×
ADVERTISEMENT
ಈ ಕ್ಷಣ :
ADVERTISEMENT

ಉತ್ತಮ ಇಯರ್‌ಬಡ್

Last Updated 10 ಏಪ್ರಿಲ್ 2024, 5:11 IST
Comments
ಅಕ್ಷರ ಗಾತ್ರ

ಆಂಪ್ಲಿಫೈಯರ್, ಸ್ಮಾರ್ಟ್‌ಫೋನ್, ಟಿ.ವಿ. –ಯಾವುದೇ ಇರಲಿ, ಅದರಲ್ಲಿ ಧ್ವನಿಯನ್ನು ಪುನರುತ್ಪತ್ತಿ ಮಾಡುವುದು ಸ್ಪೀಕರ್, ಇಯರ್‌ಬಡ್, ಇಯರ್‌ಫೋನ್ ಅಥವಾ ಹೆಡ್‌ಫೋನ್. ಇವುಗಳಲ್ಲಿ ಕಿವಿ ಕಾಲುವೆಯೊಳಗೆ ಕುಳಿತುಕೊಳ್ಳುವಂತಹವುಗಳಿಗೆ ಇಯರ್‌ಬಡ್ ಎಂಬ ಹೆಸರಿದೆ.

ಇವುಗಳ ಜೊತೆ ದೊರೆಯುವ ಹಲವು ಗಾತ್ರದ ಕುಶನ್‌ಗಳಲ್ಲಿ ನಿಮ್ಮ ಕಿವಿಯ ಗಾತ್ರಕ್ಕೆ ಸರಿಹೊಂದುವ ಕುಶನ್ ಬಳಸುವುದು ಅತಿ ಮುಖ್ಯವಾಗುತ್ತದೆ. ಇದು ಕಿವಿಯ ಕಾಲುವೆಯನ್ನು ಪೂರ್ತಿಯಾಗಿ ಮುಚ್ಚಿ ಕುಳಿತಾಗ ಮಾತ್ರ ಸಂಗೀತದ, ಅದರಲ್ಲೂ ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿ ಸರಿಯಾಗಿ ಆಗುತ್ತದೆ.

ಈ ಸಲ ಅಂತಹ ಒಂದು ಸ್ವಲ್ಪ ದುಬಾರಿ ಆದರೆ ನೀಡುವ ಹಣಕ್ಕೆ ಸರಿಯಾದ ಇಯರ್‌ಬಡ್ ಕಡೆ ನಮ್ಮ ವಿಮರ್ಶಾದೃಷ್ಟಿ ಬೀರೋಣ. ಅದುವೇ ಸೆನ್‌ಹೈಸರ್ ಮೊಮೆಂಟಂ ಇನ್-ಇಯರ್ (Sennheiser Momentum In-Ear).

ಈ ಇಯರ್‌ಬಡ್‌ನ ಕೇಬಲ್ ವೃತ್ತಾಕಾರವೂ ಅಲ್ಲ, ಪಟ್ಟಿಯಾಕಾರವೂ ಅಲ್ಲ. ಬದಲಿಗೆ ಸ್ವಲ್ಪ ದೀರ್ಘವೃತ್ತಾಕಾರದ್ದು. ಆದುದರಿಂದ ಇದರ ಕೇಬಲ್ ಸಿಕ್ಕುಹಾಕಿಕೊಳ್ಳುವುದಿಲ್ಲ. ಈ ಕೇಬಲ್ ಕೆಂಪು ಮತ್ತು ಕಪ್ಪು ಎರಡು ಬಣ್ಣಗಳಲ್ಲಿದೆ. ಅಂದರೆ ಒಂದು ಭಾಗ ಕಪ್ಪು ಮತ್ತಿನ್ನೊಂದು ಭಾಗ ಕೆಂಪು ಬಣ್ಣದಲ್ಲಿದೆ. ನೋಡಲು ಸುಂದರವಾಗಿದೆ. ಕಿವಿಗೆ ಜೋಡಿಸಲು ಕೇಬಲ್ ಎರಡಾಗಿ ವಿಭಜನೆಯಾದ ನಂತರ ಕೇಬಲ್‌ಗಳನ್ನು ಒಟ್ಟಿಗೆ ಇಟ್ಟುಕೊಳ್ಳಲು ಒಂದು ಚಿಕ್ಕ ಸರಿಸಬಹುದಾದ ಜೋಡಣೆ ಇದೆ. ಆದುದರಿಂದ ಕೇಬಲ್‌ನ ಕೊನೆಯ ಭಾಗ ಕೂಡ ಸುಕ್ಕುಹಾಕಿಕೊಳ್ಳದಂತೆ ತಡೆಯಬಹುದು.

ಕಿವಿಯೊಳಗೆ ಕುಳಿತುಕೊಳ್ಳುವ ಇಯರ್‌ಬಡ್ ಅಂಗ ತುಂಬ ಚೆನ್ನಾಗಿದೆ. ಅದರ ಪೈಪ್ ಲೋಹದ್ದಾಗಿದೆ. ಉಳಿದ ಭಾಗಗಳು ಪ್ಲಾಸ್ಟಿಕ್ಕಿನವು. ಹಿಂಭಾಗದಲ್ಲಿ ಸೆನ್‌ಹೈಸರ್‌ನ ಲೋಗೊ ಇರುವ ಭಾಗ ಮಾತ್ರ ಲೋಹ. ಸಾಮಾನ್ಯವಾಗಿ ಬಹುತೇಕ ಇಯರ್‌ಬಡ್‌ ಜೊತೆ ಮೂರು ಜೊತೆ ಕುಶನ್ ನೀಡುತ್ತಾರೆ. ಆದರೆ ಇದರ ಜೊತೆ ನಾಲ್ಕು ಜೊತೆ ಕುಶನ್ ನೀಡಿದ್ದಾರೆ.

ಈ ಕುಶನ್‌ಗಳ ಗುಣಮಟ್ಟವೂ ಚೆನ್ನಾಗಿದೆ. 3.5 ಮಿ.ಮೀ. ಇಯರ್‌ಫೋನ್ ಕನೆಕ್ಟರ್ ಚಿನ್ನಲೇಪಿತವಾಗಿದ್ದು ಅತ್ಯುತ್ತಮ ಗುಣಮಟ್ಟದ್ದಾಗಿದೆ. ಈ ಕನೆಕ್ಟರ್ ಕೇಬಲ್‌ಗೆ 90 ಡಿಗ್ರಿ ಕೋನದಲ್ಲಿದೆ ಅಂದರೆ ಕೆಲವು ಇಯರ್‌ಫೋನ್‌ಗಳಂತೆ ನೇರವಾಗಿಲ್ಲ.

ಮಾತನಾಡಲು ಮೈಕ್ರೊಫೋನ್‌ ಇದೆ. ಈ ಮೈಕ್ರೊಫೋನ್‌ ಇರುವ ಸಾಧನದಲ್ಲೇ ಕರೆ ಬಂದಾಗ ಸ್ವೀಕರಿಸಲು ಮತ್ತು ಕರೆ ನಿಲ್ಲಿಸಲು ಬಟನ್ ಇದೆ. ಜೊತೆಗೆ ವಾಲ್ಯೂಮ್ ಹೆಚ್ಚು ಮತ್ತು ಕಡಿಮೆ ಮಾಡಲು ಬಟನ್‌ಗಳಿವೆ. ಬಲಕಿವಿಗೆ ಹೋಗುವ ಕೇಬಲ್‌ನಲ್ಲಿ ಇವು ಜೋಡಣೆಯಾಗಿವೆ.

ಫೋನ್ ಇಟ್ಟುಕೊಳ್ಳಲು ಒಂದು ಚಿಕ್ಕ ಪೆಟ್ಟಿಗೆ ನೀಡಿದ್ದಾರೆ. ಪೆಟ್ಟಿಗೆ ಎಂದು ಯಾಕೆ ಹೇಳಿದ್ದು ಅಂದರೆ ಇದು ಸ್ವಲ್ಪ ಗಡುಸಾಗಿದೆ. ಇದರಿಂದಾಗಿ ಇಯರ್‌ಬಡ್‌ ಸುರಕ್ಷಿತವಾಗಿರುತ್ತದೆ. ಇದಕ್ಕೆ ಸುತ್ತ ಝಿಪ್ ಇದೆ. ಇದು ನಿಜಕ್ಕೂ ಚೆನ್ನಾಗಿದೆ. ಪ್ರಯಾಣಕಾಲದಲ್ಲಿ ಉಪಯುಕ್ತ. ಈ ಇಯರ್‌ಬಡ್ ಆಂಡ್ರಾಯ್ಡ್‌ ಮತ್ತು ಐಫೋನ್‌ಗಳಿಗೆ ಎಂದು ಎರಡು ಮಾದರಿಗಳಲ್ಲಿ ಲಭ್ಯ. ನಮ್ಮಲ್ಲಿರುವುದು ಆಂಡ್ರಾಯ್ಡ್‌ ಮಾದರಿ.

ಎಲ್ಲ ಕಂಪನಾಂಕಗಳ ಧ್ವನಿಯ ಪುನರುತ್ಪತ್ತಿ ನಿಜಕ್ಕೂ ತುಂಬ ಚೆನ್ನಾಗಿದೆ. ಇದರ ವಿಶೇಷತೆ ಇರುವುದು ಅತಿ ಕಡಿಮೆ ಕಂಪನಾಂಕದ ಧ್ವನಿಯ (bass) ಹಾಗೂ ಅತಿ ಹೆಚ್ಚಿನ ಕಂಪನಾಂಕದ ಧ್ವನಿಯ (treble) ಪುನರುತ್ಪತ್ತಿಯಲ್ಲಿ. ಇವು ಅತ್ಯುತ್ತಮವಾಗಿವೆ.

ಇಯರ್‌ಬಡ್‌ಗಳಲ್ಲಿ ಉತ್ತಮ ಬಾಸ್ ಪಡೆಯುವುದು ಕೆಲವೇ ಕೆಲವು ಇಯರ್‌ಬಡ್‌ಗಳಲ್ಲಿ ಸಾಧ್ಯ. ಈ ಇಯರ್‌ಬಡ್ ಕೂಡ ಅದೇ ಜಾತಿಗೆ ಸೇರಿದ್ದು. ಉತ್ತಮ ಬಾಸ್ ಬೇಕು ಎನ್ನುವವರಿಗೆ ಇದು ತೃಪ್ತಿ ನೀಡಬಲ್ಲುದು. ತಬಲ, ಮೃದಂಗ ಇತ್ಯಾದಿಗಳನ್ನು ಆಲಿಸಿದಾಗ ಆ ಉಪಕರಣಗಳು ನಿಜಕ್ಕೂ ನಮ್ಮ ಕಿವಿಯೊಳಗೆ ಧ್ವನಿಸುತ್ತಿರುವಂತೆ ಭಾಸವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT