ನವದೆಹಲಿ: ಗೋವಾ ವಿಧಾನಸಭೆಗೆ ಫೆ. 14ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದೆ. ಅವರ ಬದಲಾಗಿ, ಪಣಜಿ ಕ್ಷೇತ್ರದಿಂದ ಅಟಾನಾಸಿಯೊ ಬಾಬುಸಾ ಮಾನ್ಸೆರೇಟ್ ಅವರು ಸ್ಪರ್ಧಿಸಲಿದ್ದಾರೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸಾಂಕ್ವೇಲಿಯಂ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.

ಮನೋಹರ್ ಪರಿಕ್ಕರ್ ಅವರ ಕ್ಷೇತ್ರವಾಗಿದ್ದ ಪಣಜಿಯಿಂದ ಕಣಕ್ಕಿಳಿಯುವ ಇಚ್ಛೆಯನ್ನು ಉತ್ಪಲ್ ವ್ಯಕ್ತಪಡಿಸಿದ್ದರೂ, ಪಕ್ಷ ಅವರಿಗೆ ಟಿಕೆಟ್ ನೀಡಿಲ್ಲ. ಕಾಂಗ್ರೆಸ್‌ನ ಮಾಜಿ ಸದಸ್ಯರಾಗಿದ್ದ ಮಾನ್ಸೆರೇಟ್ ಅವರು ಪಣಜಿ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ.

ಇಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೋವಾ ಉಸ್ತುವಾರಿ ದೇವೇಂದ್ರ ಫಣಡವಿಸ್ ಅವರು ಉತ್ಪಲ್ ಅವರಿಗೆ ಟಿಕೆಟ್ ಸಿಗದಿರುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ.

‘ಉತ್ಪಲ್ ಅವರು ಪ್ರತಿನಿಧಿಸಬೇಕು ಎಂದು ಬಯಸಿರುವ ಪಣಜಿ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಶಾಸಕರಿದ್ದಾರೆ. ಅವರನ್ನು ಬದಲಿಸುವುದು ಸರಿಯಲ್ಲ. ಬೇರೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಆಯ್ಕೆಯನ್ನು ಉತ್ಪಲ್ ಅವರಿಗೆ ನೀಡಲಾಗಿದೆ. ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆ’ ಎಂದು ಫಡಣವೀಸ್ ತಿಳಿಸಿದ್ದಾರೆ.

ಕುಟುಂಬ ರಾಜಕೀಯಕ್ಕೆ ಮಣೆ?: ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು 34 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಇಬ್ಬರು ದಂಪತಿಗಳು ಪಟ್ಟಿಯಲ್ಲಿರುವುದು ವಿಶೇಷ. ಪಣಜಿಯಿಂದ ಸ್ಪರ್ಧಿಸುತ್ತಿ ರುವ ಮಾನ್ಸೆರೇಟ್ ಅವರ ಪತ್ನಿಗೆ ತಲೈಗೋವಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಹಾಗೆಯೇ, ಮತ್ತೊಬ್ಬ ಮಾಜಿ ಕಾಂಗ್ರೆಸಿಗ ವಿಶ್ವಜಿತ್ ರಾಣೆ ಅವರು ವಾಲ್ಪೋಯಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಅವರ ಪತ್ನಿ ದಿವ್ಯ ರಾಣೆ ಅವರು ಪೋರಿಯಂ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಎರಡೂ ಜೋಡಿಗಳು ಈ ಹಿಂದೆ ಸಾಂಪ್ರದಾಯಿಕ ಕಾಂಗ್ರೆಸ್ ಕುಟುಂಬಕ್ಕೆ ಸೇರಿದ್ದವು.

ಸಾಮಾನ್ಯವಾಗಿ ಕುಟುಂಬದ ಒಬ್ಬರಿಗೆ ಟಿಕೆಟ್ ನೀಡುವ ಪದ್ಧತಿ ಅನುಸರಿಸಿಕೊಂಡು ಬರುತ್ತಿರುವ ಬಿಜೆಪಿಯು ಗೋವಾದಲ್ಲಿ ಮಾತ್ರ ಕುಟುಂಬದ ಇಬ್ಬರಿಗೆ ಏಕೆ ಟಿಕೆಟ್ ನೀಡಿದೆ ಎಂದು ಫಡಣವೀಸ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದರು.

‘ರಾಜಕೀಯದಲ್ಲಿ ಕೆಲವೊಮ್ಮೆ ಇಂತಹ ಪರಿಸ್ಥಿತಿಗಳನ್ನು ನಾವು ಕಾಣುತ್ತೇವೆ. ಮಾನ್ಸೆರೇಟ್ ಮತ್ತು ಅವರ ಪತ್ನಿ ಇಬ್ಬರೂ ಶಾಸಕರಾಗಿ ಚುನಾಯಿತರಾಗಿ, ಬಳಿಕ ಬಿಜೆಪಿ ಸೇರಿದ್ದರು. ಜೆನ್ನಿಫರ್ ಮಾನ್ಸೆರೇಟ್ ಅವರು ತಮ್ಮದೇ ಪ್ರತ್ಯೇಕವಾದ ಅಸ್ಮಿತೆ ಹೊಂದಿದ್ದಾರೆ. ಮೇಲಾಗಿ ಅವರು ಪ್ರಸ್ತುತ ಸರ್ಕಾರದಲ್ಲಿ ಸಚಿವೆ ಆಗಿದ್ದಾರೆ. ವಿಶ್ವಜಿತ್ ರಾಣೆಗೆ ಅವರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಪತ್ನಿಗೆ ರಾಣೆ ಅವರ ತಂದೆ ಪ್ರತಾಪ್‌ಸಿಂಗ್ ರಾಣೆ ಪ್ರತಿನಿಧಿಸುತ್ತಿದ್ದ ಕ್ಷೇತ್ರ ನೀಡಲಾಗಿದೆ’ ಎಂದಿದ್ದಾರೆ.

ತಮ್ಮ ಹಾಲಿ ಕ್ಷೇತ್ರವಾದ ಪೋರಿಯಂನಿಂದ ತಮ್ಮ ಸೊಸೆ ಸ್ಪರ್ಧಿಸಲು ಹಿರಿಯ ಕಾಂಗ್ರೆಸಿಗ ಹಾಗೂ ಹಾಲಿ ಶಾಸಕ ಪ್ರತಾಪ್‌ಸಿಂಗ್ ರಾಣೆ ಒಪ್ಪಿಕೊಂಡಿದ್ದಾರೆ ಎಂದು ಫಡಣವೀಸ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 50 ವರ್ಷಗಳಿಂದ ಕಾಂಗ್ರೆಸ್ ಟಿಕೆಟ್‌ನಡಿ ಇಲ್ಲಿಂದ ಗೆಲ್ಲುತ್ತಿರುವ ರಾಣೆ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿತ್ತು. ಆದರೆ ಅವರು ಒಪ್ಪದ ಕಾರಣ ಅವರ ಸೊಸೆಗೆ ಟಿಕೆಟ್ ನೀಡಲಾಗಿದೆ ಎಂದು ಫಡಣವೀಸ್ ತಿಳಿಸಿದರು.

ಆದರೆ ಫಡಣವೀಸ್ ಮಾತನ್ನು ರಾಣೆ ತಳ್ಳಿಹಾಕಿದ್ದಾರೆ. ಫಡಣವೀಸ್ ಅವರ ಭೇಟಿಯಲ್ಲಿ ರಾಜಕೀಯ ಚರ್ಚೆಯಾಗಿಲ್ಲ. ನಾನು ನನ್ನ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆಯೋ ಅಥವಾ ಇಲ್ಲವೋ ಎಂಬುದು ಬೇರೆ ವಿಚಾರ. ನನ್ನ ಹೆಸರನ್ನು ಅನಗತ್ಯವಾಗಿ ಚರ್ಚಿಸಲಾಗಿದೆ ಎಂದು ಪ್ರತಾಪ್‌ಸಿಂಗ್ ಹೇಳಿದ್ದಾರೆ.

ಕಳಂಕಿತರಿಗೆ ಟಿಕೆಟ್?: ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಬಿಜೆಪಿ, ಕಳಂಕಿತರಿಗೆ ಟಿಕೆಟ್ ನೀಡಿದೆ ಎಂಬ ಆರೋಪಗಳು ಕೇಳಿಬಂದಿವೆ. ಮಾನ್ಸೆರೇಟ್ ಅವರು ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದಾರೆ. ಅಲ್ಲದೆ, ಎರಡು ದಶಕಗಳ ಹಿಂದೆ ಗುಂಪಿನೊಂದಿಗೆ ನಗರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ಆರೋಪವನ್ನೂ ಎದುರಿಸುತ್ತಿದ್ದಾರೆ.

ಕಳೆದ ತಿಂಗಳು ಲೈಂಗಿಕ ಹಗರಣ ದಲ್ಲಿ ಹೆಸರು ಕೇಳಿಬಂದಿದ್ದ ಮಾಜಿ ಸಚಿವ ಮಿಲಿಂದ್ ನಾಯಕ್ ಅವರಿಗೂ ಪಕ್ಷ ಟಿಕೆಟ್ ನೀಡಿದೆ. ಹಗರಣ ಬೆಳಕಿಗೆ ಬಂದ ಬಳಿಕ ಅವರನ್ನು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಸಂಪುಟದಿಂದ ಕೈಬಿಡಲಾಗಿತ್ತು. ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್, ಹಾಲಿ ಸಚಿವ ದೀಪಕ್ ಪ್ರಭು ಪುಸ್ಕರ್ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಬಿಜೆಪಿ ತೊರೆದ ಶಾಸಕ

ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಕೆಲವೇ ವಾರಗಳು ಬಾಕಿಯಿರುವಾಗ, ಶಾಸಕ ವಿಲ್ಫ್ರೆಡ್ ಡಿಸಾ ಅವರು ಬುಧವಾರ ಬಿಜೆಪಿ ತೊರೆದಿದ್ದಾರೆ. ಶಾಸಕ ಸ್ಥಾನ ಹಾಗೂ ಪಕ್ಷದ ಸದಸ್ಯತ್ವ ಎರಡಕ್ಕೂ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ಫೆ.14ರಂದು ನಡೆಯಲಿರುವ ಚುನಾವಣೆಯಲ್ಲಿ ತಾವು ಪಕ್ಷೇತರರಾಗಿ ಸ್ಪರ್ಧೆ ಮಾಡುವ ಇಂಗಿತವನ್ನು ವಿಲ್ಫ್ರೆಡ್ ವ್ಯಕ್ತಪಡಿಸಿದ್ದಾರೆ. 2017ರ ಚುನಾವಣೆಯಲ್ಲಿ ನುವೆಮ್ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಅವರು, 2019ರಲ್ಲಿ ಇತರ 9 ಶಾಸಕರ ಜೊತೆಗೂಡಿ ಬಿಜೆಪಿ ಸೇರಿದ್ದರು.

ಚುನಾವಣೆಗೂ ಮುನ್ನ ಪಕ್ಷವನ್ನು ತೊರೆಯುವ ಮಾಹಿತಿಯನ್ನು ಬಿಜೆಪಿ ನಾಯಕರಿಗೆ ತಿಳಿಸಿದ್ದಾಗಿ ವಿಲ್ಫ್ರೆಡ್ ಮಾಹಿತಿ ನೀಡಿದ್ದಾರೆ. 2022ರ ಚುನಾವಣೆಯನ್ನು ಬಿಜೆಪಿ ಟಿಕೆಟ್ ಮೇಲೆ ಎದುರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಉತ್ಪಲ್‌ಗೆ ಎಎಪಿ ಆಹ್ವಾನ

ಉತ್ಪಲ್ ಅವರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ ನಡೆಯನ್ನು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಖಂಡಿಸಿದ್ದಾರೆ. ಬಳಸಿ ಬಿಸಾಕುವ ಸಂಸ್ಕೃತಿಯನ್ನು ಬಿಜೆಪಿ ಪಾಲಿಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಉತ್ಪಲ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿರುವ ಕೇಜ್ರಿವಾಲ್, ಎಎಪಿ ಟಿಕೆಟ್‌ನಡಿ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.

ಪಣಜಿ ಕ್ಷೇತ್ರ ಹೊರತುಪಡಿಸಿ, ಬೇರೆ ಆಯ್ಕೆಗಳನ್ನು ಉತ್ಪಲ್ ಅವರಿಗೆ ನೀಡಲಾಗಿತ್ತು ಎಂದು ಬಿಜೆಪಿ ತಿಳಿಸಿದೆ. ಆದರೆ ಉತ್ಪಲ್ ಅವರು ಈ ಎರಡೂ ಆಯ್ಕೆಗಳನ್ನು ನಿರಾಕರಿಸಿದ್ದಾರೆ. ಉತ್ಪಲ್ ಅವರು ಎರಡು ದಿನಗಳಲ್ಲಿ ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ. ಟಿಕೆಟ್ ನಿರಾಕರಿಸಿರುವುದರಿಂದ ಬೇಸರಗೊಂಡು ಪಕ್ಷವನ್ನು ತೊರೆಯಬೇಡಿ ಎಂದು ಸಚಿವರೊಬ್ಬರು ಉತ್ಪಲ್ ಅವರಲ್ಲಿ ಮನವಿ ಮಾಡಿದ್ದಾರೆ.

ಗೋವಾ ವಿಧಾನಸಭೆಗೆ ಫೆ. 14ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಗುರುವಾರ ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.