×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಸಾಯುತ್ತಿರುವ ಸಕ್ಕರೆ ಕಾರ್ಖಾನೆಗೆ ಚಿಕಿತ್ಸೆ ಕೊಡಿ; ಒತ್ತಾಯ

ಮೈಷುಗರ್‌ ಧರಣಿಗೆ ವಿವಿಧ ಗ್ರಾಮಗಳ ಗ್ರಾಮಸ್ಥರ ಬೆಂಬಲ, ಸರ್ಕಾರದ ವಿರುದ್ಧ ಆಕ್ರೋಶ
ಫಾಲೋ ಮಾಡಿ
Comments

ಮಂಡ್ಯ: ‘ರೈತ ಚಳವಳಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯ ಸಾಹಿತಿ ಕೆ.ಮಾಹಿಗೌಡ ಒತ್ತಾಯಿಸಿದರು.

ನಗರದ ಸರ್‌ಎಂ.ವಿ.ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಹಯೋಗದಲ್ಲಿ ಆರಂಭವಾಗಿರುವ ಅನಿರ್ದಿಷ್ಟಾವದಿ ಧರಣಿಯು ಸೋಮವಾರ 29 ದಿನ ಪೂರೈಸಿದ್ದು, ಧರಣಿಗೆ ಬೆಂಬಲ ನೀಡಿ ಅವರು ಮಾತನಾಡಿದರು.

‘ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸದೇ ಇರುವ ಸಕ್ಕರೆ ಕಾರ್ಖಾನೆ ಸಾವಿನ ಅಂಚಿನಲ್ಲಿದೆ. ಇದಕ್ಕೆ ಸರ್ಕಾರ ತಕ್ಷಣ ಚಿಕಿತ್ಸೆ ನೀಡಿ ಕಾರ್ಖಾನೆ ಉಳಿಸಿಕೊಳ್ಳುವ ಕೆಲಸ ಮಾಡದೇ ಸಂಪುಟ ಉಪಸಮಿತಿ ರಚಿಸುವ ತೀರ್ಮಾನ ಕೈಗೊಂಡಿರುವುದು ಮೂರ್ಖತನದ ಪರಮಾವಧಿ ಆಗಿದೆ. ರೈತರು ಕಳೆದ 29 ದಿನಗಳಿಂದ ನಡೆಸುತ್ತಿರುವ ಮುಷ್ಕರಕ್ಕೆ ಸ್ಪಂದಿಸಲು ಸರ್ಕಾರಕ್ಕೆ ಇನ್ನೆಷ್ಟು ದಿನ ಬೇಕು’ ಎಂದು ಪ್ರಶ್ನಿಸಿದರು.

‘ಕುವೆಂಪು ಅವರು ರೈತರನ್ನು ನೇಗಿಲಯೋಗಿ ಎಂಬ ಪರಿಕಲ್ಪನೆ ನೀಡಿ ಸಾಹಿತ್ಯಲೋಕದಲ್ಲಿ ಶ್ರೇಷ್ಠ ಸ್ಥಾನ ತಂದುಕೊಟ್ಟರು, ಸರ್ವಜ್ಞ ಕೂಡ ರೈತರ ರಾಟೆ ನಡೆಯದೆ ದೇಶದ ಆಟ ನಡೆಯದು ಎಂದು ಹೇಳಿ ರೈತರ ಹಿರಿಮೆ ಹೆಚ್ಚಿಸಿದ್ದರು, ಈ ಪರಿಕಲ್ಪನೆಯನ್ನು ನಮ್ಮ ಆಡಳಿತಗಾರರು ಇನ್ನೂ ಅರ್ಥೈಸಿಕೊಂಡಿಲ್ಲ. ಇಂತಹ ಯೋಗಿಗೆ ಜೋಳಿಗೆ ಹಿಡಿಯುವ ಪರಿಸ್ಥಿತಿಗೆ ಕೊಂಡೊಯ್ಯುತ್ತಿರುವುದು ವಿಷಾದನೀಯ, ಹಿಂದೆ ಶಾಂತವೇರಿ ಗೋಪಾಲಗೌಡರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದಪ್ಪಚರ್ಮದ ಹಂದಿಗಳು ಎಂದು ಲೇವಡಿ ಮಾಡಿದ್ದರು’ ಎಂದು ನೆನಪಿಸಿದರು.

‘ದಪ್ಪ ಚರ್ಮದ ಸಾಲುಗಳಿಗೆ ಸೇರುವ ರೈತರ ಕಷ್ಟಗಳು ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ, ಕಾರ್ಖಾನೆ ವಿಷಯದಲ್ಲಿ ಅಂತಹ ದಪ್ಪಚರ್ಮದವರಾಗುವುದು ಬೇಡ, ಎಷ್ಟು ದಿನ ಅಂತ ಸರ್ಕಾರ ರೈತರ ಚಳುವಳಿಯನ್ನು ನಿರ್ಲಕ್ಷಿಸುತ್ತದೆ. ರೈತ ಇಲ್ಲ ಎಂದರೆ ನಾಡಿಲ್ಲ, ಆಡಳಿತವಿಲ್ಲ, ಹೊಟ್ಟೆ ತುಂಬಿಸಲು ಆಗುವುದಿಲ್ಲ ಇದನ್ನು ಅರ್ಥ ಮಾಡಿಕೊಂಡು ಮೈಷುಗರ್ ಉಳಿಸಬೇಕು’ ಎಂದು ಆಗ್ರಹಿಸಿದರು.

ನಿವೃತ್ತ ಪ್ರಾಧ್ಯಾಪಕ ಬಿ. ಶಂಕರೇಗೌಡ ಮಾತನಾಡಿ ‘ರೈತರು ಚಳವಳಿ ಮಾಡಿದರೆ ಬೆಲೆ ಸಿಗುತ್ತಿಲ್ಲ ಅವರು ಬೆಳೆದ ಬೆಳೆಗೆ ಸರಿಯಾಗ ಬೆಲೆ ಸಿಗುತ್ತಿಲ್ಲ, ರೈತರ ಗೋಳು ಕೇಳುವವರು ಯಾರೂ ಇಲ್ಲ, ರೈತರು ಬೆಳೆ ಬೆಳೆಯುವುದನ್ನೇ ನಿಲ್ಲಿಸಬೇಕು. ತಮ್ಮ ಮನೆಗೆ ಎಷ್ಟು ಬೇಕೋ ಅಷ್ಟು ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಿ, ಆನಂತರ ಆಹಾರ ಕ್ಷಾಮ ತಲೆದೋರಿ ನಿಮ್ಮ ದಾರಿಗೆ ಬರುತ್ತಾರೆ’ ಎಂದು ಸಲಹೆ ನೀಡಿದರು.

ಅನಿರ್ದಿಷ್ಟಾವದಿ ಧರಣಿಗೆ ತಗ್ಗಹಳ್ಳಿ, ಸಂತೆಕಸಲಗೆರೆ, ಹೆಮ್ಮಿಗೆ, ಮಲ್ಲಿಗೆರೆ, ಸಬ್ಬನಹಳ್ಳಿ, ಕಬ್ಬನಹಳ್ಳಿ ,ಪುರ, ಕುರಿಕೆಂಪನದೊಡ್ಡಿ, ದೇವಿರಳ್ಳಿ, ದೊಡ್ಡರಸಿನಕೆರೆ ಗ್ರಾಮಸ್ಥರು ಬೆಂಬಲ ಸೂಚಿಸಿದರು.

ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ರೈತ ಸಂಘದ (ಮೂಲ ಸಂಘಟನೆ) ಜಿಲ್ಲಾ ಘಟಕದ ಅಧ್ಯಕ್ಷ ಬೋರಾಪುರ ಶಂಕರೇಗೌಡ, ಪ್ರಧಾನ ಕಾರ್ಯದರ್ಶಿ ರಾಮಲಿಂಗೇಗೌಡ, ಕಾರ್ಯಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಸಮಿತಿಯ ಉಪಾಧ್ಯಕ್ಷ ಕೆ.ಬೋರಯ್ಯ, ಸಂಘಟನಾ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಸಿಐಟಿಯುನ ಟಿ.ಯಶವಂತ, ಸಿ.ಕುಮಾರಿ, ಕನ್ನಡ ಸೇನೆ ಮಂಜುನಾಥ್‌ ಭಾಗವಹಿಸಿದ್ದರು.

‘ರೈತ ಚಳವಳಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಬೇಕು’ ಎಂದು ಹಿರಿಯ ಸಾಹಿತಿ ಕೆ.ಮಾಹಿಗೌಡ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT