×
ADVERTISEMENT
ಈ ಕ್ಷಣ :
ADVERTISEMENT

ಕಂದಾಯ ಇಲಾಖೆ ದೂರು ಅಧಿಕ

ಲೋಕಾಯುಕ್ತದಿಂದ ಜನ ಸಂಪರ್ಕ ಸಭೆ–39 ದೂರು ಸಲ್ಲಿಕೆ
Published 10 ಜನವರಿ 2024, 12:47 IST
Last Updated 10 ಜನವರಿ 2024, 12:47 IST
Comments
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕೋಲಾರ: ನಗರದ ತಾಲ್ಲೂಕು ಕಚೇರಿಯಲ್ಲಿ (ಮಿನಿ ವಿಧಾನಸೌಧ) ಕರ್ನಾಟಕ ಲೋಕಾಯುಕ್ತ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 39 ದೂರುಗಳು ಸಲ್ಲಿಕೆಯಾದವು.

39 ದೂರುಗಳ ಪೈಕಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 25 ದೂರುಗಳು ಇದ್ದವು. ಉಳಿದಂತೆ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 3, ನಗರಸಭೆ ವ್ಯಾಪ್ತಿಗೆ ಸಂಬಂಧಿಸಿದಂತೆ 2, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ 1, ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ 1, ಉಪನೋಂದಣಾಧಿಕಾರಿಗೆ ಸಂಬಂಧಿಸಿದ 2, ಸರ್ವೇ ಇಲಾಖೆಗೆ ಸಂಬಂಧಿಸಿದ 1, ಆರೋಗ್ಯ ಇಲಾಖೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ 3 ದೂರುಗಳು ಸಲ್ಲಿಕೆಯಾದವು.

ಸಾಮಾಜಿಕ ಕಾರ್ಯಕರ್ತ ತೊಟ್ಲಿ ಗ್ರಾಮದ ಟಿ.ವಿ.ರಮೇಶ್, ‘ತಾಲ್ಲೂಕಿನ ತೊಟ್ಲಿ ಗ್ರಾಮದ ಬಸ್ ನಿಲ್ದಾಣ ಬಳಿ, ಗ್ರಾಮ ಪಂಚಾಯಿತಿ ಎದುರು ಇರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಲ್ಲು, ಚಪ್ಪಡಿ ಕಾಂಪೌಂಡ್‍ಅನ್ನು ನಾಶ ಮಾಡಿ ನರೇಗಾ ಯೋಜನೆಯಲ್ಲಿ ₹ 32 ಲಕ್ಷ ಕಾಮಗಾರಿಯನ್ನು ಜೆಸಿಬಿ ಬಳಸಿ, ಅಪೂರ್ಣ ಕಾಮಗಾರಿ ಮಾಡಿದ್ದರೂ ಹಣ ಪಾವತಿಸಲಾಗಿದೆ. ಈ ಸಂಬಂಧ ಕ್ರಮಕೈಗೊಳ್ಳಬೇಕು’ ಎಂದು ದೂರು ಸಲ್ಲಿಸಿದರು.

‘ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಶಾಲೆಯ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಶಾಲೆಯ ಶಿಕ್ಷಕರು ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹಿಂದಿನ ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್ ಸಹ ಭೇಟಿ ನೀಡಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ದು, ಯಾರೊಬ್ಬರೂ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಜಿಲ್ಲಾ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕರಿಗೆ ದೂರಿನ ಮೂಲಕ ಮನವಿ ಮಾಡಿದರು.

ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ನಗರ, ತಾಲ್ಲೂಕಿನ ಸಾರ್ವಜನಿಕರು ತಮ್ಮ ದೂರುಗಳನ್ನು ಲೋಕಾಯುಕ್ತ ಎಸ್ಪಿಗೆ ಸಲ್ಲಿಸಿದರು. ಪಡಿತರ ಚೀಟಿಗಾಗಿ ಅಲೆದಾಡಿ ಸುಸ್ತಾಗಿದೆ ಎಂದು ರೈತರೊಬ್ಬರು ದೂರು ನೀಡಿದರು. 

ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಮಾತನಾಡಿದ ಕರ್ನಾಟಕ ಲೋಕಾಯುಕ್ತದ ಕೋಲಾರ ಎಸ್ಪಿ ಬಿ.ಕೆ.ಉಮೇಶ್, ‘ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡದೆ ತ್ವರಿತವಾಗಿ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಬೇಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಕೊಡಲು ವಿಳಂಬ, ನಿರ್ಲಕ್ಷ್ಯ ಅಥವಾ ಅಧಿಕಾರ ದುರಾಡಳಿತ ಮಾಡುತ್ತಿದ್ದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿ ಮೇಲೆ ಲಿಖಿತ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸೂರ್ಯನಾರಾಯಣರಾವ್, ಇನ್‌ಸ್ಪೆಕ್ಟರ್‌ಗಗಳಾದ ರೇಣುಕಾ, ಯಶ್ವತ್, ತಹಶೀಲ್ದಾರ್ ಹರ್ಷವರ್ಧನ್, ತಾಲ್ಲೂಕು ಪಂಚಾಯಿತಿ ಇಒ ಮುನಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Highlights - 2 ಗಂಟೆಗೂ ಹೆಚ್ಚು ಕಾಲ ನಡೆದ ಜನಸಂಪರ್ಕ ಸಭೆ ತ್ವರಿತವಾಗಿ ಕೆಲಸ ಮಾಡಿಕೊಡಲು ತಾಕೀತು ಮನವಿ ಆಲಿಸಿದ ಲೋಕಾಯುಕ್ತ ಎಸ್ಪಿ ಉಮೇಶ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT