×
ADVERTISEMENT
ಈ ಕ್ಷಣ :
ADVERTISEMENT

ಭೂಕಂ‍‍ಪನ: ಗ್ರಾಮ ತೊರೆಯುತ್ತಿರುವ ಜನ, 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಆತಂಕ

ಫಾಲೋ ಮಾಡಿ
Comments

ಚಿಂಚೋಳಿ (ಕಲಬುರಗಿ ಜಿಲ್ಲೆ): ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬೆಳಿಗ್ಗೆ ಮತ್ತೆ ಎರಡು ಬಾರಿ ಭೂಕಂಪನವಾಗಿದ್ದು, ಭಯಭೀತರಾಗಿರುವ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ. 

ಚಿಂಚೋಳಿ, ಕಾಳಗಿ, ಸೇಡಂ ಹಾಗೂಕಮಲಾಪುರ ತಾಲ್ಲೂಕುಗಳ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಾರದಲ್ಲಿ ಏಳು ಬಾರಿಭೂಮಿ ಕಂಪಿಸಿದೆ. ಸೋಮವಾರ ರಾತ್ರಿಯೂ ಭೂಕಂಪನವಾಗಿದ್ದರಿಂದ ಈ ಗ್ರಾಮಗಳ ಜನರು ಭಯಭೀತರಾಗಿ, ರಾತ್ರಿ ರಸ್ತೆಯಲ್ಲೇ ಮಲಗಿದ್ದರು. ಮನೆಗಳ ಒಳಹೋಗಲೂ ಹೆದರುತ್ತಿರುವ ಕೆಲವರು ರಸ್ತೆಯಲ್ಲಿಯೇ ಒಲೆಹೂಡಿ ಅಡುಗೆಮಾಡುತ್ತಿದ್ದಾರೆ. ಜಾನುವಾರುಗಳನ್ನು ಮನೆ ಹೊರಗೇ ಕಟ್ಟಿದ್ದಾರೆ. ನವರಾತ್ರಿ ಅಂಗವಾಗಿ ಘಟಸ್ಥಾಪನೆ ಮಾಡಿದ ಮನೆಗಳಲ್ಲೂ ಈಗ ಕತ್ತಲು ಆವರಿಸಿದೆ.

ಕಲಬುರಗಿಯಿಂದ ಸುಮಾರು 75 ಕಿ.ಮೀ. ದೂರದಲ್ಲಿರುವ ಗಡಿಕೇಶ್ವಾರ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 8.07ಕ್ಕೆ ಹಾಗೂ ಬೆಳಿಗ್ಗೆ 8.18ಕ್ಕೆ ಭೂಮಿ ಅಲುಗಾಡಿದ್ದು ಜನರ ಅನುಭವಕ್ಕೆ ಬಂತು. ರಿಕ್ಟರ್‌ ಮಾಪಕದಲ್ಲಿ ಕ್ರಮವಾಗಿ 3.5 ಹಾಗೂ 2.8ರಷ್ಟು ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತುಗಳ ಉಸ್ತುವಾರಿ ಕೋಶದ ಶರಣಶಿರಸಗಿ ಕೇಂದ್ರವು ಖಚಿತಪಡಿಸಿದೆ.

‘ಗಡಿಕೇಶ್ವಾರ, ರುದ್ನೂರು, ರಾಯಕೋಡ, ಭೂತ್ಪೂರ, ಕುಪನೂರ, ಸುಲೇಪೇಟ, ಹೊಡೆಬೀರನಹಳ್ಳಿ, ಮರನಾಳ, ಭಂಟನಳ್ಳಿ, ಬೆನಕನಳ್ಳಿ, ಕೊರವಿ, ಕೊರವಿ ತಾಂಡಾ, ಕುಡಳ್ಳಿ, ನಾವದಗಿ, ಹೊಸಳ್ಳಿ (ಎಚ್), ಹಲಚೇರಾ, ತೇಗಲತಿಪ್ಪಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾರದ ಅವಧಿಯಲ್ಲಿ ಏಳು ಬಾರಿ ಭೂಮಿ ಕಂಪಿಸಿದೆ. ಹೀಗೆ ನಿರಂತರವಾಗಿ ಭೂಮಿ ಕಂಪಿಸುತ್ತಿರುವುದು ಇದೇ ಮೊದಲು’ ಎಂದು ಗಡಿಕೇಶ್ವಾರ ಗ್ರಾಮದ ಮುಖಂಡ ರೇವಣಸಿದ್ದಪ್ಪ ಅಣಕಲ್ ಹೇಳಿದರು.

‘ಮಂಗಳವಾರ ಬೆಳಿಗ್ಗೆ ಎದ್ದು ನಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬೇಕು ಎನ್ನುವಷ್ಟರಲ್ಲಿ ಗ್ರಾಮದ ಹೊರಗಿನಿಂದ ಭಾರಿ ಶಬ್ದ ಕೇಳಿಬಂತು. ಅದರ ಬೆನ್ನಲ್ಲೇ ಭೂಮಿ ತೂಗಿದ ಅನುಭವವಾಯಿತು’ ಎಂದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ ಪ್ರತಿನಿಧಿ ಎದುರು ಗ್ರಾಮದ ಮುಖಂಡ ಮಂಗಳಮೂರ್ತಿ ಅನುಭವ ಹಂಚಿಕೊಂಡರು.

ಮುಕ್ಕಾಲು ಭಾಗ ಊರು ಖಾಲಿ: ಗಡಿಕೇಶ್ವಾರದಲ್ಲಿ 800 ಮನೆಗಳಿವೆ. ಪದೇಪದೇ ಸಂಭವಿಸುತ್ತಿರುವ ಭೂಕಂಪನದ ಕಾರಣ ಈಗಾಗಲೇ 500ಕ್ಕೂ ಹೆಚ್ಚು ಕುಟುಂಬಗಳು ಮನೆ ಖಾಲಿ ಮಾಡಿವೆ. ಬೇರೆ ಊರುಗಳಲ್ಲಿರುವ ಸಂಬಂಧಿಕರು, ಸ್ನೇಹಿತರ ಬಳಿಗೆ ಕೆಲವರು ತೆರಳಿದ್ದರೆ, ಇನ್ನೂ ಹಲವರು ಹೊಲಗಳಲ್ಲಿ ಹಾಕಿದ ಗುಡಿಸಲಿನಲ್ಲಿ ಆಶ್ರಯ ಪಡೆದಿದ್ದಾರೆ. ಮಂಗಳವಾರವೂ ಜೀವನಾವಶ್ಯಕ ಸಾಮಗ್ರಿಗಳನ್ನು ಕಟ್ಟಿಕೊಂಡು ಜನ ಬಸ್‌, ಟ್ರ್ಯಾಕ್ಟರ್‌, ಟೆಂಪೊ, ಬೈಕ್‌ ಏರಿ ಬೇರೆಡೆ ಹೊರಟಿರುವುದು ಕಂಡುಬಂತು.

***

ಮನೆಯ ಒಳಗಡೆ ಹೋಗಲು ಹೆದರಿಕೆ ಆಗುತ್ತಿದೆ. ಹೀಗಾಗಿ ನಾಲ್ಕು ದಿನಗಳಿಂದ ಮನೆಯ ಹೊರಗಿನ ಬಯಲಿನಲ್ಲಿಯೇ ಗುಂಡುಕಲ್ಲು ಇಟ್ಟುಕೊಂಡು ಒಂದಷ್ಟು ಅಕ್ಕಿ, ಬೇಳೆ ಬೇಯಿಸಿಕೊಳ್ಳುತ್ತಿದ್ದೇನೆ

- ಕಮಲಾಬಾಯಿ ಪಸಾರ, ಗಡಿಕೇಶ್ವಾರ ಗ್ರಾಮದ ಗೃಹಿಣಿ

ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಬೆಳಿಗ್ಗೆ ಮತ್ತೆ ಎರಡು ಬಾರಿ ಭೂಕಂಪನವಾಗಿದ್ದು, ಭಯಭೀತರಾಗಿರುವ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT