×
ADVERTISEMENT
ಈ ಕ್ಷಣ :
ADVERTISEMENT

ಇಳಿಕೆಯಾದ ಕೋವಿಡ್‌ ಹರಡುವಿಕೆ ಪ್ರಮಾಣ: ಸೋಂಕು ತಜ್ಞರು ಹೇಳುವುದೇನು?

ಕೋವಿಡ್‌ ಮೂರನೇ ಅಲೆ ಗರಿಷ್ಠ ಮಟ್ಟಕ್ಕೆ: ಸೋಂಕು ತಜ್ಞರ ಅಂದಾಜು
ಫಾಲೋ ಮಾಡಿ
Comments

ನವದೆಹಲಿ: ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಕೋವಿಡ್‌ ಹರಡುವಿಕೆ ಪ್ರಮಾಣವು ತಗ್ಗಿದೆ ಎಂದು ತಜ್ಞರು ಭಾನುವಾರ ಹೇಳಿದ್ದಾರೆ. ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಸೋಂಕು ಎರಡೂ ಮಹಾನಗರಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂಬುದರ ಸೂಚನೆ ಇದು ಆಗಿರಬಹುದು. ಅದಲ್ಲದೆ, ಎರಡೂ ನಗರಗಳಲ್ಲಿ ಕೋವಿಡ್‌ ದೃಢಪಡುವಿಕೆ ದರ ಸ್ಥಿರವಾಗಿದೆ. ಇದು ಕೋವಿಡ್‌ ನಿಯಂತ್ರಣಕ್ಕೆ ಬರಬಹುದು ಎಂಬ ಆಶಾಭಾವಕ್ಕೆ ಕಾರಣವಾಗಿದೆ. 

ಆದರೆ, ಕೋವಿಡ್‌ ಪರೀಕ್ಷೆಗಳನ್ನು ಕಡಿಮೆ ಮಾಡುವ ಕಾರ್ಯತಂತ್ರವನ್ನು ಸರ್ಕಾರ ಅನುಸರಿಸುತ್ತಿದೆ. ಹಾಗಾಗಿ, ಸೋಂಕು ಹರಡುವಿಕೆ ಪ್ರವೃತ್ತಿ ಯಾವ ರೀತಿಯಲ್ಲಿ ಇರಲಿದೆ ಎಂಬುದು ಸ್ಪಷ್ಟವಾಗಲು ಇನ್ನೂ ಸ್ವಲ್ಪ ಸಮಯ ಬೇಕು ಎಂದು ತಜ್ಞರು ಹೇಳಿದ್ದಾರೆ. 

ಮುಂಬೈಯಲ್ಲಿ ಇದೇ 12ರಂದು ಅತಿ ಹೆಚ್ಚು ಅಂದರೆ, 16,420 ಪ್ರಕರಣಗಳು ದೃಢಪಟ್ಟಿದ್ದವು. ಸೋಂಕು ದೃಢಪಡುವಿಕೆ ಪ್ರಮಾಣವು ಶೇ 24.38ರಷ್ಟಿತ್ತು. ನಂತರದ ನಾಲ್ಕು ದಿನಗಳಲ್ಲಿ ಪ‍್ರಕರಣಗಳ ಸಂಖ್ಯೆಯಲ್ಲಿ ಸತತ ಕುಸಿತ ಆಗಿದೆ. 7,895 ಪ್ರಕರಣಗಳು ಮಾತ್ರ ಭಾನುವಾರ ವರದಿಯಾಗಿವೆ. ದೆಹಲಿಯಲ್ಲಿ ಇದೇ 13ರಂದು ಅತಿ ಹೆಚ್ಚು ಅಂದರೆ, 28,867 ಪ್ರಕರಣಗಳು ಕಂಡು ಬಂದಿದ್ದವು. ನಂತರದ ದಿನಗಳಲ್ಲಿ ಅಲ್ಲಿಯೂ ಸತತ ಇಳಿಕೆ ದಾಖಲಾಗಿದೆ. 

‘ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಆದರೆ, ಸೋಂಕು ದೃಢಪಡುವಿಕೆ ಪ್ರಮಾಣವೂ ಇಳಿಕೆಯಾಗಿದೆ. ಅಂದರೆ, ಸಾಂಕ್ರಾಮಿಕದ ಹೊಸ ಅಲೆಯ ಗರಿಷ್ಠಮಟ್ಟ ತಲುಪಿದ್ದೇವೆ ಎಂಬುದರ ಸೂಚನೆ ಅದು. ಮುಂದಿನ ವಾರಗಳಲ್ಲಿ ನಿಜವಾದ ಇಳಿಕೆ ಕಾಣಿಸಿಕೊಳ್ಳಬಹುದು’ ಎಂದು ಇನ್ಸ್‌ಟಿಟ್ಯೂಟ್‌ ಆಫ್‌ ಜಿನೋಮಿಕ್ಸ್‌ ಆ್ಯಂಡ್‌ ಇಂಟಗ್ರೇಟಿವ್‌ ಬಯಾಲಜಿಯ ನಿರ್ದೇಶಕ ಅನುರಾಗ್‌ ಅಗರ್‌ವಾಲ್‌ ಹೇಳಿದ್ದಾರೆ. ಇದು ಭಾರತದ ಸಾರ್ಸ್‌ ಕೋವ್‌–2 ಜಿನೋಮ್‌ ಕನ್‌ಸೋರ್ಸಿಯಂನ ಸದಸ್ಯ ಸಂಸ್ಥೆಯಾಗಿದೆ. 

ಆದರೆ, ಕೋವಿಡ್‌ ಪರೀಕ್ಷೆ ಇಳಿಕೆ ಆಗಿರುವುದೇ ಪ್ರಕರಣಗಳ ಇಳಿಕೆಗೆ ಕಾರಣ. ಹಾಗಾಗಿ ಎಚ್ಚರಿಕೆ ಅಗತ್ಯ ಎಂದು ಹಲವು ತಜ್ಞರು ಪ್ರತಿಪಾದಿಸಿದ್ದಾರೆ. 

‘ಈಗ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವುದು ಕಡಿಮೆ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುತ್ತಿರುವುದಕ್ಕೋ ಅಥವಾ ಈ ಅಲೆಯು ಗರಿಷ್ಠಮಟ್ಟ ತಲುಪಿ ಇಳಿಕೆಯಾಗುತ್ತಿರುವುದಕ್ಕೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ’ ಎಂದು ಅಶೋಕ ವಿಶ್ವವಿದ್ಯಾಲಯ ಮತ್ತು ಚೆನ್ನೈನ ಐಎಂಎಸ್‌ನ ಪ್ರಾಧ್ಯಾಪಕ ಗೌತಮ್ ಮೆನನ್ ಹೇಳಿದ್ದಾರೆ.

‘ದೇಶದ ದೊಡ್ಡ ನಗರಗಳಲ್ಲಿ ಓಮೈಕ್ರಾನ್‌ ಸೋಂಕು ಜನವರಿ 20ರ ವೇಳೆಗೆ ಹೆಚ್ಚಾಗಲಿದೆ ಎಂದು ನಮ್ಮ ಒಂದು ಗಣಿತೀಯ ವಿಶ್ಲೇಷಣೆ ಹೇಳಿದೆ. ದೇಶದ ಬೇರೆ ಕಡೆ, ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಓಮೈಕ್ರಾನ್‌ ವ್ಯಾಪಿಸಲು ಮತ್ತಷ್ಟು ಸಮಯ ಬೇಕಾಗುತ್ತದೆ. ಅದು ಹಾಗೆಯೇ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ’ ಎಂದು ಅವರು ವಿವರಿಸಿದ್ದಾರೆ. 

ದೆಹಲಿ ಮತ್ತು ಮುಂಬೈನಲ್ಲಿ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟದಲ್ಲಿ ಇರುವುದು, ಮೂರನೇ ಅಲೆಯ ಅಂತ್ಯವನ್ನು ಸೂಚಿಸುತ್ತಿಲ್ಲ. ಏಕೆಂದರೆ ದೇಶದ 265 ಜಿಲ್ಲೆಗಳಲ್ಲಿ ಕೋವಿಡ್‌ ದೃಢಪಡುವ ಪ್ರಮಾಣ ಶೇ 10ಕ್ಕಿಂತಲೂ ಹೆಚ್ಚು ಎಂದೂ ತಜ್ಞರು ಹೇಳಿದ್ದಾರೆ.

‘ದೇಶದ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗದೇ ಇದ್ದರೆ, ದೇಶದೆಲ್ಲೆಡೆ ಕೋವಿಡ್‌ನ ಮೂರನೇ ಅಲೆ ಗರಿಷ್ಠಮಟ್ಟ ಮುಟ್ಟಿದೆ ಎನ್ನಲಾಗದು’ ಎಂದು ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾದ ಅಧ್ಯಕ್ಷ ಕೆ.ಶ್ರೀನಾಥ್ ರೆಡ್ಡಿ ಹೇಳಿದ್ದಾರೆ.

ಪರೀಕ್ಷೆ ಸಂಖ್ಯೆ ಕುಸಿತ

ದೆಹಲಿಯಲ್ಲಿ ಜನವರಿ 12ರಂದು 1,05,000 ಜನರ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಜನವರಿ 13ರಂದು ಅದು 99,000ಕ್ಕೆ ಇಳಿದಿತ್ತು. ಜನವರಿ 16ರಂದು ಪರೀಕ್ಷೆಗಳ ಸಂಖ್ಯೆಯು 67,000ಕ್ಕೆ ಕುಸಿಯಿತು. 

ಮುಂಬೈಯಲ್ಲಿ ಜನವರಿ 9ರಂದು 68,249 ಜನರ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಜನವರಿ 15ರಂದು ಪರೀಕ್ಷೆಯ ಸಂಖ್ಯೆಯು54,500ಕ್ಕೆ ಇಳಿದಿತ್ತು. ಹಾಗಿದ್ದರೂ ಜನವರಿ 16ರಂದು ಇದು 57,500ಕ್ಕೆ ಹೆಚ್ಚಳವಾಗಿತ್ತು.

ದೆಹಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಕೋವಿಡ್‌ ಹರಡುವಿಕೆ ಪ್ರಮಾಣವು ತಗ್ಗಿದೆ ಎಂದು ತಜ್ಞರು ಭಾನುವಾರ ಹೇಳಿದ್ದಾರೆ. ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮೈಕ್ರಾನ್‌ ಸೋಂಕು ಎರಡೂ ಮಹಾನಗರಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂಬುದರ ಸೂಚನೆ ಇದು ಆಗಿರಬಹುದು. ಅದಲ್ಲದೆ, ಎರಡೂ ನಗರಗಳಲ್ಲಿ ಕೋವಿಡ್‌ ದೃಢಪಡುವಿಕೆ ದರ ಸ್ಥಿರವಾಗಿದೆ. ಇದು ಕೋವಿಡ್‌ ನಿಯಂತ್ರಣಕ್ಕೆ ಬರಬಹುದು ಎಂಬ ಆಶಾಭಾವಕ್ಕೆ ಕಾರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT