×
ADVERTISEMENT
ಈ ಕ್ಷಣ :
ADVERTISEMENT

ವಿಶೇಷ ಪ್ಯಾಕೇಜ್ ಘೋಷಿಸುವರೇ ಸಚಿವರು?

ಇಂದು ಗಡಿಕೇಶ್ವಾರಕ್ಕೆ ಸಚಿವ ಆರ್. ಅಶೋಕ ಭೇಟಿ; ಭೂಕಂಪನ ಪೀಡಿತ ಗ್ರಾಮಸ್ಥರ ಚಿತ್ತ ಸಚಿವರ ಭೇಟಿಯತ್ತ

ಚಿಂಚೋಳಿ: ತಾಲ್ಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಅವರು ಸೋಮವಾರ ಮಧ್ಯಾಹ್ನ ಭೇಟಿ ನೀಡುತ್ತಿರುವುದರಿಂದ ಜಿಲ್ಲಾ ಆಡಳಿತ ಮತ್ತಷ್ಟು ಚುರುಕಿನಿಂದ ಕೆಲಸ ಮಾಡುತ್ತಿದೆ. ಆದರೆ ಇಲ್ಲಿನ ಜನರಿಗೆ ಹಂಚಲು ತಂದಿರುವ ಅವಶ್ಯಕ ವಸ್ತುಗಳ ಕಿಟ್ ವಿತರಣೆಗೆ ಅನಗತ್ಯ ವಿಳಂಬ ಮಾಡುತ್ತಿರುವ ಅಧಿಕಾರಿಗಳ ನಡೆಗೆ ಜನರಲ್ಲಿ ಬೇಸರ ಉಂಟಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಬರುವುದಕ್ಕಿಂತ ಮೊದಲೇ ಭೂಕಂಪ ಪೀಡಿತ ಪ್ರದೇಶಗಳಿಗೆ ಕಂದಾಯ ಸಚಿವರು ಭೇಟಿ ನೀಡುತ್ತಿರುವುದರಿಂದ ಸಚಿವರ ಮೇಲೆ ಭೂಕಂಪ ಸಂತ್ರಸ್ತರ ನಿರೀಕ್ಷೆ ಹೆಚ್ಚಾಗಿದೆ. ಇದರಿಂದ ಸಚಿವರು ಭೂಕಂಪ ಪೀಡಿತರಿಗೆ ವಿಶೇಷ ಪ್ಯಾಕೇಜ್ ಘೋಷಿಸುತ್ತಾರಾ ಎಂದು ಜನ ಕಾತುರದಿಂದ ಕಾಯುತ್ತಿದ್ದಾರೆ.

ತಾಲ್ಲೂಕಿನ ಗಡಿಕೇಶ್ವಾರದಲ್ಲಿ 2, ಕುಪನೂರ 1 ಮತ್ತು ನೆರೆಯ ಕಾಳಗಿ ತಾಲ್ಲೂಕಿನ ಕೊಡದೂರು 1, ಕೊರವಿ 1 ಹಾಗೂ ಹಲಚೇರಾ 1 ಹೀಗೆ ಅ 8ರ ಶುಕ್ರವಾರದಿಂದ ಮಂಗಳವಾರದವರೆಗೆ 6 ಭೂಕಂಪದ ಕೇಂದ್ರಬಿಂದುಗಳು ದಾಖಲಾಗಿವೆ. ಇದರಿಂದ ಎಲ್ಲೆಲ್ಲಿ ಭೂಕಂಪದ ಕೇಂದ್ರಬಿಂದುಗಳು ವರದಿಯಾದ ಮತ್ತು ಅದರ ಅಕ್ಕಪಕ್ಕದ ಗ್ರಾಮಗಳಲ್ಲಿ ಕೂಡ ಸರ್ಕಾರ ಭೂಕಂಪದ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ.

ಸದ್ಯ ತಾಲ್ಲೂಕಿನ ಗಡಿಕೇಶ್ವಾರದಲ್ಲಿ ಮಾತ್ರ ಕಾಳಜಿ ಕೇಂದ್ರ ತೆರೆಯಲಾಗಿದೆ. ಪ್ರತಿದಿನ ಸಾವಿರಕ್ಕೂ ಹೆಚ್ಚು ಜನ ಊಟ, ಉಪಹಾರ ಸೇವಿಸುತ್ತಿದ್ದಾರೆ. ಇದಕ್ಕಾಗಿ ಕಲಬುರಗಿಯಿಂದ ಬಾಣಸಿಗರನ್ನು ಕರೆಸಲಾಗಿದೆ. ಚಪಾತಿ, ಅನ್ನ, ಸಾಂಬಾರ್ ಮತ್ತು ಸಿಹಿಯನ್ನು ಊಟದಲ್ಲಿ ನೀಡಲಾಗುತ್ತಿದೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಸಂಜೆಗೆ ಊಟ ನೀಡಲಾಗುತ್ತಿದೆ.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರು ರಾತ್ರಿ ಹೊತ್ತಿನಲ್ಲಿ ಮಲಗುವುದಕ್ಕೆ ಸ್ಥಾಪಿಸಿದ ಶೆಡ್‌ಗಳ ಸುತ್ತಲೂ ಮಳೆ ನೀರು ನಿಂತಿತ್ತು. ಜತೆಗೆ ಶೆಡ್‌ಗಳ ಮಳೆಯ ನೀರು ವೆಂಟಿಲೇಟರ್ ಮೂಲಕ ಒಳಗಡೆ ಸಿಡಿದಿದ್ದು ಮತ್ತು ಭೂಮಿಯ ಒಳಗಡೆಯಿಂದ ನೀರು ಬಸಿದು ಬಂದಿದ್ದರಿಂದ ಶೆಡ್‌ಗಳ ಒಳಗಡೆ ಹಾಸಿದ್ದ ಜಮಖಾನೆ ತೊಯ್ದು ತೊಪ್ಪೆಯಾಗಿತ್ತು. ಶೆಡ್‌ಗಳ ಹೊರಗಡೆ ಮಳೆ ನೀರು ನಿಂತಿದ್ದಲ್ಲದೇ ಶಾಲೆಯ ಆವರಣದಲ್ಲಿ ಕೆಸರು ಕೊಚ್ಚೆ ಎಲ್ಲೆಂದರಲ್ಲಿ ಗೋಚರಿಸಿತು.

ಸಚಿವರ ಭೇಟಿಯ ಹಿನ್ನೆಲೆ ಯಲ್ಲಿ ಲೋಕೋಪಯೋಗಿ ಎಂಜಿನಿಯರ್‌ ಗಳನ್ನು ಕರೆಸಿದ ತಹಶೀಲ್ದಾರ್ ಅಂಜುಮ್ ತಬಸ್ಸುಮ್, ಕೆಸರು ಮತ್ತು ನೀರು ನಿಂತ ಕಡೆ ಮುರುಮ್ ಹಾಕಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

‘ಜಿಲ್ಲಾ ಆಡಳಿತ ವಿಜ್ಞಾನಿಗಳ ವರದಿ ಆಧರಿಸಿ ಕ್ರಮ ಕೈಗೊಳ್ಳಲು ವಿಳಂಬ ನೀತಿ ಅನುಸರಿಸುತ್ತಿದೆಯೋ ಅಥವಾ ಇಲ್ಲಿ ಕೈಗೊಳ್ಳಬೇಕಿರುವ ಜನತೆಯ ಅಗತ್ಯತೆ ಪೂರೈಸಲು ಸರ್ಕಾರಕ್ಕೆ ಹಣದ ಕೊರತೆ ಇದೆಯೊ ಎಂಬ ಅನುಮಾನ ನಮ್ಮಲ್ಲಿ ಮೂಡಿದೆ’ ಎಂದು ವೀರೇಶ ರೆಮ್ಮಣಿ ಹೇಳುತ್ತಾರೆ.

ಸಚಿವರು ಜನರ ಸುರಕ್ಷತೆಯ ದೃಷ್ಟಿಯಿಂದ ಅವರ ಅಗತ್ಯತೆ ಪೂರೈಸಲು ಪ್ಯಾಕೇಜ್ ಘೋಷಿಸಬೇಕು. ಇದಕ್ಕಾಗಿ ಗಡಿಕೇಶ್ವಾರ, ಹಲಚೇರಾ, ಕೊಡದೂರು, ಕುಪನೂರ, ಹೊಡೇಬೀರ ನಹಳ್ಳಿ ಗ್ರಾ.ಪಂ. ವ್ಯಾಪ್ತಿ ಯಲ್ಲಿನ ಗ್ರಾಮಗಳಲ್ಲಿ ಭೂಕಂಪದಿಂದ ಹಾನಿ ಸಂಭವಿಸದಂತೆ ಕ್ರಮ ಕೈಗೊಳ್ಳಲು ಅಗತ್ಯ ಶೆಡ್‌ಗಳು ನಿರ್ಮಿಸಿಕೊಡುವುದರ ಜತೆಗೆ ಮತ್ತು ಕಾಳಜಿ ಕೇಂದ್ರ ತೆರೆಯಬೇಕೆಂದು ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶ ಪಾಟೀಲ ರಾಯಕೋಡ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಅವರು ಸೋಮವಾರ ಮಧ್ಯಾಹ್ನ ಭೇಟಿ ನೀಡುತ್ತಿರುವುದರಿಂದ ಜಿಲ್ಲಾ ಆಡಳಿತ ಮತ್ತಷ್ಟು ಚುರುಕಿನಿಂದ ಕೆಲಸ ಮಾಡುತ್ತಿದೆ. ಆದರೆ ಇಲ್ಲಿನ ಜನರಿಗೆ ಹಂಚಲು ತಂದಿರುವ ಅವಶ್ಯಕ ವಸ್ತುಗಳ ಕಿಟ್ ವಿತರಣೆಗೆ ಅನಗತ್ಯ ವಿಳಂಬ ಮಾಡುತ್ತಿರುವ ಅಧಿಕಾರಿಗಳ ನಡೆಗೆ ಜನರಲ್ಲಿ ಬೇಸರ ಉಂಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT