×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ: ಮಂಜುನಾಥ ಗೌಡರ ಸುತ್ತ ಡಿಸಿಸಿ ಬ್ಯಾಂಕ್ ಹಗರಣ

Published : 16 ಅಕ್ಟೋಬರ್ 2021, 20:31 IST
ಫಾಲೋ ಮಾಡಿ
Comments

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಗಾಂಧಿಬಜಾರ್ ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟುಕೊಂಡು ₹ 62.77 ಕೋಟಿ ವಂಚಿಸಿದ್ದ ಪ್ರಕರಣ 2014ರಲ್ಲಿ ಪತ್ತೆಯಾಗಿತ್ತು.

ಗಾಂಧಿ ಬಜಾರ್‌ ಶಾಖೆಯಲ್ಲಿ ಬ್ಯಾಂಕ್‌ ವ್ಯವಸ್ಥಾಪಕಿ, ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿ ಹಣ ದೋಚಿದ್ದರು. ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸೇರಿ 18 ಜನರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣವನ್ನು ನಂತರ ಸಿಐಡಿಗೆ ವರ್ಗಾಯಿಸಲಾಗಿತ್ತು. 

22 ವರ್ಷಗಳ ಕಾಲ ಡಿಸಿಸಿ ಬ್ಯಾಂಕ್‌ನ ಅವಿಭಾಜ್ಯ ಅಂಗವಾಗಿ ಬೆಳೆದಿದ್ದ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಮಂಜುನಾಥ ಗೌಡರ ಹೆಸರು ಹಗರಣದಲ್ಲಿ ತಳುಕು ಹಾಕಿಕೊಂಡ ನಂತರ ಸಾಕಷ್ಟು ಕೋಲಾಹಲವಾಗಿತ್ತು. ಹಗರಣ ಬೆಳಕಿಗೆ ಬಂದ ಒಂದು ತಿಂಗಳಲ್ಲೇ ಸಾರ್ವಜನಿಕರು ₹ 200 ಕೋಟಿ ಠೇವಣಿ ಹಿಂದಕ್ಕೆ ಪಡೆದಿದ್ದರು. ಇದರಿಂದ ಬ್ಯಾಂಕ್‌ ಸಂಕಷ್ಟಕ್ಕೆ ಸಿಲುಕಿತ್ತು.

ತನಿಖೆ ನಡೆಸಿದ ಸಿಐಡಿ, ಹಗರಣದಲ್ಲಿ  ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡರ ಪಾತ್ರವಿಲ್ಲ ಎಂದು ಕ್ಲೀನ್‌ಚಿಟ್ ನೀಡಿತ್ತು. ಇತರೆ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಶಿಫಾರಸು ಮಾಡಿತ್ತು. ಸಿಐಡಿ ವರದಿಗೆ, ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಚಿನ್ನಾಭರಣ ಅಡಮಾನ ಸಾಲದ ಉಪ ಸಮಿತಿಗೆ 2004ರಿಂದ ಮಂಜುನಾಥ ಗೌಡರೇ ಮುಖ್ಯಸ್ಥರಾಗಿದ್ದಾರೆ. ದೋಷಾರೋಪ ಪಟ್ಟಿಯಿಂದ ಅವರ ಹೆಸರು ಕೈಬಿಟ್ಟಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಮುಖಂಡ ಕಿಮ್ಮನೆ ರತ್ನಾಕರ ಕಿಡಿಕಾರಿದ್ದರು. ಬ್ಯಾಂಕ್‌ನ ಅಧ್ಯಕ್ಷರನ್ನು ರಕ್ಷಿಸಲು ಅಂದಿನ ಕಾಂಗ್ರೆಸ್‌ ಸರ್ಕಾರ ಸಿಐಡಿಯನ್ನು ಬಳಸಿಕೊಂಡಿತ್ತು ಎಂದು ಇಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅಂದು ದೂರಿದ್ದರು.

ಈ ಮಧ್ಯೆ ಡಿಸಿಸಿ ಬ್ಯಾಂಕ್‌ಗೆ ನಡೆದ ಚುನಾವಣೆಯಲ್ಲಿ ಮಂಜುನಾಥ ಗೌಡರ ಬಣ ಜಯಗಳಿಸಿತ್ತು. ಮತ್ತೆ ಗೌಡರೇ ಅಧ್ಯಕ್ಷ ಗಾದಿಗೆ ಏರಿದ್ದರು. ಈ ಮಧ್ಯೆ ಸಹಕಾರ ಇಲಾಖೆ ಮಂಜುನಾಥ ಗೌಡರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿತ್ತು. ಕೋರ್ಟ್‌ನಿಂದ ತಡೆಯಾಜ್ಞೆ ತಂದರೂ, ಒತ್ತಡಕ್ಕೆ ಮಣಿದು ಗೌಡರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಜೆಪಿ ಬಣದ ಎಂ.ಬಿ. ಚನ್ನವೀರಪ್ಪ ಬ್ಯಾಂಕ್‌ ಅಧ್ಯಕ್ಷರಾದರು.

ಈ ಮಧ್ಯೆ ಸರ್ಕಾರ ಹಗರಣದ ವಿಸ್ತೃತ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು. ಮರು ತನಿಖೆ ನಡೆಸಿದ ಸಿಐಡಿ ಮಂಜುನಾಥ ಗೌಡರು ತಪ್ಪಿತಸ್ಥರು ಎಂದು ಪ್ರಸಕ್ತ ವರ್ಷದ ಸೆಪ್ಟೆಂಬರ್‌ನಲ್ಲಿ ವರದಿ ನೀಡಿದೆ. ಪುನಃ ಎಫ್‌ಐಆರ್ ದಾಖಲಿಸಿದೆ.

ಡಿಸಿಸಿ ಬ್ಯಾಂಕ್ ಗಾಂಧಿಬಜಾರ್ ಶಾಖೆಯಲ್ಲಿ ನಕಲಿ ಚಿನ್ನ ಅಡವಿಟ್ಟುಕೊಂಡು ₹ 62.77 ಕೋಟಿ ವಂಚಿಸಿದ್ದ ಪ್ರಕರಣ 2014ರಲ್ಲಿ ಪತ್ತೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT