×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ಟ್ಯಾಂಕ್‌ನಲ್ಲಿ ಮಹಿಳೆಯ ಮೃತದೇಹ ಪತ್ತೆ

ಚನ್ನಪಟ್ಟಣ ಮಾರುತಿ ಬಡಾವಣೆಯಲ್ಲಿ ಪ್ರಕರಣ ಬೆಳಕಿಗೆ * ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆ ಸ್ಥಗಿತ
Published : 10 ಅಕ್ಟೋಬರ್ 2021, 5:44 IST
ಫಾಲೋ ಮಾಡಿ
Comments

ಚನ್ನಪಟ್ಟಣ: ಪಟ್ಟಣದ ನ್ಯಾಯಾಲಯ ಹಿಂಭಾಗದ ಮಾರುತಿ ಬಡಾವಣೆಯ ಓವರ್‌ಹೆಡ್ ಟ್ಯಾಂಕ್‌ನಲ್ಲಿ ಶನಿವಾರ ಬೆಳಿಗ್ಗೆ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಭಾಗದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ಸುಮಾರು ಮೂರು ವಾರ್ಡ್‌ಗಳ ಸಾವಿರಾರು ಮನೆಗಳಿಗೆ ನೀರು ಪೂರೈಸುವ ಸುಮಾರು 1 ಲಕ್ಷ ಲೀಟರ್‌ಗೂ ಅಧಿಕ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಅಂಗಾಂಗಗಳು ಟ್ಯಾಂಕ್‌ನ ದೊಡ್ಡ ಪೈಪ್‌ಗಳಲ್ಲಿ ದೊರೆತಿರುವ ಕಾರಣ ಈ ಮಹಿಳೆ ಹಲವು ದಿನಗಳ ಹಿಂದೆಯೇ ಟ್ಯಾಂಕ್‌ಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ವಾಸನೆಯುಕ್ತ ನೀರು ಸರಬರಾಜಾಗುತ್ತಿದ್ದುದು, ಇದಕ್ಕೆ ಪುಷ್ಟಿ ನೀಡಿದೆ.

ಪತ್ತೆಯಾಗಿದ್ದು ಹೀಗೆ: ಪಟ್ಟಣದ 9, 10 ಮತ್ತು 11ನೇ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕ್‌ನಿಂದ ಶುಕ್ರವಾರ ಸಂಜೆಯೇ ನೀರು ಪೂರೈಕೆ ನಿಂತು ಹೋಗಿದೆ. ಇದನ್ನು ಗಮನಿಸಿದ ಹಲವರು ಜಲಮಂಡಳಿ, ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಶನಿವಾರ ಓವರ್‌ ಹೆಡ್ ಟ್ಯಾಂಕ್ ಬಳಿಗೆ ಬಂದ ಜಲಮಂಡಳಿ ಹಾಗೂ ನಗರಸಭೆ ಸಿಬ್ಬಂದಿ ಟ್ಯಾಂಕ್ ಕೆಳಗೆ ಇದ್ದ ದೊಡ್ಡ ವಾಲ್ಟ್ ಅನ್ನು ಬಿಚ್ಚಿದ್ದಾರೆ. ಆಗ ಮೃತದೇಹದ ಕಾಲು ಪೈಪ್‌ಗೆ ಅಡ್ಡವಾಗಿ ಸಿಕ್ಕಿಕೊಂಡಿರುವುದು ಗೋಚರವಾಗಿದೆ.

ಮೃತದೇಹದ ಕಾಲು ಸಿಕ್ಕಿದ ನಂತರ ಟ್ಯಾಂಕ್ ಮೇಲೇರಿ ಪರಿಶೀಲನೆ ನಡೆಸಲಾಯಿತು. ಆದರೂ ಮೃತದೇಹದ ಯಾವುದೇ ಅಂಗ ಪತ್ತೆಯಾಗಿಲ್ಲ. ನೀರಿನಲ್ಲಿ ಮೃತದೇಹ ಬೆರೆತು ಹೋಗಿರಬಹುದು ಎನ್ನಲಾಗಿದೆ.

ಸತತ ಮೂರು ಗಂಟೆ ಕಾರ್ಯಾಚರಣೆ: ಮೃತದೇಹದ ಕಾಲು ಪತ್ತೆಯಾದ ನಂತರ ನೀರು ಸರಬರಾಜು ಮಂಡಳಿ ಹಾಗೂ ನಗರಸಭೆ ಸಿಬ್ಬಂದಿ ಅದನ್ನು ಹೊರತೆಗೆಯಲು ಸತತ ಮೂರು ಗಂಟೆ ಕಾಲ ಕಾರ್ಯಾಚರಣೆ ನಡೆಸಿದರು.

ಅಷ್ಟೆಲ್ಲಾ ಸಾಹಸಪಟ್ಟರೂ ಮೃತದೇಹದ ತೊಡೆಸಹಿತ ಕಾಲು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. ಉಳಿದ ಭಾಗ ಸಿಕ್ಕಿಲ್ಲ. ಜೆಸಿಬಿ ಬಳಸಿ ಪೈಪ್‌ಲೈನ್ ಅಗೆದರೂ ಮೃತದೇಹ ಪತ್ತೆಯಾಗಿಲ್ಲ. ದೇಹದ ಇತರ ಭಾಗಗಳು ಎಲ್ಲಿ ಹೋದವು ಎನ್ನುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮೃತದೇಹ ಪೈಪ್‌ಗಳ ಮೂಲಕ ಹೊರಗೆ ಹೋಗಿರಬಹುದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದರು. ಸಂಜೆಯಾದರೂ ಕಾರ್ಯಾಚರಣೆ ಮುಂದುವರೆದಿತ್ತು.

ನೀರು ಬಳಸದಂತೆ ಸೂಚನೆ: ಟ್ಯಾಂಕ್‌ನಲ್ಲಿ ಮೃತದೇಹ ಪತ್ತೆಯಾದ ನಂತರ ಇದರ ನೀರು ಬಳಸದಂತೆ ನಾಗರಿಕರಿಗೆ ಅಧಿಕಾರಿಗಳು ಮನವಿ ಮಾಡಿದರು.

ಪಟ್ಟಣದ ಕುವೆಂಪುನಗರ, ಕೋಟೆ, ವಿವೇಕಾನಂದ ನಗರ, ಮಾರುತಿ ಬಡಾವಣೆ, ಮಂಗಳವಾರಪೇಟೆಯ ಕೆಲವು ರಸ್ತೆಗಳ ನಿವಾಸಗಳಿಗೆ ಈ ನೀರು ಸರಬರಾಜಾಗುತ್ತಿತ್ತು.

ವಿಷಯ ತಿಳಿದ ಈ ಭಾಗದ ನಿವಾಸಿಗಳು ತಾವು ಸಂಗ್ರಹಿಸಿಟ್ಟಿದ್ದ ನೀರನ್ನು ಹೊರಚೆಲ್ಲಿದರು. ಮನೆಯ ಟ್ಯಾಂಕ್‌‌ಗಳಲ್ಲಿ ಸಂಗ್ರಹಿಸಿದ್ದ ನೀರನ್ನೂ ಪಂಪ್‌ಸೆಟ್ ಮೂಲಕ ಹೊರಗೆ ಹರಿಸಿದರು. ಆದರೂ, ಕಳೆದ ಹಲವು ದಿನಗಳ ಹಿಂದೆಯೇ ಮಹಿಳೆ ಸಾವನ್ನಪ್ಪಿರುವ ಕಾರಣ ಅದೇ ನೀರನ್ನು ಬಳಸಿರುವುದರಿಂದ ನಾಗರಿಕರಲ್ಲಿ ಆತಂಕ ಸಹಜವಾಗಿತ್ತು.

ಸ್ಥಳದಲ್ಲಿ ತಹಶೀಲ್ದಾರ್ ನಾಗೇಶ್, ನಗರಸಭೆ ಪೌರಾಯುಕ್ತ ಶಿವನಾಂಕರಿಗೌಡ, ಡಿವೈಎಸ್ಪಿ ರಮೇಶ್, ಸರ್ಕಲ್ ಇನ್‌ಸ್ಪೆಕ್ಟರ್ ದಿವಾಕರ್, ಜಲಮಂಡಳಿ ಅಧಿಕಾರಿಗಳು ಹಾಜರಿದ್ದರು.

ಚನ್ನಪಟ್ಟಣ ಪಟ್ಟಣದ ನ್ಯಾಯಾಲಯ ಹಿಂಭಾಗದ ಮಾರುತಿ ಬಡಾವಣೆಯ ಓವರ್‌ಹೆಡ್ ಟ್ಯಾಂಕ್‌ನಲ್ಲಿ ಶನಿವಾರ ಬೆಳಿಗ್ಗೆ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಭಾಗದ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT