×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನದು ಗ್ಯಾರಂಟಿ ಕಾರ್ಡ್ ಅಲ್ಲ ವಿಸಿಟಿಂಗ್ ಕಾರ್ಡ್: ಬಸವರಾಜ ಬೊಮ್ಮಾಯಿ

Published 16 ಮಾರ್ಚ್ 2023, 9:52 IST
Last Updated 16 ಮಾರ್ಚ್ 2023, 9:52 IST
Comments
ಅಕ್ಷರ ಗಾತ್ರ

ಮಂಗಳೂರು: ' ಕಾಂಗ್ರೆಸ್ ನವರು ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಗೆ  ಯಾವ ಕಿಮ್ಮತ್ತೂ ಇಲ್ಲ.‌ ಅದು ಗ್ಯಾರಂಟಿ ಕಾರ್ಡ್ ಅಲ್ಲ ವಿಸಿಟಿಂಗ್ ಕಾರ್ಡ್. ಜನ ಅದಕ್ಕೆ ರಬ್ಬರ್ ಬ್ಯಾಂಡ್ ಸುತ್ತಿ  ಕಸದ ಬುಟ್ಟಿಗೆ ಎಸೆಯಲಿದ್ದಾರೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಇಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಏರ್ಪಡಿಸಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

'ಕಾಂಗ್ರೆಸ್ ನೀಡುವುದು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಲ್ಲ. ಅದರಲ್ಲಿ ಹಣವೂ ಇಲ್ಲ. ಅದು ಯಾವ ಪ್ರಯೋಜನಕ್ಕೂ ಬಾರದು' ಎಂದರು.

'ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 2 ಸಾವಿರ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಇದಕ್ಕೆ ತಿಂಗಳಿಗೆ ₹ 24 ಸಾವಿರ ಕೋಟಿ ವೆಚ್ಚವಾಗಲಿದೆ. ಈ ರೀತಿ ಮಾಡಿದರೆ ಸರ್ಕಾರದ ಬೇರೆ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಛತ್ತೀಸಗಡದಲ್ಲೂ ತಿಂಗಳಿಗೆ ₹ ಸಾವಿರ ನೀಡುವುದಾಗಿ ಅವರು ಭರವಸೆ ನೀಡಿದ್ದರು. ನಾಲ್ಕು ವರ್ಷ ಏನೂ ಮಾಡಲಿಲ್ಲ. ಈಗ ಚುನಾವಣೆ ಬರುವಾಗ ನೀಡಲು ಹೊರಟಿದ್ದಾರೆ' ಎಂದರು.

'ಯಾವ ಕುಟುಂಬವೂ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸುವುದಿಲ್ಲ. ಕುಟುಂಬವು ತಿಂಗಳಿಗೆ  75 ರಿಂದ 80 ಯೂನಿಟ್ ವಿದ್ಯುತ್ ಬಳಸಿದರೆ ಹೆಚ್ಚು. ಖರ್ಚೇ ಮಾಡದ 120 ಯೂನಿಟ್ ವಿದ್ಯುತ್ ಅನ್ನು ಇವರು ಉಚಿತವಾಗಿ ನೀಡುತ್ತಾರಂತೆ'  ಎಂದರು.

₹ 6.5 ಕೋಟಿ ವೆಚ್ಚದಲ್ಲಿ ತೇಲುವ ಜೆಟ್ಟಿ ಸ್ಥಾಪಿಸುವ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿದರು. 

ಮೀನುಗಾರರಿಗೆ ಯಾಂತ್ರೀಕೃತ ದೋಣಿ ಖರೀದಿಗೆ ₹ 72 ಲಕ್ಷ ಸಬ್ಸಿಡಿ ನೀಡುವುದೂ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ  ಮುಖ್ಯಮಂತ್ರಿ ಯವರು ಸಾಂಕೇತಿಕವಾಗಿ ಚೆಕ್ ವಿತರಿಸಿದರು.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್ ಉಳೆಪಾಡಿ, ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ವಿವಿಧ ನಿಗಮಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ದ.ಕ. ಜಿಲ್ಲಾ ಪಂಚಾಯತಿ ಸಿ.ಇ.ಒ ಡಾ.ಕುಮಾರ, ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ. ಹಾಗೂ ಇತರರು ವೇದಿಕೆಯಲ್ಲಿದ್ದರು.

ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 2 ಸಾವಿರ ನೀಡುವುದಾಗಿ ಕಾಂಗ್ರೆಸ್ ಹೇಳಿದೆ. ಇದಕ್ಕೆ ತಿಂಗಳಿಗೆ ₹ 24 ಸಾವಿರ ಕೋಟಿ ವೆಚ್ಚವಾಗಲಿದೆ. ಈ ರೀತಿ ಮಾಡಿದರೆ ಸರ್ಕಾರದ ಬೇರೆ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಛತ್ತೀಸಗಡದಲ್ಲೂ ತಿಂಗಳಿಗೆ ₹ ಸಾವಿರ ನೀಡುವುದಾಗಿ ಅವರು ಭರವಸೆ ನೀಡಿದ್ದರು. ನಾಲ್ಕು ವರ್ಷ ಏನೂ ಮಾಡಲಿಲ್ಲ. ಈಗ ಚುನಾವಣೆ ಬರುವಾಗ ನೀಡಲು ಹೊರಟಿದ್ದಾರೆ.
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT