×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಗಡಿಕೇಶ್ವಾರದಲ್ಲಿ ನೀರವಮೌನ: ನಿಲ್ಲದ ಪೃಥ್ವಿಯ ಮುನಿಸು

ಚಿಂಚೋಳಿ: ತಾಲ್ಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸುಮಾರು 4ರಿಂದ 5 ಸಾವಿರ ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿರುವುದರಿಂದ ಜನ ಊರು ಖಾಲಿ ಮಾಡಿದ್ದಾರೆ.  ಗ್ರಾಮದಲ್ಲಿನ ರಸ್ತೆಗಳು ಜನರ ಓಡಾಟವಿಲ್ಲದೇ ಭಣಗುಡುತ್ತಿವೆ.

ಗ್ರಾಮದಲ್ಲಿ ಹೆಜ್ಜೆ ಹಾಕಿದರೆ ಸಾಕು, ಎಲ್ಲಿ ನೋಡಿದರಲ್ಲಿ ಬೀಗ ಹಾಕಿದ ಮನೆಗಳೇ ಸಿಗುತ್ತವೆ. ಎರಡು ದಿನಗಳಿಂದ ಕಾಣಿಸದ ನಾಯಿಗಳು ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಿಗ್ಗೆ ಗೋಚರಿಸಿವೆ.

’ಗಡಿಕೇಶ್ವಾರದ ಜನರು ಭೂಕಂಪನಕ್ಕೆ ಹೆದರಿ ಊರು ತೊರೆಯುತ್ತಿರುವ ಸುದ್ದಿ ಕೇಳಿ ಸುತ್ತಮುತ್ತಲಿನ ಹಳ್ಳಿಗಳ ಜನರೂ ಊರು ಬಿಟ್ಟು ಹೋಗಿದ್ದಾರೆ. ಜನ ಗ್ರಾಮ ತೊರೆದಿದ್ದರಿಂದ ಅಂಗಡಿಗಳು ಬಾಗಿಲು ಹಾಕಿವೆ. ಗ್ರಾಮದಲ್ಲಿ ಕಡ್ಡಿ ಪೆಟ್ಟಿಗೆಯೂ ದೊರೆಯುತ್ತಿಲ್ಲ. ಇದು ಜನರಲ್ಲಿ ಆವರಿಸಿರುವ ಭೂಕಂಪನದ ಭಯದ ಪ್ರಖರತೆಗೆ ಸಾಕ್ಷಿಯಾಗಿದೆ‘ ಎಂದು ರೈತ ಮುಖಂಡ ಸಂತೋಷ ಬಳಿ(ಬಳೇರ್) ತಿಳಿಸಿದರು.

ಗ್ರಾಮದಲ್ಲಿ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.0ರಷ್ಟು ದಾಖಲಾದ ನಂತರ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಜನ ಊರು ತೊರೆದ ಮೇಲೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದಾರೆ. ಜತೆಗೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಾಳಜಿ ಕೇಂದ್ರವೂ ತೆರೆಯಲಾಗಿದೆ. ಆದರೆ ಕೇಂದ್ರ ಮಾತ್ರ ಪೂರ್ಣಪ್ರಮಾಣದಲ್ಲಿ ತಲೆ ಎತ್ತಿಲ್ಲ ಎಂಬ ಅಸಮಾಧಾನ ಜನರಲ್ಲಿದೆ.

ನೆರಳಿಗೆ ತಾಡಪಾಲು ಬಳಕೆ: ಗ್ರಾಮದಲ್ಲಿ ಮನೆಯ ಒಳಗಡೆ ಹೋಗುವುದಕ್ಕೂ ಹೆದರುತ್ತಿರುವ ಮಹಿಳೆಯರು ಬಿಸ್ಕಿಟ್ ಸೇವಿಸಿ ಕಾಲ ಕಳೆಯುತ್ತಿದ್ದಾರೆ. ಬಿಸಿಲಿನಿಂದ ಮುಕ್ತಿ ಪಡೆಯಲು ತಾಡಪಾಲು ಕಟ್ಟಿ ಶೆಡ್ ಮಾದರಿಯಲ್ಲಿ ಜನ ವಾಸ ಮಾಡುತ್ತಿದ್ದಾರೆ.

’ಊರಿನಲ್ಲಿ ಮಹಿಳೆಯರು, ಮಕ್ಕಳು ಊರು ಬಿಟ್ಟು ಹೋಗಿದ್ದಾರೆ. ಇದರಿಂದ ನಮ್ಮ ದಿನಸಿ ಅಂಗಡಿಗೆ ಗಿರಾಕಿಗಳೇ ಬರುತ್ತಿಲ್ಲ. ನಿತ್ಯ ₹ 3 ಸಾವಿರ ವ್ಯವಹಾರ ಆಗುತ್ತಿತ್ತು. ನಾನು ನಮ್ಮ ಕುಟುಂಬದ ಎಲ್ಲರನ್ನೂ ನೆಂಟರ ಮನೆಗಳಿಗೆ ಕಳುಹಿಸಿಕೊಟ್ಟಿದ್ದೇನೆ ನಾನೊಬ್ಬನೇ ಇಲ್ಲಿದ್ದೇನೆ‘ ‘ ಎಂದು ಇಸ್ಮಾಯಿಲ್ ಕಾಳಗಿ ತಿಳಿಸಿದರು.

’ಭೂಕಂಪನದಿಂದ ನಮ್ಮ ಮನೆ ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಈವರೆಗೆ ಯಾರೊಬ್ಬರೂ ಬಂದು ಪರಿಶೀಲಿಸಿಲ್ಲ. ಇಲ್ಲಿ ಯಾರು ಬರುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಎಲ್ಲಾ ಕಡೆ ಮಾಧ್ಯಮದವರೇ ಕಾಣ ಸಿಗುತ್ತಿದ್ದಾರೆ‘ ಎಂದು ಆರ್ಯ ಸಮಾಜದ ಗುರು ಶಿವರಾಜ ಪುರಿ ತಿಳಿಸಿದರು.

’ಜನರು ಊರು ತೊರೆದಿದ್ದರಿಂದ ಗ್ರಾಮದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ. ಆರೋಗ್ಯ ಇಲಾಖೆಯ ವೈದ್ಯರು ಸ್ಥಳದಲ್ಲಿಯೇ ಮುಕ್ಕಾಂ ಹೂಡಿದ್ದಾರೆ. ಅಗ್ನಿಶಾಮಕ ಅಧಿಕಾರಿಗಳು ಮತ್ತು ಅಂಬುಲೆನ್ಸ್ ಸೇವೆ ಒದಗಿಸಲಾಗಿದೆ. ಗಡಿಕೇಶ್ವಾರದಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಲಾಗಿದೆ. ಕುಪನೂರ ಗ್ರಾಮದಲ್ಲಿ ಗುರುವಾರದಿಂದ ಆರಂಭಿವಾಗಲಿದೆ‘ ಎಂದು ತಹಶೀಲ್ದಾರ ಅಂಜುಮ್ ತಬಸ್ಸುಮ್ ತಿಳಿಸಿದರು.

4 ಬಾರಿ ಸದ್ದು

ಭೂಕಂಪನ ಪೀಡಿತ ಗಡಿಕೇಶ್ವಾರದಲ್ಲಿ ಬುಧವಾರ 4 ಬಾರಿ ಭೂಮಿಯಿಂದ ಸದ್ದು ಕೇಳಿ ಬಂದಿದೆ. ಸಂಸದ ಉಮೇಶ ಜಾಧವ ಗಡಿಕೇಶ್ವಾರದಲ್ಲಿದ್ದಾಗ ನಸುಕಿನ 2.35ಕ್ಕೆ ಭೂಮಿಯಿಂದ ಸದ್ದು ಕೇಳಿ ಬಂದಿತು. ಇದರ ಅನುಭವ ನನಗೆ ಆಗಿಲ್ಲ ಎಂದು ಉಮೇಶ ಜಾಧವ ತಿಳಿಸಿದರೆ ಅವರ ಜತೆಗಿದ್ದ ಅಧಿಕಾರಿಗಳು ಭೂಮಿಯಿಂದ ಬಂದ ಸದ್ದು ದೃಢೀಕರಿಸಿದ್ದಾರೆ.

ತಾಲ್ಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಸುಮಾರು 4ರಿಂದ 5 ಸಾವಿರ ಜನ ಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿರುವುದರಿಂದ ಜನ ಊರು ಖಾಲಿ ಮಾಡಿದ್ದಾರೆ. ಗ್ರಾಮದಲ್ಲಿನ ರಸ್ತೆಗಳು ಜನರ ಓಡಾಟವಿಲ್ಲದೇ ಭಣಗುಡುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT