×
ADVERTISEMENT
ಈ ಕ್ಷಣ :
ADVERTISEMENT

ಜಲಜೀವನ ಮಿಷನ್‌: ಬದ್ಧತೆಯಿಂದ ಕಾರ್ಯನಿರ್ವಹಿಸಿ

ಯೋಜನೆಗೆ ₹400 ಕೋಟಿ ವೆಚ್ಚ: ಸಂಸದ ಶಿವಕುಮಾರ ಉದಾಸಿ ಸೂಚನೆ
Published : 20 ಜನವರಿ 2022, 15:21 IST
ಫಾಲೋ ಮಾಡಿ
Comments

ಹಾವೇರಿ: ‘ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚ ಮಾಡಲಾಗುತ್ತಿದ್ದು, ದೂರದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು’ ಎಂದು ಸಂಸದ ಶಿವಕುಮಾರ ಉದಾಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ ‘ದಿಶಾ’ ಕಾರ್ಯಕ್ರಮದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಲಜೀವನ್ ಯೋಜನೆಯಡಿ ಮನೆ, ಅಂಗನವಾಡಿ ಹಾಗೂ ಶಾಲೆಗಳಿಗೆ ನಳದ ನೀರು ಸಂಪರ್ಕ ಕಲ್ಪಿಸಲಾಗುತ್ತಿದೆ. ಇಂತಹ ದೊಡ್ಡ ಯೋಜನೆ ಸಮರ್ಪಕವಾಗಿ ಬಳಕೆಯಾಗಬೇಕು ಎಂದರು.

ಈ ಯೋಜನೆಯ ಕಾಮಗಾರಿಗೆ ₹400 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದರ ಬಳಕೆ ಎಷ್ಟು ದಿನ ಬರಬಹುದು ಹಾಗೂ ಮುಂದಿನ ದಿನಗಳಲ್ಲಿ ಕಾಮಗಾರಿ ದುರಸ್ತಿಗೆ ಬೇಕಾದ ಹಣಕಾಸಿನ ಕ್ರಿಯಾ ಯೋಜನೆಯನ್ನು ತಯಾರಿಸಬೇಕು. ಬಹಳ ಬದ್ಧತೆಯಿಂದ ಕೆಲಸ ನಿರ್ವಹಿಸುವುದು ಮುಖ್ಯವಾಗಿದೆ ಎಂದು ತಿಳಿಸಿದರು.

ತೋಟಗಾರಿಕೆ ಪ್ರದೇಶ ವಿಸ್ತೀರ್ಣಕ್ಕೆ ಪ್ರೋತ್ಸಾಹಿಸಬೇಕು. ಪ್ರಥಮಬಾರಿಗೆ ಶುಂಠಿ ಬೆಳೆಯಲು ₹31 ಸಾವಿರ ಸಹಾಯಧನ ಸೌಲಭ್ಯವಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೃಷಿ, ತೋಟಗಾರಿಕೆ, ಆರೋಗ್ಯ, ಹೆಸ್ಕಾಂ ಸೇರಿದಂತೆ ವಿವಿಧ 18 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಂಸದ ಉದಾಸಿ ಅವರು ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪಬೇಕು ಹಾಗೂ ನಿಗದಿತ ಗುರಿ ಸಾಧಿಸುವಂತೆ ಸೂಚನೆ ನೀಡಿದರು. 

ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್‌ ರೋಶನ್‌ ಮಾತನಾಡಿ, ಡಿಸೆಂಬರ್ ಅಂತ್ಯದವರೆಗೆ 49,11,980 ಮಾನವ ದಿನಗಳನ್ನು ಸೃಜಿಸಲಾಗಿದೆ ಹಾಗೂ ₹19,353 ಲಕ್ಷ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಾಗೂ ತೋಟಗಾರಿಕೆ ಇಲಾಖೆಯ ಒಗ್ಗೂಡಿಸುವಿಕೆಯಡಿ ತೋಟಗಾರಿಕೆ ಬೆಳೆಗಳವಾರು 19 ಕ್ಲಸ್ಟರ್‌ಗಳನ್ನು ರಚಿಸಲಾಗಿದೆ ಎಂದರು. 

ತೋಟಗಾರಿಕೆ ಬೆಳೆಗಳಾದ ಅಡಿಕೆ, ಬಾಳೆ, ಪೇರಲ, ಪಪ್ಪಾಯ ಮತ್ತು ವೀಳ್ಯದೆಲೆ ಬೆಳೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. 2,500 ಎಕರೆ ಕ್ಲಸ್ಟರ್ ಪ್ರದೇಶ ವಿಸ್ತರಿಸಲಾಗಿದ್ದು, 1950 ಫಲಾನುಭವಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡಿದ್ದಾರೆ. 1.25 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ ಹಾಗೂ ₹3.61 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಚೆಕ್, ಲ್ಯಾಪ್‍ಟಾಪ್ ವಿತರಣೆ: ಸಭೆಗೆ ಮುನ್ನ ಸಂಸದರಾದ ಶಿವಕುಮಾರ ಉದಾಸಿ ಅವರು ಮಹಾತ್ಮಗಾಂಧಿ ನರೇಗಾ ಯೋಜನೆ ಸಿಬ್ಬಂದಿಗೆ ಲ್ಯಾಪ್‍ಟಾಪ್, ಮಹಾತ್ಮಗಾಂಧಿ ನರೇಗಾ ಯೋಜನೆ ಮಹಿಳಾ ಕಾಯಕ ಮಿತ್ರರಿಗೆ ಸಮವಸ್ತ್ರ, ಎಸ್.ಸಿ. ಮತ್ತು ಎಸ್.ಟಿ. ವರ್ಗದ ಸ್ತ್ರೀ ಶಕ್ತಿ ಸಂಘಗಳಿಗೆ ಸಾಲ ಮಂಜೂರಾತಿ ಚೆಕ್ ವಿತರಣೆ ಮಾಡಿದರು ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಅಡಿ `ಕೈಪಿಡಿ’ ಬಿಡುಗಡೆ ಮಾಡಲಾಯಿತು.

ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 

‘ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚ ಮಾಡಲಾಗುತ್ತಿದ್ದು, ದೂರದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು’ ಎಂದು ಸಂಸದ ಶಿವಕುಮಾರ ಉದಾಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT