×
ADVERTISEMENT
ಈ ಕ್ಷಣ :
ADVERTISEMENT

ಅಶಕ್ತರಿಗೆ ಆಸರೆಯಾಗಲು ಜೀವನ ಮುಡಿಪಿಟ್ಟ ಸಾರಥಿ

ಸೇವೆಗಾಗಿ ವೃತ್ತಿ ತ್ಯಜಿಸಿದ ಚಾಲಕ l ಆಟೊವನ್ನೇ ಆಂಬುಲೆನ್ಸ್‌ ಆಗಿ ಮಾರ್ಪಾಡು
ಫಾಲೋ ಮಾಡಿ
Comments

ಬೆಂಗಳೂರು: ‘ನನಗೆ ನಿಮ್ಮ ಕೈಲಾಗಿದ್ದನ್ನು ನೀಡಿ ನಾನು ಬೇರೆಯವರಿಗೆ ನೆರವಾಗಲು ಸಹಾಯವಾಗುತ್ತದೆ...’   

–ಇವು ಆಟೊ ಚಾಲಕರೊಬ್ಬರ ವಾಹನದ ಮೇಲಿದ್ದ ಸಾಲುಗಳು. ಕುತೂಹಲದಿಂದ ನೋಡಿದಾಗ ಪಿಪಿಇ ಕಿಟ್‌ ಧರಿಸಿದ್ದ ವ್ಯಕ್ತಿಯೊಬ್ಬರು ಕಾಣಿಸಿದರು. ಇವರು ನಿರಂತರವಾಗಿ ಕೋವಿಡ್‌ ರೋಗಿಗಳ ಸೇವೆಯಲ್ಲಿ ತೊಡಗಿರುವ 42 ವರ್ಷದ ಅಬ್ದುಲ್‌ ಕೆ. ಸೌದಾಗರ್‌. 

ಬಡ ರೋಗಿಗಳು ಮತ್ತು ಅಶಕ್ತರ ಸೇವೆಗಾಗಿ ತಮ್ಮ ಜೀವನಕ್ಕೆ ಆಧಾರವಾಗಿದ್ದ ಆಟೊವನ್ನೇ ಚಿಕ್ಕ ಆಂಬುಲೆನ್ಸ್‌ಯನ್ನಾಗಿ ಮಾಡಿ ಸೇವೆ ಸಲ್ಲಿಸುತ್ತಿದ್ದಾರೆ. ಸೋಂಕಿತರು ಮತ್ತು ಸಾಮಾನ್ಯ ಜನರ ಅಂತ್ಯ ಸಂಸ್ಕಾರಕ್ಕೂ ಸೌದಾಗರ್‌ ನೆರವಾಗುತ್ತಿದ್ದಾರೆ.

‘2020ರ ಮಾರ್ಚ್‌ನಲ್ಲಿ ಕೋವಿಡ್‌ ಆರಂಭವಾದ ಬಳಿಕ ಜನರು ಸಂಕಷ್ಟ ಅನುಭವಿಸುತ್ತಿರುವುದು ನೋವುಂಟು ಮಾಡಿತು. ಅಂದಿನಿಂದ ಆಟೋವನ್ನೇ ಚಿಕ್ಕ ಆಂಬುಲೆನ್ಸ್‌ ಮಾಡಿದೆ. ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿದೆ. ಅವರಿಗೆ ಆಹಾರ ಮತ್ತು ಔಷಧಿ ಸಹ ಪೂರೈಸುತ್ತೇನೆ. ಹಣವಿಲ್ಲದ ರೋಗಿಗಳಿಗೆ ಊಟ, ನೀರಿನ ವ್ಯವಸ್ಥೆ ಮಾಡುತ್ತೇನೆ. 24 ಗಂಟೆಯೂ ಜನರ ಸೇವೆಗೆ ಸಿದ್ಧ. ನನ್ನ ಬದುಕಿನದುದ್ದಕ್ಕೂ ಈ ಕಾರ್ಯ ಮುಂದುವರಿಯುತ್ತದೆ’ ಎಂದು ನಿರ್ಲಿಪ್ತವಾಗಿ ನುಡಿಯುತ್ತಾರೆ ಸೌದಾಗರ್‌.

‘ಕಡು ಬಡವರೊಬ್ಬರಿಗೆ ಆಸ್ಪತ್ರೆಗೆ ಶುಲ್ಕ ಪಾವತಿಸಲು ಮತ್ತು ಔಷಧಿಗೂ ದುಡ್ಡು ಇರಲಿಲ್ಲ. ಅವರಿಗೆ ಅಗತ್ಯವಿದ್ದ ₹ 2 ಸಾವಿರ ನೀಡಲು ನಾನು ಜನರ ಬಳಿ ಹೋಗಿ ಭಿಕ್ಷೆ ಬೇಡಿದೆ. ಈ ಬಗ್ಗೆ ಕೀಳರಿಮೆ ಇಲ್ಲ. ಜನರು ಹಣ ನೀಡಿದರೆ ವಾಹನದ ಪೆಟ್ರೋಲ್‌ಗೆ ಬಳಸುತ್ತೇನೆ. ನಾನು ಹಸಿವಿನಿಂದ ಇರುತ್ತೇನೆಯೇ ಹೊರತು ವೈಯಕ್ತಿಕ ಸುಖಕ್ಕಾಗಿ ಯಾವುದನ್ನೂ ದುರುಪಯೋಗಪಡಿಸಿಕೊಳ್ಳುವುದಿಲ್ಲ’ ಎನ್ನುವುದು ಅವರ ಸ್ಪಷ್ಟ ನುಡಿಗಳು.

ಉಚಿತ ಸೇವೆ ಸಲ್ಲಿಸುತ್ತಿರುವ ಸೌದಾಗರ್‌ ಅವರು, ಹೆಬ್ಬಾಳದ ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಮಡದಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಇವರ ಸೇವೆಗೆ ಕುಟುಂಬ ಬೆಂಬಲ ನೀಡಿದೆ. ಸೋದರ ಮಾವ ಇವರ ಕುಟುಂಬದ ಖರ್ಚು ವೆಚ್ಚವನ್ನು ನೋಡಿಕೊಳ್ಳುತ್ತಿದ್ದಾರೆ. ಶಾಸಕರು, ಕಾರ್ಪೊರೇಟರ್‌ಗಳು ಸೌದಾಗರ್‌ ಮಕ್ಕಳ ಶಿಕ್ಷಣ, ಕುಟುಂಬದ ದಿನಸಿ ಮೊದಲಾದವುಗಳ ವೆಚ್ಚ ನಿರ್ವಹಿಸುತ್ತಿದ್ದಾರೆ. 

ಜೀವನ ನಿರ್ವಹಣೆಗೆ ಸೌದಾಗಾರ್‌ ಅವರು ಸಾಲ ಪಡೆದು ಆಟೊ ಖರೀದಿಸಿದ್ದರು. ಆದರೆ, ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಈಗ ಅವರ ಆಟೊವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಿಂದ ಅವರು ಎದೆಗುಂದಲಿಲ್ಲ. ತಮ್ಮ ಸ್ನೇಹಿತ ನೀಡಿದ ದ್ವಿಚಕ್ರ ವಾಹನದಲ್ಲಿ ಎಂದಿನಂತೆ ಸೇವೆ ಮುಂದುವರಿಸಿದ್ದಾರೆ.

ಆಟೊ ಆಂಬುಲೆನ್ಸ್‌ನಲ್ಲಿನ ವಸ್ತುಗಳು

30 ಲೀಟರ್‌ ಆಮ್ಲಜನಕ ಸಿಲಿಂಡರ್‌, ಪಲ್ಸ್‌ ಆಕ್ಸಿಮೀಟರ್‌, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ಸ್ಯಾನಿಟೈಸರ್‌ ಬಾಟಲ್‌, ಮಾಸ್ಕ್‌ಗಳು, ಉಷ್ಣಮಾಪಕ ಇತ್ಯಾದಿ ಸಾಮಗ್ರಿಗಳು.

ಸ್ಕೂಟರ್‌ನಲ್ಲಿ ಸ್ಯಾನಿಟೈಸರ್‌, ಮಾಸ್ಕ್‌, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಿಸಲಾಗಿದೆ.

-ಅಬ್ದುಲ್‌ ಕೆ.ಸೌದಾಗರ್‌: 9986903424

  ‘ನನಗೆ ನಿಮ್ಮ ಕೈಲಾಗಿದ್ದನ್ನು ನೀಡಿನಾನು ಬೇರೆಯವರಿಗೆ ನೆರವಾಗಲು ಸಹಾಯವಾಗುತ್ತದೆ...’ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT