×
ADVERTISEMENT
ಈ ಕ್ಷಣ :
ADVERTISEMENT

ದಸರಾ: ಭಾರತೀಯ- ಪಾಶ್ಚಾತ್ಯ ಸಂಗೀತ ಸಮ್ಮಿಲನ ಮಳೆ ನಡುವೆ ಪೊಲೀಸ್ ಬ್ಯಾಂಡ್ ಸಿಂಚನ

Published : 11 ಅಕ್ಟೋಬರ್ 2021, 14:43 IST
ಫಾಲೋ ಮಾಡಿ
Comments
ADVERTISEMENT
""
""

ಮೈಸೂರು: ಹೊರಗೆ ತುಂತುರು‌ ಮಳೆಯ ಸಿಂಚನ‌.‌ ಒಳಗೆ ಪೊಲೀಸರಿಂದ‌ ಬ್ಯಾಂಡ್ ಸಂಗೀತ. ಒಮ್ಮೆ ಶಾಸ್ತ್ರೀಯ ಸಂಗೀತ, ಅದರ ಹಿಂದೆಯೇ ರೋಚಕ ಪಾಶ್ಚಾತ್ಯ ಸಂಗೀತ.

-ಅರಮನೆಯಲ್ಲಿ ಸೋಮವಾರ ಸಂಜೆ ಪೊಲೀಸ್ ಬ್ಯಾಂಡ್ ಕಲಾವಿದರು ಹೀಗೆ ಎರಡು ಭಿನ್ನ ಸಂಗೀತ ಸಂಸ್ಕೃತಿಗಳ ಉಯ್ಯಾಲೆಯಲ್ಲಿ ಶ್ರೋತೃಗಳನ್ನು ಉಲ್ಲಾಸದಿಂದ ತೇಲುವಂತೆ ಮಾಡಿದರು.

ದಸರಾ ಉತ್ಸವದ ಪ್ರಯುಕ್ತ ಸೋಮವಾರ ಸಂಜೆ ನಡೆದ‌ ವಿಶೇಷ ಸಂಗೀತ ಪ್ರಸ್ತುತಿಯು ನೂರಾರು ಶ್ರೋತೃಗಳನ್ನು ಮಂತ್ರಮುಗ್ದಗೊಳಿಸಿತು.

ಒಮ್ಮೆ ಶಾಸ್ತ್ರೀಯ ಸಂಗೀತಕ್ಕೆ ತಲೆದೂಗಿದವರು, ನಂತರದ ಇಂಗ್ಲಿಷ್  ಬ್ಯಾಂಡ್ ಸಂಗೀತಕ್ಕೆ ಕುಳಿತಲ್ಲಿಯೇ ಕುಣಿಯುತ್ತಿದ್ದರು!

ಮೈಸೂರು ಸಂಸ್ಥಾನದ ನಾಡಗೀತೆಯಾಗಿದ್ದ 
'ಕಾಯೌ ಶ್ರೀ ಗೌರಿ ಕರುಣಾ ಲಹರಿ' ಗೀತೆಯೊಂದಿಗೆ ರಾಮಚಂದ್ರ ಹಡಪದ್ ತಂಡದ ಕಲಾವಿದರು ಬ್ಯಾಂಡ್ ಸಂಗೀತಕ್ಕೆ ಚಾಲನೆ ನೀಡಿದರು.

ಆರಂಭದಲ್ಲಿ ಇಂಗ್ಲಿಷ್ ಬ್ಯಾಂಡ್ ಪ್ರಸ್ತುತಪಡಿಸಿದ  ಜೇಮ್ಸ್ ಬಾಂಡ್ ಸಂಗೀತ  ಬಾಂಡ್ ರೋಚಕ ಸಿನಿಮಾಗಳನ್ನು ನೆನಪಿಸಿತು. ನಂತರ,  ಪಿಯಾನೋ ವಾದಕ ಟೋನಿ ಮ್ಯಾಥ್ಯು ಅವರಿಂದ ಮೂಡಿಬಂದ ಸೋಲೋ ಪ್ರದರ್ಶನ ಬ್ರೆಜಿಲ್ ಸಂಗೀತ ಲೋಕಕ್ಕೆ ಕರೆದೊಯ್ದಿತು.

1959ರಲ್ಲಿ ಮಹಾರಾಜರು ತರಿಸಿದ್ದ ಪಿಯಾನೋದಲ್ಲಿಯೇ ಸಂಗೀತ ಮೂಡಿ ಬಂದಿದ್ದು ವಿಶೇಷ.

'ಮಹಾಗಣಪತಿಂ ಭಜೆ'  ಪ್ರಾರ್ಥನಾ ಸಂಗೀತದ ಬಳಿಕ ಮೂಡಿ ಬಂದ,  'ಪೈರೆಟ್ಸ್ ಆಫ್ ದಿ ಕೆರಿಬಿಯನ್' ಸಿನಿಮಾದ ರೋಚಕ ಸಂಗೀತ ವಾತಾವರಣದಲ್ಲಿ ಆಹ್ಲಾದತೆಯನ್ನು ತಂದಿತು.

ಆ ಮೋಡಿಯಿಂದ ಇನ್ನೂ ಸಭಿಕರು ಈಚೆ ಬರುವ‌ ಮುನ್ನವೇ, ಕನ್ನಡ ಬ್ಯಾಂಡ್, ತ್ಯಾಗರಾಜರ 'ಗಾನಮೂರ್ತಿ' ಕೀರ್ತನೆಯನ್ನು ಪ್ರಸ್ತುತಪಡಿಸಿ ಶಾಸ್ತ್ರೀಯ ಸಂಗೀತದ ಲೋಕಕ್ಕೆ ಕರೆದೊಯ್ದಿತು.

ಟೋನಿ ಮ್ಯಾಥ್ಯೂ ಹಾಗೂ ಬಿ.ಮಂಜುನಾಥ್ ನೇತೃತ್ವದಲ್ಲಿ ನಡೆದ ಲ್ಯಾಟಿನ್ ಪಾಪ್ ಸಂಗೀತವು ರೋಮಾಂಚಕ ಪಾಪ್ ಲೋಕವನ್ನು  ನಿರ್ಮಾಣ ಮಾಡಿತ್ತು.

ಟೋನಿ ಮ್ಯಾಥ್ಯೂ ಅವರು ನುಡಿಸಿದ ಪಿಯಾನೋ, ಮಳೆ ಮೂಡಿಸಿದ ತಂಪಿಗೆ ಪ್ರಶಾಂತತೆಯನ್ನು ಸೇರಿಸಿತು.
ಚಾಮರಾಜ ಒಡೆಯರ ರಚನೆಯ 'ಚಾಮುಂಡೇಶ್ವರಿ ಭಜನೆ'ಯ ಮೂಲಕ ಕನ್ನಡ ಬ್ಯಾಂಡ್ ಭಕ್ತಿ ರಸ ಉಕ್ಕಿಸಿತು.

ನಂತರ ಮೂಡಿಬಂದಿದ್ದು‌ 'ವೆಂಗಬಾಯ್ಸ್' ನ 'ಮೈ ಹಾರ್ಟ್ ಗೋಸ್ ಶಾಲಲಲಾ'. ಡ್ಯಾನಿಶ್ ಗ್ಲಾಮ್ ರಾಕ್ ಬ್ಯಾಂಡ್ ವಾಕರ್ಸ್ ನ ಸಂಗೀತದ ಮರುಸೃಷ್ಟಿಗೆ ಶ್ರೋತೃಗಳು ಬೆರಗಾದರು.

19 ಶತಮಾನದ  ಇಟಾಲಿಯನ್ ಜಾನಪದ ಗೀತೆ   'ಬೆಲ್ಲಿ ಸಿಯೋ, ಮೋಡಿ ಮಾಡಿತು. ನಂತರ,  
 ಎದೆ‌ ಝಲ್ಲೆನ್ನುವಂತೆ 'ವೈಲ್ಡ್ ವೆಸ್ಟ್ ಥೀಮ್''
 ಮೂಡಿ ಬಂತು. ಅದಕ್ಕೆ ಸೆಡ್ಡು ಹೊಡೆಯುವಂತೆ ಕನ್ನಡ ಬ್ಯಾಂಡ್ ಕಲಾವಿದರು 
'ಚಿಟ್ಟಿ ಬಾಬು' ಅವರ ' ವೆಡ್ಡಿಂಗ್ ಬೆಲ್ಸ್' ವೀಣಾವಾದನವನ್ನು ಮರುಸೃಷ್ಟಿಸಿದರು.

'ಅಬೈಡ್ ವಿತ್ ಮಿ' ಮೂಲಕ ಇಂಗ್ಲಿಷ್ ಬ್ಯಾಂಡ್  ವಾದ್ಯ ಸಂಗೀತ ಸಮ್ಮೇಳನಕ್ಕೆ ತೆರೆ ಎಳೆದರು. ಶ್ರೋತೃಗಳು ಮಾತ್ರ ಮಿಶ್ರ ಸಂಗೀತದ ಅಲೆಯಲ್ಲಿ ತೇಲುತ್ತಲೇ ಇದ್ದರು.

ಪಿಯಾನೋ, ಬೇಸ್ ಗಿಟಾರ್, ಕ್ಲಾರಿಯೊನೆಟ್, ಟ್ರಂಪೆಟ್, ಕೊಳಲು, ಕಂಜರ ಸೇರಿದಂತೆ ಹಳೆ- ಹೊಸ ವಾದನಗಳೊಂದಿಗೆ ಪೊಲೀಸ್ ಕಲಾವಿದರು ಎಂದೂ ಮರೆಯದ ಲೋಕವನ್ನು ಸೃಷ್ಟಿಸಿದರು. ಆರ್.ಮಂಜುನಾಥ್ ಇಂಗ್ಲಿಷ್ ಬ್ಯಾಂಡ್ ನೇತೃತ್ವ ವಹಿಸಿದ್ದರೆ, ಆರ್.ಮೋಹನ್  ಕನ್ನಡ ಬ್ಯಾಂಡ್ ನೇತೃತ್ವ ವಹಿಸಿದ್ದರು.

ಮಳೆ: ಸಂಜೆವರೆಗೂ ಬಿಡುವು ಕೊಟ್ಟಿದ್ದ ಮಳೆ 5.30 ರ ವೇಳೆಗೆ ಹನಿಯಲಾರಂಭಿಸಿದ್ದರಿಂದ , ಕಾರ್ಯಕ್ರಮವನ್ನು ಮುಖ್ಯವೇದಿಕೆಯಿಂದ, ಪಕ್ಕದ ಕಿರುವೇದಿಕೆಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ತೆರೆದ ಬಯಲಿನಲ್ಲಿ ಕುಳಿತು ಬ್ಯಾಂಡ್ ಸಂಗೀತವನ್ನು ಆಸ್ವಾದಿಸಲು ಸಾಧ್ಯವಾಗದೆ ಹಲವರು ನಿರ್ಗಮಿಸಿದರು. 

ಐಜಿಪಿ ಪ್ರವೀಣ್ ಮಧುಕರ್ ಪವಾರ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ನಗರ ಪೊಲೀಸ್ ಕಮಿಷನರ್ ಚಂದ್ರಗುಪ್ತ ಪಾಲ್ಗೊಂಡಿದ್ದರು.

-ಅರಮನೆಯಲ್ಲಿ ಸೋಮವಾರ ಸಂಜೆ ಪೊಲೀಸ್ ಬ್ಯಾಂಡ್ ಕಲಾವಿದರು ಹೀಗೆ ಎರಡು ಭಿನ್ನ ಸಂಗೀತ ಸಂಸ್ಕೃತಿಗಳ ಉಯ್ಯಾಲೆಯಲ್ಲಿ ಶ್ರೋತೃಗಳನ್ನು ಉಲ್ಲಾಸದಿಂದ ತೇಲುವಂತೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT