ಪ್ಯಾಲೆಸ್ಟೀನ್ -ಇಸ್ರೇಲ್‌ಗೆ ಪ್ರವೇಶಿಸಲು ನೆಲಮಾರ್ಗದಲ್ಲಿ ಕೆಲವೇ ಹಾದಿಗಳಿವೆ. ಅವುಗಳಲ್ಲಿ ಜೋರ್ಡಾನ್ ದೇಶದಿಂದ ಶೇಕ್‌ಹುಸೇನ್ ಸೇತುವೆಯನ್ನು ದಾಟುವುದೂ ಒಂದು. ಸದರಿ ಸೇತುವೆಯನ್ನು ಎರಡೂ ದೇಶಕ್ಕೆ ಗಡಿಯಾಗಿರುವ ಜೋರ್ದಾನ್ ಹೊಳೆಗೆ ಅಡ್ಡಲಾಗಿ ಕಟ್ಟಲಾಗಿದೆ. ಹೊಳೆ ದಾಟುವಾಗ ಸಂಭ್ರಮ-ಕಾತರಗಳಿಂದ ನೋಡಿದೆ. ಸೀಮೋಲ್ಲಂಘನೆ ಪಿಚ್ಚೆನಿಸಿತು. ಹೊಳೆ, ಮಳೆಗಾಲದಲ್ಲಿ ಹೊಲಗದ್ದೆಗಳ ನಡುವೆ ಹರಿವ ಹಳ್ಳದಂತಿತ್ತು. ಮೇಲ್ಭಾಗದಲ್ಲಿ ಬಿದ್ದ ಮಳೆಯ ದೆಸೆಯಿಂದಲೋ ಕಿನಾರೆಯ ಊರುಗಳಿಂದ ಸೇರಿದ ಕೊಳಚೆಯಿಂದಲೋ ನೀರು ಬಗ್ಗಡವಾಗಿತ್ತು. ಬಹುಶಃ ಆಳ ಆಳುದ್ದಕ್ಕಿಂತ ಹೆಚ್ಚಿಲ್ಲ. ಹರಹು ಮೇಕೆ ದಾಟುವಷ್ಟು. ದಡದಲ್ಲಿ ಆನೆಹುಲ್ಲು, ಗಿಡಪೊದೆ ಬೆಳೆದು ಬಾಗಿ ನೀರನ್ನಾವರಿಸಿದ್ದವು. ಬಂಡೆಗಳಿಂದ ಕೂಡಿದ ಕಿರಿಯಾಳದ ಹೊಳೆಗಳ ನಾಡಿನಿಂದ ಹೋಗಿದ್ದ ನನಗೆ ಉತ್ತರ ಇಂಡಿಯಾದ ಹಡಗು ಸಂಚರಿಸುವ ಹೊಳೆಗಳನ್ನು ಕಂಡು ಸೋಜಿಗವಾಗಿತ್ತು. ಆದರೆ ಜೋರ್ದಾನ್ ನಮ್ಮ ಗದಗಿನ ಬೆಣ್ಣೆಹಳ್ಳಕ್ಕಿಂತ ಬಳ್ಳಾರಿಯ ಹಗರಿಗಿಂತ ಚಿಕ್ಕದು. ಶತಮಾನಗಳ ಕಾಲ ಆಸುಪಾಸಿನ ದೇಶಗಳನ್ನು ಜಲಕಲಹಕ್ಕೆ ಹಚ್ಚಿದ ಪವಿತ್ರ ಹೊಳೆ ಇದೇಯೇನು?

ಪ್ಯಾಲೆಸ್ಟೀನ್-ಇಸ್ರೇಲ್ ಪ್ರವಾಸದಲ್ಲಿ ಜೋರ್ದಾನ್ ಹೊಳೆಯನ್ನು ಹಲವೆಡೆ ಭೇಟಿಯಾಗುವ ಅವಕಾಶ ಸಿಕ್ಕಿತು. ಇದರ ಪ್ರಥಮ ದರ್ಶನ ಜೋರ್ಡಾನ್ ದೇಶದ ನೆಬೂ ಪರ್ವತದ ಮೇಲಿಂದ ಆಯಿತು. ಇಲ್ಲಿಂದಲೇ ಯಹೂದಿಗಳ ದೇವರಾದ ಯಹ್ವಾ, ಪ್ರವಾದಿ ಮೋಸೆಸನಿಗೆ ‘ಇದೋ ನಿನ್ನ ಸಂತಾನಕ್ಕೆ ನಾನು ಕೊಡುತ್ತಿರುವ ಭರವಸೆಯ ನೆಲವಿದು’ ಎಂದು ಹೊಳೆಯನ್ನೂ ದಡದ ಜಮೀನನ್ನೂ ತೋರಿಸಿದ್ದಂತೆ. ಇಲ್ಲಿಂದ ಪರ್ವತದ ಶಿಖರದಿಂದ ಬೆಳ್ಳಿಗೆರೆಯಾಗಿ ಕಾಣುವ ಜೋರ್ದಾನ್, ನೆಲಕ್ಕೆ ಕನ್ನಡಿಯಿಟ್ಟಂತೆ ಫಳಫಳಿಸುವ ಮೃತಸಮುದ್ರವನ್ನು ಸೇರುವ ದೃಶ್ಯ ಕಾಣುವುದು. ಹೊಳೆಯಾಚೆ ‘ಪಶ್ಚಿಮದಂಡೆ’ ಎಂದು ಕರೆಯಲಾಗುವ ಪ್ಯಾಲೆಸ್ಟೀನ್, ಅದರೊಳಗೆ ಜಗತ್ತಿನ ಪ್ರಾಚೀನ ಪಟ್ಟಣವಾದ ಜೆರಿಕೊ ಹಾಗೂ ದಿಟ್ಟಿಸಿದರೆ ದಿಗಂತದಲ್ಲಿ ಮಸುಕಾಗಿ ಜೆರುಸಲೆಮ್ ಗೋಚರಿಸುವುವು.

ನಾವು ಜೋರ್ದಾನ್ ಹೊಳೆಯ ಜಲಸ್ಪರ್ಶ ಮಾಡಿದ್ದು ಖಸ್ರ್ ಅಲ್ ಯಹೂದ್ ಎಂಬಲ್ಲಿ. ‘ಮರಳಿನಲ್ಲಿ ಹುಗಿದ ನೆಲಬಾಂಬುಗಳಿವೆ ಎಚ್ಚರಿಕೆ’ ಎಂಬ ಬೋರ್ಡುಗಳಿರುವ ಮರುಭೂಮಿಯ ಒಳಗಿಂದ ಹಾದು ಈ ಸ್ಥಳಕ್ಕೆ ಹೋದೆವು. ಇಲ್ಲಿರುವ ಹೊಳೆಕಡವಿನಲ್ಲಿ, ಜಶೋವಾ ಎಂಬ ಯಹೂದಿ ಬುಡಕಟ್ಟು ನಾಯಕ ತನ್ನ ತಂಡದೊಂದಿಗೆ 40 ವರ್ಷಗಳ ಕಾಲ ಮರಳುಗಾಡನ್ನು ಅಲೆಯುತ್ತ ದಣಿದಿರುವಾಗ್ಗೆ, ಮೋಸೆಸನ ಅಪ್ಪಣೆಯಂತೆ ದಾಟಿ ಪ್ರಾಮಿಸ್ಡ್ ಲ್ಯಾಂಡಿಗೆ ಪ್ರವೇಶಿಸಿದನಂತೆ. ಈ ನದಿದಾಟೋಣವು ಚಿತ್ರಪಟಗಳಿಗೂ ಶಿಲ್ಪಗಳಿಗೂ ವಸ್ತುವಾಯಿತು. ಈಜಿಪ್ಟಿಯನ್ನರ ಗುಲಾಮಗಿರಿಯಿಂದ ತಪ್ಪಿಸಿಕೊಂಡು ಜಶೋವಾ ಹೊಳೆದಾಟಿ ಸ್ವತಂತ್ರನಾದ ಆ ದಿನವನ್ನು ಯಹೂದಿಗಳು ರಾಷ್ಟ್ರೀಯ ದಿನವಾಗಿ ಆಚರಿಸುವರು. ಮುಂದೆ ಇದೇ ಸ್ಥಳದಲ್ಲಿ ಸಂತ ಜಾನ್‌ಬ್ಯಾಪ್ಟಿಸ್ಟನು ಏಸುವಿಗೆ ದೀಕ್ಷಾಸ್ನಾನ ಮಾಡಿಸಿದನು. ಬಳಿಕ ದೇವದೂತರು ಪಾರಿವಾಳ ರೂಪದಲ್ಲಿ ಇಳಿದು ‘ಇದೋ, ಈತ ನನ್ನ ಪ್ರೀತಿಯ ಮಗ. ಲೋಕದ ಜನರ ಉದ್ಧಾರಕ್ಕೆ ಕಳಿಸಿರುವೆ’ ಎಂದು ದೇವರ ಸಂದೇಶವನ್ನು ಕೊಟ್ಟರಂತೆ. ಈ ಘಟನೆಯನ್ನು ಆಧರಿಸಿ ನೂರಾರು ಗೀತೆಗಳು ಹುಟ್ಟಿದವು. ಒಂದು ಹೊಳೆ ಜಗತ್ತಿನ ಮೂರು ಧರ್ಮಗಳ ಆಚರಣೆ ಮತ್ತು ಕಥನಗಳಲ್ಲಿ ಸೇರಿಹೋದ ಬಗೆ ವಿಶೇಷವಾಗಿದೆ.

ನಾವು ದಡಕ್ಕೆ ಹೋದಾಗ ದೇಶವಿದೇಶಗಳಿಂದ ಬಂದ ಕ್ರೈಸ್ತ ಯಾತ್ರಾರ್ಥಿಗಳು ಮುಳುಗೇಳುತ್ತಿದ್ದರು. ಪಾದ್ರಿಗಳು ಅವರ ತಲೆಯ ಮೇಲೆ ಮಂತ್ರೋಕ್ತ ನೀರನ್ನು ಪ್ರೋಕ್ಷಿಸುತ್ತಿದ್ದರು. ದಡದ ಮಂಟಪಗಳಲ್ಲಿ ಜಗತ್ತಿನ ನಾನಾ ಭಾಷೆಯಲ್ಲಿ ಧಾರ್ಮಿಕ ಪ್ರವಚನಗಳು ನಡೆಯುತ್ತಿದ್ದವು. ಜಲ ಕಂಡಲ್ಲಿ ಮುಳುಗುವ ಸ್ವಭಾವದ ನನಗೆ ಇಲ್ಲಿ ಮುಳುಗಲು ಧೈರ್ಯ ಸಾಲಲಿಲ್ಲ. ನೀರು ಕದಡಿತ್ತು. ಆದರೂ ಇಳಿದು ಕೈಕಾಲು ಮುಖ ತೊಳೆದುಕೊಂಡೆ.

ಜೋರ್ಡಾನ್ ದೇಶಕ್ಕೆ ಸೇರಿದ ಆಚೆ ದಡದಲ್ಲೂ ಪವಿತ್ರಸ್ನಾನ ನಡೆಯುತ್ತಿತ್ತು. ಎರಡೂ ದೇಶಗಳ ಸೈನಿಕರು ಅಟ್ಟಣಿಗೆಗಳಲ್ಲಿ ತುಪಾಕಿಧಾರಿಗಳಾಗಿ ನಿಂತು ಸಿಗರೇಟು ಸೇದುತ್ತ, ಹರಟುತ್ತ, ಮುಳುಗುವವರನ್ನು ತೀಕ್ಷ್ಣವಾಗಿ ಗಮನಿಸುತ್ತ ಕಾವಲು ಕಾಯುತ್ತಿದ್ದರು. ನದಿಯ ಅರ್ಧಭಾಗವನ್ನು ಸೀಳಿದಂತೆ, ತೇಲುವ ಚೆಂಡುಗಳನ್ನು ಪೋಣಿಸಿದ ಸರವಿ ಕಟ್ಟಲಾಗಿತ್ತು. ಆದರೆ ನೀರು ಸರವಿಯ ಅತ್ತಿತ್ತ ಮೇಲೆಕೆಳಗೆ ತೆರೆತೆರೆಯಾಗಿ ಹೊರಳಿ ಹಾಯುತ್ತಿತ್ತು. ಹೊಳೆಯನ್ನು ಅಂತರರಾಷ್ಟ್ರೀಯ ಗಡಿ ಮಾಡಿಕೊಂಡ ದೇಶಗಳು ನೀರಿನ ನಡುವೆ ಕಂಬ ನೆಟ್ಟು ಗುರುತು ಮಾಡಿಕೊಳ್ಳುವುದು ಪದ್ಧತಿ. ಇದನ್ನು ಭಾರತ-ನೇಪಾಳದ ಗಡಿಯ ಮೀಚಿ ಹೊಳೆಯಲ್ಲಿ ಕಂಡಿದ್ದೆ. ನನಗೆ ನೀರಮೇಲೆ ಗಡಿ ಕೊರೆಯುವುದು ಅಸಂಗತವಾಗಿ ಕಾಣುತ್ತದೆ. ನೆಲದಲ್ಲಿರುವ ಗೆರೆಯಂತೆ ಇಲ್ಲಿ ಖಚಿತವಾಗಿ ತೋರುವುದಾಗದು. ಒಳಗಿನ ಜಲಚರಗಳಿಗೆ ಮೇಲೆ ಹಾರುವ ಜೇನ್ನೊಣ, ಹಕ್ಕಿಗಳಿಗೆ, ಗಾಳಿ ಬಿಸಿಲುಗಳಿಗೆ ಗಡಿಯ ಪರಿಭಾಷೆ ಅರ್ಥವಾಗುವುದಿಲ್ಲ. ಆದರೆ ಇಂತಹ ಕೃತಕ ವಿಭಜನೆಗಳಿಲ್ಲದೆ ದೇಶ, ರಾಜ್ಯ, ಜಿಲ್ಲೆಗಳ ಗಡಿ ರೂಪುಗೊಳ್ಳುವುದಿಲ್ಲ.

ಜೋರ್ದಾನ್ ಹೊಳೆಯ ಮೇಲಕ್ಕೆ ಐವತ್ತು ಕಿ.ಮೀ. ಹೋದರೆ ಸಿಗುವ ಗಲಿಲಿಯಲ್ಲಿ ಜೋರ್ದಾನ್ ನೀರು ಸ್ಫಟಿಕವಾಗಿದೆ. ಜೋರ್ದಾನ್ ಇದನ್ನು ಹೊಕ್ಕು ಹೊರ ಹರಿಯುತ್ತದೆ. ಸಮುದ್ರೋಪಾದಿಯಾಗಿರುವ ಗಲಿಲಿಯಲ್ಲಿ ನಾವು ನೌಕಾ ವಿಹಾರ ಮಾಡಿದೆವು. ಇದು ಏಸು ನೀರಿನ ಮೇಲೆ ನಡೆವ ಪವಾಡ ಮಾಡಿದ ಮತ್ತು ಸಂತ ಪೀಟರನಿಗೆ ಮೀನು ಹಿಡಿಯಲು ಹೇಳಿದ ಜಾಗವಾಗಿ ಹೆಸರಾಗಿದೆ. ಇಲ್ಲಿಗೆ ಬರುವ ಯಾತ್ರಿಗಳು ತಪ್ಪದೇ ಪೀಟರ್ ಮೀನನ್ನು ಸೇವಿಸುತ್ತಾರೆ. ಯಾತ್ರಿಗಳ ಸಂಖ್ಯೆ ಹೆಚ್ಚಾಗಿ ಒಮ್ಮೆ ಪೀಟರ್ ಮೀನಿನ ಸಂತತಿಯೇ ಅಳಿವ ಹಂತವೂ ಮುಟ್ಟಿತ್ತು. ಆದರೆ ನಾವು ಹೋದಾಗ ಯಥೇಚ್ಛ ಮೀನಿತ್ತು. ದಡದ ಮೇಲಿನ ಹೋಟೆಲೊಂದರಲ್ಲಿ ತಟ್ಟೆಯ ತುಂಬ ಹರಡಿಕೊಂಡು ಬಂದ ಪೀಟರ್ ಮೀನನ್ನು ಸವಿದೆವು. ಈ ಹೋಟೆಲುಗಳಲ್ಲಿ ಅರಬರೂ ಯಹೂದಿಗಳೂ ವಿಹಾರಕ್ಕೆ ಬಂದು ವಸ್ತಿ ಮಾಡಿದ್ದರು. ಮುದುಕಿಯರು ಹೊಗೆಬತ್ತಿ ಎಳೆಯುತ್ತ ತುಳುಕಾಡುವ ಜಲದರ್ಶನ ಮಾಡುತ್ತಿದ್ದರು. ಕೆಲವರು ಸರೋವರದಲ್ಲಿ ಗಾಳಹಾಕಿ ಮೀನು ಹಿಡಿಯುತ್ತಿದ್ದರು. ಸರೋವರದ ಆಚೆ ದಡದಲ್ಲಿ ಗೋರಿಗಳ ಹಾಗೆ ಕಾಣುವ ಬೆಟ್ಟಶ್ರೇಣಿಯಿದೆ. ಅದರಾಚೆ ಸಿರಿಯಾ, ಲೆಬನಾನ್ ದೇಶಗಳಿವೆ.

ಇಸ್ರೇಲ್, ಸಿರಿಯಾ, ಲೆಬನಾನ್ ದೇಶಗಳ ಗಡಿಗಳು ಕೂಡುವ ಹೆರಾನ್ ಪರ್ವತದಲ್ಲಿ ಜೋರ್ದಾನ್ ಹುಟ್ಟುತ್ತದೆ. ಸುಡುಬಿಸಿಲಿನ ಮರುಭೂಮಿಯ ನಡುವಣ ಹಿಮಪರ್ವತವಿದು. ಅದರ ಮೈಯ ದಶದಿಕ್ಕುಗಳಿಂದ ಹುಟ್ಟುವ ಝರಿಗಳೆಲ್ಲ ಕೂಡಿ ಜೋರ್ದಾನ್ ಹೊಳೆ ರೂಪುಗೊಳ್ಳುತ್ತದೆ. ನಮಗೆ ನದಿಯ ಉಗಮಸ್ಥಾನ ನೋಡಲು ಸಾಧ್ಯವಾಗಲಿಲ್ಲ. ಆದರೆ ಅದು ತನ್ನ ಯಾನ ಮುಗಿಸುವ ಅಳಿವೆಯನ್ನು ಕಂಡೆವು. ಆ ಅಳಿವೆಯೇ ಮೃತಸಮುದ್ರ. ಸಿಹಿನೀರಿನ ಜೀವಂತ ಹೊಳೆಗಳು ಉಪ್ಪು ಸಮುದ್ರವನ್ನು ಕೂಡಿ ತಮ್ಮನ್ನು ಕಳೆದುಕೊಳ್ಳುವುದು ಒಂದು ಬಗೆಯಲ್ಲಿ ಮೃತ್ಯುವೆನಿಸುತ್ತದೆ. ಆದರೆ ಅವು ಉಪ್ಪಿನ ಅಂಶದಿಂದ ಉಸಿರುಗಟ್ಟುವ ಕಡಲನ್ನು, ಜೀವಚರಗಳು ಬದುಕಲು ಬೇಕಾದ ಜೀವಜಲವಾಗಿ ಬದಲಿಸುತ್ತವೆ. ಪಾಪ! ಜೋರ್ದಾನಿಗೆ ಇದನ್ನೂ ಮಾಡುವುದಾಗಲಿಲ್ಲ.

ಜಲವಿಜ್ಞಾನಿಗಳ ಪ್ರಕಾರ, ಲಕ್ಷಾಂತರ ವರ್ಷಗಳ ಹಿಂದೆ ಆಫ್ರಿಕಾ ಮತ್ತು ಅರಬಸ್ಥಾನದ ಕೆಳಗಿನ ನೆಲಹಾಳೆಗಳು ಸರಿದಾಡಿದಾಗ, ಸಮುದ್ರಮಟ್ಟಕ್ಕಿಂತ ಒಂದೂವರೆ ಸಾವಿರ ಅಡಿ ಕೆಳಗಿರುವ ಮಹಾತಗ್ಗೊಂದು ನಿರ್ಮಾಣಗೊಂಡಿತು. ಅದರೊಳಗೆ ಸಮುದ್ರದ ನೀರು ಬಂಧನಕ್ಕೊಳಗಾಯಿತು. ಹೀಗಾಗಿ ಜಗತ್ತಿನಲ್ಲೇ ಸಮುದ್ರಮಟ್ಟಕ್ಕಿಂತ ಕೆಳಗಿರುವ ಹೊಳೆ ಜೋರ್ದಾನಾದರೆ, ಸರೋವರ ಮೃತಸಮುದ್ರವಾಯಿತು. 50 ಕಿ.ಮೀ. ಉದ್ದ, 15 ಕಿ.ಮೀ. ಅಗಲವಿರುವ ಮೃತಸಮುದ್ರದ ನೀರು ಯಾವ ಜಲಚರವೂ ಬದುಕದಂತೆ ಲವಣಸಾಂದ್ರವಾಗಿದೆ. ಅದರ ಮೇಲೆ ನಾವು ಮೃತದೇಹಿಗಳಂತೆ ತೇಲಿದೆವು. ತನ್ನ ಹರಿವಿನ 200 ಕಿ.ಮೀ. ಫಾಸಲೆಯುದ್ದಕ್ಕೂ ಮರುಭೂಮಿಯ ಜನರಿಗೆ ಜೀವಜಲ ಉಣಿಸುತ್ತ, ಪವಿತ್ರ ಸ್ನಾನ ಮಾಡಿಸುತ್ತ ಬಂದ ಜೋರ್ದಾನ್, ಮೃತಕಡಲನ್ನು ಸೇರಿ ತನ್ನ ಯಾನ ಮುಗಿಸುವುದು ನೈಸರ್ಗಿಕ ವಿಷಾದದಂತೆ ಭಾಸವಾಗುತ್ತದೆ.

ಹೊಳೆಯೊಂದಕ್ಕೆ ಮಹತ್ವ ಸಿಗುವುದು ಆಳ-ಅಗಲಗಳಿಂದಲ್ಲ. ಅದು ಹರಿವ ಸ್ಥಳ ಮತ್ತು ಕಾಲದಿಂದ. ಮರುಭೂಮಿಗಳಲ್ಲಂತೂ ಮಳೆ ಮತ್ತು ಹೊಳೆಗಳು ದೇವರೇ. ಹೀಬ್ರೂ ಬೈಬಲ್ಲಿನಲ್ಲಿ ಜೋರ್ದಾನನ್ನು ಸ್ವರ್ಗದ ಉದ್ಯಾನದ ಝರಿಯೆಂದು ಬಣ್ಣಿಸಲಾಗಿದೆ. ಹೊಳೆಗಳ ಲೌಕಿಕ ಪ್ರಯೋಜನವೇ ಧರ್ಮಗಳು ಪವಿತ್ರೀಕರಿಸಲು ಕಾರಣ. ಯುದ್ಧಗಳಾಗುವುದೂ ಹೊಳೆದಡದ ಫಲವತ್ತಾದ ಬಯಲಿಗಾಗಿಯೇ. ಕೃಷ್ಣಾ-ತುಂಗಭದ್ರಾ ನಡುವಣ ದೋಆಬ್ ಪ್ರದೇಶವನ್ನು ಹಿಡಿಯಲು ನಡೆದ ಯುದ್ಧಗಳು ನೂರಾರು. ಮರುಭೂಮಿಯಲ್ಲಿ ನದಿಗಳು ಸಾಯುವವರನ್ನು ಬದುಕಿಸುವ ಸಂಜೀವಿನಿಗಳು. ಪ್ಯಾಲೆಸ್ಟೀನ್-ಜೋರ್ಡಾನ್-ಇಸ್ರೇಲ್-ಲೆಬನಾನ್-ಸಿರಿಯಾ ದೇಶಗಳ ಚರಿತ್ರೆ, ಪುರಾಣ ಹಾಗೂ ಜಾನಪದಗಳಲ್ಲಿ ಜೋರ್ದಾನ್ ಒಂದು ಪಾತ್ರ. ಇವುಗಳಲ್ಲಿ ಒಂದು ದೇಶವಂತೂ ಹೊಳೆಯ ಹೆಸರನ್ನೇ ಇರಿಸಿಕೊಂಡಿದೆ.

ಚರಿತ್ರೆಯಲ್ಲಿ ಐದು ದೇಶಗಳನ್ನು ಬೆಸೆದಿಟ್ಟಿದ್ದ ಹೊಳೆಯೇ ಈಗ ಅವನ್ನು ಬೇರ್ಪಡಿಸುವ ಗಡಿಯಾಗಿದೆ. ತಮ್ಮ ಪಾಲಿನ ಹನಿ ನೀರನ್ನೂ ಬಳಸುವ ಹಟದಿಂದ ಈ ದೇಶಗಳಲ್ಲಿ ಯುದ್ಧ ಮತ್ತು ಒಪ್ಪಂದಗಳಾಗಿವೆ; ಅಂತರರಾಷ್ಟ್ರೀಯ ಕೋರ್ಟ್‌ಗಳಲ್ಲಿ ಮೊಕದ್ದಮೆಗಳು ನಡೆಯುತ್ತಿವೆ. ಜಲಕಲಹ ನಾಗರಿಕತೆಗೆ ಹೊಸತಲ್ಲ. ಗೌತಮನು ಮನೆಬಿಟ್ಟು ಹೊರಟುಹೋಗಿದ್ದು ಎರಡು ಕುಲಗಳ ನಡುವಣ ಜಲಯುದ್ಧ ನಿವಾರಿಸಲೆಂದು ತಾನೇ? ಕೃಷ್ಣ ಕಾಳಿಂಗಮರ್ದನಗೈದು ಯಮುನೆಯ ನೀರನ್ನು ಪಶುಗಳಿಗೆ ಬಿಡುಗಡೆ ಮಾಡಿದ್ದು ಕೂಡ ಜಲಯುದ್ಧವೇ. ನೆಲಜಲವನ್ನು ತಾಳ್ಮೆಯಿಂದ ಹಂಚಿಕೊಂಡು ಬಾಳಲಾಗದ ಜನರ ನಡುವೆ, ಪೈರಿಗೆ, ಜಳಕಕ್ಕೆ ಬಾಯಾರಿಕೆಗೆ ಒದಗುತ್ತ ಮೈಕೆಡಿಸಿಕೊಂಡು ಬಳಲಿ ಬೆಂಡಾಗಿ ಮೃತಸಮುದ್ರ ಸೇರುವ ಜೋರ್ದಾನ್ ಅವಸ್ಥೆ ಕಂಡು ಮರುಕವಾಯಿತು. ಹಿಂದೆ ಚರ್ಮರೋಗ ಬಂದವರು ಇದರಲ್ಲಿ ಮಿಂದು ಗುಣವಾಗುತ್ತಿದ್ದ ಪುರಾಣಕತೆಗಳಿವೆ. ಈಗಿದು ಜಗತ್ತಿನ ಕಲುಷಿತ ಹೊಳೆಗಳಲ್ಲಿ ಒಂದಾಗಿದೆ. ಹೀಬ್ರೂದಲ್ಲಿ ಜೋರ್ದಾನ್ ಎಂದರೆ ಕೆಳಗಿಳಿಯುವುದು ಅರ್ಥಾತ್ ಗಂಗಾವತರಣ. ಆದರೆ ಜೋರ್ದಾನ್ ಮಾಲಿನ್ಯದಲ್ಲಿ ಕೆಳಗಿಳಿದಿದೆ. ಇದರ ದೆಸೆಯಿಂದ ಮೃತಸಮುದ್ರವೂ ಕುಗ್ಗುತ್ತಿದೆ. ವ್ಯಂಗ್ಯವೆಂದರೆ, ಮೃತಸಮುದ್ರದ ಕೆಸರನ್ನು ಬಳಿದುಕೊಂಡು ಜನ ಜಳಕ ಮಾಡುವುದು. ಮೃತಸಮುದ್ರದ ಕೆಸರನ್ನು ತೆಗೆದು ಸೌಂದರ್ಯವರ್ಧಕವಾಗಿ ಮಾರುವುದು. ನನಗೆ ಮೃತಸಮುದ್ರದ ತೇಲುವಿಕೆ ಖುಷಿಕೊಟ್ಟಿತು. ಆದರೆ ಪಂಕಸ್ನಾನ ಕಿರಿಕಿರಿ ತಂದಿತು.

ಜೋರ್ದಾನಿನ ಈ ವಿಷಾದ ಕಥನದಲ್ಲಿ ಭರವಸೆಯ ಒಂದು ಸಣ್ಣ ಎಳೆಯಿದೆ. ಅದು ಜೋರ್ದಾನಿಗೂ ಮೃತಸಮುದ್ರಕ್ಕೂ ಹತ್ತಿರುವ ಬತ್ತುರೋಗ ಗುಣಪಡಿಸಲು, ಐದೂ ದೇಶಗಳ ಪರಿಸರ ತಜ್ಞರು ಒಂದಾಗಿರುವುದು. ಹೊಳೆ-ಉಪಹೊಳೆಗಳಿಗೆ ಅಣೆಕಟ್ಟಿ ಅದರ ಸಹಜ ಹರಿವನ್ನು ಮುರಿದಿರುವ ಬಗ್ಗೆ ಆಕ್ರೋಶಿತರಾಗಿರುವ ಈ ತಜ್ಞರು, ಪ್ರಭುತ್ವಗಳ ಅಂತಃಕಲಹಗಳ ನಡುವೆ, ಗಡಿಮೀರಿ ಹೊಳೆ-ಕಡಲಿನ ಹದುಳ ಕಾಯಲು ಒಂದಾಗಿದ್ದಾರೆ. ಆದರೆ ಧರ್ಮಕ್ಕಾಗಿ ಯುದ್ಧ ಮಾಡಿದ ನಾಡಲ್ಲಿ, ಜಲರಕ್ಷಣೆಗಾಗಿ ಯೋಧರಾದ ಇವರ ಹಾದಿ ಸುಲಭವಾಗಿಲ್ಲ.

ಒಂದು ಹೊಳೆ ಜಗತ್ತಿನ ಮೂರು ಧರ್ಮಗಳ ಆಚರಣೆ ಹಾಗೂ ಕಥನಗಳಲ್ಲಿ ಸೇರಿಹೋದ ಬಗೆಯೇ ಅನನ್ಯ. ಅದರ ಗಾತ್ರ ನೋಡಿದಾಗ ಶತಮಾನಗಳ ಕಾಲ ಆಸುಪಾಸಿನ ದೇಶಗಳನ್ನು ಜಲಕಲಹಕ್ಕೆ ಹಚ್ಚಿದ ಪವಿತ್ರ ಹೊಳೆ ಇದೆಯೇನು ಎಂಬ ಅನುಮಾನ ಕಾಡದಿರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.