ಅರಣ್ಯ ನಾಶ, ಪರಿಸರ ಮಾಲಿನ್ಯ, ಹವಾಮಾನ ವ್ಯತ್ಯಯ, ಜಾಗತಿಕ ತಪನ, ಸಾಗರ ಮಟ್ಟ ಹೆಚ್ಚಳ... ಹೀಗೆ ಆಧುನಿಕ ಜಗತ್ತು ಎಡವಟ್ಟುಗಳ ಸರಣಿಗೇ ಕಾರಣವಾಗಿದೆ. ಅನ್ಯ ಜಗತ್ತೊಂದು ಇರುವುದೇ ಆದರೆ ಅದು ‘ಪುನರ್ಬಳಕೆಯ ಜಗತ್ತು’. ಕಸ, ರದ್ದಿ ಎಂದು ಬಿಸಾಡಹೊರಟ ಪದಾರ್ಥ
ವೊಂದನ್ನು ಯುಕ್ತ ರೀತಿಯಲ್ಲಿ ಸಂಸ್ಕರಿಸಿ ಮರುಬಳಕೆಗೆ ತಂದುಕೊಳ್ಳುವುದೇ ಪುನರ್ಬಳಕೆ. ಪರಿಯಾವರಣದ ಸಮತೋಲನಕ್ಕೆ, ಸಂಪನ್ಮೂಲಗಳ ಉಳಿತಾಯಕ್ಕೆ ಈ ಯಜ್ಞ ಅಗತ್ಯ, ಅನಿವಾರ್ಯ.
ಬೀದಿಯಲ್ಲಿ ಕಸದ ಗಾಡಿ ಬರುತ್ತಲೇ ಒಣ ಕಸ, ಹಸಿ ಕಸ ಎಂದು ಪ್ರತ್ಯೇಕಿಸಿ ಒಪ್ಪಿಸಲು ಸಿದ್ಧವಾದರೆ ಪೌರತ್ವದ ಮೊದಲ ಘನ ಕಾರ್ಯ ಮುಗಿದಂತೆಯೆ. ಯಾವ ಊರಿನಲ್ಲಿ ಕಸದಬುಟ್ಟಿಯೊಂದಿಗಿನ ಅನುಸಂಧಾನಕ್ಕೆ ಮೊದಲ ಆದ್ಯತೆ ದೊರಕುವುದೋ ಅಲ್ಲಿ ಅಭ್ಯುದಯದ ಹಾದಿಗೆ ಕೆಂಪುಹಾಸು.