×
ADVERTISEMENT
ಈ ಕ್ಷಣ :
ADVERTISEMENT

ಅರುಣಾಚಲ ಪ್ರದೇಶ ರಾಜ್ಯವನ್ನು ಭಾರತ ಅಕ್ರಮವಾಗಿ ನಿರ್ಮಿಸಿದೆ: ಚೀನಾ ಆರೋಪ

Published : 13 ಅಕ್ಟೋಬರ್ 2021, 19:31 IST
ಫಾಲೋ ಮಾಡಿ
Comments

ನವದೆಹಲಿ: ಅರುಣಾಚಲ ಪ್ರದೇಶ ರಾಜ್ಯವನ್ನು ಭಾರತವು ಅಕ್ರಮವಾಗಿ ಮತ್ತು ಏಕಪಕ್ಷೀಯವಾಗಿ ರಚಿಸಿದೆ ಎಂದು ಚೀನಾ ಬುಧವಾರ ಆರೋಪ ಮಾಡಿದೆ. 

ಉಭಯ ದೇಶಗಳ ನಡುವೆ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ನಡೆದ ತಿಕ್ಕಾಟದ ಕುರಿತು ಹಿರಿಯ ಸೇನಾ ಕಮಾಂಡರ್‌ಗಳ ಮಾತುಕತೆ ನಡೆಯುತ್ತಿರುವ ವೇಳೆಯೇ ಚೀನಾ ಈ ಹೇಳಿಕೆ ನೀಡಿದೆ.

ಇತ್ತೀಚೆಗೆ, ಅರುಣಾಚಲ ಪ್ರದೇಶಕ್ಕೆ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಭೇಟಿ ನೀಡಿದ್ದರು. ಈ ಕುರಿತು ಚೀನಾ ಪ್ರತಿಭಟನೆ ದಾಖಲಿಸಿತ್ತು. ಪ್ರತಿಭಟನೆಯನ್ನು ಪಕ್ಕಕ್ಕಿರಿಸಿ ಲಡಾಖ್‌ನ ಎಲ್‌ಎಸಿಯ ತಿಕ್ಕಾಟ ಬಗೆಹರಿಸುವ ಕುರಿತು ಕೆಲಸ ಮಾಡುವಂತೆ ಚೀನಾಕ್ಕೆ ಭಾರತ ಹೇಳಿತ್ತು.

ಚೀನಾ–ಭಾರತ ಗಡಿ ಕುರಿತು ಚೀನಾದ ಅಭಿಪ್ರಾಯ ಎಂದಿಗೂ ಬದಲಾಗುವುದಿಲ್ಲ. ಅರುಣಾಚಲ ಪ್ರದೇಶ ರಾಜ್ಯವನ್ನು ಭಾರತ ಅಕ್ರಮವಾಗಿ ಮತ್ತು ಏಕಪಕ್ಷೀಯವಾಗಿ ರಚಿಸಿದೆ ಎಂದೇ ಚೀನಾ ಪರಿಗಣಿಸುತ್ತದೆ. ಈ ಪ್ರದೇಶಕ್ಕೆ ಭಾರತೀಯ ನಾಯಕರು ಭೇಟಿ ನೀಡುವುದನ್ನೂ ವಿರೋಧಿಸುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜನ್‌ ಬೀಜಿಂಗ್‌ನಲ್ಲಿ ಹೇಳಿದ್ದಾರೆ. 

ತನ್ನ ಪ್ರಮುಖ ಕಾಳಜಿಗಳನ್ನು ಗೌರವಿಸಬೇಕು ಎಂದು ಭಾರತಕ್ಕೆ ಚೀನಾ ಒತ್ತಾಯಿಸುತ್ತದೆ. ಗಡಿ ವಿವಾದವನ್ನು ಮತ್ತಷ್ಟು ಜಟಿಲಗೊಳಿಸುವಂಥ ಯಾವುದೇ ಕ್ರಮಗಳನ್ನು ಭಾರತ ತೆಗೆದುಕೊಳ್ಳಬಾರದು. ಎರಡೂ ರಾಷ್ಟ್ರಗಳ ನಡುವಿನ ಪರಸ್ಪರ ನಂಬಿಕೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಹಾಳುಮಾಡುವಂಥ ಕೆಲಸಗಳಿಂದ ಭಾರತ ದೂರ ಇರಬೇಕು ಎಂದಿದ್ದಾರೆ.

ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಒಂದು ಭಾಗ ಎಂದು ಚೀನಾ ಪ್ರತಿಪಾದಿಸುತ್ತದೆ. ಭಾರತದ ಗಡಿ ಒಳಗೆ, ಅರುಣಾಚಲ ಪ್ರದೇಶದ 90,000 ಚದರ ಕಿಮೀ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ಹೇಳಿಕೊಳ್ಳುತ್ತದೆ. ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ಸುಮಾರು 200 ಸೈನಿಕರು ಅರುಣಾಚಲ ಪ್ರದೇಶದ ಗಡಿ ಒಳಗೆ ಅಕ್ರಮವಾಗಿ ನುಸುಳಲು ಇತ್ತೀಚೆಗೆ ಪ್ರಯತ್ನಿಸಿದ್ದರು. ವಾರದ ಹಿಂದಷ್ಟೇ ಇಂಥದ್ದೇ ಪ್ರಯತ್ನವನ್ನು ಅವರು ಉತ್ತರಾಖಂಡದ ಬರಹೋಟಿಯಲ್ಲಿ ಮಾಡಿದ್ದರು. 

ಚೀನಾ ಸೈನಿಕರು ಮೇಲಿಂದ ಮೇಲೆ ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರತದ ಗಡಿ ಒಳಗೆ ನುಸುಳಲು ಮಾಡುತ್ತಿರುವ ಪ್ರಯತ್ನವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಚೀನಾದ ಈ ಪ್ರಯತ್ನಗಳು ಭಾರತ–ಚೀನಾ ಗಡಿಯಲ್ಲಿ ಉದ್ವಿಗ್ನತೆ ತಂದೊಡ್ಡುವ ಅಪಾಯವಿದೆ ಎಂಬುದನ್ನು ಭಾರತ ಅರಿತಿದೆ. ಭಾರತದ ಆತಂಕದ ಕುರಿತು ಭಾರತೀಯ ಸೇನೆಯ ಮುಖ್ಯಸ್ಥ ಜನರಲ್‌ ಎಂ. ಎಂ. ನರವಣೆ ಹಲವಾರು ಬಾರಿ ಮಾತನಾಡಿದ್ದಾರೆ.

ಚೀನಾದ ಹೇಳಿಕೆಯನ್ನು ತಿರಸ್ಕರಿಸುತ್ತೇವೆ: ಭಾರತ

ಅರುಣಾಚಲ ಪ್ರದೇಶವು ಭಾರತದ ಒಂದು ಅವಿಭಾಜ್ಯ ಭಾಗ. ಚೀನಾ ನೀಡಿರುವ ಹೇಳಿಕೆಗಳನ್ನು ನಾವು ತಿರಸ್ಕರಿಸುತ್ತೇವೆ. ಭಾರತದ ನಾಯಕರು ಅರುಣಾಚಲ ಪ್ರದೇಶಕ್ಕೆ ಎಂದಿನಂತೆ ಭೇಟಿ ನೀಡುತ್ತಾರೆ. ಭಾರತದ ನಾಯಕರು ಭಾರತದ ರಾಜ್ಯಕ್ಕೆ ಹೋಗುವುದನ್ನು ವಿರೋಧಿಸಿ ಚೀನಾ ಹೇಳಿಕೆ ನೀಡಿದರೆ ಅದಕ್ಕೆ ಭಾರತೀಯರು ಹೊಣೆಯಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ. ಪೂರ್ವ ಲಡಾಖ್‌ ಗಡಿ ತಿಕ್ಕಾಟದ ಕುರಿತು 17 ತಿಂಗಳುಗಳಲ್ಲಿ ನಡೆದ 13ನೇ ಸಭೆ ಕೂಡಾ ಫಲಪ್ರದವಾಗದ ಸಮಯದಲ್ಲಿ ಚೀನಾ ಇಂಥ ಹೇಳಿಕೆ ನೀಡಿದೆ. ಭಾರತ–ಚೀನಾದ ಪಶ್ಚಿಮ ಗಡಿಯಲ್ಲೂ ದ್ವಿಪಕ್ಷೀಯ ಒಪ್ಪಂದ ಉಲ್ಲಂಘಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಬಾಗ್ಚಿ ಹೇಳಿದ್ದಾರೆ.

ಅರುಣಾಚಲ ಪ್ರದೇಶ ರಾಜ್ಯವನ್ನು ಭಾರತವು ಅಕ್ರಮವಾಗಿ ಮತ್ತು ಏಕಪಕ್ಷೀಯವಾಗಿ ರಚಿಸಿದೆ ಎಂದು ಚೀನಾ ಬುಧವಾರ ಆರೋಪ ಮಾಡಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT