×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು ನ್ಯಾಯಾಲಯದಿಂದ ಅಮಾನತು; ಠೇವಣಿಗೆ ಆದೇಶ

ಹರೀಶ್ ಕಂಜಿಪಿಲಿ ಸೇರಿ 14 ಜನರಿಗೆ ಶಿಕ್ಷೆ ಪ್ರಕರಣ
ಫಾಲೋ ಮಾಡಿ
Comments

ಪುತ್ತೂರು: 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸ್ವತಿ ಕಾಮತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಅವರ ಜತೆಗಿದ್ದ ಬಿಜೆಪಿ ಕಾರ್ಯಕರ್ತರಿಗೆ ಸುಳ್ಯ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆಯ ತೀರ್ಪನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಅಮಾನತು ಮಾಡಿದೆ.

2013 ಮೇ 4 ರಂದು ಸುಳ್ಯ ತಾಲ್ಲೂಕಿನ ಮರ್ಕಂಜ ಗ್ರಾಮದ ಕುದ್ಕುಳಿ ಎಂಬಲ್ಲಿ ಹರೀಶ್ ಕಂಜಿಪಿಲಿ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡ, ಆಗಿನ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸ್ವತಿ ಕಾಮತ್ ಹಾಗೂ ಇತರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಒಳಗಾಗಿತ್ತು. ಈ ಪ್ರಕರಣ ಸುಳ್ಯದ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಸೆ. 9ರಂದು ನ್ಯಾಯಾಲಯ ತೀರ್ಪು ನೀಡಿತ್ತು.

ಪ್ರಕರಣದ ಆರೋಪಿಗಳಾದ ಹರೀಶ್ ಕಂಜಿಪಿಲಿ, ಈಶ್ವರಪ್ಪ ಗೌಡ ಹರ್ಲಡ್ಕ, ರವಿಚಂದ್ರ ಕೊಡಪಾಲ, ಸವಿನ್ ಕೊಡಪಾಲ, ದಿವಾಕರ ನಾಯಕ್ ಎರ್ಮೆಟ್ಟಿ, ದಿನೇಶ ಚೆಮ್ನೂರು, ರಾಮಚಂದ್ರ ಹಲ್ದಡ್ಕ, ಷಣ್ಮುಖ ಸೂಟೆಗದ್ದೆ, ಧನಂಜಯ ಬೈಕಾಡಿ, ಬಾಲಕೃಷ್ಣ ಕಂಜಿಪಿಲಿ, ಮನೋಹರ, ದೀಪಕ್ ಎಲಿಮಲೆ ಮನೋಜ್ ಎಂ.ಕೆ. ಮತ್ತು ವಿಶ್ವನಾಥ ಸಿ.ಎಲ್. ಯಾನೆ ವಿಕಾಸ್‌ ಅವರಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿತ್ತು. ಈ ತೀರ್ಪು ಪ್ರಕಟಿಸಿದ ಸುಳ್ಯ ನ್ಯಾಯಾಲಯವು, ಆರೋಪಿಗಳಿಗೆ ಮೇಲ್ಮನವಿಗೆ 1 ತಿಂಗಳ ಕಾಲಾವಕಾಶ ನೀಡಿ, ಅಲ್ಲಿಯೇ ಜಾಮೀನು ಮಂಜೂರು ಮಾಡಿತ್ತು.

ಇದೀಗ ಆರೋಪಿಗಳು ಪುತ್ತೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದು, ನ್ಯಾಯಾಲಯವು ಸುಳ್ಯ ನ್ಯಾಯಾಲಯ ನೀಡಿರುವ ತೀರ್ಪನ್ನು ಅಮಾನತು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಪುತ್ತೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಸ್ತಾಂತರಿಸಲು ಸೂಚಿಸಿದೆ.

ದಂಡ ಠೇವಣಿಗೆ ನಿರ್ದೇಶನ: ಶಿಕ್ಷೆ ವಿಧಿಸಿದ ಅಪರಾಧಿಗಳು ಹದಿನೈದು ದಿನಗಳೊಳಗೆ ದಂಡವನ್ನು ಠೇವಣಿ ರೂಪದಲ್ಲಿ ಕಟ್ಟಬೇಕು. ಪ್ರತಿಯೊಬ್ಬ ಆರೋಪಿ ತಲಾ ₹50 ಸಾವಿರ ವೈಯಕ್ತಿಕ ಬಾಂಡ್ ಕೋರ್ಟ್‌ಗೆ ಸಲ್ಲಿಸಬೇಕು. ತಲಾ ಒಬ್ಬರ ಶ್ಯೂರಿಟಿ ಒದಗಿಸಬೇಕು ಎಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಸುಳ್ಯದ ನ್ಯಾಯಾಲಯದಿಂದ ತರಿಸಲಾದ ದಾಖಲೆಗಳ ಆಧಾರದಲ್ಲಿ ನವೆಂಬರ್ 8 ರಿಂದ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ. ಹರೀಶ್ ಕಂಜಿಪಿಲಿ ಮತ್ತವರ ತಂಡದ ಪರವಾಗಿ ವಕೀಲ ಮಹೇಶ್ ಕಜೆ
ವಾದಿಸಿದ್ದರು.

2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸ್ವತಿ ಕಾಮತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಅವರ ಜತೆಗಿದ್ದ ಬಿಜೆಪಿ ಕಾರ್ಯಕರ್ತರಿಗೆ ಸುಳ್ಯ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆಯ ತೀರ್ಪನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಅಮಾನತು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT