×
ADVERTISEMENT
ಈ ಕ್ಷಣ :
ADVERTISEMENT

ಲವ್‌ ಯೂ ಮೈಸೂರು, ಶ್ರೀಗಂಧ ನಮ್ಮೂರು: ಜನಜೀವನದ ದೃಶ್ಯವೈಭವ

ಗಾಯಕ ವಿಜಯ್‌ ಪ್ರಕಾಶ್‌ ಹಾಡಿದ ಗೀತೆ
Published : 12 ಅಕ್ಟೋಬರ್ 2021, 8:27 IST
ಫಾಲೋ ಮಾಡಿ
Comments

ಮೈಸೂರು: ‘ಚಾಮುಂಡಿ ಗಿರಿಯಿಂದ ನಮ್ಮೂರ ಅಂದ ಚಂದ ನೋಡೋದೆ ಆನಂದ... ಲವ್‌ಯೂ ಮೈಸೂರು.. ಶ್ರೀಗಂಧ ನಮ್ಮೂರು..‌’

ಮೈಸೂರಿನವರೇ ಆದ ಬಹುಭಾಷಾ ಹಿನ್ನೆಲೆ ಗಾಯಕ ವಿಜಯ್‌ ಪ್ರಕಾಶ್‌ ಹಾಡಿದ ಈ ವಿಡಿಯೊ ಹಾಡು ನಗರದ ಸೊಬಗಿನ ಜೊತೆಗೆ ಮೈಸೂರಿಗರ ಹೃದಯವಂತಿಕೆ, ಕಲಾಪ್ರೀತಿಯನ್ನು ಕಟ್ಟಿಕೊಡುತ್ತದೆ. ನವರಾತ್ರಿಯ ವೈಭವದೊಂದಿಗೆ ಜನ–ಜೀವನದ ದೃಶ್ಯವೈಭವ ಕಣ್ಮನ ಸೆಳೆಯುತ್ತದೆ. 

2019ರ ದಸರೆಯಲ್ಲಿ ಬಿಡುಗಡೆಯಾದ ಹಾಡು ದಸರೆ ಬಂದಾಗಲೆಲ್ಲ ಸಾಮಾಜಿಕ ಜಾಲತಾಣ ಗಳಲ್ಲಿ ಸುಳಿದಾಡುತ್ತದೆ. ದಸರೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದವರು ಜಾಲತಾಣದಲ್ಲಿ ‍ಹಂಚುವಾಗ ಹಿನ್ನೆಲೆ ಹಾಡಾಗಿ ಬಳಸುತ್ತಾರೆ. ದಸರೆಯ ದೀಪಾಲಂಕಾರದ ಜೊತೆಗೆ ಬೃಂದಾವನ ಸೇರಿದಂತೆ ಮೈಸೂರ ವಿಶೇಷಗಳನ್ನು ಬಿತ್ತರಿಸುವ ಹಾಡು ವಿಜಯ್‌ ಪ್ರಕಾಶ್‌ ಅವರ ಮೆಚ್ಚಿನ ಹಾಡುಗಳಲ್ಲೊಂದು. ಇದಕ್ಕೆ ಆಕಾಶ್‌ ಪರ್ವ ಸಂಗೀತ ನೀಡಿದ್ದರೆ, ಈಶ್ವರ್‌ ಶ್ಯಾಮರಾವ್‌ ಸಾಹಿತ್ಯ ಬರೆದಿದ್ದಾರೆ.

‘ಲವ್‌ಯೂ ಮೈಸೂರು ಗೀತೆಯನ್ನು ಹಾಡುವಾಗ ಸಾಹಿತ್ಯ– ಸ್ವರದ ಜೊತೆಗೆ ಹೃದಯದಲ್ಲಿ ಅಚ್ಚಾಗಿರುವ ಮೈಸೂರು ಹೆಸರಿನ ಹೆಮ್ಮೆ– ನಾನು ಬೆಳೆದ ಮಣ್ಣು ಎಂಬ ಧನ್ಯತೆಯಿಂದ ಭಾವುಕನಾಗುತ್ತಿದ್ದೆ. ಪ್ರತಿಭೆಗೆ ಅವಕಾಶ ನೀಡಿ, ತಪ್ಪು ತಿದ್ದುವ ಪಾಠಶಾಲೆಯಿದು. ತಂದೆ–ತಾಯಿ, ಗುರುಗಳು ಕಲಿಸಿದಷ್ಟನ್ನೇ ಮೈಸೂರು ಕೂಡ ಕಲಿಸಿದೆ’ ಎಂದು ವಿಜಯ್‌ ಪ್ರಕಾಶ್‌ ‘ಪ್ರಜಾವಾಣಿ’ ಜೊತೆ ನೆನಪುಗಳನ್ನು ಹಂಚಿಕೊಂಡರು.

