×
ADVERTISEMENT
ಈ ಕ್ಷಣ :
ADVERTISEMENT

ಅಕ್ಟೋಬರ್‌ನಲ್ಲಿ ಮಳೆ: ಪ್ರವಾಸಿಗರಿಗೆ ಸುಗ್ಗಿ

ಕುದುರೆಮುಖ ಉದ್ಯಾನ: ಆಕರ್ಷಿಸುತ್ತಿವೆ ಜಲಪಾತಗಳು
Published : 13 ಅಕ್ಟೋಬರ್ 2021, 7:36 IST
ಫಾಲೋ ಮಾಡಿ
Comments

ಕಳಸ: ತಾಲ್ಲೂಕು ವ್ಯಾಪ್ತಿಯ ರಮಣೀಯ ತಾಣವಾದ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ 2 ದಿನಗಳಿಂದ ಬಿರುಸಾದ ಮಳೆ ಸುರಿಯುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಅಲ್ಲಿನ ಚಿತ್ರಣವೇ ಬದಲಾಗಿದೆ.

ಬೆಳಿಗ್ಗೆ ಎಳೆ ಬಿಸಿಲಿನ ನಂತರ ಮಧ್ಯಾಹ್ನದ ವೇಳೆಗೆ ಒಂದೇ ಸಮನೆ ಧೋ ಎಂದು ಮಳೆ ಸುರಿಯುತ್ತಿದೆ. ಪರಿಣಾಮವಾಗಿ ಅಲ್ಲಿನ ಪರಿಸರದಲ್ಲಿ ಮಳೆಗಾಲದ ದೃಶ್ಯಗಳ ಪುನರ್‌ ಸೃಷ್ಟಿ ಆಗುತ್ತಿದೆ. ಉದ್ಯಾನದ ಹುಲ್ಲುಗಾವಲು ಹಚ್ಚ ಹಸುರಿನಿಂದ ಕಂಗೊಳಿಸುತ್ತಿವೆ.

ಈ ವೇಳೆಗೆ ಸೊರಗಬೇಕಿದ್ದ ಜಲಪಾತಗಳು ಮತ್ತೆ ಮೈದುಂಬಿ ಕೊಳ್ಳುತ್ತಿವೆ. ಹನುಮನಗುಂಡಿಯ ಸೂತನಬ್ಬಿ ಜಲಪಾತವನ್ನು ಮತ್ತೆ ಪ್ರವಾಸಿಗರಿಗೆ ತೆರೆಯಲಾಗಿದೆ. ಉದ್ಯಾನದಲ್ಲಿನ ನೀರಿನ ಹಳ್ಳಗಳು ಕೆಂಪು ನೀರಿನಿಂದ ರಭಸವಾಗಿ ಗಮ್ಯದ ಕಡೆಗೆ ಹರಿಯುತ್ತಿವೆ. ತುಂಗಾ, ಭದ್ರಾ ನದಿಗಳು ಮತ್ತೆ ಮೈದುಂಬಿವೆ.

ಕುದುರೆಮುಖ- ಕಾರ್ಕಳ ಹೆದ್ದಾರಿ ಬದಿಯಲ್ಲಿ ಸಾಗುವ ಪ್ರವಾಸಿಗರಿಗೆ ಈಗಿನ ಮಳೆಯು ರಮ್ಯ ಅನುಭವವನ್ನೇ ನೀಡುತ್ತಿದೆ. ಹೆದ್ದಾರಿ ಬದಿಯ ಧರೆಯಿಂದ ಇಳಿಯುವ ಮಳೆ ನೀರ ಒರತೆಗಳು ಜೂನ್– ಜುಲೈ ತಿಂಗಳ ನೆನಪನ್ನು ನೀಡುತ್ತಿದೆ. ದಟ್ಟವಾದ ಕಾರ್ಮೋಡವು ಅತ್ಯಂತ ಕಡಿಮೆ ಎತ್ತರದಲ್ಲಿ ಸಾಗಿ ಬೆಟ್ಟಗಳನ್ನು ಆವರಿಸಿಕೊಳ್ಳುವ ದೃಶ್ಯ ನೋಡುಗರನ್ನು ಪುಳಕಗೊಳಿಸುತ್ತಿದೆ. ಆದರೆ, ಉದ್ಯಾನ ವ್ಯಾಪ್ತಿಯಲ್ಲಿ ಹೆಚ್ಚು ಕಾಲ ನಿಲ್ಲುವಂತಿಲ್ಲ ಎಂಬ ನಿಯಮ ಇದೆ.

ಕುದುರೆಮುಖ ಗಿರಿಶ್ರೇಣಿಗೆ ಚಾರಣಕ್ಕೆ ಬರುವ ಪ್ರವಾಸಿಗರಿಗೆ ಅಕ್ಟೋಬರ್ ತಿಂಗಳಲ್ಲಿ ಬಿಸಿಲಿನ ಬದಲು ಮೋಡದಿಂದ ಕೂಡಿದ ತಂಪಾದ ಹವಾಮಾನ ಚಾರಣಕ್ಕೆ ಪೂರಕವಾಗಿದೆ.

ಮಳೆಯು ಮುಂದುವರಿದಿರುವುದು ಅಡಿಕೆ ಸಂಸ್ಕರಣೆಗೆ ಅಡ್ಡಿ ಆಗಿದೆ. ಆದರೆ, ಪ್ರವಾಸಿ ತಾಣಗಳಲ್ಲಿ ಹಸಿರಿನ ಪ್ರಮಾಣ ಹೆಚ್ಚುತ್ತಾ ನೀರಿನ ಒರತೆಗಳನ್ನೂ ಹೆಚ್ಚಿಸುತ್ತಾ ಇನ್ನಷ್ಟು ಪ್ರವಾಸಿಗರನ್ನು ಕೈ ಬೀಸಿ ಕಳಸ ತಾಲ್ಲೂಕಿಗೆ ಕರೆಯುತ್ತಿದೆ. ಪ್ರವಾಸೋದ್ಯಮದ ಮೂಲಕ ಪರ್ಯಾಯ ಉದ್ಯೋಗ, ಆದಾಯ ಸೃಷ್ಟಿಸುವ ಪ್ರಯತ್ನಕ್ಕೆ ಈಗಿನ ಮಳೆ ಪೂರಕ ವಾತಾವರಣ ಕಲ್ಪಿಸಿದೆ.

‘ಅದ್ಭುತ ಅನುಭವ’

‘ಮಳೆಗಾಲದಲ್ಲಿ ಜಿಗಣೆ ಇರುತ್ತದೆ ಎಂದು ಅಕ್ಟೋಬರ್‌ವರೆಗೆ ಕಾದು, ಈಗ ಟ್ರೆಕ್ಕಿಂಗ್‍ಗೆ ಬಂದಿದ್ದೆವು. ಆದರೆ, ಕುರಿಂಜಾಲು ಬೆಟ್ಟಕ್ಕೆ ಹೋಗಿ ಮರಳುವಾಗ ನಮ್ಮ ಕಾಲಿಗೆ ನೂರಾರು ಜಿಗಣೆಗಳು ಮೆತ್ತಿಕೊಂಡಿದ್ದವು. ಆದರೂ ಮಳೆಯಲ್ಲಿ ಈ ಅನುಭವ ಅದ್ಭುತವಾಗಿತ್ತು’ ಎಂದು ಬೆಂಗಳೂರಿನಿಂದ ಚಾರಣಕ್ಕೆ ಬಂದಿದ್ದ ವಿನಯ್ ಸಂತಸ ವ್ಯಕ್ತಪಡಿಸಿದರು.

ಕಳಸ ತಾಲ್ಲೂಕು ವ್ಯಾಪ್ತಿಯ ರಮಣೀಯ ತಾಣವಾದ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ 2 ದಿನಗಳಿಂದ ಬಿರುಸಾದ ಮಳೆ ಸುರಿಯುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ಅಲ್ಲಿನ ಚಿತ್ರಣವೇ ಬದಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT