ಪಣಜಿ (ಪಿಟಿಐ): ಗೋವಾ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಆಮ್ ಆದ್ಮಿ ಪಕ್ಷವು (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಕೀಲ ಹಾಗೂ ರಾಜಕಾರಣಿ ಅಮಿತ್ ಪಾಲೇಕರ್ ಅವರ ಹೆಸರನ್ನು ಬುಧವಾರ ಘೋಷಿಸಿದೆ. 46 ವರ್ಷದ ಪಾಲೇಕರ್ ಅವರು ಕಳೆದ ಅಕ್ಟೋಬರ್ನಲ್ಲಿ ಎಎಪಿ ಸೇರ್ಪಡೆಯಾಗಿದ್ದರು. ಇವರನ್ನು ಸೇಂಟ್ ಕ್ರೂಸ್ ವಿಧಾನಸಭಾ ಕ್ಷೇತ್ರದಿಂದ ಪಕ್ಷ ಕಣಕ್ಕಿಳಿಸಲಿದೆ.
ಅಮಿತ್ ಪಾಲೇಕರ್ ಅವರ ಹೆಸರು ಪ್ರಕಟಿಸಿದ ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಗೋವಾ ಜನರು ಬದಲಾವಣೆ ಬಯಸಿದ್ದಾರೆ ಎಂದಿದ್ದಾರೆ. ‘ಎಎಪಿಗೆ ರಾಜ್ಯದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೆಹಲಿ ಮಾದರಿಯ ಆಡಳಿತದಿಂದ ಗೋವಾದ ಜನರು ಸಾಕಷ್ಟು ಪ್ರಭಾವಿತರಾಗಿದ್ದಾರೆ’ ಎಂದರು.