‘ಅರಮನೆ ವೇದಿಕೆಯಲ್ಲಿ ಕಛೇರಿ ನೀಡುವುದು ಕಲಾವಿದರ ಜೀವಮಾನದ ಕನಸು. ನನಗೆ ಐದು ಬಾರಿ ಅವಕಾಶ ಸಿಕ್ಕಿರುವುದು ಪೋಷಕರ ಆಶೀರ್ವಾದ. ಜೈ ಹೋ ಹಾಡಿಗೆ ಆಸ್ಕರ್‌ ಸಿಕ್ಕಿದೆ. ಹೀಗಾಗಿ ವೇದಿಕೆ ಸಿಕ್ಕಿದೆ ಎಂದಲ್ಲ. ಪರಿಶ್ರಮದ ಜೊತೆಗೆ ಅಲ್ಲಿ ಹಾಡಲು ಯೋಗವೂ ಇರಬೇಕು. ಜನಾಶೀರ್ವಾದವೂ ಇರಬೇಕು’ ಎಂದರು.

‘ಮೈಸೂರು ಸರಳವಾಗಿ ಬದುಕುವುದನ್ನು ಕಲಿಸುತ್ತದೆ. ಇನ್ನೊಬ್ಬರ ಸಂತಸ, ಕಷ್ಟವನ್ನು ಕೇಳಿಸಿಕೊಳ್ಳುವುದನ್ನು ಕಲಿಸುತ್ತದೆ. ವೈಭವ ದಸರೆಯಲ್ಲಷ್ಟೇ ಅಲ್ಲ, ಜನರ ಸರಳತೆ– ಪ್ರೀತಿಯಲ್ಲೂ ಇದೆ. ನೆಮ್ಮದಿ, ಪ್ರಶಾಂತತೆ ಚಾಮುಂಡಿಬೆಟ್ಟ, ಕುಕ್ಕರಹಳ್ಳಿ ಕೆರೆಯಲ್ಲಷ್ಟೇ ಅಲ್ಲದೆ ಚಿಕ್ಕ ಗುಡಿಗಳಲ್ಲೂ ಸಿಗುತ್ತದೆ. ಅದನ್ನೇ ಹಾಡಿನಲ್ಲಿ ಕಟ್ಟಿಕೊಡಲಾಗಿದೆ’ ಎಂದರು.

‘ಬಾಲ್ಯದಲ್ಲಿ ಸಂಗೀತ ಕಛೇರಿಗಳನ್ನು ತಪ್ಪಿಸುತ್ತಿರಲಿಲ್ಲ. ಸಂಗೀತ ಕೃತಿಗಳನ್ನು ಮತ್ತೆ ಮತ್ತೆ ಕೇಳಿಯೇ ಕಲಿಯುವ ಅವಕಾಶ ಕಛೇರಿಗಳಲ್ಲಷ್ಟೇ ಸಿಗುತ್ತಿತ್ತು. ಕಾಲೇಜಿನ ದಿನಗಳಲ್ಲೂ ಶನಿವಾರ– ಭಾನುವಾರ ರಾಗ ಸಂಯೋಜನೆ ಹಾಗೂ ಕೃತಿಗಳ ಅಭ್ಯಾಸಕ್ಕೆ ಮೀಸಲು. ಆ ದಿನಗಳ ಅನುಭವಗಳೇ ನನ್ನ ಜೀವನ ರೂಪಿಸಿವೆ’ ಎಂದರು.

ಹಾಡಿನ ಲಿಂಕ್‌: https://www.youtube.com/watch?v=tvv_lA3rHLk

ಮೈಸೂರಿನವರೇ ಆದ ಬಹುಭಾಷಾ ಹಿನ್ನೆಲೆ ಗಾಯಕ ವಿಜಯ್‌ ಪ್ರಕಾಶ್‌ ಹಾಡಿದ 'ಲವ್‌ ಯೂ ಮೈಸೂರು’ ವಿಡಿಯೊ ಹಾಡು ನಗರದ ಸೊಬಗಿನ ಜೊತೆಗೆ ಮೈಸೂರಿಗರ ಹೃದಯವಂತಿಕೆ, ಕಲಾಪ್ರೀತಿಯನ್ನು ಕಟ್ಟಿಕೊಡುತ್ತದೆ. ನವರಾತ್ರಿಯ ವೈಭವದೊಂದಿಗೆ ಜನ–ಜೀವನದ ದೃಶ್ಯವೈಭವ ಕಣ್ಮನ ಸೆಳೆಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT