×
ADVERTISEMENT
ಈ ಕ್ಷಣ :
ADVERTISEMENT

ರೈಲು ಹಳಿಗಳ ಮೇಲೆ ರೈತರ ಧರಣಿ

ಪಂಜಾಬ್‌, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶದಲ್ಲಿ ರೈಲು ತಡೆ: 60 ರೈಲುಗಳ ಸಂಚಾರ ವ್ಯತ್ಯಯ
ಫಾಲೋ ಮಾಡಿ
Comments

ನವದೆಹಲಿ/ಚಂಡಿಗಡ/ಜೈಪುರ (ಪಿಟಿಐ): ಲಖಿಂಪುರ–ಖೇರಿ ಹಿಂಸಾಚಾರ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆ ನೀಡಿದ್ದ ಆರು ಗಂಟೆಗಳ ‘ರೈಲುತಡೆ’ ಚಳವಳಿ ಅಂಗವಾಗಿ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ರೈತರು ರೈಲು ಹಳಿಗಳ ಮೇಲೆ ಕುಳಿತು ಸೋಮವಾರ ಪ್ರತಿಭಟನೆ ನಡೆಸಿದರು.

ಉತ್ತರ ರೈಲ್ವೆ ವಲಯದ 150 ಸ್ಥಳಗಳಲ್ಲಿ ಪ್ರತಿಭಟನೆ ಪರಿಣಾಮ ಬೀರಿತು. ಸುಮಾರು 60 ರೈಲುಗಳ ಓಡಾಟಕ್ಕೆ ಅಡ್ಡಿಯುಂಟಾಗಿತ್ತು. ವಾಯವ್ಯ ರೈಲ್ವೆ ವಲಯಕ್ಕೆ ಸೇರುವ ರಾಜಸ್ಥಾನ ಮತ್ತು ಹರಿಯಾಣದ ಕೆಲವು ವಿಭಾಗಗಳಲ್ಲಿ ರೈಲು ಸಂಚಾರದ ಮೇಲೆ ಪರಿಣಾಮ ಉಂಟಾಯಿತು. 18 ರೈಲುಗಳನ್ನು ರದ್ದುಪಡಿಸಲಾಯಿತು. 10 ರೈಲುಗಳ ಮಾರ್ಗ ಬದಲಿಸಲಾಯಿತು. 

ಪಂಜಾಬ್‌ನ ಲುಧಿಯಾನ, ಅಮೃತಸರ, ಜಲಂಧರ್, ಮೊಗಾ, ಪಟಿಯಾಲ ಮತ್ತು ಫಿರೋಜ್‌ಪುರ ಮತ್ತು ಹರಿಯಾಣದ ಚಾರ್ಖಿ ದಾದ್ರಿ, ಸೋನಿಪತ್, ಕುರುಕ್ಷೇತ್ರ, ಜಿಂದ್, ಕರ್ನಾಲ್ ಮತ್ತು ಹಿಸ್ಸಾರ್‌ನಲ್ಲಿ ರೈತರು ಪ್ರತಿಭಟನೆ ನಡೆಸಿದರು.

ಉತ್ತರ ಪ್ರದೇಶದ ಮುಜಾಫ್ಫರ್‌ ನಗರದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಕಾರ್ಯಕರ್ತರು ಅಮೃತಸರ-ದೆಹಲಿ ಮತ್ತು ಜಲಂಧರ್ ಎಕ್ಸ್‌ಪ್ರೆಸ್ ರೈಲುಗಳನ್ನು ತಡೆದರು. ಮೀರಠ್ ಮತ್ತು ಗ್ರೇಟರ್ ನೋಯ್ಡಾದ ಡಂಕೌರ್ ನಿಲ್ದಾಣಗಳಲ್ಲಿ ರೈಲುಗಳಿಗೆ ತಡೆ ಒಡ್ಡಲಾಯಿತು. ಗಾಜಿಯಾಬಾದ್‌ನ ಮೋದಿನಗರದಲ್ಲಿ ಸರಕು ಸಾಗಾಟ ರೈಲಿನ ಮುಂದೆ ಪ್ರತಿಭಟನೆ ನಡೆಸಲಾಯಿತು. 

‌ನವದೆಹಲಿ-ಅಮೃತಸರ ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಶಂಭು ನಿಲ್ದಾಣದ ಬಳಿ ತಡೆಯಲಾಯಿತು. ಕಡಿಮೆ ಜನಸಂಚಾರ ಮತ್ತು ಅಲ್ಪ-ದೂರದ 25  ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಮಹಿಳೆಯರು ಸೇರಿದಂತೆ ಪ್ರತಿಭಟನನಿರತ ರೈತರು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು. ಪ್ರತಿಭಟನೆಯ ಕಾರಣದಿಂದ ರೈಲು ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ರಾಜಸ್ಥಾನದಲ್ಲಿ ರೈತರು ಹನುಮಂತಗಡ ಜಿಲ್ಲೆಯಲ್ಲಿ ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಜೈಪುರ ಜಂಕ್ಷನ್ ನಿಲ್ದಾಣದ ಪ್ರವೇಶದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ಬಿಕಾನೇರ್ ವಿಭಾಗದ ಶ್ರೀಗಂಗಾನಗರದಲ್ಲಿ ಧರಣಿ ನಡೆಯಿತು. 

ಪ್ರತಿಭಟನೆಯ ಅರಿವಿಲ್ಲದೆ ಲುಧಿಯಾನ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಪ್ರತಿಭಟನನಿರತ ರೈತರ ಜೊತೆ ಚರ್ಚಿಸಿದರು. ‘ರಾಜಕಾರಣಿಗಳ ಮೇಲಿನ ಸಿಟ್ಟಿಗೆ ಸಾಮಾನ್ಯ ಜನಗಳಿಗೆ ಏಕೆ ತೊಂದರೆ ನೀಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ರೈಲು ನಿಲುಗಡೆ ಮಾಡಿದ್ದರಿಂದ, ಪಟಿಯಾಲ ನಿಲ್ದಾಣದಲ್ಲಿ ದಿನೇಶ್ ಜೋಶಿ ಎಂಬ ಪ್ರಯಾಣಿಕರು ತಮ್ಮ ಮಗುವಿಗೆ ಹಾಲು ಮತ್ತು ಬಿಸಿ ನೀರಿಗಾಗಿ ಅಲೆದಾಡಬೇಕಾಯಿತು. 

ಮೊಗಾ ಎಂಬಲ್ಲಿ ಪ್ರತಿಭಟನಕಾರರು ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಕೂಗಿದರು. ಲಖಿಂಪುರ್ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಚಿತ್ರಗಳನ್ನು ಇರಿಸಿ ಪ್ರತಿಭಟನೆ ನಡೆಸಿದರು.

ಒಡಿಶಾದ ಈಸ್ಟ್ ಕೋಸ್ಟ್ ರೈಲ್ವೆ ವಿಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯಿಂದ ರೈಲುಸೇವೆ 30 ನಿಮಿಷದಿಂದ ಒಂದು ಗಂಟೆಯವರೆಗೆ ವ್ಯತ್ಯಯವಾಯಿತು. ರೈಲು ತಡೆಗೆ ಕಾಂಗ್ರೆಸ್, ಎಎಪಿ ಹಾಗೂ ಎಡಪಕ್ಷಗಳು ಬೆಂಬಲ ಸೂಚಿಸಿದ್ದವು. 

ರೈಲು ತಡೆ ಪ್ರತಿಭಟನೆಯಿಂದ ದೆಹಲಿಯಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ಧಾರೆ. ಕೆಲವೆಡೆ ರೈಲು ಹಳಿಗಳಲ್ಲಿ ಪ್ರತಿಭಟನೆಗಳನ್ನು ಹೊರತುಪಡಿಸಿದರೆ, ರೈಲು ತಡೆ ಚಳವಳಿಯಿಂದ ಉತ್ತರ ಪ್ರದೇಶದಲ್ಲಿ ಭಾರಿ ತೊಂದರೆ ಉಂಟಾಗಿಲ್ಲ. ರಾಜ್ಯದ ಕೆಲವೆಡೆ ರೈತರು ಸಂಕ್ಷಿಪ್ತವಾಗಿ ಪ್ರತಿಭಟನೆ ನಡೆಸಿದರು. ರೈಲು ನಿಲ್ದಾಣಗಳಲ್ಲಿ ಮತ್ತು ಸುತ್ತಮುತ್ತ ಭಾರಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು.

 ಲಖಿಂಪುರ–ಖೇರಿ ಹಿಂಸಾಚಾರ ಖಂಡಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆ ನೀಡಿದ್ದ ಆರು ಗಂಟೆಗಳ ‘ರೈಲುತಡೆ’ ಚಳವಳಿ ಅಂಗವಾಗಿ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವು ಕಡೆಗಳಲ್ಲಿ ರೈತರು ರೈಲು ಹಳಿಗಳ ಮೇಲೆ ಕುಳಿತು ಸೋಮವಾರ ಪ್ರತಿಭಟನೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT