×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ ಚುನಾವಣೆ 2022: ಅಯೋಧ್ಯೆ, ಮಥುರಾ ಬಿಜೆಪಿಗೆ ಸುರಕ್ಷಿತವಲ್ಲ

ಫಾಲೋ ಮಾಡಿ
Comments

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗೋರಖಪುರದಿಂದ ಸ್ಪರ್ಧಿಸುವುದು ಗೋರಖಪುರ–ಬಸ್ತಿ ವಿಭಾಗದ 40ಕ್ಕೂ ಹೆಚ್ಚು ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ. ಈ ಭಾಗದ ಹಲವು ಮುಖಂಡರು ಪಕ್ಷ ಬದಲಾಯಿಸಿದ್ದಾರೆ. ಹಾಗಾಗಿ, ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ವೃದ್ಧಿಸಲು ಪ್ರಬಲ ಅಭ್ಯರ್ಥಿಯೊಬ್ಬರು ಇಲ್ಲಿಂದ ಸ್ಪರ್ಧಿಸುವ ಅಗತ್ಯ ಇತ್ತು ಎಂದು ಬಿಜೆಪಿಯ  ಸ್ಥಳೀಯ ಮುಖಂಡರೊಬ್ಬರು ಹೇಳಿದ್ಧಾರೆ. 

ಅಯೋಧ್ಯೆ ಮತ್ತು ಮಥುರಾ ‘ಸುರಕ್ಷಿತ ಕ್ಷೇತ್ರಗಳು’ ಅಲ್ಲ ಎಂಬ ಭಾವನೆ ಪಕ್ಷದಲ್ಲಿ ಇರುವುದರಿಂದಲೇ ಯೋಗಿ ಅವರು ಗೋರಖಪುರವನ್ನು ಆಯ್ದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.  

ರಾಮದೇಗುಲಕ್ಕೆ ಸಾಗುವ ಕಿರಿದಾದ ದಾರಿಯ ಇಕ್ಕೆಲಗಳಲ್ಲಿ ಇದ್ದ ಹತ್ತಾರು ಅಂಗಡಿಗಳನ್ನು ರಾಮ ಮಂದಿರ ನಿರ್ಮಾಣಕ್ಕಾಗಿ ತೆರವು ಮಾಡಲಾಗಿದೆ. ಇದರಿಂದಾಗಿ, ಇಲ್ಲಿನ ವರ್ತಕ ಸಮುದಾಯವು ಬಿಜೆಪಿ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ. ತೆರವುಗೊಳಿಸುವ ಸಂದರ್ಭದಲ್ಲಿ ವರ್ತಕರು ಪ್ರತಿಭಟನೆಯನ್ನೂ ಮಾಡಿದ್ದರು. ಬೇರೆಡೆಗೆ ಜಾಗ ಕೊಡಬೇಕು ಎಂಬ ಬೇಡಿಕೆಯನ್ನೂ ಇಟ್ಟಿದ್ದರು. ಪಟ್ಟಣದ ವಿಸ್ತರಣೆಗೆ ಭೂ ಸ್ವಾಧೀನಕ್ಕೂ ವಿರೋಧ ವ್ಯಕ್ತವಾಗಿತ್ತು ಎಂದು ಮೂಲಗಳು ಹೇಳಿವೆ.

ಯೋಗಿ ಅವರು ಅಯೋಧ್ಯೆಯಿಂದ ಸ್ಪರ್ಧಿಸಬಾರದು, ಬದಲಿಗೆ ಅವರು ಗೋರಖಪುರವನ್ನೇ ಆಯ್ದುಕೊಳ್ಳಬೇಕು ಎಂದು ತಾತ್ಕಾಲಿಕ ರಾಮ ಮಂದಿರದ ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ ಇತ್ತೀಚೆಗೆ ಹೇಳಿದ್ದರು. 

ಶ್ರೀಕೃಷ್ಣ ಜನ್ಮಭೂಮಿಗೆ ಸಂಬಂಧಿಸಿ ಹೋರಾಟ ಮಾಡಲು ಬಿಜೆಪಿ ಮುಂದಾಗಿದ್ದರೂ ಮಥುರಾ ಕ್ಷೇತ್ರವು ಬಿಜೆಪಿಗೆ ಸುರಕ್ಷಿತವಲ್ಲ. ಏಕೆಂದರೆ, ಮಥುರಾದಲ್ಲಿ ಗಣನೀಯ ಸಂಖ್ಯೆಯ ಬ್ರಾಹ್ಮಣ ಮತದಾರರಿದ್ದಾರೆ. ಕಾಂಗ್ರೆಸ್‌ ಮುಖಂಡ ಪ್ರದೀಪ್‌ ಮಥುರಾ ಅವರು ಈ ಕ್ಷೇತ್ರದಲ್ಲಿ ಭಾರಿ ಜನಪ್ರಿಯತೆ ಹೊಂದಿದ್ದಾರೆ. ಅಲ್ಲದೆ, ಈ ಹಿಂದೆ ಹಲವು ಬಾರಿ ಅವರು ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ಮಥುರಾ, ಪ್ರಯಾಗರಾಜ್‌, ಅಯೋಧ್ಯೆ ಅಥವಾ ದೇವಬಂದ್‌ನಿಂದ ಯೋಗಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಅವರನ್ನು ಬಿಜೆಪಿಯೇ ಮನೆಗೆ (ಗೋರಖಪುರ) ಕಳುಹಿಸಿದೆ

- ಅಖಿಲೇಶ್‌ ಯಾದವ್‌, ಎಸ್‌ಪಿ ಮುಖ್ಯಸ್ಥ

ಇದು ನಮಗೆ ಸುರಕ್ಷಿತ ಕ್ಷೇತ್ರ. ಆದಿತ್ಯನಾಥ ಅವರು ಮಹಾಂತ ಆಗಿರುವ ಗೋರಖನಾಥ ದೇಗುಲದ ಭಕ್ತರು ಇಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಯೋಗಿ ಅವರು ಇಲ್ಲಿ ಗೆಲ್ಲಲು ಸಮಸ್ಯೆಯೇ ಇಲ್ಲ

- ಸ್ಥಳೀಯ ಬಿಜೆಪಿ ಮುಖಂಡ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗೋರಖಪುರದಿಂದ ಸ್ಪರ್ಧಿಸುವುದು ಗೋರಖಪುರ–ಬಸ್ತಿ ವಿಭಾಗದ 40ಕ್ಕೂ ಹೆಚ್ಚು ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT