×
ADVERTISEMENT
ಈ ಕ್ಷಣ :
ADVERTISEMENT

‘ಶೈಕ್ಷಣಿಕ ಪ್ರಗತಿಯಿಂದ ಅಭಿವೃದ್ಧಿ’

ಜಿಲ್ಲಾ ಗುರುಭವನ ಕಾಮಗಾರಿಗೆ ಸಚಿವ ಹಾಲಪ್ಪ ಆಚಾರ್ ಭೂಮಿಪೂಜೆ
ಫಾಲೋ ಮಾಡಿ
Comments

ಕೊಪ್ಪಳ: ಜಿಲ್ಲಾ ಕೇಂದ್ರವಾಗಿ ಕೊಪ್ಪಳ 23 ವರ್ಷವಾದರೂ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಜಿಲ್ಲಾ ಗುರುಭವನ ಕಾಮಗಾರಿ ನಿರ್ಮಾಣವಾಗುವ ಮೂಲಕ ಜಿಲ್ಲೆಯ ಶೈಕ್ಷಣಿಕ ಚಟುವಟಿಕೆಗೆ ವೇಗ ದೊರೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಹೇಳಿದರು.

ನಗರದ ಸರ್ಕಾರಿ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಬೆಂಗಳೂರು ಶಿಕ್ಷಕರ ಕಲ್ಯಾಣ ನಿಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ, ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಆಶ್ರದಲ್ಲಿ ನಡೆದ ಜಿಲ್ಲಾ ಗುರುಭವನಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಿರ್ದಿಷ್ಟ ಸಮಯದೊಳಗೆ ಗುರುಭವನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಮುಖ್ಯಮಂತ್ರಿಗಳಿಗೂ ಅನುದಾನಕ್ಕೆ ಮನವಿ ಮಾಡಲಾಗುವುದು. ಈ ಭಾಗದವರು ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಇದಕ್ಕೆ ಶಿಕ್ಷಕರ ನಿರ್ಣಯಕ್ಕೆ ರಾಜಕಾರಣಿಗಳು ಬದ್ಧರಿದ್ದೇವೆ. ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಶೈಕ್ಷಣಿಕವಾಗಿ ಜಿಲ್ಲೆಯನ್ನು ಮೇಲ್ಪಂಕ್ತಿಯಲ್ಲಿ ನಿಲ್ಲಿಸಲು ಶಿಕ್ಷಕರೂ ಕೂಡಾ ಬದ್ಧರಾಗಬೇಕು ಎಂದು ಅವರು ತಿಳಿಸಿದರು.

ಸಮಾಜದಲ್ಲಿ ತಂದೆ-ತಾಯಿಯನ್ನು ಬಿಟ್ಟರೇ ಶಿಕ್ಷಕರಿಗೆ ಬಹುದೊಡ್ಡ ಸ್ಥಾನವಿದೆ. ರಾಜ್ಯದಲ್ಲಿ ನಂಬರ್ 1 ಶಾಲೆಯನ್ನಾಗಿ ಯಾವುದಾರೂ ಒಂದು ಶಾಲೆಯನ್ನು ನಿರ್ಮಿಸಿ. ಬೇರೆ ಜಿಲ್ಲೆಯವರಿಗೆ ಮಾದರಿ ಆಗಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಶಿಕ್ಷಕರ 25 ವರ್ಷಗಳ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ಪ್ರಸ್ತುತ ಭೂಮಿಪೂಜೆ ನೆರವೇರಿಸಲಾಗಿದೆ. ಶಿಕ್ಷಕರು ಪ್ರಜಾಪ್ರಭುತ್ವಕ್ಕೆ ಬುನಾದಿಯಾಗಿದ್ದಾರೆ. ಜಿಲ್ಲೆಯಲ್ಲಿ 8 ಸಾವಿರ ಶಿಕ್ಷಕರು ಇದ್ದಾರೆ. ಅವರಿಗೆ ಆಡಳಿತ ವ್ಯವಸ್ಥೆಯಲ್ಲಾಗುವ ಗೊಂದಲ ನಿವಾರಣೆ ಮಾಡಿ ಕೊಳ್ಳಲು ಗುರುಭವನ ಬೇಕು ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಗುರುಭವನಕ್ಕೆ ಸೂಕ್ತ ಸ್ಥಳ ಗುರುತಿಸುವಲ್ಲಿ ವಿಳಂಬವಾಯಿತು. ದೇಶದ ರಾಜ್ಯದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕರು ದೇಶದ ನಿರ್ಮಾಪಕರು. ಕೋವಿಡ್ ನಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ‌. ಹಾಗಾಗಿ ಅದನ್ನು ಸುಧಾರಣೆ ಮಾಡಬೇಕು‌ ಎಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಗುರುಭವನ ನಿರ್ಮಾಣವಾಗುತ್ತಿರುವುದು ಶಿಕ್ಷಕರಿಗೆ ಸಂತೋಷದ ದಿನವಾಗಿದೆ. ಉಸ್ತುವಾರಿ ಸಚಿವರು ಗುರುಭವನಕ್ಕೆ ಭೂಮಿಪೂಜೆ ಮಾಡುವ ಮೂಲಕ ಗುರುಗಳ ಮನಸ್ಸಿನಲ್ಲಿ ಇದ್ದೀರಿ. ಹಾಗಾಗಿ ಇದಕ್ಕೆ 2 ಕೋಟಿ ಅನುದಾನ ನೀಡಬೇಕು. ಶಿಕ್ಷಕರ ಕಲ್ಯಾಣ ನಿಧಿಯಿಂದ 1 ಕೋಟಿ ಅನುದಾನ ನೀಡುತ್ತೇವೆ ಎಂದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಫೌಜೀಯಾ ತರುನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೆರೆ, ನಗರಸಭಾ ಸದಸ್ಯ ಅರುಣ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ‌, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮನಗೌಡ‌ ಸೇರಿದಂತೆ ಇದ್ದರು.

ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸವಗೌಡ ಪಾಟೀಲ್ ಸ್ವಾಗತಿಸಿದರು. ತಾಲ್ಲೂಕು ಅಧ್ಯಕ್ಷ ಪ್ರಾಣೇಶ ಪೂಜಾರ ವಂದಿಸಿದರು.

ಕೊಪ್ಪಳ ಜಿಲ್ಲಾ ಕೇಂದ್ರವಾಗಿ ಕೊಪ್ಪಳ 23 ವರ್ಷವಾದರೂ ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಜಿಲ್ಲಾ ಗುರುಭವನ ಕಾಮಗಾರಿ ನಿರ್ಮಾಣವಾಗುವ ಮೂಲಕ ಜಿಲ್ಲೆಯ ಶೈಕ್ಷಣಿಕ ಚಟುವಟಿಕೆಗೆ ವೇಗ ದೊರೆಯಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಹೇಳಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT