×
ADVERTISEMENT
ಈ ಕ್ಷಣ :
ADVERTISEMENT

ತಾಲ್ಲೂಕಿನಲ್ಲಿ ಒಂದೇ ದಿನ ಸರಾಸರಿ 44.7 ಮಿ.ಮೀ ಮಳೆ

ಮುಂದುವರಿದ ವರುಣನ ಅರ್ಭಟ; ಧರೆಗುರಳಿದ ಮನೆಗಳು
Published : 7 ಮಾರ್ಚ್ 2023, 11:22 IST
Last Updated : 7 ಮಾರ್ಚ್ 2023, 11:22 IST
ಫಾಲೋ ಮಾಡಿ
Comments

ಸೇಡಂ : ತಾಲ್ಲೂಕಿನಲ್ಲಿ ಕಳೆದ 2–3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಬಿತ್ತನೆ ಸ್ಥಗಿತಗೊಂಡಿದೆ. ಇದರಿಂದಾಗಿ ರೈತರಲ್ಲಿ ನಿರಾಸೆ ಮೂಡಿದ್ದು, ಮುಂಗಾರು ಬೆಳೆ ಬಿತ್ತನೆಗೆ ಮಳೆ ಬಿಡುವು ಮಾಡಿಕೊಡಬೇಕು ಎನ್ನುವ ಜಪದಲ್ಲಿ ರೈತರಿದ್ದಾರೆ.
‘ಭಾನುವಾರ ಭಾರಿ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು. ತಾಲ್ಲೂಕಿನ ಮುಧೋಳ ಗ್ರಾಮದ ವೆಂಕಟಪ್ಪ ಜಟ್ಟೆಪ್ಪಾ ಮತ್ತು ಮಾಶಮ್ಮ ಹುಸೇನಪ್ಪ ಎಂಬುವವರ ಸುರಿದ ಮಳೆಯಿಂದ ಮನೆಗಳು ಧರೆಗುರುಳಿವೆ. ಕುಟುಂಬದ ಸದಸ್ಯರು ಮನೆಯಿಂದ ಹೊರಗಡೆ ಇದ್ದ ಪರಿಣಾಮ ಅಪಾಯ ಸಂಭವಿಸಿಲ್ಲ’ ಎಂದು ಕಂದಾಯ ಅಧಿಕಾರಿ ವೆಂಕಟಪ್ಪ ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ಹಾಗೂ ಸೋಮವಾರ ಮಧ್ಯಾಹ್ನದವರೆಗೂ ಮಳೆಯ ಆರ್ಭಟ ಮುಂದುವರಿದಿತ್ತು. ಸೋಮವಾರ ಸಹ ಮಳೆಯ ಅರ್ಭಟ ಮುಂದುವರಿದ ಪರಿಣಾಮ ಶಾಲಾ–ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡಬೇಕಾಯಿತು. ಮಧ್ಯಾಹ್ನವರೆಗೂ ಯಾವುದೇ ವ್ಯಾಪಾರ, ವಹಿವಾಟು ಹಾಗೂ ಕಾರ್ಯಚಟುವಟಿಕೆಗಳು ಆರಂಭಗೊಳ್ಳಲಿಲ್ಲ.
ಪಟ್ಟಣದ ಗಣೇಶ ನಗರ, ಚೋಟಿಗಿರಣಿ, ಸಣ್ಣ ಅಗಸಿ ಸೇರಿದಂತೆ ವಿವಿಧ ಬಡಾವಣೆಯ ಜನರು ಕೆಸರಿನಿಂದ ಕೂಡಿದ ರಸ್ತೆಯಲ್ಲಿಯೇ ಸಂಚರಿಸುವಂತಾಯಿತು. ತಾಲ್ಲೂಕಿನ, ಮುಧೋಳ, ಕೋಡ್ಲಾ, ಆಡಕಿ, ಕೋಲ್ಕುಂದಾ, ಕುರಕುಂಟಾ, ಹುಳಗೋಳ, ಗೌಡನಹಳ್ಳಿ, ಬೆನಕನಳ್ಳಿ, ತೆಲ್ಕೂರ, ಮೀನಹಾಬಾಳ, ಮದನಾ, ಸಂಗಾವಿ, ಕುಕ್ಕುಂದಾ, ಇಟಕಾಲ್, ಹಂದರಕಿ, ರಿಬ್ಬನಪಲ್ಲಿ, ನೀಲಹಳ್ಳಿ, ಹೊಸಳ್ಳಿ, ಸೇರಿದಂತೆ ವಿವಿಧೆಡೆಗಳಲ್ಲಿ ಮಳೆರಾಯನ ಕೃಪೆ ಹೆಚ್ಚಿತ್ತು.
ಈ ವರ್ಷದಲ್ಲಿಯೇ ಭಾನುವಾರ ಸುರಿದ ಮಳೆ ಅತ್ಯಂತ ಗರಿಷ್ಠ ಮಳೆಯಾಗಿದೆ. ಸೇಡಂ ಪಟ್ಟಣದಲ್ಲಿ 93.0 ಮಿ.ಮೀ ಅತಿಹೆಚ್ಚು ಮಳೆಯಾದರೆ, ತಾಲ್ಲೂಕಿನ ಕೋಡ್ಲಾ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 8.4 ಮಿ.ಮೀ ಅತಿ ಕಡಿಮೆ ಮಳೆಯಾಗಿದೆ. ಆಡಕಿ 28.0 ಮಿ.ಮೀ, ಮುಧೋಳ 72.0 ಮಿ.ಮೀ ಹಾಗೂ ಕೋಲ್ಕುಂದಾ 22.30ಮಿ.ಮೀ ಮಳೆಯಾಗಿದೆ. ಭಾನುವಾರ ಒಂದೇ ದಿನ 223.7 ಮಿ.ಮೀ ಮಳೆಯಾಗಿರುವುದು ಹವಾಮಾನ ಇಲಾಖೆಯ ಮೂಲಗಳು ದೃಢಪಡಿಸಿವೆ.
ಜೂನ್ 11ರಿಂದ ಆರಂಭಗೊಂಡ ಮಳೆ ಜೂನ್‌ 12, 15, 16, 17, 18 ಮತ್ತು 19ರವರೆಗೆ ತಾಲ್ಲೂಕಿನ ವಿವಿಧೆಡೆ ಬಿದ್ದಿದೆ. ‘ಸೇಡಂ 159. 5 ಮಿ.ಮೀ, ಆಡಕಿ 135.2 ಮಿ.ಮೀ, ಮುಧೋಳ 244.0 ಮಿ.ಮೀ, ಕೋಡ್ಲಾ 120.4 ಮತ್ತು ಕೋಲ್ಕುಂದಾ 223.2 ಹೋಬಳಿ ಕೇಂದ್ರಗಳಲ್ಲಿ ಈ ವರ್ಷ ಸುರಿದಿದೆ. ಒಟ್ಟಾರೆ 882.3 ಮಿ.ಮೀ ಅಂದರೆ, 174.4 ಮಿ.ಮೀ ಸರಾಸರಿ ಮಳೆ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ಸುರಿದಿದೆ’ ಎಂದು ಹವಾಮಾನ ಇಲಾಖೆಯ ಪರಿವೀಕ್ಷಕ ಜಾವಿದ್ ನಿರ್ನಾವಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT