×
ADVERTISEMENT
ಈ ಕ್ಷಣ :
ADVERTISEMENT

ಫೆ. 8ರಿಂದ 19ರವರೆಗೆ ಮೈಲಾರ ಕಾರ್ಣಿಕೋತ್ಸವ ಜಾತ್ರೆ: ಭಕ್ತರಿಗೆ ನಿರ್ಬಂಧ

Published : 21 ಜನವರಿ 2022, 12:48 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಹೂವಿನಹಡಗಲಿಯ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಫೆ. 8ರಿಂದ 19ರ ವರೆಗೆ ನಡೆಯಲಿದ್ದು, ಕೋವಿಡ್‌ ಹಿನ್ನೆಲೆಯಲ್ಲಿ ಈ ಸಲವೂ ಜಾತ್ರಾ ಮಹೋತ್ಸವಕ್ಕೆ ಭಕ್ತರ ಮೇಲೆ ನಿರ್ಬಂಧ ಹೇರಲು ತೀರ್ಮಾನಿಸಲಾಗಿದೆ.

ಶುಕ್ರವಾರ ನಗರದಲ್ಲಿ ನಡೆದ ಜಾತ್ರೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಅನಾರೋಗ್ಯದ ನಿಮಿತ್ತ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ವರ್ಚುವಲ್ ಮೂಲಕ ಸಭೆ ಉದ್ದೇಶಿಸಿ ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಂಪ್ರದಾಯದ ಪ್ರಕಾರ ಪೂಜೆ, ಧಾರ್ಮಿಕ ಕಾರ್ಯಗಳು ನಡೆಯಲಿವೆ.  ಫೆ.8ರಂದು ಕಂಕಣಧಾರಣೆ, ಫೆ.16ರಂದು ಹುಣ್ಣಿಮೆ, ಫೆ.18ರಂದು ಕಾರ್ಣಿಕೋತ್ಸವ ಮತ್ತು ಫೆ.19ರಂದು ಸರಪಳಿ ಪವಾಡ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಮೈಲಾರ ಗ್ರಾಮಕ್ಕೆ ಸಾರ್ವಜನಿಕರು, ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕುರುವತ್ತಿ, ಹ್ಯಾರಡ, ಹೊಳಲು, ಹಾವೇರಿ, ಹೊಳಕಡೆ, ಡೆಂಕನಮರಡಿಗೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳಲ್ಲಿ ಬ್ಯಾರಿಕೆಡ್ ಹಾಕಿ ಜನರನ್ನು ತಡೆಯಬೇಕು. ಜಾತ್ರೆ ಸ್ಥಳದಲ್ಲಿ ವಾಣಿಜ್ಯ ವಹಿವಾಟಿಗೂ ಅವಕಾಶ ಇರುವುದಿಲ್ಲ. ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಬೇಕು. ಮುಖ್ಯರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದರು.

ಫೆ.8ರಿಂದ ಫೆ.20ರ ವರೆಗೆ ಮೈಲಾರಕ್ಕೆ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಹೊಸಪೇಟೆ, ಬಳ್ಳಾರಿ, ಗದಗ, ರಾಯಚೂರು ಕಡೆಯಿಂದ ಮೈಲಾರಕ್ಕೆ ಹೆಚ್ಚುವರಿ ಬಸ್‌ಗಳನ್ನು ಬಿಡದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಬೇಕೆಂದು ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ತಿಳಿಸಿದರು.

ಖಾಸಗಿ ಬಸ್ಸು, ಟ್ಯಾಕ್ಸಿ, ಕ್ಯಾಬ್, ಟೆಂಪೊ ಸಂಚರಿಸದಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕ್ರಮ ಜರುಗಿಸಬೇಕು. ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳುವಂತೆ ಉತ್ತಮವಾದ ಧ್ವನಿವರ್ಧಕಗಳನ್ನು ಅಳವಡಿಸಬೇಕೆಂದು ಸೂಚಿಸಿದರು.

ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಜಾತ್ರೆಯಲ್ಲಿ ಆರೋಗ್ಯ ಸೇವೆ, ಸ್ವಚ್ಛತೆ ಮತ್ತು ನೈರ್ಮಲ್ಯೀಕರಣಕ್ಕೆ ವಿಶೇಷ ಒತ್ತು ಕೊಡಬೇಕು. ಗ್ರಾಮದ ಎಲ್ಲ ಬೀದಿಗಳ, ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ನಿತ್ಯ ಫಾಗಿಂಗ್‌ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್‌ ಬೊಯರ್‌ ನಾರಾಯಣರಾವ್‌, ಎಸ್ಪಿ ಡಾ. ಅರುಣ್‌ ಕೆ. ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
 

ಶುಕ್ರವಾರ ನಗರದಲ್ಲಿ ನಡೆದ ಜಾತ್ರೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಅನಾರೋಗ್ಯದ ನಿಮಿತ್ತ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ವರ್ಚುವಲ್ ಮೂಲಕ ಸಭೆ ಉದ್ದೇಶಿಸಿ ಮಾತನಾಡಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT