ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಸಲುವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ಸುಪರ್ದಿಗೆ ವಹಿಸಲಾಗಿದ್ದ ನಾಯಂಡಹಳ್ಳಿಯಿಂದ ಕೆಂಗೇರಿವರೆಗಿನ ರಸ್ತೆಯನ್ನು ಮರಳಿ ಹಸ್ತಾಂತರ ಮಾಡಿಕೊಳ್ಳಲು ಬಿಬಿಎಂಪಿ ತಕರಾರು ತೆಗೆದಿದೆ. ತಾಂತ್ರಿಕ ದೋಷಗಳಿಂದಾಗಿ ಈ ರಸ್ತೆಯು ಪದೇ ಪದೇ ಹದಗೆಡುತ್ತಿರುವುದು ಬಿಬಿಎಂಪಿ ಚಿಂತೆಗೆ ಕಾರಣವಾಗಿದೆ.
ಏಳು ವರ್ಷಗಳ ಹಿಂದೆ ಮೈಸೂರು ರಸ್ತೆ– ಕೆಂಗೇರಿ ನಡುವಿನ ನಮ್ಮ ಮೆಟ್ರೊ ಎತ್ತರಿಸಿದ ಮಾರ್ಗದ ಕಾಮಗಾರಿ ಶುರುವಾದಾಗ ಮೈಸೂರು ರಸ್ತೆಯಲ್ಲಿ ನಾಯಂಡಹಳ್ಳಿ– ಕೆಂಗೇರಿವರೆಗಿನ ಸುಮಾರು 8 ಕಿ.ಮೀ ಉದ್ದದ ಭಾಗವನ್ನು ಬಿಎಂಆರ್‌ಸಿಎಲ್ ಸುಪರ್ದಿಗೆ ಬಿಬಿಎಂಪಿ ಬಿಟ್ಟುಕೊಟ್ಟಿತ್ತು. ಆ ಬಳಿಕ ಈ ರಸ್ತೆಯನ್ನು ಬಿಎಂಆರ್‌ಸಿಎಲ್ ನಿರ್ವಹಣೆ ಮಾಡುತ್ತಿದೆ.