×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳದಲ್ಲಿ ಕೋವಿಡ್‌ 3ನೇ ಅಲೆ: ಹೆಚ್ಚಿದ ಆತಂಕ, ಸೌಲಭ್ಯ ಕೊರತೆ

ಫಾಲೋ ಮಾಡಿ
Comments

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ವೇಗವಾಗಿ ವ್ಯಾಪಿಸಿಕೊಳ್ಳುತ್ತಿದ್ದರೂ ಕೊರೊನಾ ರೂಪಾಂತರಿ ತಳಿಯಾದ ಓಮೈಕ್ರಾನ್ ಸೋಂಕಿನ ರೋಗದ ಲಕ್ಷಣ ಯಾರಲ್ಲೂ ಕಂಡೂ ಬರದಿದ್ದರೂ, ಕೋವಿಡ್ ತರುವ ನೆಗಡಿ, ಕೆಮ್ಮು, ಜ್ವರ ಪೀಡಿತರ ಸಂಖ್ಯೆ ಸಾಮಾನ್ಯವಾಗಿದೆ.

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಆಸ್ಪತ್ರೆ (ಕಿಮ್ಸ್‌), ಜಿಲ್ಲಾ ಸರ್ಕಾರಿ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಔಷಧ, ಆಮ್ಲಜನಕ ಸೇರಿದಂತೆ ರೋಗ ಸಂಬಂಧಿಸಿದ ಔಷಧಗಳ ಯಾವುದೇ ಕೊರತೆಯಾಗದಂತೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದರೂ ಗಂಭೀರವಾದ ಪ್ರಯತ್ನಗಳು ನಡೆಸಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಅವರು ಈಚೆಗೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ 2 ಸಾವಿರ ಹಾಸಿಗೆಗಳು ಲಭ್ಯವಿದೆ. ಕೊಪ್ಪಳ ಮತ್ತು ಗಂಗಾವತಿ ಆಸ್ಪತ್ರೆಗಳಲ್ಲಿ 2 ಆಮ್ಲಜನಕ ಪ್ಲ್ಯಾಂಟ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೆ ಸುತ್ತಮುತ್ತಲಿನ ಕಾರ್ಖಾನೆಗಳಲ್ಲಿ ಆಮ್ಲಜನಕ ಉತ್ಪಾದನೆಯ ಘಟಕಗಳು ಇದ್ದು ಯಾವುದೇ ತೊಂದರೆ ಇಲ್ಲ ಎನ್ನಲಾಗುತ್ತಿದೆ. ಎರಡೂ ಅಲೆಗಳಲ್ಲಿ ಆಮ್ಲಜನಕದ ಕೊರತೆ ಅಷ್ಟೊಂದು ಇರಲಿಲ್ಲ.

ಜಿಲ್ಲೆಯಾದ್ಯಂತ ಒಟ್ಟು 40ಕ್ಕೂ ಹೆಚ್ಚು ಸರ್ಕಾರಿ ಆಂಬುಲೆನ್ಸ್‌ಗಳಿದ್ದು, ಅದರಲ್ಲಿ ಕೆಲವು ದುರಸ್ತಿಯಲ್ಲಿವೆ. ಎಲ್ಲ ದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಇದೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 34,623 ಸೋಂಕು ಪ್ರಕರಣ ದಾಖಲಾಗಿವೆ. 551 ಜನ ಮೃತಪಟ್ಟಿದ್ದರೆ, ಮೂರನೇ ಅಲೆಯಲ್ಲಿ 120 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಭಾನುವಾರ 94 ಪ್ರಕರಣ ವರದಿಯಾಗಿವೆ. ನಿತ್ಯ 1 ಸಾವಿರ ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ.

ಪರಿಹಾರ: ಕೊರೊನಾ ಸೋಂಕಿನಿಂದ 551 ಜನರು ಮೃತಪಟ್ಟಿದ್ದು, ಇದರಲ್ಲಿ 522 ವ್ಯಕ್ತಿಗಳ ಕುಟುಂಬಗಳು ಪರಿಹಾರಕ್ಕೆ ಅರ್ಹವಾಗಿವೆ. 48 ಜನರು ಅನ್ಯ ಜಿಲ್ಲೆಯವರಾಗಿದ್ದು, ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಹಾಗೂ ಆಯಾ ಜಿಲ್ಲೆಗೆ ಮಾಹಿತಿ ನೀಡಲಾಗಿದೆ. 9 ಜನರು ಇತರೆ ಕಾರಣದಿಂದ ಮೃತರಾಗಿದ್ದಾರೆ.

8 ಜನರು ನೆರವು ನಿರಾಕರಿಸಿದ್ದಾರೆ. ಕೋವಿಡ್‌ನಿಂದ ಗುಣಮುಖರಾದ 23 ಜನರು ಮೃತರ ಪಟ್ಟಿಯಲ್ಲಿದ್ದು, ಸಿಬ್ಬಂದಿ ಆಡಳಿತದ ನಿರ್ಲಕ್ಷ್ಯಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದವರ ಮನೆಗಳಿಗೆ ತೆರಳಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. 371 ಜನರ ಮಾಹಿತಿ ಸಮಂಜಸವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬಿಪಿಎಲ್‌ ಚೀಟಿದಾರರಿಗೆ ₹1 ಲಕ್ಷ, ಪ್ರಕೃತಿ ವಿಕೋಪದಡಿ ₹50 ಸಾವಿರ ಪರಿಹಾರ ದೊರಕಬೇಕಿದೆ. ಕೊರೊನಾದಿಂದ ಮೃತರಾದ ಎಲ್ಲ ಅರ್ಹರಿಗೆ ಈಗಾಗಲೇ ₹50 ಸಾವಿರ ನೀಡುವಂತೆ ಸೂಚನೆ ಮಾಡಲಾಗಿದೆ. ಪರಿಹಾರ ಕಾರ್ಯ ಪ್ರಗತಿಯಲ್ಲಿ ಇದ್ದು, ಫಲಾನುಭವಿಗಳ ಖಾತೆಗೆ ನೇರ ಹಣ ಜಮಾ ಆಗಲಿದೆ ಎನ್ನಲಾಗುತ್ತಿದೆ. 

ಜಿಲ್ಲೆಯಲ್ಲಿ ಕೊರೊನಾ ಲಸಿಕಾ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಲಾಗಿದೆ. 10,68,516 ಜನರಿಗೆ ಲಸಿಕೆ ನೀಡುವ ಗುರಿ ನೀಡಲಾಗಿತ್ತು. 10,17,946 ಜನರಿಗೆ ನೀಡಲಾಗಿದೆ. 50,570 ಜನರಿಗೆ ಲಸಿಕೆ ನೀಡಬೇಕಾಗಿದೆ. ಇದರಿಂದ ಜಿಲ್ಲೆಯಲ್ಲಿ ಎರಡೂ ಡೋಸ್‌ ಪಡೆದವರು ಶೇ 95.27ರಷ್ಟಾಗಿದೆ.

ಬೂಸ್ಟರ್ ಡೋಸ್‌ ಮತ್ತು 18 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. 80 ಸಾವಿರ ಜನರಿಗೆ ಪೂರ್ವ ಸಿದ್ಧತಾ ಡೋಸ್‌ ನೀಡುವ ಗುರಿ ನೀಡಲಾಗಿದ್ದು ಇಲ್ಲಿವರೆಗೆ 4 ಸಾವಿರಕ್ಕೂ ಹೆಚ್ಚು ಜನರಿಗೆ ಬೂಸ್ಟರ್ ಡೋಸ್‌ ಹಾಕಲಾಗಿದೆ.

ಮೂರನೇ ಅಲೆ ಮಕ್ಕಳಲ್ಲಿ ಹೆಚ್ಚು ಪರಿಣಾಮ ಉಂಟು ಮಾಡುತ್ತಿದೆ ಎಂಬ ಅಂಶ ಮೊದಲೇ ತಜ್ಞ ವೈದ್ಯರು ತಿಳಿಸಿದ್ದರು. ಶಾಲೆ, ಕಾಲೇಜು, ವಸತಿ ನಿಲಯಗಳಲ್ಲಿ ಸೋಂಕು ಪ್ರಕರಣ ದಾಖಲಾಗಿದ್ದು, ನಿಜ ಎನಿಸುತ್ತಿದೆ. ನವೋದಯ ವಿದ್ಯಾಲಯಗಳಲ್ಲಿ 10 ಕ್ಕೂ ಮಕ್ಕಳಿಗೆ ಸೋಂಕು ಕಂಡು ಬಂದಿದೆ. 1 ರಿಂದ 6ನೇ ವರ್ಗದ ಮಕ್ಕಳನ್ನು ಮನೆಗಳಿಗೆ ಕಳುಹಿಸುವ ಯೋಚನೆ ಕೂಡಾ ಇದೆ.

ಆದ್ದರಿಂದ ಕೊರೊನಾ ಸೋಂಕಿನ ವಿರುದ್ಧದ ಸಮರ ಇನ್ನೂ ಮುಗಿದಿಲ್ಲ. ಇದಕ್ಕೆ ಮುನ್ನಚ್ಚರಿಕೆಯೇ ಮದ್ದು ಎಂಬುವುದರಲ್ಲಿ ಎರಡು ಮಾತಿಲ್ಲ.

*ಕೋವಿಡ್‌ನಿಂದ ಅಪಾಯ ಇಲ್ಲ ಎಂದು ತಜ್ಞರು ಹೇಳುತ್ತಿದ್ದರೂ ಮುನ್ನಚ್ಚರಿಕೆ ವಹಿಸುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ಎಲ್ಲ ಆಸ್ಪತ್ರೆಗಳನ್ನು ವೈದ್ಯಕೀಯ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಸರ್ಕಾರದ ಮಾರ್ಗಸೂಚಿ ಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಈ ಸೋಂಕಿನಿಂದ ಪಾರಾಗಬಹುದು

–ಹಾಲಪ್ಪ ಆಚಾರ, ಜಿಲ್ಲಾ ಉಸ್ತುವಾರಿ ಸಚಿವ

*ಕೋವಿಡ್ 3ನೇ ಅಲೆಯ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ. ಯಾವುದೇ ಕೊರತೆ ಕಂಡು ಬಂದರೆ ತಕ್ಷಣ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ದಾಸ್ತಾನು ಇಟ್ಟುಕೊಳ್ಳಲು ಸೂಚನೆ ನೀಡಿದ್ದೇವೆ. ಯಾವ ಆಸ್ಪತ್ರೆಗಳಲ್ಲಿ ಕೊರತೆ ಇದೆ ಎಂಬುದನ್ನು ಪರಿಶೀಲಿಸಲಾಗುತ್ತದೆ

– ಡಾ.ಅಲಕಾನಂದ ಮಳಗಿ, ಡಿಎಚ್ಒ

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್‌ ಮೂರನೇ ಅಲೆ ವೇಗವಾಗಿ ವ್ಯಾಪಿಸಿಕೊಳ್ಳುತ್ತಿದ್ದರೂ ಕೊರೊನಾ ರೂಪಾಂತರಿ ತಳಿಯಾದ ಓಮೈಕ್ರಾನ್ ಸೋಂಕಿನ ರೋಗದ ಲಕ್ಷಣ ಯಾರಲ್ಲೂ ಕಂಡೂ ಬರದಿದ್ದರೂ, ಕೋವಿಡ್ ತರುವ ನೆಗಡಿ, ಕೆಮ್ಮು, ಜ್ವರ ಪೀಡಿತರ ಸಂಖ್ಯೆ ಸಾಮಾನ್ಯವಾಗಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT