×
ADVERTISEMENT
ಈ ಕ್ಷಣ :
ADVERTISEMENT

ಕರಿಮಣಿ ಅಂದರೇನು ಕಣ್ಮಣಿ?

Bhoomika-Feb24_ಕರಿಮಣಿ ಅಂದರೇನು ಕಣ್ಮಣಿ?
Published 23 ಫೆಬ್ರುವರಿ 2024, 12:13 IST
Last Updated 23 ಫೆಬ್ರುವರಿ 2024, 12:13 IST
Comments
ಅಕ್ಷರ ಗಾತ್ರ

ಸುಶೀಲಾ ಡೋಣೂರ

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

ಎಂದರಲ್ಲವೇ ಕುವೆಂಪು? ಹೆಣ್ಣಿನ ಮನಸನ್ನೂ, ಅವಳ ಪಾವಿತ್ರ್ಯವನ್ನು, ಗಂಡಿನ ಆಯಸ್ಸು–ಶ್ರೇಯಸ್ಸನ್ನು ಕರಿಮಣಿಗೆ ಜೋಡಿಸಿ ಅವಳ ಕತ್ತಿಗೆ ಕಟ್ಟುವವರು ಹಾಗೂ ಅದಕೆ ಕುತ್ತಿಗೆ ಒಡ್ಡುವವರು ಕುವೆಂಪು ಬರೆದ ಈ ಸಾಲುಗಳನ್ನು ಅರ್ಥ ಮಾಡಿಕೊಂಡರೆ ಕರಿಮಣಿ ಮಾಲಿಕತ್ವದ ಕಗ್ಗಂಟು ಬಿಚ್ಚಿಕೊಂಡೀತು...

ಕರಿಮಣಿ ಮಾಲಿಕ ನೀನಲ್ಲ...

ತೆರೆಯ ಮೇಲೆ ಬಂದು ಹೋದ ದಶಕಗಳ ನಂತರ ಈಗೀಗ ಗಂಡಸರ ನಿದ್ದೆ ಕಸಿಯುತ್ತಿರುವ, ಹೆಂಗಸರ ನೆಮ್ಮದಿ ಕಸಿಯುತ್ತಿರುವ ಹಾಡಿದು. ಎಂದೂ ಕತ್ತಿನಲ್ಲಿ ತಾಳಿ ಇದೆಯಾ ಇಲ್ಲವಾ ಅಂತನ್ನುವುದನ್ನೇ ಗಮನಿಸದ ಗಂಡ ಕೂಡ ಈಗೀಗ ‘ಏನೇ, ಕತ್ತಲ್ಲಿ ಕರಿಮಣಿನೇ ಕಾಣ್ತಾ ಇಲ್ಲ?’ ಅಂತ ತಗಾದೆ ತೆಗೆಯುವ ಮಟ್ಟಕ್ಕೆ, ಕರಿಮಣಿಯನ್ನು ಬೀರುವಿನ ಡ್ರಾವರ್‌ನಲ್ಲಿ ಬಿಚ್ಚಿಟ್ಟು ಮರೆತು ಹೋದ ಗೆಳತಿಯರು ಅದನ್ನು ತಡಕಾಡಿ ನೋಡುವ ಮಟ್ಟಕ್ಕೆ ಈ ಹಾಡುವ ಸಂಸಾರದಲ್ಲಿ ತಲೆಹಾಕುತ್ತಿದೆ. ಅಷ್ಟಕ್ಕೂ ಕತ್ತಿನಲ್ಲಿರುವ ಕರಿಮಣಿಗೂ, ಮನಸಿನಲ್ಲಿರುವ ಭಾವತೇರಿಗೂ ಎಲ್ಲಿಂದ ಎಲ್ಲಿದೆ ಸಂಬಂಧ? ಕರಿಮಣಿ ಧರಿಸಿದ ಮಾತ್ರಕ್ಕೆ ಮನಸಿನಲ್ಲಿ ಯಾರೂ ಸುಳಿಯುವುದಿಲ್ಲ ಅಂತರ್ಥವೇ? ಅಥವಾ ಕರಿಮಣಿಯ ಕಾವಲಿಲ್ಲದ ಮನಸು ಕಂಡಕಂಡವರ ಚಿತ್ರಕ್ಕೆ ಕ್ಯಾನ್ವಾಸಾಗುತ್ತದೆ ಅಂತಲೇ? ಅನುಬಂಧ ಗಟ್ಟಿಯಿದ್ದಲ್ಲಿ ಕರಿಮಣಿಗೇನು ಕೆಲಸ? ಒಲವು ಬತ್ತಿದ ಗಳಿಗೆ ಕರಿಮಣಿ ಹೇಗೆ ತಾನೆ ಆ ಸಂಬಂಧ ಉಳಿಸೀತು? ಒಟ್ಟೂ ಈ ಬಾಂಧವ್ಯ ಕತ್ತಿನಲ್ಲಿರುವ ಕರಿಮಣಿಯಿಂದ ನಿರ್ಧರಿಸುವಷ್ಟು ಅಗ್ಗವಾದುದಂತೂ ಅಲ್ಲ.

ಹೆಣ್ಣನ್ನು ತನ್ನ ಅಧೀನದಲ್ಲಿಟ್ಟುಕೊಳ್ಳುವ, ಆ ಹೆಣ್ಣು ತನಗೇ ಸಂಬಂಧಿಸಿದವಳು ಎನ್ನುವ ಹಕ್ಕು ಸಾಧಿಸುವ ಪುರುಷಾಕಾರದ ಸಂಕೇತವಾಗಿ, ದಾಸ್ಯತ್ವದ ಒಂದು ತಂತುವಾಗಿ ರೂಪತಳೆದ ಕರಿಮಣಿ, ಅನಂತರದ ದಿನಗಳಲ್ಲಿ ಒಂದು ನಂಬಿಕೆಯಾಗಿ, ಸಂಪ್ರದಾಯವಾಗಿ, ಆಚಾರವಾಗಿ, ಆಡಂಬರವಾಗಿ, ಆಭರಣವಾಗಿ ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತ ತನ್ನ ಅರ್ಥ, ಮೌಲ್ಯಗಳನ್ನೂ ಬದಲಿಸಿಕೊಳ್ಳುತ್ತ ಬಂದಿದೆ. ಇದೀಗ ಇದು ಹೆಣ್ಣಿನ ಬದ್ಧತೆ, ಬಾಧ್ಯತೆ, ಘನತೆಗಳನ್ನು ನಿರ್ಧರಿಸುವ ಘನ–ಗಂಭೀರ ಧಾತುವಾಗಿ ಹೊರಹೊಮ್ಮುತ್ತಿರುವ ಬಗೆ ಸೋಜಿಗ ಹುಟ್ಟಿಸುತ್ತಿದೆ.

ಅನಾದಿಕಾಲದಿಂದಲೂ ಕರಿಮಣಿಗೂ, ಹೆಣ್ಣಿನ ಮನಸಿಗೂ–ಘನತೆಗೂ ಹಾಗೂ ಗಂಡನ ಆಯಸ್ಸ–ಶ್ರೇಯಸ್ಸ–ಆರೋಗ್ಯಕ್ಕೂ ಸಂಬಂಧ ಬೆಸೆಯುತ್ತ ಬಂದಿದ್ದೇವೆ. ವಿವಾಹಿತ ಮಹಿಳೆಯರು ಮಾಂಗಲ್ಯ ಧರಿಸಲೇಬೇಕು. ಅದೇ ಶುಭ–ಶೋಭೆ, ಸೌಭಾಗ್ಯ. ಮಾಂಗಲ್ಯ–ಕಾಲುಂಗರ ಧರಿಸದೇ ಹೋದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಎನ್ನುವವರ ದೊಡ್ಡ ಸಾಲೇ ಇದೆ. ಬೆಳಗ್ಗೆದ್ದು ಕರಿಮಣಿಯನ್ನು ಕಣ್ಣಿಗೊತ್ತಿಕೊಂಡು ಮೇಲೇಳುವವರು ಈಗಲೂ ಬೆರಳೆಣಿಕೆಗಂತೂ ಸಿಕ್ಕೇ ಸಿಗುತ್ತಾರೆ. ಮಾಂಗಲ್ಯವನ್ನು ಧರಿಸುವುದರ ಹಿಂದೆ ವಿಜ್ಞಾನವೂ ಅಡಗಿದೆ ಎನ್ನುತ್ತ ಈ ನಂಬಿಕೆಯನ್ನು ಪೊರೆಯುವವರದು ಮತ್ತೊಂದು ವರ್ಗ. ಆದರೆ, ತಾಳಿ ಎಂದರೆ ದಾಸ್ಯದ ಸಂಕೇತ, ಪರಸ್ಪರ ಪ್ರೀತಿಯಿಂದ ಬದುಕುವ ವಾಗ್ದಾನಕ್ಕೆ ಕರಿಮಣಿ ಎನ್ನುವ ಅಂಕೆ ಯಾಕೆ ಬೇಕು? ಎಂದು ತಾಳಿಯನ್ನು ಧಿಕ್ಕರಿಸಿ, ವಿವಾಹವಾಗಿ ಅರ್ಧ ಶತಕ ಕಳೆದರೂ ಅನ್ಯೋನ್ಯವಾಗಿರುವವರೂ ಇದ್ದಾರೆ. ಸಂಪ್ರದಾಯಸ್ತರ ಕಣ್ಣಿಗೆ ಕಾಣುವಂತೆ, ಪ್ರಗತಿಪರರ ಕಣ್ಣಿಗೆ ಕಾಣದಂತೆ ರೂಪಾಂತರಗೊಂಡ ಕರಿಮಣಿ ವಿನ್ಯಾಸಗಳಿಗೆ ಜೋತು ಬಿದ್ದ ಮಹಿಳಾಮಣಿಗಳದ್ದು ಮತ್ತೊಂದು ವರ್ಗ. ಅದನ್ನು ಒಂದು ಅಂದದ ಆಭರಣದ ಸಾಲಿಗೆ ಸೇರಿಸಿ ತಮಗೆ ಬೇಕಾದಾಗ ಧರಿಸುತ್ತ, ಬೇಡವೆನಿಸಿದಾಗ ಬಿಚ್ಚಿಡುವ ಉದಾರಿಗಳೂ ಕಡಿಮೆ ಏನಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್‌ ಗುಂಪುಗಳಲ್ಲಿ, ಟೀ ಟೇಬಲ್‌ಗಳಲ್ಲಿ, ಅಷ್ಟೇ ಏಕೆ, ಕಾನ್ಫರನ್ಸ್‌ ಹಾಲ್‌ಗಳತನಕ ಎಲ್ಲಾ ಕಡೆ ಕರಿಮಣಿ ಮಾಲಿಕತ್ವದ ಕಗ್ಗಂಟು ಛಾಪು ಮೂಡಿಸುತ್ತಿರುವ ಈ ಹೊತ್ತು ಕರಿಮಣಿಯನ್ನು ಹೆಣ್ಮಕ್ಕಳು ಗ್ರಹಿಸಿರುವ ಪರಿ ಎಂಥದ್ದು? ಯಾರಿಗೆಲ್ಲಾ ಇದು ಈಗಲೂ ಸೌಭಾಗ್ಯದ ಸಂಕೇತವಾಗಿ ಉಳಿದುಕೊಂಡಿದೆ? ಯಾರಿಗೆ ಇದು ಆಭರಣದ ಒಂದು ಪ್ರಕಾರವಷ್ಟೇ ಆಗಿದೆ? ಯಾರಿಗೆ ದಾಸ್ಯದ ಸಂಕೇತ? ಯಾರಿಗೆಲ್ಲಾ ದಿರಿಸಿಗೆ ತಕ್ಕಂತೆ ಧರಿಸುವ ಅಂದದ ಆಭರಣ? ಅವರವರ ಕಣ್ಣೋಟದಲ್ಲಿ ಕರಿಮಣಿಗಿರುವ ಜಾಗ ಯಾವುದು? ಕೇಳಿದರೆ ಒಬ್ಬೊಬ್ಬರದು ಒಂದೊಂದು ನಂಬುಗೆ.

ಘನತೆ ಇರುವುದು ಕರಿಮಣಿಯಲ್ಲಲ್ಲ...

ನಮ್ಮ ತಂದೆ ಬಾಬುರಾವ್‌ ಹಾಗೂ ತಾಯಿ ರತ್ನಮ್ಮ ದೇಶ ಮಾನ್ಯ ತಮ್ಮ ಕಷ್ಟಕಾಲದಲ್ಲಿ ನಮಗೆಲ್ಲಾ ಉನ್ನತ ಶಿಕ್ಷಣ ಕೊಡಿಸಿರುವುದು ದಾಸ್ಯವನ್ನು, ಅಧೀನತೆಯನ್ನು ಸ್ವೀಕರಿಸಲು ಅಲ್ಲ. ಬೌದ್ಧಿಕ, ಸೈದ್ಧಾಂತಿಕ, ವೈಚಾರಿಕ ನೆಲೆಗಟ್ಟಿನ ಮೇಲೆ ಬದುಕು ಕಟ್ಟಿಕೊಳ್ಳಲಿ ಅಂತ. ನನ್ನ ಪತಿ ಚಾಂದ್‌ ರಾಮ್‌ ಗ್ರೋವರ್‌ ಹರಿಯಾಣದವರು, ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ. ಅವರೂ ಕೂಡ ಆಳವಾದ ವಿವೇಚನೆ, ಉದಾತ್ತ ಚಿಂತನೆ, ವಿಶಾಲ ದೃಷ್ಟಿಕೋನವುಳ್ಳವರು. ಹೀಗಾಗಿ, ನಮ್ಮ ನಡುವೆ ಎಂದೂ ಕರಿಮಣಿಯ ಮಾಲಿಕತ್ವದ ಪ್ರಶ್ನೆ ಉದ್ಭವಿಸಲೇ ಇಲ್ಲ. ಮದುವೆಯಾದ ದಿನದಿಂದ ಇಲ್ಲಿವರೆಗೆ ನಾನು ಮಾಂಗಲ್ಯವನ್ನೂ ಹಾಕಿಲ್ಲ, ಕಾಲುಂಗರವನ್ನೂ ತೊಟ್ಟಿಲ್ಲ. ಹೆಣ್ಣಿನ ಘನತೆ, ಸ್ಥಾನಮಾನ, ಗೌರವ ನಿರ್ಧಾರವಾಗುವುದು ಅವಳು ಧರಿಸುವ ಕರಿಮಣಿಯಿಂದಲ್ಲ, ಅವಳ ಆಚಾರ–ವಿಚಾರ, ತತ್ವ–ಸಿದ್ಧಾಂತಗಳಿಂದ ಎನ್ನುವುದನ್ನು ನನ್ನ ತಂದೆತಾಯಿ ಕೊಟ್ಟ ಸಂಸ್ಕಾರ ಹಾಗೂ ನಾನು ಪಡೆದ ವಿದ್ಯೆ ನನಗೆ ಕಲಿಸಿಕೊಟ್ಟಿದೆ.

ಡಾ. ಸಮತಾ ದೇಶಮಾನೆ, ಪ್ರಾಧ್ಯಾಪಕರು, ಬೆಂ.ವಿ.ವಿ

ಅವನು ಮಾಲಿಕನಲ್ಲ; ನಾನವನ ಗುಲಾಮಳಲ್ಲ.

ನನ್ನ ಮಟ್ಟಿಗೆ ತಾಳಿ ಎಂದರೆ ಅವನು–ನಾನು ಗೌರವ–ಬದ್ಧತೆ–ಪ್ರಾಮಾಣಿಕತೆಯೊಂದಿಗೆ ಬದುಕಲು ನಿರ್ಧರಿಸಿದ ದಿನ ಅವನು ಕೊಟ್ಟ ಉಡುಗೊರೆ. ನಾನು ಅದನ್ನೊಂದು ಆಭರಣದ ರೂಪದಲ್ಲಿ ಧರಿಸುತ್ತೇನೆ. ಆಫೀಸಿಗೊಂದು, ಕಾರ್ಯಕ್ರಮಗಳಿಗೊಂದು ಎಂದು ಇಟ್ಟುಕೊಂಡಿದ್ದೇನೆ. ಮದುವೆಯಾಗುವ ಮೊದಲು ಕತ್ತಿಗೆ ಚೈನ್‌ ಧರಿಸುತ್ತಿದ್ದೆ. ಈಗ ಮಾಂಗಲ್ಯ. ಒಮ್ಮೊಮ್ಮೆ ತಾಳಿಯನ್ನು ಮರೆತು ಹಾಕಿಕೊಳ್ಳದೆ ಹೊರಗೆ ಹೋಗುವುದಿದೆ. ಆಗೆಲ್ಲಾ ಸೌಭಾಗ್ಯವನ್ನು ಮರೆತು ಮನೆಯಲ್ಲೇ ಇಟ್ಟುಬಂದೆ ಎನ್ನುವ ಗಿಲ್ಟ್‌ ಕಾಡಿದ್ದಿಲ್ಲ. ಅಷ್ಟಕ್ಕೂ ನಮ್ಮ ಸಂಬಂಧ ತಾಳಿ ಮತ್ತು ಉಂಗುರದ ಮಾಲಿಕತ್ವದ ಮೇಲೆ ನಿಲ್ಲುವಷ್ಟು ಟೊಳ್ಳಲ್ಲ.

ಚೈತ್ರಿಕಾ ನಾಯ್ಕ ಹರ್ಗಿ, ಲೇಖಕಿ

ಭದ್ರತೆಗೆ–ಭಾವನೆಗೆ

ಕರಿಮಣಿ ಅಂದರೆ... ಮಂತ್ರ ಘೋಷಗಳ ನಡುವೆ ಗುರುಹಿರಿಯರ ಅಕ್ಷತೆಯ ಆಶೀರ್ವಾದದೊಂದಿಗೆ ಕೊರಳಿಗೆ ಬೀಳುವಾಗಿನ ರೋಮಾಂಚನ; ಅದು ಬಿದ್ದ ನಂತರದ ಸ್ಥಾನಮಾನ; ಕನ್ಯೆಯಿಂದ ಗೃಹಿಣಿಯ ಪಟ್ಟಕ್ಕೆ ಪಡೆದ ಪದೋನ್ನತಿ... ಶುಭ ಸಮಾರಂಭಗಳಲ್ಲಿ ಸುಮಂಗಲಿ ಎಂಬ ವಿಶೇಷ ಮರ್ಯಾದೆ, ಸನ್ಮಾನ ಏನೆಲ್ಲಾ…

ಮಾಂಗಲ್ಯ ನನ್ನ ಪಾಲಿಗೆ ಬರೀ ಸರವಲ್ಲ ಅದೊಂದು ಸಮಾಧಾನ, ಆತ್ಮಸ್ತೈರ್ಯ, ಮನ್ನಣೆಯನ್ನು ತಂದುಕೊಟ್ಟ ಮಮಬಂಧು. ಮನೆಮಂದಿಯನ್ನು ಬಿಟ್ಟು ಒಬ್ಬಳೇ ಹೊರಊರುಗಳಲ್ಲಿ ನೌಕರಿ ಮಾಡುವಾಗ, ಕೆಲಸದ ಮೇಲೆ ಬೇರೆ ಬೇರೆ ತಾಲೂಕುಗಳಲ್ಲಿ ಕೋರ್ಟು, ಕಚೇರಿ ಅಂತ ಏಕಾಂಗಿಯಾಗಿ ಅಡ್ಡಾಡುವಾಗ ಮನಸ್ಸಿನಲ್ಲೊಂದು ಧೈರ್ಯ ಮೂಡಿಸಿದ್ದು ಕರಿಮಣಿಯೇ. ವೈಜ್ಞಾನಿಕವಾಗಿ ನೋಡುವುದಾದರೆ ಎದೆಯ ಮಧ್ಯ ಭಾಗಕ್ಕೆ ಕೂರುವಷ್ಟು ಮಾಂಗಲ್ಯ, ಕಾಲಿನ ಎರಡನೇ ಬೆರಳಲ್ಲಿ ಧರಿಸುವ ಬೆಳ್ಳಿಯ ಕಾಲುಂಗುರ ದೇಹದ ಉಷ್ಣಾಂಶವನ್ನು ನಿಯಂತ್ರಿಸಿ, ಋತುಚಕ್ರವನ್ನು ಸುಗಮಗೊಳಿಸುವುದು.

ಕೆ.ವಿ.ರಾಜಲಕ್ಷ್ಮಿ, ನಿವೃತ್ತ ಲೆಕ್ಕಾಧಿಕಾರಿ

ಅಂದದ ಆಭರಣ
ಕಾಲೇಜು ದಿನಗಳಲ್ಲಿ ಕರಿಮಣಿ ವೆರೈಟಿ ಚೈನ್‌ ಧರಿಸಿ ಮೆರೆದದ್ದು ನಿಜ. ಹಾಗೆ ಆಸೆಪಟ್ಟ ಕರಿಮಣಿಗೆ ಮಾಂಗಲ್ಯ ಸೇರಿಸಿ ಕೊರಳು ಸೇರಿದಾಗ ಏನ್ನೋ ಹೆಮ್ಮೆ. ಕಾರ್ಪೋರೇಟ್‌ ಲೈಫ್ ಮತ್ತು ಬದಲಾಗುತ್ತಿರುವ ಟ್ರೆಂಡ್‌... ಕರಿಮಣಿ ಧರಿಸಿದರೆ ಮಧ್ಯವಯ್ಯಸ್ಸಿನವಳು, ಓಲ್ಡ್‌ ಲೇಡಿ ಎಂದು ಗುಂಪಿನಿಂದ ದೂರವಾಗುವ ಸಂದರ್ಭ ಎದುರಾದಾಗ ಕರಿಮಣಿ ಸರ ತೆಗೆದಿಟ್ಟು ದಾಪುಗಾಲು ಹಾಕಿದ್ದಿದೆ. ಬೇಕೆನಿಸಿದಾಗ ಧರಿಸುವ, ಬೇಡವೆನಿಸಿದಾಗ ಬಿಚ್ಚಿಡುವ ಆಭರಣವದು. ಮಾಂಗಲ್ಯವಾಗಲಿ, ಅದನ್ನು ಧರಿಸುವವಳೇ ಆಗಲಿ... ಆಸ್ತಿ ಅಲ್ಲ; ಅಲ್ಲಿ ಮಾಲಿಕತ್ವದ ಪ್ರಶ್ನೆಯೂ ಬರುವುದಿಲ್ಲ.

ಕಾವ್ಯ ಭಾರದ್ವಾಜ್, ವಕೀಲೆ

***

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT