ಮುಂಬರುವ ವಿಧಾನಸಭಾ ಚುನಾವಣೆಗಳಿಗಾಗಿ ಪಕ್ಷವು ಸಿದ್ಧತೆ ಆರಂಭಿಸಿದೆ. ನಮಗೆ ಅನೇಕ ಸವಾಲುಗಳು ಎದುರಾಗುವುದು ನಿಶ್ಚಿತ. ಆದರೆ ನಾವು ಒಗ್ಗಟ್ಟಾಗಿದ್ದರೆ, ಶಿಸ್ತುಬದ್ಧವಾಗಿದ್ದರೆ ಮತ್ತು ಪಕ್ಷದ ಹಿತಾಸಕ್ತಿಗಳ ಮೇಲೆ ಮಾತ್ರ ಗಮನ ಹರಿಸಿದರೆ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ’ ಎಂದು ಅವರು ವಿಶ್ವಾಸವ್ಯಕ್ತಪಡಿಸಿದರು.

ಸೋನಿಯಾ ಅವರು ತಮ್ಮ ಭಾಷಣದಲ್ಲಿ ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿದರು. ಇತ್ತೀಚೆಗೆ ಲಖಿಂಪುರ ಖೇರಿಯಲ್ಲಿ ನಡೆದ ಆಘಾತಕಾರಿ ಘಟನೆಗಳು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತವೆ ಎಂದು ಟೀಕಿಸಿದ ಅವರು, ದೇಶದ ಆರ್ಥಿಕತೆಯು ಕಳವಳಕಾರಿ ವಿಚಾರ ಎಂದರು.

ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಅಭಿಯಾನವನ್ನು ಟೀಕಿಸಿದ ಅವರು, ‘ನಮಗೆಲ್ಲ ತಿಳಿದಿರುವಂತೆ ದೇಶದ ಆರ್ಥಿಕ ಚೇತರಿಕೆಗೆ ಸರ್ಕಾರದ ಬಳಿ ಇರುವ ಏಕೈಕ ಅಸ್ತ್ರವೆಂದರೆ, ದಶಕಗಳಿಂದ ಕಟ್ಟಿದ ಸ್ವತ್ತುಗಳನ್ನು ಮಾರಾಟ ಮಾಡುವುದು. ಸಾಮಾಜಿಕ ಗುರಿಗಳೊಂದಿಗೆ ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಕಟ್ಟಲಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರವು ಎಲ್ಲವನ್ನೂ ಕೇವಲ ‘ಮಾರಾಟ’ದ ದೃಷ್ಟಿಕೋನದಲ್ಲಿ ನೋಡುತ್ತಿದೆ’ ಎಂದು ಆರೋಪಿಸಿದರು.

ಏರುತ್ತಿರುವ ಬೆಲೆಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಅಗತ್ಯದ ಪೆಟ್ರೋಲ್ ನೂರು ರೂಪಾಯಿಯ ಗಡಿ ದಾಟಿದೆ. ಡೀಸೆಲ್ ನೂರರ ಸನಿಹದಲ್ಲಿದೆ. ಅಡುಗೆ ಅನಿಲ ಸಿಲಿಂಡರ್ ₹900 ಮುಟ್ಟಿದೆ. ಅಡುಗೆ ಎಣ್ಣೆ ₹200ರ ಆಸುಪಾಸಿನಲ್ಲಿದೆ. ಇದು ದೇಶದಾದ್ಯಂತ ಜನರ ಬದುಕನ್ನು ಕಷ್ಟಕರವಾಗಿಸಿದೆ ಎಂದು ದೂರಿದರು.

ಮುಂದಿನ ಸೆಪ್ಟೆಂಬರ್‌ನಲ್ಲಿ ಚುನಾವಣೆ:

ಮುಂದಿನ ವರ್ಷ ಆಗಸ್ಟ್ 21 ಹಾಗೂ ಸೆಪ್ಟೆಂಬರ್ 29ರ ನಡುವೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿರ್ಧರಿಸಿದೆ. ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಈ ಸಮಿತಿಯು ಸುದೀರ್ಘ ಐದು ಗಂಟೆಗಳ ಸಭೆ ನಡೆಸಿದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ವೇಳಾಪಟ್ಟಿ ಪ್ರಕಟಿಸಿದರು.

2021 ನವೆಂಬರ್ 1ರಿಂದ 2022 ಮಾರ್ಚ್ 31ರವರೆಗೆ ಬೃಹತ್ ಸದಸ್ಯತ್ವ ಅಭಿಯಾನ ನಡೆಯಲಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು, ಖಜಾಂಚಿಗಳು ಮೊದಲಾದ ಹುದ್ದೆಗಳಿಗೆ 2022ರ ಜುಲೈ 21
ರಿಂದ ಆಗಸ್ಟ್ 20 ನಡುವೆ ಚುನಾವಣೆ ನಡೆಯಲಿದೆ ಎಂದರು.

ಅಧ್ಯಕ್ಷ ಸ್ಥಾನ ಪರಿಗಣನೆ: ರಾಹುಲ್

ರಾಹುಲ್ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸುವಂತೆ ಸಭೆಯಲ್ಲಿ ಒತ್ತಾಯ ಕೇಳಿಬಂದಿತು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹಲೋತ್, ಭೂಪೇಶ್ ಬಘೆಲ್, ಚರಣಜಿತ್ ಸಿಂಗ್ ಚನ್ನಿ ಸೇರಿದಂತೆ ವಿವಿಧ ನಾಯಕರು ಈ ಒತ್ತಾಯ ಮಂಡಿಸಿದರು.

ಮತ್ತೊಮ್ಮೆ ರಾಹುಲ್ ಗಾಂಧಿ ಪರವಾದ ಧ್ವನಿ ಸಭೆಯಲ್ಲಿ ಪ್ರತಿಧ್ವನಿಸಿತು. ಜಿ–23 ನಾಯಕರೂ ಸಹ ಬೆಂಬಲ ಸೂಚಿಸಿ ಕೈ ಎತ್ತಿದರು. ನವೆಂಬರ್ 14ರಿಂದ 29ರವರೆಗೆ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ, ಸಾಂಸ್ಥಿಕ ಚುನಾವಣೆ ದಿನಾಂಕ ನಿಗದಿ, ಪಕ್ಷದ ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವ ನಿರ್ಧಾರಗಳಿಗೆ ರಾಹುಲ್ ಗಾಂಧಿ ಅವರು ಅನುಮೋದನೆ ನೀಡಿದರು. ಇದು ಅವರ ಸಾರಥ್ಯಕ್ಕೆ ಕೇಂದ್ರ ನಾಯಕತ್ವ ಮುದ್ರೆಯೊತ್ತಿದಂತೆ ಬಿಂಬಿತವಾಯಿತು.

ತಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಎಲ್ಲ ನಾಯಕರಿಗೂ ರಾಹುಲ್ ಗಾಂಧಿ ಧನ್ಯವಾದ ಹೇಳಿದರು. ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಕುರಿತು ಎಲ್ಲರ ಒತ್ತಾಯವನ್ನು ಪರಿಗಣಿಸುವುದಾಗಿ ಅವರು ಭರವಸೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಪಕ್ಷದ ಮಾಜಿ ಅಧ್ಯಕ್ಷರೊಬ್ಬರು ಮತ್ತೊಮ್ಮೆ ಸಾರಥಿ ಸ್ಥಾನವನ್ನು ಒಪ್ಪಿಕೊಳ್ಳಲು ತಮ್ಮ ಇಚ್ಛೆಯನ್ನು ಸೂಚಿಸಿದ್ದು ಇದೇ ಮೊದಲು.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮೂವರು ಮುಖ್ಯಮಂತ್ರಿಗಳು, ಇತರರು ಸಭೆಯಲ್ಲಿ ಭಾಗವಹಿಸಿದ್ದರು. ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿ-23 ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಆನಂದ್ ಶರ್ಮಾ ಸಹ ಇದ್ದರು. ಕೋವಿಡ್ ನಂತರ ನಡೆದ ಮೊದಲ ಸಿಡಬ್ಲ್ಯುಸಿ ಭೌತಿಕ ಸಭೆ ಇದಾಗಿತ್ತು.

ಅಭ್ಯರ್ಥಿ ಘೋಷಣೆಗೆ ಪ್ರಿಯಾಂಕಾ ಒತ್ತಾಯ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲರಿಗಿಂತ ಮುಂಚಿತವಾಗಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸುವಂತೆ ಪ್ರಿಯಾಂಕಾ ಗಾಂಧಿ ಅವರು ಸಭೆಯಲ್ಲಿ ಒತ್ತಾಯಿಸಿದರು.

ಕೊನೆ ನಿಮಿಷದಲ್ಲಿ ಪಟ್ಟಿ ಅಂತಿಮಗೊಳಿಸುವ ಬದಲು, ಸಾಕಷ್ಟು ಮೊದಲೇ ಅಭ್ಯರ್ಥಿಗಳ ಹೆಸರು ಪ್ರಕಟಿಸುವುದರಿಂದ ಅಭ್ಯರ್ಥಿಗಳ ಸಾಮೂಹಿಕ ವಲಸೆಯನ್ನು ತಡೆಯಬಹುದು ಎಂದು ಅವರು ಹೇಳಿದ್ದಾರೆ. ಟಿಕೆಟ್ ಸಿಗದಿರುವ ಬೇಸರದಿಂದ ಕೆಲವರು ಕೊನೆ ಕ್ಷಣದಲ್ಲಿ ಪಕ್ಷ ತೊರೆಯುವ ಅಪಾಯವನ್ನೂ ತಡೆಯಬಹುದು ಎಂದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ನಾನೇ ಪೂರ್ಣಾವಧಿಯ, ಸಕ್ರಿಯ ಅಧ್ಯಕ್ಷೆ ಎಂದು ಸೋನಿಯಾ ಗಾಂಧಿ ಅವರು ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಶನಿವಾರ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.