×
ADVERTISEMENT
ಈ ಕ್ಷಣ :
ADVERTISEMENT

‘ಡಿ.ಜೆ.ಹಳ್ಳಿ ಘಟನೆ ಭಯೋತ್ಪಾದನಾ ಕೃತ್ಯ’–ಎಸ್‌ಡಿಪಿಐ ಮುಖಂಡನ ಜಾಮೀನು ಅರ್ಜಿ ವಜಾ

ಆರೋಪಿ ಎಸ್‌ಡಿಪಿಐ ಮುಖಂಡನ ಜಾಮೀನು ಅರ್ಜಿ ವಜಾ
ಫಾಲೋ ಮಾಡಿ
Comments

ಬೆಂಗಳೂರು: ’ಡಿ.ಜೆ. ಹಳ್ಳಿ (ದೇವರ ಜೀವನಹಳ್ಳಿ) ಹಾಗೂ ಕೆ.ಜಿ. ಹಳ್ಳಿ (ಕಾಡುಗೊಂಡನಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಮೇಲ್ನೋಟಕ್ಕೆ ಭಯೋತ್ಪಾದನಾ ಕೃತ್ಯಕ್ಕೆ ಸಮನಾಗಿದೆ‘ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಪ್ರಕರಣದ ಪ್ರಮುಖ ಆರೋಪಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಕೆ.ಜಿ. ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.

ಜಾಮೀನು ಕೋರಿ ಇಮ್ರಾನ್ ಅಹ್ಮದ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದ್ದು, ’ಅರ್ಜಿದಾರ ಎಸ್‌ಡಿಪಿಐ ಅಧ್ಯಕ್ಷರಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಮೇಲ್ನೋಟಕ್ಕೆ ಅವರ ವಿರುದ್ಧದ ಆರೋಪಗಳನ್ನು ನಂಬಲು ಸೂಕ್ತ ಕಾರಣಗಳಿವೆ‘ ಎಂದು ಹೇಳಿದೆ.

ವಿಚಾರಣೆಯಲ್ಲಿ ಎನ್‌ಐಎ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನಕುಮಾರ್, ’ಸಮಾಜದ ಕಾನೂನು ಮತ್ತು ಶಾಂತಿ ಪಾಲನೆ ಕಾಪಾಡುವ ಪೊಲೀಸರ ಮೇಲೆಯೇ ಹಲ್ಲೆ, ಪೊಲೀಸ್‌ ಠಾಣೆಯ ಮೇಲೆ ಪೆಟ್ರೋಲ್‌ ಎರಚಿ ಸುಡುವುದು ಭಯೋತ್ಪಾದನೆಯ ಕೃತ್ಯ. ಪೊಲೀಸರಿಗೇ ಹೀಗಾದರೆ ಶ್ರೀಸಾಮಾನ್ಯರ ರಕ್ಷಣೆ ಹೇಗೆ ಸಾಧ್ಯ. ಆರೋಪಿ ಎಸ್‌ಡಿಪಿಐ ಮುಖಂಡನಾಗಿದ್ದು ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡಿರುವ ಕಾರಣ ಜಾಮೀನು ನೀಡಬಾರದು‘ ಎಂದು ಪ್ರತಿಪಾದಿಸಿದ್ದರು.

ಪ್ರಕರಣವೇನು?: ’ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ಪಿ.ನವೀನ್‌ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರವಾದಿ ಮೊಹಮ್ಮದರ ಕುರಿತು ಅವಹೇಳನಕಾರಿ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ‘ ಎಂದು ಆರೋಪಿಸಿ 2020ರ ಆಗಸ್ಟ್‌ 11ರಂದು ರಾತ್ರಿ 8.45ರ ಸಮಯದಲ್ಲಿ ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆ ಮುಂದೆ ಜಮಾವಣೆಗೊಂಡಿದ್ದ ಗುಂಪು ನವೀನ್‌ ಬಂಧನಕ್ಕೆ ಒತ್ತಾಯಿಸಿತ್ತು.

ನಂತರ ಉದ್ರಿಕ್ತ ಗುಂಪು ಹಿಂಸಾಚಾರಕ್ಕೆ ತಿರುಗಿ ಡಿ.ಜೆ. ಹಳ್ಳಿ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿತ್ತು. ಕೆ.ಜಿ. ಹಳ್ಳಿ ಠಾಣೆಯ ಮುಂದೆಯೂ ದಾಂದಲೆ ನಡೆಸಿ ವಾಹನಗಳನ್ನು ಸುಟ್ಟು ಹಾಕಿತ್ತು. ಅಲ್ಲದೇ, ಅಖಂಡ ಶ್ರೀನಿವಾಸಮೂರ್ತಿ ಮನೆಗೂ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ– 1967ರ (ಯುಎಪಿಎ), ಭಾರತೀಯ ದಂಡ ಸಂಹಿತೆ–1860 ಮತ್ತು ಆಸ್ತಿಪಾಸ್ತಿ ನಷ್ಟ ಪ್ರತಿಬಂಧಕ ಕಾಯ್ದೆ–1984ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

’ಡಿ.ಜೆ. ಹಳ್ಳಿ (ದೇವರ ಜೀವನಹಳ್ಳಿ) ಹಾಗೂ ಕೆ.ಜಿ. ಹಳ್ಳಿ (ಕಾಡುಗೊಂಡನಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಮೇಲ್ನೋಟಕ್ಕೆ ಭಯೋತ್ಪಾದನಾ ಕೃತ್ಯಕ್ಕೆ ಸಮನಾಗಿದೆ‘ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಪ್ರಕರಣದ ಪ್ರಮುಖ ಆರೋಪಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಕೆ.ಜಿ. ಹಳ್ಳಿ ವಾರ್ಡ್ ಅಧ್ಯಕ್ಷ ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT