×
ADVERTISEMENT
ಈ ಕ್ಷಣ :
ADVERTISEMENT

ತಂಬಾಕು ನಿಯಂತ್ರಣ: ಬೆಂಗಳೂರಿಗೆ ₹1.23 ಕೋಟಿ ಬಹುಮಾನದ ಡಬ್ಲ್ಯುಎಚ್‌ಒ ಪ್ರಶಸ್ತಿ

ನ್ಯೂಯಾರ್ಕ್: ತಂಬಾಕು ನಿಯಂತ್ರಣದ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳನ್ನು(ಎನ್‌ಸಿಡಿ) ತಡೆಗಟ್ಟುವಲ್ಲಿ ಮಾಡಿದ ಸಾಧನೆಗಾಗಿ ಗುರುತಿಸಲ್ಪಟ್ಟ ಐದು ಜಾಗತಿಕ ನಗರಗಳಲ್ಲಿ ಬೆಂಗಳೂರು ಸ್ಥಾನ ನಡೆದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಜಾಗತಿಕ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ಬೆಂಗಳೂರಿಗೆ 1,50,000 ಡಾಲರ್(₹1,23,99,975) ಮೊತ್ತದ ಬಹುಮಾನವಿರುವ ಪ್ರಶಸ್ತಿ ಸಿಕ್ಕಿದೆ.
Published : 16 ಮಾರ್ಚ್ 2023, 9:47 IST
Last Updated : 16 ಮಾರ್ಚ್ 2023, 10:12 IST
ಫಾಲೋ ಮಾಡಿ
Comments

ನ್ಯೂಯಾರ್ಕ್: ತಂಬಾಕು ನಿಯಂತ್ರಣದ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳನ್ನು(ಎನ್‌ಸಿಡಿ) ತಡೆಗಟ್ಟುವಲ್ಲಿ ಮಾಡಿದ ಸಾಧನೆಗಾಗಿ ಗುರುತಿಸಲ್ಪಟ್ಟ ಐದು ಜಾಗತಿಕ ನಗರಗಳಲ್ಲಿ ಬೆಂಗಳೂರು ಸ್ಥಾನ ನಡೆದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಈ ಜಾಗತಿಕ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ಬೆಂಗಳೂರಿಗೆ 1,50,000 ಡಾಲರ್(₹1,23,99,975) ಮೊತ್ತದ ಬಹುಮಾನವಿರುವ ಪ್ರಶಸ್ತಿ ಸಿಕ್ಕಿದೆ.

ಜನರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿದ ಮತ್ತು ಸಾಂಕ್ರಾಮಿಕವಲ್ಲದ(ಎನ್‌ಸಿಡಿ) ರೋಗಗಳನ್ನು ತಡೆಯಲು ಸಮರ್ಥನೀಯ ಮತ್ತು ಶಾಶ್ವತವಾದ ಉಪಕ್ರಮಗಳನ್ನು ಕೈಗೊಂಡ ನಗರಗಳನ್ನು ಗುರುತಿಸಲಾಗಿದ್ದು, ಆ ಮಾದರಿ ನಗರಗಳು ಅನುಸರಿಸಿದ ಕ್ರಮಗಳನ್ನು ಇತರೆಡೆಗೂ ಅನ್ವಯಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯ ಪ್ರಕಾರ, ಪ್ರಶಸ್ತಿ ವಿಜೇತ ಐದು ನಗರಗಳು ತಮ್ಮ ಕೆಲಸವನ್ನು ಮುಂದುವರಿಸಲು 1,50,000 ಡಾಲರ್(₹1,23,99,975)ಬಹುಮಾನ ಪಡೆದಿವೆ.

ತಂಬಾಕು ನಿಯಂತ್ರಣ, ಅದರಲ್ಲೂ ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಯಂತ್ರಣ ಹಾಗೂ ಸಾರ್ವಜನಿಕ ಧೂಮಪಾನ ನಿಷೇಧಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಆದೇಶಗಳ ಅನುಸರಣೆಯನ್ನು ಸುಧಾರಿಸುವ ಪ್ರಯತ್ನಗಳಿಗಾಗಿ ಬೆಂಗಳೂರಿಗೆ ಈ ಬಹುಮಾನ ಸಿಕ್ಕಿದೆ.

‘ಮೇಯರ್‌ಗಳು ತಮ್ಮ ನಾಗರಿಕರ ಆರೋಗ್ಯವನ್ನು ರಕ್ಷಿಸಲು ಕಠಿಣ ಕ್ರಮಗಳ ಮೂಲಕ ಹೇಗೆ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಈ ಐದು ನಗರಗಳು ಸಾಕ್ಷಿಯಾಗಿವೆ’ ಎಂದು ಡಬ್ಲ್ಯುಎಚ್‌ಒ ಮಹಾಪ್ರಧಾನ ನಿರ್ದೇಶಕ ಡಾ ಟೆಡ್ರೊಸ್ ಅಧಾನಮ್ ಗೆಬ್ರೆಯೆಸಸ್ ಹೇಳಿದ್ದಾರೆ.

‘ಉತ್ತಮ ಆರೋಗ್ಯಕ್ಕೆ ಉತ್ತೇಜನ ಮತ್ತು ಆರೋಗ್ಯ ರಕ್ಷಿಸುವ ನಗರಗಳನ್ನು ನಿರ್ಮಿಸಲು ವಿಶ್ವದಾದ್ಯಂತ ಮೇಯರ್‌ಗಳನ್ನು ಬೆಂಬಲಿಸುವ ಮೂಲಕ ಪಾಲುದಾರಿಕೆಯಲ್ಲಿ ಕೆಲಸ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಬದ್ಧವಾಗಿದೆ’ಎಂದೂ ಅವರು ಹೇಳಿದ್ದಾರೆ.

ಮಾದಕ ದ್ರವ್ಯ ನಿಯಂತ್ರಣ ಕ್ರಮಗಳಿಗಾಗಿ ಅಥೆನ್ಸ್ ನಗರಕ್ಕೆ ಈ ಪ್ರಶಸ್ತಿ ನೀಡಲಾಗಿದೆ. ಜನನಿಬಿಡ ರಸ್ತೆಯಲ್ಲಿ ಬೈಕ್ ಮಾರ್ಗವನ್ನು ಪ್ರಾರಂಭಿಸುವ ಮೂಲಕ ರಸ್ತೆ ಸುರಕ್ಷತೆ ಮತ್ತು ಸಕ್ರಿಯ ಚಲನಶೀಲತೆಯನ್ನು ಸುಧಾರಿಸಿದ್ದಕ್ಕಾಗಿ ಮೆಕ್ಸಿಕೊ ನಗರ ಈ ಪಟ್ಟಿ ಸೇರಿದೆ. ಇದರಿಂದಾಗಿ ಮೆಕ್ಸಿಕೊದಲ್ಲಿ ಸೈಕ್ಲಿಸ್ಟ್‌ಗಳ ಪ್ರಮಾಣ ಶೇಕಡ 275ರಷ್ಟು ಹೆಚ್ಚಿದೆ.

ಸರ್ಕಾರಿ ಕಚೇರಿಗಳು ಮತ್ತು ಕೆಲವು ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ ಆಹಾರ ತಯಾರಿಕೆ ಹಾಗೂ ಮಾರಾಟದಲ್ಲಿ ಪೌಷ್ಟಿಕಾಂಶದ ಮಾನದಂಡಗಳನ್ನು ಸ್ಥಾಪಿಸಿದ್ದಕ್ಕಾಗಿ ಮಾಂಟೆವಿಡಿಯೊ ನಗರಕ್ಕೆ ಈ ಗೌರವ ಸಿಕ್ಕಿದೆ.

ಜನರ ಆರೋಗ್ಯ ಸೂಚಕಗಳ ಜಾಡು ಹಿಡಿಯುವ ಆನ್‌ಲೈನ್ ಸಾರ್ವಜನಿಕ ಆರೋಗ್ಯ ಡೇಟಾ ಉಪಕರಣವನ್ನು ಪ್ರಾರಂಭಿಸುವ ಮೂಲಕ ಸಾರ್ವಜನಿಕ ಆರೋಗ್ಯ ಡೇಟಾವನ್ನು ಸುಲಭವಾಗಿ ದೊರೆಯುವಂತೆ ಮಾಡಿದ್ದಕ್ಕಾಗಿ ಕೆನಡಾದ ವ್ಯಾಂಕೋವರ್ ನಗರವು ವಿಶ್ವ ಆರೋಗ್ಯ ಸಂಸ್ಥೆಯ ಬಹುಮಾನ ಗಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT