×
ADVERTISEMENT
ಈ ಕ್ಷಣ :
ADVERTISEMENT

ಶಂಕಿತ ಪಾಕ್‌ ಉಗ್ರನ ಬಂಧನ- ಐಎಸ್‌ಐನಿಂದ ತರಬೇತಿ ಪಡೆದಿದ್ದ ಅಶ್ರಫ್

Published : 12 ಅಕ್ಟೋಬರ್ 2021, 19:31 IST
ಫಾಲೋ ಮಾಡಿ
Comments

ನವದೆಹಲಿ: ಒಂದು ದಶಕದಿಂದ ದೆಹಲಿಯಲ್ಲಿ ನೆಲೆಸಿದ್ದ ಪಾಕಿಸ್ತಾನಿ ಶಂಕಿತ ಭಯೋತ್ಪಾದಕನನ್ನು ಪೂರ್ವ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಶಂಕಿತನು ರಾಷ್ಟ್ರ ರಾಜಧಾನಿಯಲ್ಲಿ ಹಬ್ಬದ ವೇಳೆ ವಿಧ್ವಂಸಕ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದ ಎಂದು ತಿಳಿಸಿದ್ದಾರೆ. 

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿ ಮೊಹ್ಮದ್ ಅಶ್ರಫ್ ಎಂಬಾತನನ್ನು ಲಕ್ಷ್ಮಿನಗರದ ರಮೇಶ್ ಪಾರ್ಕ್‌ನಲ್ಲಿ ಬಂಧಿಸಲಾಗಿದೆ. ಈ ವ್ಯಕ್ತಿಯು ಶಾಸ್ತ್ರಿ ನಗರದಲ್ಲಿ ಭಾರತೀಯ ಪ್ರಜೆ ಅಲಿ ಅಹ್ಮದ್ ನೂರಿ ಎಂಬುವರ ಹೆಸರಿನಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಭಾರತೀಯ ಗುರುತಿನ ಚೀಟಿಗಳನ್ನು ಪಡೆದಿದ್ದ ಎಂದು ಆರೋಪಿಸಲಾಗಿದೆ. 

ಬಂಧಿತನಿಂದ ಮದ್ದುಗುಂಡು, ಒಂದು ಎಕೆ-47 ರೈಫಲ್, ಒಂದು ಗ್ರೆನೇಡ್ ಮತ್ತು ಎರಡು ಅತ್ಯಾಧುನಿಕ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್ ಆಯುಕ್ತ ರಾಕೇಶ್ ಅಸ್ತಾನಾ ಅವರ ಮೇಲ್ವಿಚಾರಣೆಯಲ್ಲಿ ವಿಶೇಷ ಘಟಕವು ಈ ಕಾರ್ಯಾಚರಣೆ ನಡೆಸಿತ್ತು. ಆರೋಪಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ, ಸ್ಫೋಟಕ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ಅಶ್ರಫ್ ವಿವಿಧ ಹೆಸರುಗಳಲ್ಲಿ ಹತ್ತಾರು ನಕಲಿ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡಿದ್ದಾನೆ. ಪಾಸ್‌ಪೋರ್ಟ್ ಸಹ ಮಾಡಿಸಿಕೊಂಡಿದ್ದು, ಅದನ್ನು ಬಳಸಿ ಥಾಯ್ಲೆಂಡ್ ಮತ್ತು ಸೌದಿ ಅರೇಬಿಯಾಕ್ಕೆ ಹೋಗಿ ಬಂದಿದ್ದಾನೆ. ತಾನೊಬ್ಬ ‘ಪೀಪ್‌ ಬಾಬಾ’ (ವಿದ್ವಾಂಸ) ಎಂದು ಹೇಳಿಕೊಂಡಿದ್ದ ಅಶ್ರಫ್ ಗಾಜಿಯಾಬಾದ್‌ನ ವೈಶಾಲಿಯ ಮಹಿಳೆಯನ್ನು ಮದುವೆಯಾಗಿದ್ದ. 

ಬಾಂಗ್ಲಾದೇಶದಿಂದ ಸಿಲಿಗುರಿ ಗಡಿ ಮುಖಾಂತರ  ಅಶ್ರಫ್ ಭಾರತಕ್ಕೆ ಪ್ರವೇಶಿಸಿದ್ದಾನೆ. ಮೊದಲಿಗೆ ಅಜ್ಮೀರ್‌ಗೆ ತೆರಳಿ, ಅಲ್ಲಿನ ಸ್ಥಳೀಯ ಮಸೀದಿಯ ಮೌಲ್ವಿಯ ಸ್ನೇಹ ಸಂಪಾದಿಸಿದ್ದ. 2006ರಲ್ಲಿ ಮೌಲ್ವಿ ಜತೆ ದೆಹಲಿಗೆ ಭೇಟಿ ನೀಡಿದ್ದ. ಅಲ್ಲಿ ಮೌಲ್ವಿಯ ಸಂಬಂಧಿಕರ ವಿಶ್ವಾಸ ಗಳಿಸಿ, ಅವರ ಗುರುತಿನ ಚೀಟಿಗಳನ್ನು ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

2004ರಲ್ಲಿ ಪಾಕಿಸ್ತಾನದ ನಾಸಿರ್ ಎಂಬಾತನಿಂದ ತರಬೇತಿ ಪಡೆದಿದ್ದ. ಭಾರತದಲ್ಲಿ ಗುಪ್ತವಾಗಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ಪಡೆದಿದ್ದ. ದೇಶದಲ್ಲಿ ಹಬ್ಬಗಳ ವೇಳೆ ಐಎಸ್‌ಐ ಪರವಾಗಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ನಿರ್ದೇಶನ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ

ಗುಪ್ತ ಘಟಕದ ಕಾರ್ಯಾಚರಣೆಯ (ಸ್ಲೀಪರ್ ಸೆಲ್) ಭಾಗವಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರನು ದೇಶದ ಹಲವಾರು ಭಾಗಗಳಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದ ಎಂದು ಡಿಸಿಪಿ (ವಿಶೇಷ ಘಟಕ) ಪ್ರಮೋದ್ ಕುಶ್ವಾಹ ತಿಳಿಸಿದ್ದಾರೆ. ಐಎಸ್‌ಐನಿಂದ ತರಬೇತಿ ಪಡೆದಿರುವ ಅಶ್ರಫ್, ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

***

ಸಾಲು ಹಬ್ಬಗಳ ಆರಂಭಕ್ಕೂ ಮುನ್ನ ವಿಶೇಷ ಘಟಕವು ಒಳ್ಳೆಯ ಬೇಟೆಯಾಡಿದೆ. ನಮ್ಮ ತಂಡವು ಒಂದು ದೊಡ್ಡ ಭಯೋತ್ಪಾದಕ ಸಂಚನ್ನು ವಿಫಲಗೊಳಿಸಿದೆ

- ರಾಕೇಶ್ ಅಸ್ತಾನಾ, ಪೊಲೀಸ್ ಆಯುಕ್ತ

ಒಂದು ದಶಕದಿಂದ ದೆಹಲಿಯಲ್ಲಿ ನೆಲೆಸಿದ್ದ ಪಾಕಿಸ್ತಾನಿ ಶಂಕಿತ ಭಯೋತ್ಪಾದಕನನ್ನು ಪೂರ್ವ ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಶಂಕಿತನು ರಾಷ್ಟ್ರ ರಾಜಧಾನಿಯಲ್ಲಿ ಹಬ್ಬದ ವೇಳೆ ವಿಧ್ವಂಸಕ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT