ಪಣಜಿ: ಗೋವಾ ವಿಧಾನಸಭೆ ಚುನಾವಣೆಗಾಗಿ ಎನ್‌ಸಿಪಿ ಮತ್ತು ಶಿವಸೇನಾ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ. ಆದರೆ, ಮೂರು ಪಕ್ಷಗಳ ಮೈತ್ರಿ ಮಾತುಕತೆಯಿಂದ ಕಾಂಗ್ರೆಸ್ ಹಿಂದಕ್ಕೆ ಸರಿಯಿತು ಎಂದು ಈ ಎರಡೂ ಪಕ್ಷಗಳು ಆರೋಪಿಸಿವೆ. ಮಹಾರಾಷ್ಟ್ರದಲ್ಲಿ ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸೇರಿಕೊಂಡು ಮಹಾವಿಕಾಸ ಅಘಾಡಿ (ಎಂವಿಎ) ಎಂಬ ಮೈತ್ರಿಕೂಟ ರಚಿಸಿ ಸರ್ಕಾರ ನಡೆಸುತ್ತಿವೆ.
‘ಎಂವಿಎಯನ್ನು ಮಹಾರಾಷ್ಟ್ರದಿಂದ ಗೋವಾಕ್ಕೆ ವಿಸ್ತರಿಸಲು ನಾವು ಬಯಸಿದ್ದೆವು. ಇಲ್ಲಿ ಕಾಂಗ್ರೆಸ್ ಪಕ್ಷವು ಮುಖ್ಯ ಪಾತ್ರ ವಹಿಸಬಹುದಿತ್ತು. ನಾವು (ಸೇನಾ ಮತ್ತು ಎನ್‌ಸಿಪಿ) ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದಿತ್ತು’ ಎಂದು ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ಹೇಳಿದ್ದಾರೆ.