ಸಂವಿಧಾನದ ವಿಧಿ 19 ಮಾತನಾಡುವ ಸ್ವಾತಂತ್ರ್ಯಕ್ಕಾಗಿ, 20 ಒಂದು ತಪ್ಪಿಗೆ ಅಪರಾಧದ ತೀವ್ರತೆಗಿಂತಲೂ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸುವಂತಿಲ್ಲ. ವಿಧಿ 21ರ ಪ್ರಕಾರ ಮನುಷ್ಯನಿಗೆ ಬದುಕುವ ಹಕ್ಕು ಇದೆ...

ಈ ಮೂರು ಹಕ್ಕುಗಳನ್ನು ಅನುಭವಿಸುವ ಅವಕಾಶ ಕೇಳಿದ್ದಕ್ಕಾಗಿ ಒಬ್ಬ ಅಮಾಯಕ ಮತ್ತು ಅವನ ಕುಟುಂಬವನ್ನು ಒಂದು ದಶಕಕ್ಕೂ ಹೆಚ್ಚು ಕಾಲ ವ್ಯವಸ್ಥೆಯು ಹಿಂಸಿಸಿದ ಕಥೆಯನ್ನು ಚಿತ್ರ–ದಾಖಲೆಯ ರೂಪದಲ್ಲಿ ಗಟ್ಟಿ ಅಧ್ಯಯನದ ಹಿನ್ನೆಲೆಯನ್ನೂ ಒಳಗೊಂಡು ಕಟ್ಟಿಕೊಟ್ಟಿದ್ದಾರೆ ಮಂಸೋರೆ.

ಕಾಯುವವರೇ ಕೊಲ್ಲಲು ಬಂದ ಕಥೆ ಇದು. ಒಟ್ಟಾರೆ ಇಡೀ ಚಿತ್ರ ನೋಡಿದ ಮೇಲೆ 2005ರಿಂದ ಇಲ್ಲಿಯವರೆಗೆ ‘ಕಾಯುವವರೆನಿಸಿಕೊಂಡವರು’ ತಾವು ಮಾಡುತ್ತಿರುವುದೇನು ಎನ್ನುವುದನ್ನು ಅಂತರಂಗ ಮುಟ್ಟಿಕೊಂಡು ನೋಡುವಂತೆ ಮಾಡಿದೆ ಈ ಚಿತ್ರ.

ಯುಎಪಿಎ ಮತ್ತು ದೇಶದ್ರೋಹದ ಕಾಯ್ದೆಯನ್ನು ಅಮಾಯಕರ ಮೇಲೆ ಪ್ರಯೋಗಿಸಿ ಅವರು ಜೀವನಪೂರ್ತಿ ಹಿಂಸೆ ಅನುಭವಿಸುವಂತೆ ಮಾಡಿದ ಅದೆಷ್ಟೋ ಘಟನೆಗಳ, ಸಂತ್ರಸ್ತರ ಪ್ರಾತಿನಿಧಿಕ ಕಥೆ ಇದು ಎಂದೂ ಭಾವಿಸಬಹುದು.

ಮೊದಲರ್ಧವು ಛಾಯಾಗ್ರಹಣ, ಕಾಡಿನ ಅಗಾಧತೆ, ಸೌಂದರ್ಯ ಮತ್ತು ಅಲ್ಲಿನ ಸಹಜತೆಯಿಂದ ಗಮನ ಸೆಳೆಯುತ್ತದೆ. ನಕ್ಸಲ್ ನಿಗ್ರಹ ಪಡೆಯವರು ನಡೆಸುವ ಎನ್‌ಕೌಂಟರ್ ಹಿಂದಿನ ಕರಾಳ ಕಥೆಗಳು, ಅವರೊಳಗೆ ಕ್ರೂರ ಮೃಗಗಳಿಗಿಂತಲೂ ಹೆಚ್ಚಾಗಿ ಅಡರಿರುವ ಕ್ರೌರ್ಯ, ಮೂಲ ನಿವಾಸಿಗಳನ್ನು ಪರಕೀಯರಂತೆ ನೋಡುವುದು, ಅಲ್ಲಿ ತಮ್ಮದೇ ಆದ ರಾಕ್ಷಸ ಸಾಮ್ರಾಜ್ಯ ಕಟ್ಟುವುದು, ಅದರೊಳಗೆ ಮನುಷ್ಯರು ನಲುಗುವುದನ್ನು ತೋರಿಸಿದ್ದಾರೆ. ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಉಳಿಸಿಕೊಳ್ಳುತ್ತಾ ಸಾಗುತ್ತದೆ. ಇಡೀ ಚಿತ್ರಮಂದಿರದ ಪ್ರೇಕ್ಷಕರ ಕಡೆಯಲ್ಲಿ ಗಾಢ ಮೌನ ಆವರಿಸುವುದು ದೃಶ್ಯ ಕಥನದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

ವಾಸ್ತವ ಗೊತ್ತಿದ್ದೂ ಸುಳ್ಳು ಕಥೆ ಕಟ್ಟುವ ಪೊಲೀಸರು, ತಮ್ಮ ಕೆಲಸ ಆದರೆ ಸಾಕು ಎಂದು ಯಾಂತ್ರಿಕವಾಗುತ್ತಾರೆ. ಅದೆಷ್ಟೋ ದುರ್ಬಲ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ ಈ ದೃಶ್ಯ.

ಅಮಾಯಕನ ದಮನದ ಹಿಂದೆ ‘ಎಡ’–‘ಬಲ’ಗಳೆಂಬ ಭೇದ ಇಲ್ಲ. ಎಲ್ಲರೂ ಜಾರಿಕೊಳ್ಳುವವರೇ ಆಗಿದ್ದಾರೆ. ಕಾರ್ಯಾಂಗದ ಕೆಲಸವೇ ದಮನ ನೀತಿ ಎನ್ನುವುದನ್ನು ಚಿತ್ರ ಎತ್ತಿ ತೋರಿಸಿದೆ.

ಅದಕ್ಕಾಗಿ ಆರೋಪಿಗೆ ಕೊಡುವ ಚಿತ್ರಹಿಂಸೆ, ಕೊನೆಗೆ ಅಮಾಯಕನ ಮೇಲಿನ ಆರೋಪ ಸಾಬೀತುಪಡಿಸಲು ವಿಫಲರಾದಾಗ ಅವರಲ್ಲಿ ಪಶ್ಚಾತ್ತಾಪ ಪ್ರಜ್ಞೆಯೂ ಮೂಡುವುದಿಲ್ಲ ಎನ್ನುವುದೇ ವ್ಯವಸ್ಥೆಯ ‘ಸ್ಥಿತಪ್ರಜ್ಞತೆ’ ಎನ್ನಬೇಕೇ?

ದ್ವಿತೀಯಾರ್ಧ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಕಮರ್ಷಿಯಲ್ ಆಗಿ ನಿರೂಪಿಸಿದ್ದರೂ ಎಲ್ಲೂ ಉತ್ಪ್ರೇಕ್ಷೆ ಅನಿಸುವುದಿಲ್ಲ. 2005ರಿಂದ ಮಲೆಕುಡಿಯ ಯುವಕ ಮತ್ತು ಅವನ ತಂದೆ ಬಿಡುಗಡೆಯಾಗುವವರೆಗಿನ ಘಟನಾವಳಿಗಳನ್ನು ಯಥಾವತ್ ಕಟ್ಟಿಕೊಟ್ಟಿದ್ದಾರೆ. ಕೈಗೆ ಕೋಳ ಹಾಕಿಕೊಂಡು ಪರೀಕ್ಷೆ ಬರೆದ ಯುವಕ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ. ಈ ದೃಶ್ಯವಂತೂ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಈ ನೈಜ ಘಟನೆಗೆ ಮಾಧ್ಯಮಗಳು, ನ್ಯಾಯಾಂಗ, ಸ್ಥಳೀಯ ಹೋರಾಟಗಾರರು, ಒತ್ತಡಕ್ಕೊಳಗಾಗುವ ವಿಶ್ವವಿದ್ಯಾಲಯದ ಕುಲಪತಿಯೂ ಸಾಕ್ಷಿಯಾಗಿದ್ದಾರೆ. ಈ ಎಲ್ಲ ನಿಜ ಪಾತ್ರಗಳಿಗೆ ಕಲಾವಿದರು ಬಣ್ಣ ಹಚ್ಚಿದ್ದಾರೆ ಅಷ್ಟೆ. ದಶಕದ ಕಥೆಯನ್ನು ಎರಡೂವರೆ ಗಂಟೆಗಳಲ್ಲಿ ಹೇಳಿದ್ದಾರೆ.

ಕಥಾನಾಯಕ ಮಂಜು (ಶೃಂಗ ಬಿ.ವಿ.), ನಾಯಕನ ತಂದೆ (ಮಹಾದೇವ ಹಡಪದ್), ರತ್ನಮ್ಮ (ಎಂ.ಡಿ.ಪಲ್ಲವಿ) ಒಬ್ಬರನ್ನೊಬ್ಬರು ಮೀರಿಸುವ ಅಭಿನಯ ಕೊಟ್ಟಿದ್ದಾರೆ. ವಕೀಲರಾಗಿ ಬಾಲಾಜಿ ಮನೋಹರ್ ಕೊನೆಯವರೆಗೂ ಅದ್ಭುತ ವಕೀಲರೇ ಆಗಿ ಮನಸ್ಸಿನಲ್ಲಿ ಉಳಿದುಬಿಡುತ್ತಾರೆ. ಪ್ರತಿರೋಧದ ಧ್ವನಿಯಾಗಿ ರಫಿ (ರಾಜೇಶ್ ನಟರಂಗ), ಎನ್.ಎ.ಎಂ. ಇಸ್ಮಾಯಿಲ್ ಗಮನ ಸೆಳೆಯುತ್ತಾರೆ. ಸಂಗೀತ ಹಿತಮಿತವಾಗಿದೆ. ಬಂದೂಕಿನ ಮೊರೆತ, ಹಿಂಸೆಯನ್ನು ಪರಿಣಾಮಕಾರಿಯಾಗಿ ಹೇಳುವಲ್ಲಿ ಸೌಂಡ್ ಎಫೆಕ್ಟ್ ಗೆದ್ದಿದೆ. ನಾಡಿನ ಸಾಕ್ಷಿಪ್ರಜ್ಞೆಯಾಗಿ ‘ಪ್ರಜಾವಾಣಿ’ ನಿಜ ಘಟನೆ ಹಾಗೂ ಕಥೆಗೆ ಗಟ್ಟಿ ದನಿಯಾಗಿ ಫ್ರೇಂಗಳಲ್ಲಿ ಮೂಡಿದೆ.

ನಿರ್ದೇಶಕರೇ ಹೇಳಿರುವಂತೆ ಮಾನವೀಯ ಕಾರಣಕ್ಕಾಗಿ, ನಮ್ಮೊಳಗಿದ್ದೂ ಪರಕೀಯರಂತಾದ ನಮ್ಮವರ ಧ್ವನಿಗಾಗಿ ಈ ಚಿತ್ರ ನೋಡಬೇಕು ಎಂದಿದ್ದಾರೆ. ಪ್ರೇಕ್ಷಕ ಈ ಮಾತನ್ನು ಅನುಮೋದಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.