×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ನವರಾತ್ರಿ ಉತ್ಸವ– ವಾಹನಗಳ ಖರೀದಿ ಭರಾಟೆ ಜೋರು

ನಗರ, ಗ್ರಾಮೀಣ ಭಾಗದಿಂದ ಖರೀದಿಗೆ ಬರುವ ಗ್ರಾಹಕರು, ಆಫರ್‌ಗಳ ಸುರಿಮಳೆ
ಫಾಲೋ ಮಾಡಿ
Comments

ಯಾದಗಿರಿ: ನವರಾತ್ರಿ ಹಬ್ಬದ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಬೈಕ್‌, ಕಾರು ಶೋ ರೂಂಗಳಲ್ಲಿ ಗ್ರಾಹಕರ ಕಲರವ ಕಂಡು ಬರುತ್ತಿದೆ.

ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ಕಾರಣ ವ್ಯಾಪಾರ ಡಲ್‌ ಆಗಿದ್ದರೆ ಈ ವರ್ಷ ಹೆಚ್ಚಿನ ಮುಂಗಡ ಬುಕ್ಕಿಂಗ್‌ ಆಗಿರುವುದು ಶೋ ರೂಂ ಮಾಲಿಕರಿಗೆ ಕೊಂಚ ಸಮಾಧಾನ ತಂದಿದೆ.

ಹಳ್ಳಿ ಸೇರಿದಂತೆ ನಗರ ನಿವಾಸಿಗಳು ಹೊಸ ಮಾದರಿಯ ಬೈಕ್‌ಗಳನ್ನು ಖರೀದಿಸಲು ಶೋ ರೂಂಗೆ ಬಂದು ವಿಚಾರಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಆಯುಧ ಪೂಜೆ ದಿನ ಬಂದು ಖರೀದಿ ಮಾಡುವ ಗ್ರಾಹಕರು ಇರುವ ಕಾರಣ ಬೈಕ್‌ನ ಎಲ್ಲ ಸಾಮಾನುಗಳನ್ನು ಜೋಡಿಸಿ ಇಟ್ಟುಕೊಳ್ಳಲಾಗಿದೆ.

ಹಣ ಮರುಪಾವತಿ ಆಫರ್‌: ಬೈಕ್‌ ಶೋ ರೂಂಗಳಲ್ಲಿ ಬೈಕ್‌ ಖರೀದಿಸಿದರೆ ₹1,000 ಹಣ ಮರುಪಾವತಿ (ಕ್ಯಾಶ್‌ ಬ್ಯಾಕ್‌) ಆಫರ್‌ ನೀಡಲಾಗಿದೆ. ಇದು ಗ್ರಾಹಕರನ್ನು ಸೆಳೆಯುತ್ತಿದೆ. ಇದರ ಜೊತೆಗೆ ಹೆಲ್ಮೆಟ್‌ ಮತ್ತು ಗಾಡಿ ಕವರ್‌ ನೀಡುತ್ತಿರುವುದರಿಂದ ಮತ್ತಷ್ಟು ಆಫರ್‌ ಸಿಕ್ಕಂತೆ ಆಗಿದೆ.

₹1 ಲಕ್ಷ ಮೇಲ್ಪಟ್ಟ ವಾಹನಗಳೇ ಹೆಚ್ಚು: ದ್ವಿಚಕ್ರ ವಾಹನಗಳಲ್ಲಿ ₹1 ಲಕ್ಷ ಮೇಲ್ಪಟ್ಟ ವಾಹನಗಳೇ ಹೆಚ್ಚು ಮಾರಾಟವಾಗುತ್ತಿವೆ. ಅದರಲ್ಲೂ ಹೆಚ್ಚು ಮೈಲೇಜ್‌ ನೀಡುವ ವಾಹನಗಳತ್ತ ಗ್ರಾಹಕರು ಒಲವು ತೋರುತ್ತಿದ್ದಾರೆ.

ಸಿ.ಸಿ ಹೆಚ್ಚು ಇದ್ದಷ್ಟು ದರ ಜಾಸ್ತಿ ಇರುತ್ತದೆ. ಕಡಿಮೆ ಇದ್ದರೆ ಬೆಲೆಯೂ ಕಡಿಮೆ ಇರುವ ಕಾರಣ ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮೆಗಾ ಎಕ್ಸ್‌ಚೆಂಜ್‌, ಸಾಲ ಮೇಳ: ವಾಹನಗಳ ಖರೀದಿ ಬರುವವರಿಗೆ ತಮ್ಮ ಹಳೆ ವಾಹನವನ್ನು ಬದಲಿಗೆ ಮಾರಾಟ ಮಾಡಿ ಮತ್ತೊಂದು ವಾಹನ ಖರೀದಿಸುವ ಆಫರ್‌ ನೀಡಲಾಗುತ್ತಿದೆ. ಸಕಾಲಕ್ಕೆ ಹಣವಿಲ್ಲದಿದ್ದರೂ ಸಾಲ ಮೇಳದ ಮೂಲಕ ಗ್ರಾಹಕರಿಗೆ ಆಕರ್ಷಕ ಕಡಿಮೆ ಬಡ್ಡಿ ದರದಲ್ಲಿ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ.

50ರಿಂದ 60 ಮುಂಗಡ ಬುಕ್ಕಿಂಗ್‌: ಪ್ರತಿಯೊಂದು ದ್ವಿಚಕ್ರ ಶೋ ರೂಂಗಳಲ್ಲಿ ಕನಿಷ್ಠ 50ರಿಂದ 60 ವಾಹನಗಳು ಮುಂಗಡ ಬುಕ್ಕಿಂಗ್‌ ಆಗಿದ್ದು, ಆಯುಧ ಪೂಜೆ ದಿನ ರಸ್ತೆಗಳಿಯಲಿವೆ. ಖರೀದಿಸಿದ ವಾಹನವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಪೂಜೆ ಮಾಡಿಸುವುದರಿಂದ ಹೆಚ್ಚಿನ ಗ್ರಾಹಕರು ಆಯುಧ ಪೂಜೆ ದಿನವೇ ಮನೆಗೆ ಕರೆದೊಯ್ಯಲಿದ್ದಾರೆ.

10ರಿಂದ 12 ಕಾರು ಬುಕ್‌: ನಗರದ ಹೊರವಲಯದ ಗುರಸುಣಗಿ ಕ್ರಾಸ್‌ ಬಳಿ ಈಚೆಗೆ ತೆರೆಯಲಾದ ಲಾಹೋಟಿ ಶೋ ರೂಂನಲ್ಲಿಯೂ 10ರಿಂದ 12 ಕಾರುಗಳು ಮುಂಗಡ ಬುಕಿಂಗ್‌ ಆಗಿವೆ. ಜಿಲ್ಲೆಯಲ್ಲಿ ಕಾರು ಖರೀದಿಸಲು ಈ ಮುಂಚೆ ಅಕ್ಕಪಕ್ಕದ ಜಿಲ್ಲೆಗಳಿಗೆ ತೆರಳಬೇಕಿತ್ತು. ಆದರೆ, ಈ ಬಾರಿ ಇಲ್ಲಿಯೇ ಶೋ ರೂಂ ಆರಂಭವಾಗಿದ್ದರಿಂದ ಗ್ರಾಹಕರು ವಾಹನಗಳ ಖರೀದಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಮಾರುತಿ ಸುಜುಕಿ ಕಾರ್‌ನ ಅಲ್ಟೊ, ಡಿಜೈರ್‌, ಸ್ವಿಫ್ಟ್‌ ಇನ್ನಿತರ ಕಾರುಗಳು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ವ್ಯವಸ್ಥಾಪಕ ವಿಶ್ವನಾಥ ಸಿಂದಗಿ.

***

ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ!

ವಾಹನಗಳ ಖರೀದಿಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೇಲೆ ಪರಿಣಾಮ ಬೀರಿದೆ. ಕೆಲವರು ವಾಹನ ಖರೀದಿ ಮಾಡುವುದನ್ನು ಮುಂದೂಡಿದ್ದರೆ ಮತ್ತೆ ಕೆಲವರು ಈಗಾಗಲೇ ಉಪಯೋಗ ಮಾಡಿದ ವಾಹನಗಳನ್ನು ಕಡಿಮೆ ದರಕ್ಕೆ ಖರೀದಿಸಿ ಉಪಯೋಗಿಸುವ ಮಟ್ಟಕ್ಕೆ ಬಂದಿದ್ದಾರೆ ಎನ್ನುತ್ತಾರೆ ಷೋ ರೂಂ ಮಾಲಿಕರು.

‘ಕೋವಿಡ್‌ ಕಾರಣ ಮೊದಲನೇ ಅಲೆಯಲ್ಲಿ ಹೇಗೆ ಖರೀದಿ ಮಾಡಬಹುದು ಎಂದು ಗ್ರಾಹಕರು ಧೈರ್ಯ ತೋರಿದ್ದರು. ಆದರೆ, ಎರಡನೇ ಅಲೆ ಬಂದ ನಂತರ ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದ್ದರಿಂದ ಗ್ರಾಹಕರು ಯೋಚನೆ ಮಾಡಿ ತಮಗೆ ಸರಿ ಹೊಂದುವ ಬಜೆಟ್‌ಗೆ ತಕ್ಕಂತೆ ವಾಹನ ಖರೀದಿ ಮಾಡುತ್ತಿದ್ದಾರೆ. ಅಲ್ಲದೇ ಪೆಟ್ರೋಲ್‌, ಡೀಸೆಲ್‌ ಅಲ್ಲದೇ ಅಡುಗೆ ಪದಾರ್ಥಗಳು, ಸಿಲಿಂಡರ್‌ ಬೆಲೆ ಏರಿಕೆಯೂ ವಾಹನಗಳ ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದೆ’ ಎನ್ನುತ್ತಾರೆ ಶೋ ರೂಂ ವ್ಯವಸ್ಥಾಪಕ ಅಮರೇಶ ಪಾಟೀಲ ಅವರು.

***

ಕಳೆದ ವರ್ಷಕ್ಕಿಂತ ಈ ಬಾರಿ 50 ಬೈಕ್‌ಗಳು ಮುಂಗಡ ಬುಕ್ಕಿಂಗ್‌ ಆಗಿವೆ. ಆಯುಧ ಪೂಜೆ ದಿನ ಮತ್ತಷ್ಟು ದ್ವಿಚಕ್ರ ವಾಹನಗಳು ಖರೀದಿಯಾಗುವ ನಿರೀಕ್ಷೆ ಇದೆ
ಅಮರೇಶ ಪಾಟೀಲ, ಶೋ ರೂಂ ವ್ಯವಸ್ಥಾಪಕ

***

ಈ ವರ್ಷ ದ್ವಿಚಕ್ರ ವಾಹನ ಖರೀದಿ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಹೆಚ್ಚ ಮೈಲೇಜ್‌ ಕೊಡುವ ಬೈಕ್‌ ಅನ್ನು ಖರೀದಿ ಮಾಡಿದ್ದೇನೆ. ಖುಷಿಯಾಗಿದೆ
ಭೋಜರಾಜ ಚವಾಣ್‌, ಗ್ರಾಹಕ

ನವರಾತ್ರಿ ಹಬ್ಬದ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಬೈಕ್‌, ಕಾರು ಶೋ ರೂಂಗಳಲ್ಲಿ ಗ್ರಾಹಕರ ಕಲರವ ಕಂಡು ಬರುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT