×
ADVERTISEMENT
ಈ ಕ್ಷಣ :
ADVERTISEMENT

ನಿರ್ವಹಣೆ ಅಧ್ವಾನ, ಅಂದಗೆಟ್ಟ ಉದ್ಯಾನ

ಸ್ಮಾರ್ಟ್‌ ಸಿಟಿ, ನಗರ ಪಾಲಿಕೆ ಅನುದಾನದಲ್ಲಿ ಕೋಟ್ಯಂತರ ಹಣ ಮೀಸಲು
Published : 21 ಜನವರಿ 2022, 5:22 IST
ಫಾಲೋ ಮಾಡಿ
Comments

ಶಿವಮೊಗ್ಗ: ‘ಸ್ಮಾರ್ಟ್‌ ಸಿಟಿ’ ಹಾಗೂ ನಗರ ಪಾಲಿಕೆ ಅನುದಾನದಲ್ಲಿ ನಗರದ ಪಾರ್ಕ್‌ಗಳ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಮೀಸಲಿಟ್ಟು, ಅಭಿವೃದ್ಧಿಪಡಿಸಿದರೂ ನಿರ್ವಹಣೆ ಕೊರತೆಯಿಂದ ಹಲವು ಪಾರ್ಕ್‌ಗಳು ಪಾಳುಬಿದ್ದಿವೆ.

ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ₹ 141.14 ಕೋಟಿಯನ್ನು ನಗರದ 11 ಪ್ರದೇಶಗಳಲ್ಲಿ ಹಸಿರೀಕರಣ ಹಾಗೂ ಉದ್ಯಾನಗಳ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ಪಾರ್ಕ್‌ಗಳ ಅಭಿವೃದ್ಧಿಗಾಗಿಯೇ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ₹ 2.15 ಕೋಟಿ ವಿಶೇಷ ಅನುದಾನ ನೀಡಿದ್ದರು. ಈ ಅನುದಾನದಲ್ಲಿ 15 ಪಾರ್ಕ್‍ಗಳು, ಪಾಲಿಕೆ ಅನುದಾನ ಬಳಸಿಕೊಂಡು ನಗರದ ವಿವಿಧ ಬಡಾವಣೆಗಳ 54 ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಮಲ್ಲೇಶ್ವರನಗರ, ಮಿಷನ್‌ ಕಾಂಪೌಂಡ್‌, ರವೀಂದ್ರನಗರ, ರಾಜೇಂದ್ರ ನಗರ, ವಿನೋಬನಗರ ಸೇರಿ ಹಲವು ಬಡಾವಣೆಗಳ ಪಾರ್ಕ್‌ಗಳು ಅಂದವಾಗಿದ್ದರೂ ನಿರ್ವಹಣೆ ಇಲ್ಲದೆ ಸೊರಗಿವೆ. ನಗರದ ಪ್ರಮುಖ ಪಾರ್ಕ್‌ಗಳಲ್ಲಿ ಒಂದಾದ ಗಾಂಧಿ ಪಾರ್ಕ್‌, ವಿನೋಬನಗರದ ಚಾಚಾ ನೆಹರೂ ಪಾರ್ಕ್‌ ಸೇರಿ ಹಲವು ಪಾರ್ಕ್‌ಗಳಲ್ಲಿನ ಮಕ್ಕಳ ಆಟಿಕೆ, ಕಲ್ಲುಬೆಂಚ್‌ಗಳು ಮುರಿದುಬಿದ್ದಿವೆ. ನಿರ್ವಹಣೆ ಇಲ್ಲದೆ ಮರ–ಗಿಡಗಳು ಸೊರಗಿವೆ.

ಮುದ ನೀಡದ ಗಾಂಧಿ ಪಾರ್ಕ್‌:

ಗಾಂಧಿ ಪಾರ್ಕ್‌ ನಗರದ ಅತ್ಯಂತ ದೊಡ್ಡ ಪಾರ್ಕ್‌. ನಗರದ ಹೃದಯಭಾಗದ ಗಾಂಧಿ ಪಾರ್ಕ್‌ ನಿರ್ವಹಣೆ ಜವಬ್ದಾರಿ ಹೊತ್ತಿರುವ ನಗರ ಪಾಲಿಕೆ ಟೆಂಡರ್‌ ಮೂಲಕ ಗುತ್ತಿಗೆದಾರಿಕೆ ಹೊಣೆ ನೀಡಿ ತನ್ನ ಮೇಲಿನ ಜವಾಬ್ದಾರಿ ಕಳೆದುಕೊಂಡಿತ್ತು. ಸಮಸ್ಯೆಗಳ ತಾಣವಾಗಿರುವ ಗಾಂಧಿ ಪಾರ್ಕ್‌ ಅವ್ಯವಸ್ಥೆ ಕಂಡು ಜನರೂ ರೋಸಿಹೋಗಿದ್ದಾರೆ. ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

ಪಾರ್ಕ್‌ ಪ್ರವೇಶಕ್ಕೆ ನಿಗದಿ ಮಾಡಿದ ದರದಿಂದ ಉತ್ತಮ ಆದಾಯ ಬರುತ್ತಿತ್ತು. ಟೆಂಡರ್‌ದಾರರು ಬಂದ ಆದಾಯದಲ್ಲಿ ಪಾಲಿಕೆಗೆ ಸಲ್ಲಬೇಕಾದ ಪಾಲು ನೀಡಿ, ಉಳಿದ ಹಣದಲ್ಲಿ ಪಾರ್ಕ್‌ನ ಕೆಲಸಗಾರರ ವೇತನ, ತಮ್ಮ ಆದಾಯ ನೋಡಿಕೊಳ್ಳುತ್ತಿದ್ದಾರೆ. ಆದರೆ, ಅಭಿವೃದ್ಧಿಗೆ ಗಮನ ಹರಿಸಿಲ್ಲ. ಗಾಂಧಿ ಪಾರ್ಕ್‌ನಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಇವೆ. ಆದರೆ, ನಿರ್ವಹಣೆ ಕೊರತೆಯಿಂದ ಸೌಲಭ್ಯಗಳು ಬಳಕೆಯಾಗುತ್ತಿಲ್ಲ. ಪಾರ್ಕ್‌ ಪ್ರವೇಶಿಸಿದರೆ ಸಮಸ್ಯೆಗಳ ಸರಮಾಲೆಯೇ ಗೋಚರಿಸುತ್ತದೆ. ಕಾರಂಜಿ ಕೊಳ ಸಂಪೂರ್ಣವಾಗಿ ಹಾಳಾಗಿದೆ. ಕುಡಿಯುವ ನೀರು, ಶೌಚಾಲಯಗಳು ಹೆಸರಿಗಷ್ಟೇ ಇವೆ. ಮಕ್ಕಳ ಆಟೋಪಕರಣ ಸಂಪೂರ್ಣ ಹಾಳಾಗಿವೆ. 

ಜನರು ವಾರದ ಬಿಡುವಿನ ವೇಳೆ ತಮ್ಮ ಮಕ್ಕಳೊಂದಿಗೆ ಒಂದಿಷ್ಟು ಸಮಯ ಖುಷಿಯಿಂದ ಕಳೆಯಲು ಪಾರ್ಕ್‌ಗೆ ಬರುತ್ತಾರೆ. ಮಳೆಗಾಲವಲ್ಲದ ಕಾರಣ ಈ ಸಂಖ್ಯೆ ಈಗ ದುಪ್ಪಟ್ಟಾಗಿದೆ. ಆದರೆ, ಪಾರ್ಕ್‌ನ ಅವ್ಯವಸ್ಥೆ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಮಕ್ಕಳ ಆಟದ ವ್ಯವಸ್ಥೆ ಜತೆಗೆ ಕಾರಂಜಿ, ಈಜುಕೊಳ ನಿರ್ವಹಣೆ ಇಲ್ಲದೆ ಹಾಳಾಗಿವೆ.

ಪಾರ್ಕ್‌ನ ನ್ಯೂನತೆಗಳ ಮಧ್ಯೆಯೂ ಪ್ರವೇಶ ಶುಲ್ಕ ಹೆಚ್ಚಳ ಮಾಡಲಾಗಿದೆ. ಮಕ್ಕಳಿಗೆ ₹ 2, ಹಿರಿಯರಿಗೆ ₹ 5 ಇದ್ದ ಪ್ರವೇಶ ಶುಲ್ಕವನ್ನು ಈಗ ₹ 5 ಹಾಗೂ ₹ 10ಕ್ಕೆ ಏರಿಕೆ ಮಾಡಲಾಗಿದೆ. ಕೊಟ್ಟ ಹಣಕ್ಕೆ ತಕ್ಕಂತೆ ಸೌಲಭ್ಯ ಸಿಗುತ್ತಿಲ್ಲ. ಮೂಲಸೌಲಭ್ಯ ಉತ್ತಮಪಡಿಸಿಲ್ಲ. ಹಿಂದೆ ಗುತ್ತಿಗೆ ಪಡೆದವರು ಪಾರ್ಕ್‌ ನಿರ್ವಹಣೆಯಲ್ಲಿ ವಿಫಲರಾಗಿದ್ದರು. ಹಾಗಾಗಿ, ಹೊಸಬರಿಗೆ ಜವಾಬ್ದಾರಿ ವಹಿಸಲಾಗಿದೆ.

ಟೆಂಡರ್‌ ಕರೆದರೂ ಬಾರದ ಗುತ್ತಿಗೆದಾರರು

ಸುನೀತಾ ಅಣ್ಣಪ್ಪ ಅವರು ನಗರ ಪಾಲಿಕೆ ಮೇಯರ್‌ ಸ್ಥಾನ ಅಲಂಕರಿಸಿದ ನಂತರ ಗಾಂಧಿ ಪಾರ್ಕ್‌ ಅಭಿವೃದ್ಧಿಗೆ ಒತ್ತು ನೀಡಿದ್ದರು. ಅದಕ್ಕಾಗಿ ಪಾಲಿಕೆಯ ಉಳಿಕೆ ಅನುದಾನ ಬಳಸಿಕೊಂಡು ₹ 3 ಕೋಟಿ ಅನುದಾನ ಮೀಸಲಿಟ್ಟಿದ್ದರು. ಟೆಂಡರ್ ಸಹ ಕರೆಯಲಾಗಿತ್ತು. ಆದರೆ, ಒಬ್ಬ ಗುತ್ತಿಗೆದಾರರು ಮಾತ್ರ ಟೆಂಡರ್‌ ಸಲ್ಲಿಸಿದ್ದಾರೆ. ಹಾಗಾಗಿ, ಮರು ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭವಾಗಿದೆ.

14

ಸ್ಮಾರ್ಟ್‌ ಸಿಟಿಯಲ್ಲಿ ಅಭಿವೃದ್ಧಿಗಾಗಿ ಕೈಗೆತ್ತಿಕೊಂಡ ಪಾರ್ಕ್‌ಗಳು

54

ಪಾಲಿಕೆ ಅಭಿವೃದ್ಧಿಪಡಿಸಿದ ಪಾರ್ಕ್‌ಗಳು

10

ಅಭಿವೃದ್ಧಿ ನಡೆಯುತ್ತಿರುವ ಪಾರ್ಕ್‌ಗಳು

₹ 141.14 ಕೋಟಿ

ಸ್ಮಾರ್ಟ್‌ ಸಿಟಿಯಲ್ಲಿ ಪಾರ್ಕ್‌ಗಳಿಗೆ ಮಿಸಲಿಟ್ಟ ಹಣ

₹ 3 ಕೋಟಿ

ಗಾಂಧಿ ಪಾರ್ಕ್‌ ಅಭಿವೃದ್ಧಿಗೆ ಪಾಲಿಕೆ ನೀಡಿದ ಅನುದಾನ

ಗಾಂಧಿ ಪಾರ್ಕ್‌ ನಗರದ ಪ್ರಮುಖ ಆಕರ್ಷಣೆಯ ತಾಣ. ಪಾರ್ಕ್‌ ಅಭಿವೃದ್ಧಿಗೆ ₹ 3 ಕೋಟಿ ನೀಡಲಾಗಿದೆ. ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಆಸಕ್ತಿ ತೋರಿಲ್ಲ. ಮರು ಟೆಂಡರ್ ಕರೆಯಲು ಸೂಚಿಸಲಾಗಿದೆ.

ಸುನೀತಾ ಅಣ್ಣಪ್ಪ, ಮೇಯರ್, ನಗರ ಪಾಲಿಕೆ

ನಾಗರಿಕರ ತೆರಿಗೆ ಹಣ ಸುರಿದು ಪಾರ್ಕ್‌ಗಳ ಅಭಿವೃದ್ಧಿ ಮಾಡಿದರೆ ಸಾಲದು. ಅವುಗಳ ನಿರ್ವಹಣೆ ಮಾಡಬೇಕು. ನಿರ್ವಹಣೆಯ ಹೊಣೆಯನ್ನು ಆಯಾ ಬಡಾವಣೆಗಳ ನಾಗರಿಕ ಸಂಘಗಳಿಗೆ ನೀಡಬೇಕು. ವಾರ್ಷಿಕ ಅನುದಾನ ಮೀಸಲಿಡಬೇಕು. ಯಮುನಾ ರಂಗೇಗೌಡ, ವಿರೋಧ ಪಕ್ಷದ ನಾಯಕಿ, ನಗರ ಪಾಲಿಕೆ

ನಗರ ಪಾಲಿಕೆ, ಸ್ಮಾರ್ಟ್‌ ಸಿಟಿ ಕೋಟ್ಯಂತರ ವೆಚ್ಚ ಮಾಡಿ ಪಾರ್ಕ್‌ಗಳ ಅಭಿವೃದ್ಧಿಪಡಿಸಿದರೂ ನಿರ್ವಹಣೆ ಶೂನ್ಯವಾಗಿದೆ. ಬಹಳ ಪಾರ್ಕ್‌ಗಳು ಅನೈತಿಕ ಚಟುವಟಿಕೆಯ ತಾಣವಾಗಿದೆ. ಕಲ್ಲಹಳ್ಳಿಯ ಡಿವಿಜಿ ಪಾರ್ಕ್‌ ಈಚೆಗಷ್ಟೇ ಸಿದ್ಧವಾಗಿದೆ. ಆದರೆ, ನಾಗರಿಕರಿಗೆ ಉಪಯೋಗವಾಗುತ್ತಿಲ್ಲ. ಪಾಲಿಕೆ ಸದಸ್ಯೆ ಅನಿತಾ ರವಿಶಂಕರ್ ಎಚ್ಚರಿಸಿದರೂ ಸಮಸ್ಯೆ ಬಗೆಹರಿದಿಲ್ಲ.

ಆರುಂಡಿ ಶ್ರೀನಿವಾಸ್‌, ನಾಗರಿಕ, ಕಲ್ಲಹಳ್ಳಿ

ಶಿವಮೊಗ್ಗ: ‘ಸ್ಮಾರ್ಟ್‌ ಸಿಟಿ’ ಹಾಗೂ ನಗರ ಪಾಲಿಕೆ ಅನುದಾನದಲ್ಲಿ ನಗರದ ಪಾರ್ಕ್‌ಗಳ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಮೀಸಲಿಟ್ಟು, ಅಭಿವೃದ್ಧಿಪಡಿಸಿದರೂ ನಿರ್ವಹಣೆ ಕೊರತೆಯಿಂದ ಹಲವು ಪಾರ್ಕ್‌ಗಳು ಪಾಳುಬಿದ್ದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT