×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಅವನ ನೆಮ್ಮದಿ ಅಡುಗೆ ಮನೆಯಲ್ಲಿ!

ತಿನ್ನುವ ಕೈಗಳು ಬೇಯಿಸುವುದನ್ನೂ ಕಲಿಯಬೇಡವೇ?
ಫಾಲೋ ಮಾಡಿ
Comments

ಕೊರೊನಾ ಕಲಿಸಿದ ಹಲವು ಪಾಠಗಳಲ್ಲಿ ಪ್ರತಿಯೊಬ್ಬರೂ ಅಡುಗೆ ಕಲಿಯಲೇಬೇಕು ಎಂಬುದು ಮುಖ್ಯವಾದದ್ದೇ ಹೌದು. ಕ್ವಾರಂಟೈನು, ಐಸೊಲೇಷನ್‌‌ಗಳ ನಡುವೆ ಹೊರಗಡೆ ಹೋಟೆಲ್ಲುಗಳು, ರೆಸ್ಟೊ ರೆಂಟ್‌ಗಳು ತೆರೆದಿರುವುದಿಲ್ಲ ಎಂಬ ಭೀತಿ ಅನೇಕ ಮಂದಿಗೆ ಅಡುಗೆಮನೆಯನ್ನು ಪ್ರೀತಿಸುವುದನ್ನು ಕಲಿಸಿ ಕೊಟ್ಟಿದೆ.

ಮೊದಮೊದಲು ಅಡುಗೆಮನೆಯೇನಿದ್ದರೂ ಮನೆಯ ಹೆಂಗಳೆಯರಿಗೆ ಎಂಬಂತಿದ್ದ ಪರಿಸ್ಥಿತಿ ಕೊಂಚ ಮಟ್ಟಿಗಾದರೂ ಬದಲಾಗಿ, ಮನೆಯ ಮಕ್ಕಳೂ ಸಮೇತ ಕನಿಷ್ಠ ಅನ್ನ ಬೇಯಿಸಿಕೊಂಡು, ಸಾರು ಕುದಿಸಿಕೊಂಡು ಊಟ ಮಾಡುವಷ್ಟು ಅಡುಗೆ ವಿದ್ಯೆ ಕಲಿಯಲೇಬೇಕು ಎಂಬ ವಾತಾವರಣ ಸೃಷ್ಟಿಯಾದದ್ದು ಈ ಶತಮಾನದ ಕೊಡುಗೆಯೂ ಹೌದು. ಇಲ್ಲವಾದಲ್ಲಿ ಅಕ್ಕಿ ಬೆಂದು ಅನ್ನವಾಗುವ ಪರಿಯೇ ತಿಳಿಯದು ಎಂಬ ಅನೇಕ ಮಕ್ಕಳನ್ನು ನಾವು ಕಾಣಬೇಕಿತ್ತು.

ತರಗತಿಯಲ್ಲಿ ಪಾಠ ಬೋಧಿಸುವ ಸಂದರ್ಭ ಅಡುಗೆಯ ವಿಚಾರ ಬಂದಾಗ ಕುತೂಹಲಕ್ಕಾಗಿ ಮಕ್ಕಳನ್ನು ‘ಎಷ್ಟು ಮಂದಿಗೆ ಅಡುಗೆ ತಿಳಿದಿದೆ’ ಎಂದು ಪ್ರಶ್ನಿಸಿದೆ. ಕೆಲವು ಹೆಣ್ಣುಮಕ್ಕಳು ಬೇಕೋ ಬೇಡವೋ ಎಂಬಂತೆ ಕೈಯೆತ್ತಿದರೆ ಹುಡುಗರ ಕಡೆಯಿಂದ ಒಬ್ಬ ಮಾತ್ರ ಅತ್ಯಂತ ಸಂಕೋಚಪಟ್ಟು ಕೊಂಡು ‘ಮಿಸ್, ನಂಗೆ ಮುದ್ದೆ ಮಾಡೋದು ಗೊತ್ತು, ಸೊಪ್ಪುಸಾರು ಮಾಡೋದೂ ಗೊತ್ತು.
ಅನ್ನಕ್ಕಿಡ್ತೀನಿ, ಆದ್ರೆ ಚಪಾತಿ ಮಾತ್ರ ಮಾಡಕ್ಕೆ ಬರಲ್ಲ’ ಎಂದ. ತರಗತಿಯವರೆಲ್ಲ ಘೊಳ್ಳನೆ ನಕ್ಕುಬಿಟ್ಟರು. ಅವನಾಡಿದ ಮಾತುಗಳಲ್ಲಿ ನಗುವಂಥದ್ದೇ ನಿತ್ತೋ ಗೊತ್ತಾಗಲಿಲ್ಲ. ಅಂತೂ ನಗೆಯ ಅಲೆ ನಿಂತ ಮೇಲೆ, ‘ನಮಗೆ ಊಟ ಮಾಡುವುದು ಅನಿವಾರ್ಯ ಎಂದಮೇಲೆ ಅಡುಗೆ ಕಲಿಯುವುದೂ ಯಾಕೆ ಅನಿವಾರ್ಯ’ ಎಂಬುದನ್ನು ವಿವರಿಸಿದೆ. ಅದರ ಮಹತ್ವ ಎಷ್ಟು ಮಂದಿಗೆ ಅರ್ಥವಾಯಿತೋ ತಿಳಿಯಲಿಲ್ಲ.

ಇದು ಸಣ್ಣ ಸಂಗತಿಯಲ್ಲ ಎಂಬುದು ನನಗೆ ಗೊತ್ತಾದದ್ದು, ಹೊಸದಾಗಿ ಬಂದ ಒಬ್ಬ ಸಹೋದ್ಯೋಗಿ ಅಡುಗೆಯ ಕಾರಣದಿಂದಲೇ ತಮ್ಮ ಮನೆಯಲ್ಲಿ ಸೃಷ್ಟಿ ಯಾಗುವ ಕದನ ಕೋಲಾಹಲವನ್ನು ವಿವರಿಸಿದಾಗ! ಸಹಜವಾಗಿಯೇ ಉದ್ಯೋಗಸ್ಥ ಮಹಿಳೆಯರಿಗೆ ಅಡುಗೆ ಎಂಬುದು ಹೊರೆಯಾಗಿ ಮಾರ್ಪಡುತ್ತದೆ. ಬೆಳಗಿನಿಂದ ಸಂಜೆಯವರೆಗೂ ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಸಹಜವಾಗಿಯೇ ದಣಿವು ಕಾಡುತ್ತದೆ. ಗಂಡಸರ ದಣಿವು ಮನೆಯ ಎಲ್ಲರಿಗೂ ಅರ್ಥವಾಗುತ್ತದೆ; ಆದರೆ ಹೆಣ್ಣುಮಕ್ಕಳ ದಣಿವಿಗೆ ಅರ್ಥ ಕಂಡುಕೊಳ್ಳುವ ಪ್ರಯತ್ನ ಯಾರೂ ಮಾಡುವುದಿಲ್ಲ. ಇನ್ನೇನೂ ಕೆಲಸ ನನ್ನಿಂದಾಗದು ಎನ್ನಿಸುವ ಶರೀರಕ್ಕೆ ಮತ್ತೆ ಅಡುಗೆಮನೆಯ ಕೆಲಸವನ್ನು ನೆನಪಿಸುವುದು ಕಷ್ಟದ ಕೆಲಸವೇ. ಆದರೆ ಅಡುಗೆ ಮನೆಯೆಂಬುದು ಮನೆಯ ನೆಮ್ಮದಿಕೇಂದ್ರ ಹೌದಷ್ಟೇ. ಪ್ರತಿನಿತ್ಯವೂ ಹೋಟೆಲಿನ ಊಟ ಹಿಡಿಸೀತೇ? ಆರೋಗ್ಯಕ್ಕೆ ಹಿತವೆನಿಸೀತೇ? ಬಹುತೇಕ ಮನೆಗಳಲ್ಲಿ ಅಡುಗೆಮನೆಯೆಂಬುದು ಇನ್ನೂ ಹೆಂಗಳೆಯರ ಸಾಮ್ರಾಜ್ಯ. ಅಲ್ಲಿ ರಾಣಿಯೂ ಸೇವಕಿಯೂ ಎಲ್ಲ ಅವಳೇ! ಅದರ ನಿರ್ವಹಣೆ ಕೆಟ್ಟಿತೆಂದಾದರೆ ಬದುಕಿನ ರಾಗ ತಾಳಗಳೆಲ್ಲವೂ ಹದಗೆಟ್ಟಂತೆ ಆಗುತ್ತವೆ.

ಸೋಜಿಗದ ಸಂಗತಿಯೆಂದರೆ, ಹಸಿವಿನ ಅರಿವು ಇರುವವರಿಗೆ ಅಡುಗೆಯ ವಿಧಾನಗಳನ್ನು ಕಲಿತಿರಬೇಕು ಎಂಬ ಅರಿವು ಇಲ್ಲದೇ ಹೋಗುವುದು ಅಥವಾ ಅಡುಗೆಯನ್ನು ಕಲಿಯುವುದೆಂದರೆ ತಮ್ಮ ಸ್ಥಾನಕ್ಕೆ ಕುಂದೆಂದು ಭಾವಿಸುವುದು. ಮನೆಗೆ ತೆರಳುವಾಗ ಹಸಿವಿನಿಂದ ಮುಕ್ತರಾಗುವುದಕ್ಕೆ ಏನನ್ನಾದರೂ ನಿರೀಕ್ಷಿಸುವುದು ತಮ್ಮ ಹಕ್ಕೆಂದು ಭಾವಿಸುವ ಪ್ರತಿಯೊಬ್ಬರಿಗೂ ಅದು ತಮ್ಮ ಕರ್ತವ್ಯವೂ ಹೌದು ಎಂಬುದು ನೆನಪಾಗುವುದಿಲ್ಲ. ಮನೆಯ ಯಜಮಾನ ನಾದವನಿಗೆ ಅಡುಗೆಯಲ್ಲಿ ನೆರವಾಗುವ ಮನಸ್ಸಿ ದ್ದರೂ ಮನೆಯಲ್ಲಿ ಹಳೆಯಕಾಲದ ಮನಸ್ಸುಗಳಿದ್ದರೆ ಅವರಿಗದು ಸಮ್ಮತವೆನಿಸುವುದಿಲ್ಲ.

ವಲಲನ ಅಡುಗೆ ಸಾಮರ್ಥ್ಯವನ್ನೋ ನಳ ಚಕ್ರ ವರ್ತಿಯ ಕೌಶಲವನ್ನೋ ಮತ್ತೆಮತ್ತೆ ಉದಾಹರಿಸುವ ಯಾರಿಗೂ ತಾವೂ ಅವರಂತಾಗಬೇಕೆಂಬ ಬಯಕೆ ಕಾಡದು. ಮನೆಯ ಪುಟ್ಟ ಮಗನೂ ಏನಾದರೂ ಅಡುಗೆಯಲ್ಲಿ ಆಸಕ್ತಿ ತೋರಿಸುತ್ತಾನೆಂದಾದರೆ, ‘ಅಡುಗೆ ಭಟ್ಟನಾಗಬೇಕೆಂದಿದ್ದೀಯಾ?’ ಎಂದು ನಗು ವವರೇ ಹೆಚ್ಚು. ಅಲ್ಲಿಗೆ ಮಗುವಿನ ಮನಸ್ಸಿನಲ್ಲಿಯೂ ಅಡುಗೆಯೆಂಬುದು ತಾನು ಮಾಡಬಾರದ ಕೆಲಸವಾಗಿ ಮುದ್ರಿತವಾಗುತ್ತದೆ. ಅಮ್ಮ ಅಡುಗೆ ಮಾಡುತ್ತಾಳೆ. ಮುಂದೆಯೂ ಅಷ್ಟೇ ‘ಅವಳು ಅಡುಗೆ ಮಾಡುತ್ತಾಳೆ’ ಎಂಬುದಷ್ಟೇ ಮನಸ್ಸಿನಲ್ಲಿ ಬೇರೂರುತ್ತದೆ.

ಮಕ್ಕಳನ್ನು ಮುದ್ದು ಮುಚ್ಚಟೆಗಳಿಂದ ಅಡುಗೆಮನೆ ಕೆಲಸದಿಂದ ವಿನಾಯಿತಿ ಕೊಟ್ಟು ಬೆಳೆಸುವ ತಪ್ಪನ್ನು ಬಹುತೇಕರು ಮಾಡುತ್ತಿದ್ದೇವೆ. ಮಗಳು ತಮ್ಮಂತೆ ಅಡುಗೆಮನೆಗೆ ಸೀಮಿತವಾಗಬಾರದು ಎಂಬ ಅಮ್ಮಂದಿರೇ ಹೆಚ್ಚಾಗುತ್ತಿದ್ದೇವೆ. ಅತಿಮುಖ್ಯವಾದ ಅಡುಗೆ ಮಾಡುವುದನ್ನು ಸಮಾನತೆಯ ಹೆಸರಿನಲ್ಲಿ ಕಲಿಸುವುದನ್ನು ಮರೆತಿದ್ದೇವೆ. ಈ ವಿಷಯದಲ್ಲಾ ದರೂ ಸಮಾನತೆಯನ್ನು ಸಾಧಿಸಬೇಕಿರುವುದು ಮನೆಯ ಮಗನಿಗೂ ಅಡುಗೆಯನ್ನು ಕಲಿಸುವ ಮೂಲಕ ಎಂಬುದೊಂದು ಸಣ್ಣ ವಿಚಾರವನ್ನು ಅರ್ಥ ಮಾಡಿಕೊಳ್ಳದೇ ಹೋದರೆ ನಮ್ಮ ಮಕ್ಕಳ ಬದುಕಿನ ನೆಮ್ಮದಿಯ ಬಹುಪಾಲನ್ನು ನಾವು ಕಿತ್ತು ಕೊಂಡಂತೆಯೇ ಸರಿ ಎಂಬುದು ಮನದಟ್ಟಾಗಬೇಕಿದೆ.

ಉಣ್ಣುವ ಕೈಗಳಿಗೆ ಉಣ್ಣಿಸುವುದು ತಿಳಿದಿರಲಿ, ಬಿಸಿ ಬಿಸಿ ಊಟವನ್ನು ನಿರೀಕ್ಷಿಸುವವರಿಗೆ ಅಡುಗೆ ಮನೆಯ ಬಿಸಿಯೂ ಅರ್ಥವಾಗಲಿ. ಇದು ವರ್ತಮಾನದ ಅಗತ್ಯಗಳಲ್ಲೊಂದು.

ತಿನ್ನುವ ಕೈಗಳು ಬೇಯಿಸುವುದನ್ನೂ ಕಲಿಯಬೇಡವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT